Ad image

ಅನುಸೂಚಿತ ಜಾತಿ/ಅನುಸೂಚಿತ ಪಂಗಡ ದೌರ್ಜನ್ಯ ನಿಯಂತ್ರಣ: ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ

Vijayanagara Vani
ಅನುಸೂಚಿತ ಜಾತಿ/ಅನುಸೂಚಿತ ಪಂಗಡ ದೌರ್ಜನ್ಯ ನಿಯಂತ್ರಣ: ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
ದೌರ್ಜನ್ಯ ಪ್ರಕರಣ: ರಾಜೀ-ಸಂಧಾನ ಮಾಡದೇ ತ್ವರಿತ ಕ್ರಮಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ
ಬೆಳಗಾವಿ, ಜೂನ್ 27: ಅನುಸೂಚಿತ ಜಾತಿ, ಪಂಗಡಗಳ ಜನರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರುಗಳು ದಾಖಲಾದಾಗ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ವಿನಾಕಾರಣ ವಿಳಂಬ ಮಾಡಿದಲ್ಲಿ ಸಂಬಂಧಿಸಿದ ಅಧಿಕಾರಿಗಳ‌ ವಿರುದ್ದ ಕ್ರಮ‌ ಜರುಗಿಸಲಾಗುವುದು ಜಿಲ್ಲಾಧಿಕಾರಿ‌ ನಿತೇಶ್ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ (ಜೂ.26) ಜರುಗಿದ ಅನುಸೂಚಿತ ಜಾತಿ/ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಮತ್ತು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ/ಪಂಗಡದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಸದರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಪರಿಶಿಷ್ಟ ಜಾತಿ‌ ಮತ್ತು ಪರಿಶಿಷ್ಟ ವರ್ಗದ ಜನರಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡುವಲ್ಲಿ ವಿಳಂಬ ಧೋರಣೆ‌ ಅನುಸರಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗೋಕಾಕಿನ‌ ಜಿ.ಎಸ್.ಎಸ್. ಪದವಿ ಪೂರ್ವ ಕಾಲೇಜಿನ‌ ಪ್ರಭಾರಿ ಪ್ರಾಚಾರ್ಯರ ನೇಮಕಾತಿ ಆದೇಶವನ್ನು ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಕಾಲೇಜು ಆಡಳಿತ ಮಂಡಳಿ ನೇಮಕಾತಿ ಆದೇಶ ನೀಡಲು ವಿಳಂಬ ಧೋರಣೆ ಹಾಗೂ ಕಿರುಕಳ ನೀಡಿರುವ ಕುರಿತು ಪ್ರತ್ಯೇಕ ನೋಟಿಸ್ ನೀಡಲು ತಿಳಿಸಿದರು.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಪ್ರಕರಣಗಳಲ್ಲಿ ರಾಜಿ ಸಂಧಾನಕ್ಕೆ ಅವಕಾಶ ನೀಡದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಇದರಿಂದಾಗಿ ಮುಂದೆ ದೌರ್ಜನ್ಯಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ‌ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ದೌರ್ಜನ್ಯ ನಿಯಂತ್ರಣಕ್ಕೆ‌ ಸಂಬಂಧಿಸಿದಂತೆ ಜಾರಿಯಲ್ಲಿರುವ ಕಾನೂನುಗಳ ಕುರಿತು ಕಾರ್ಯಾಗಾರಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲು ಅಗತ್ಯದ ರೂಪುರೇಷೆಗಳನ್ನು ತಯಾರಿಸಲು ಸೂಚನೆ ನೀಡಿದರು.
ಪರಿಶಿಷ್ಟ ಜಾತಿ/ಪಂಗಡದ ಸ್ಮಶಾನ ಭೂಮಿ ಅಭಿವೃದ್ಧಿಗಾಗಿ ಅಗತ್ಯದ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವೆ ಸಲ್ಲಿಸಲಾಗಿದ್ದು ಶೀಘ್ರವೆ ಸ್ಮಶಾನ ಭೂಮಿ ಅಭಿವೃದ್ದಿಗಾಗಿ ಕ್ರಮ‌ ವಹಿಸಲಾಗುವದು.
ಹೊರಗುತ್ತಿಗೆ ಸಿಬ್ಬಂದಿಗಳ ನೇಮಕಾತಿಯಲ್ಲಿ ಎಲ್ಲ ಇಲಾಖೆಗಳು ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಹೊರಗುತ್ತಿಗೆ ಸಿಬ್ಬಂದಿಗಳ‌ ನೇಮಕಾತಿಯಡಿ ಮೀಸಲಾತಿ ಮಾರ್ಗಸೂಚಿಗಳನ್ನು ಉಲ್ಲಂಘನೆಯಾಗದಂತೆ ನಿಗಾವಹಿಸಲು ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಪೋಲಿಸ ಆಯುಕ್ತರಾದ ಯಡಾ ಮಾರ್ಟಿನ ಮಾರ್ಬನ್ಯಾಂಗ ಅವರು‌ ಮಾತನಾಡಿ, ಎಲ್ಲ ಪೋಲಿಸ್ ಠಾಣೆಗಳಲ್ಲಿ ಕಡ್ಡಾಯವಾಗಿ ದೌರ್ಜನ್ಯ ಸಮಿತಿ ಸಭೆಗಳನ್ನು ಜರುಗಿಸಲು ಸೂಚನೆ ನೀಡಲಾಗಿರುತ್ತದೆ ಎಂದರು.
ಜಿಲ್ಲಾ‌ ಪಂಚಾಯತ ಸಿಇಒ ರಾಹುಲ್ ಶಿಂಧೆ ಅವರು‌ ಮಾತನಾಡಿ, ಹೊರಗುತ್ತಿಗೆ ಸಿಬ್ಬಂದಿಗಳ ನೇಮಕಾತಿಯಡಿ ಸರ್ಕಾರದ ಮಾರ್ಗಸೂಚಿಗಳನ್ವಯ ಕ್ರಮ ಕೈಗೊಳ್ಳಲು ಈಗಾಗಲೇ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯರುಗಳಾದ ಕರೆಪ್ಪ ಗುರನ್ನವರ ಹಾಗೂ ಸಿದ್ದರಾಯಿ ಮೇತ್ರಿ ಅವರುಗಳು ದೌರ್ಜನ್ಯ ಪ್ರಕರಣಗಳ ಕುರಿತು ಸಭೆಯ ಗಮನಕ್ಕೆ ತಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕರಾದ ನವೀನ‌‌ ಶಿಂತ್ರಿ ಅವರು‌ ಮಾತನಾಡಿ ಜಿಲ್ಲೆಯಲ್ಲಿ 358 ದೌರ್ಜನ್ಯ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಬಾಕಿ ಇದ್ದು ಇಲ್ಲಿಯ ವರೆಗೆ ಎಪ್ಪತ್ತ ಮೂರು ಲಕ್ಷ ರೂ ಪರಿಹಾರ ಧನ ವಿತರಿಸಲಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಪ್ರಶಿಕ್ಷಣಾರ್ಥಿ ಆಯ್.ಎ.ಎಸ್, ಅಧಿಕಾರಿ ದಿನೇಶಕುಮಾರ ಮೀನಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲಾ‌ ದೌರ್ಜನ್ಯ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

Share This Article
error: Content is protected !!
";