ಬಳ್ಳಾರಿ,ಅ.19
ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗಿರುವ ಆ ಕ್ಷೇತ್ರದ ಅಧಿಕಾರಿ, ಸಿಬ್ಬಂದಿಗಳು ಮತದಾನದಿಂದ ವಂಚಿತರಾಗದಂತೆ ಅವರಿಗೆ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಹೇಳಿದರು.
ಪೋಸ್ಟಲ್ ಬ್ಯಾಲಟ್‌ನಲ್ಲಿ ಮತದಾನ ಮಾಡುವುದಕ್ಕೆ ಸಂಬಂಧಿಸಿದಂತೆ ತಮ್ಮ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಮತದಾನದ ದಿನದಂದು ತಮ್ಮ ಕರ್ತವ್ಯದ ಕಾರಣದಿಂದಾಗಿ ಯಾರೊಬ್ಬ ಅರ್ಹ ಮತದಾರನೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಈ ಅವಕಾಶ ಒದಗಿಸಲಾಗುವುದು ಎಂದರು.
ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗುವ ಜೆಸ್ಕಾಂ, ಬಿಎಸ್‌ಎನ್‌ಎಲ್, ದೂರದರ್ಶನ, ಆಕಾಶವಾಣಿ, ಆರೋಗ್ಯ ಇಲಾಖೆ, ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಗಳ ನೌಕರರು, ಅಗ್ನಿಶಾಮಕ ಸೇವೆ, ಟ್ರಾಫಿಕ್ ಪೊಲೀಸ್, ಆಂಬುಲೆನ್ಸ್ ಸೇವೆಯಲ್ಲಿರುವರು, ಕಾರಾಗೃಹ ಸೇರಿದಂತೆ 16 ಇತರೆ ಸೇವೆಗಳಡಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯದ ಕಾರಣದಿಂದಾಗಿ ಮತದಾನದ ದಿನದಂದು ಮತ ಚಲಾಯಿಸಲು ಸಾಧ್ಯವಾಗದ ಸಂದರ್ಭ ಬರಬಹುದಾದ ನೌಕರರಿಗೆ ಮತದಾನ ದಿನದ ಬದಲಿಗೆ ಮತದಾನ ದಿನಕ್ಕೂ ಪೂರ್ವದಲ್ಲಿಯೇ ಫೆಸಿಲಿಟೇಶನ್ ಸೆಂಟರ್‌ನಲ್ಲಿ ಅಥವಾ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಮಾಡುವಂತಹ ಅವಕಾಶ ನೀಡಲಾಗುವುದು ಎಂದರು.
ಅಗತ್ಯ ಸೇವೆಗಳಡಿ ಸೇವೆ ಸಲ್ಲಿಸುತ್ತಿರುವ ನೌಕರರು ಫೆಸಿಲಿಟೇಶನ್ ಸೆಂಟರ್‌ನಲ್ಲಿ ಮತದಾನ ಮಾಡಲು ಹಾಗೂ ಪೋಸ್ಟಲ್ ಬ್ಯಾಲಟ್ ಮತದಾನದ ಸೇವೆ ಪಡೆಯಲು, ಸಂಬಂಧಿಸಿದ ಇಲಾಖೆಯಿಂದ ನಮೂನೆ 12ಡಿ ನಮೂನೆಯನ್ನು ಪಡೆದು, ಸ್ವೀಕೃತಿ ನೀಡಬೇಕು. ಬಳಿಕ ಭರ್ತಿ ಮಾಡಿದ ನಮೂನೆಯನ್ನು ಆ ಕ್ಷೇತ್ರಕ್ಕೆ ನಿಗದಿಪಡಿಸಲಾಗಿರುವ ನೋಡಲ್ ಅಧಿಕಾರಿಗಳಿಗೆ ಆಯಾ ಇಲಾಖಾ ಅಧಿಕಾರಿಗಳು ಸಲ್ಲಿಸಬೇಕು. 12 ಡಿ ನಮೂನೆಯನ್ನು ಒಮ್ಮೆ ಸಲ್ಲಿಸಿದ ಬಳಿಕ, ಅಂತಹವರು, ಫೆಸಿಲಿಟೇಶನ್ ಸೆಂಟರ್‌ನಲ್ಲಿ ಅಥವಾ ಪೋಸ್ಟಲ್ ಬ್ಯಾಲಟ್ ಮೂಲಕವೇ ಮತದಾನ ಮಾಡಬೇಕು, ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶ ಇರುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವಂತಹ ಅಗತ್ಯ ಸೇವೆಗಳ ಸಿಬ್ಬಂದಿಗಳ ವಿವರವನ್ನು ಆಯಾ ಇಲಾಖೆಗಳ ನೋಡಲ್ ಅಧಿಕಾರಿಗಳಿಗೆ ಸಲ್ಲಿಸಬೇಕ ಎಂದರು.
ಅಗತ್ಯ ಸೇವೆಗಳಡಿ ಬರುವಂತಹ ಇಲಾಖೆಗಳಿಂದ ಅಗತ್ಯ ಮಾಹಿತಿಯನ್ನು ಪಡೆದು, ಅವರ ಮತದಾನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವಲ್ಲಿ, ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ಮಾಡಬಾರದು.
ಸಭೆಯಲ್ಲಿ ಬ್ಯಾಲಟ್ ನೋಡಲ್ ಅಧಿಕಾರಿಯಾದ ಸೋಮಶೇಖರ್ ಸೇರಿದಂತೆ ಆಕಾಶವಾಣಿ, ಅಗ್ನಿಶಾಮಕ, ಕೆಕೆಆರ್‌ಟಿಸಿ, ಟ್ರಾಫಿಕ್ ಪೊಲೀಸ್, ಜೆಸ್ಕಾಂ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.