ಧಾರವಾ ಜೂ.09: ಹಾವೇರಿ ಜಿಲ್ಲೆಯ ಹಿರೇಕೆರುರ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ನಿವಾಸಿ ನೇತಾಜಿ ಎಂಬುವವರು ವೃತ್ತಿಯಲ್ಲಿ ಕೃಷಿಕನಾಗಿದ್ದು, ಅವರು 2011 ರಲ್ಲಿ ಧಾರವಾಡದಲ್ಲಿ ವಾಸವಾಗಿದ್ದಾಗ ಎದುರುದಾರರ ಪರಿಚಯವಾಗಿ ಸಾಮನ್ ಡೆವಲಪರ್ಸ್ನ ಮಾಲೀಕ ವಿನಯ ಸಾಹುಕಾರ ಬಳಿ 1200 ಚ.ಅ. ವಿಸ್ತೀರ್ಣವುಳ್ಳ ಪ್ಲಾಟುಗಳನ್ನು ಒಟ್ಟು ರೂ.10,37,000 ಪೈಕಿ ಮುಂಗಡ ಹಣವಾಗಿ ರೂ.6 ಲಕ್ಷ ಸಂದಾಯ ಮಾಡಿ ಖರೀದಿಸಿದ್ದರು. ಎದುರುದಾರರು ಲೆಔಟ್ ಡೆವಲಪ್ ಮಾಡಲಿಲ್ಲ. ದೂರುದಾರರಿಗೆ ಪ್ಲಾಟುಗಳನ್ನು ಕೊಡಲಿಲ್ಲ. ಅಥವಾ ಅವರ ಹಣವನ್ನು ಹಿಂದಿರುಗಿಸಲಿಲ್ಲ. ಹಲವು ಬಾರಿ ತನಗೆ ಪ್ಲಾಟು ಕೊಡುವಂತೆ ಅಥವಾ ಹಣ ಹಿಂದಿರುಗಿಸುವಂತೆ ದೂರುದಾರ ಒತ್ತಾಯಿಸಿದ್ದರೂ ಎದುರುದಾರ ಡೆವಲಪರ್ ಹಣ ಹಿಂದಿರುಗಿಸದೇ ಸತಾಯಿಸುತ್ತಿದ್ದರು. ಸಾಮನ್ ಡೆವಲಪರವರ ಇಂತಹ ನಡಾವಳಿಕೆಯಿಂದ ತನಗೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆಂದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಕೋರಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:07/03/2025 ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಸಾಮನ್ ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡಿದ್ದಾರೆ. ಅವರಿಗೆ ಪ್ಲಾಟುಗಳನ್ನು ಕೊಡದೇ ಅಥವಾ ಹಣ ಹಿಂದಿರುಗಿಸದಿರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಆ ಬಗ್ಗೆ ಸಾಮನ್ ಡೆವಲಪರ್ಸ್ನ ಮಾಲೀಕ ವಿನಯ ಸಾಹುಕಾರರವರು ದೂರುದಾರರಿಂದ ಪಡೆದ 6 ಲಕ್ಷ ರೂಪಾಯಿಗಳನ್ನು ದಿ:19/08/2011 ರಿಂದ ಹಣ ಹಿಂದಿರುಗಿಸುವವರೆಗೆ ಶೇ12 ರಂತೆ ಬಡ್ಡಿ ಹಾಕಿ ಸಂದಾಯ ಮಾಡುವಂತೆ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.50,000 ಪರಿಹಾರ ಹಾಗೂ ರೂ.10,000 ಪ್ರಕರಣದ ಖರ್ಚು ವೆಚ್ಚ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಸಾಮನ್ ಡೆವಲಪರ್ ಮಾಲೀಕರಾದ ವಿನಯ ಸಾವುಕಾರ ಇವರಿಗೆ ಆಯೋಗ ಆದೇಶಿಸಿದೆ.