Ad image

ಜಿಲ್ಲಾಡಳಿತ ಭವನದ ಕಟ್ಟಡ ಕಾಮಗಾರಿ ಪರಿಶೀಲಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜನವರಿ ವೇಳೆಗೆ ನೂತನ ಜಿಲ್ಲಾಧಿಕಾರಿ ಕಚೇರಿ ಪ್ರಾರಂಭ

Vijayanagara Vani
ಜಿಲ್ಲಾಡಳಿತ ಭವನದ ಕಟ್ಟಡ ಕಾಮಗಾರಿ ಪರಿಶೀಲಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜನವರಿ ವೇಳೆಗೆ ನೂತನ ಜಿಲ್ಲಾಧಿಕಾರಿ ಕಚೇರಿ ಪ್ರಾರಂಭ
ಚಿತ್ರದುರ್ಗಜುಲೈ13:
ಮುಂಬರುವ ಜನವರಿ ವೇಳೆಗೆ ನೂತನ ಜಿಲ್ಲಾಧಿಕಾರಿ ಕಚೇರಿ ಲೋಕಾರ್ಪಣೆಗೊಂಡು ದೈನಂದಿನ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕುಂಚಿಗನಾಳ್ ಕಣಿವೆ ಬಳಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಈ ಹಿಂದೆಯೇ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಇದನ್ನು ಅವೈಜ್ಞಾನಿಕ ಎನ್ನುವುದರಿಂದ ಈಗ ಏನು ಪ್ರಯೋಜನವಿಲ್ಲ. ಲೋಕೋಪಯೋಗಿ ಇಲಾಖೆ ಜಿಲ್ಲಾಡಳಿತ ಭವನದ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಿದೆ. ಕಟ್ಟಡ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿದ್ದು, ಚಿತ್ರದುರ್ಗ ಜನತೆಗೆ ನೂತನ ಕಚೇರಿ ದೊರಕಲಿದೆ ಎಂದರು.
ಆರಂಭದಲ್ಲಿ ರೂ.25 ಕೋಟಿ ವೆಚ್ಚದಲ್ಲಿ ನಿರ್ಮಾಣ ಯೋಜನೆ ರೂಪಿಸಲಾಗಿತ್ತು. ಗುಡ್ಡವನ್ನು ಕಡಿದು ನಿರ್ಮಾಣ ಕಟ್ಟಡ ಕಾಮಗಾರಿ ಮಾಡಬೇಕಾದ್ದರಿಂದ ಹಣ ಸಾಲುವುದಿಲ್ಲ ಎಂದು ಯೋಜನೆಯನ್ನು ರೂ.47 ಕೋಟಿಗೆ ಪರಿಷ್ಕರಿಸಲಾಗಿದೆ. ಅಗತ್ಯ ಮೂಲಭೂತ ಕೆಲಸಗಳು, ಅಗ್ನಿ ನಿಯಂತ್ರಕ ವ್ಯವಸ್ಥೆ, ಕಟ್ಟದ ಸುತ್ತಲೂ ರಕ್ಷಣಾಗೋಡೆ ಸೇರಿದಂತೆ ಪೀಠೋಪಕರಣಕ್ಕಾಗಿ ಹೆಚ್ಚುವರಿಯಾಗಿ ರೂ.15 ಕೋಟಿ ಅನುದಾನಕ್ಕೆ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಶೇ.4 ರಷ್ಟು ಜಿ.ಎಸ್.ಟಿ ಹಾಗೂ ಕಾಮಗಾರಿ ವೆಚ್ಚದಲ್ಲಿ ಉಂಟಾಗುವ ಹೆಚ್ಚಳಕ್ಕೂ ಅನುದಾನ ಬೇಕಾಗಿದೆ. ಹಳೆ ರಾಷ್ಟ್ರೀಯ ಹೆದ್ದಾರಿಯಿಂದ ನೂತನ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕಿಸಲು ರೂ.5 ಕೋಟಿ ರಸ್ತೆ ನಿರ್ಮಿಸಲು ಡಿ.ಎಂ.ಎಫ್ ಅನುದಾನ ನೀಡಲು ಚರ್ಚಿಸಲಾಗುತ್ತಿದೆ. ನೂತನ ಕಚೇರಿ ನಗರದ ಹೊರ ವಲಯದಲ್ಲಿ ಇರುವುದರಿಂದ ಜನರಿಗೆ ತೊಂದರೆಯಾಗದಂತೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳು ನಗರದಲ್ಲಿಯೇ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಲೋಕೋಪಯೋಗಿ ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೀಶ್ ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ತಹಶೀಲ್ದಾರ್ ಗೋವಿಂದ ರಾಜು ಸೇರಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.

Share This Article
error: Content is protected !!
";