ಎಸ್ಎಲ್ಸಿ ಒಂದು ಮಹತ್ವದ ಘಟ್ಟ. ಮಕ್ಕಳಲ್ಲಿ ಸಮರ್ಥವಾಗಿ ಮತ್ತು ಸಮರ್ಪಕವಾಗಿ ಎದುರಿಸುವ ಆತ್ಮವಿಶ್ವಾಸ ಮೂಡಿಸಬೇಕು. ಮತ್ತು ಶಾಲೆಯಲ್ಲಿ ಮಕ್ಕಳು ಪರೀಕ್ಷೆಯ ಬಗ್ಗೆ ಗೊಂದಲ, ಭಯ ಇಲ್ಲದೇ ಪರೀಕ್ಷೆಗಳನ್ನು ಬರೆಯುವ ಪರೀಕ್ಷಾಸ್ನೇಹಿ ಪರಿಸರ ನಿರ್ಮಾಣವಾಗಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು (ಫೆ.21) ಸಂಜೆ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಆದರ್ಶ ವಿದ್ಯಾಲಯದಲ್ಲಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಪಲಿತಾಂಶ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ತಾಲೂಕಿನ ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ, ಎಸ್ಡಿಎಂಸಿ ಅಧ್ಯಕ್ಷರ, ಪಾಲಕರ ಸಭೆ ಮತ್ತು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿದ್ಯಾರ್ಥಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ, ಸಾಕಷ್ಟು ಅನುದಾನವನ್ನು ಮತ್ತು ವಿನೂತನ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಶಿಕ್ಷಕರಿಗೆ ವೇತನ, ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಪೂರೈಸುತ್ತಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಶೈಕ್ಷಣಿ ಸುಧಾರಣೆ ಹಾಗೂ ಬೋಧನಾ ಗುಣ್ಣಮಟ್ಟ ಸುದ್ದಾರಿಸುತ್ತಿಲ್ಲ. ಈ ಕುರಿತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಶಿಕ್ಷಕರು ಶಾಲೆಯ ಪ್ರತಿ ಮಗುವನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣಬೇಕು. ನನ್ನ ಶಾಲೆ-ನನ್ನ ಮಕ್ಕಳು ಎಂಬ ಅಭಿಮಾನದಿಂದ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಪ್ರ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಹೇಳಿದರು.
ಮಕ್ಕಳ ಮೂಲಭೂತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪ್ರಾಥಮಿಕ ಹಂತದಿಂದ ಪ್ರತಿ ಮಗು ನಿಗದಿಪಡಿಸಿದ ಶೈಕ್ಷಣಿಕ ಸಾಧನೆ ಮಾಡಬೇಕು ಮತ್ತು ಉತ್ತಮ್ಮ ರೀತಿಯಲ್ಲಿ ಓದು ಬರಹ ಕಲಿಯಬೇಕು. ಈ ಕರ್ತವ್ಯ ನಿರ್ವಹಣೆಯಲ್ಲಿ ಶಿಕ್ಷಕರು ಮತ್ತು ಪಾಲಕರು ಜಂಟಿಯಾಗಿ ಪಾತ್ರ ನಿರ್ವಹಿಸಬೇಕು. ಅಂದಾಗ ನಾವು ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಿಶನ್ ವಿದ್ಯಾಕಾಶಿ ಯೋಜನೆಯಡಿ ಎಲ್ಲ ತರಗತಿಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುವ, ಶಕ್ತಿ ತುಂಬುವ ಕಾರ್ಯವನ್ನು ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರತಿ ದಿನ ವಿಶೇಷವರ್ಗ, ಅಭ್ಯಾಸ ಹಾಳಿ, ಮಾದರಿ ಪರೀಕ್ಷೆ ರೂಡಿ ಪರೀಕ್ಷೆಗಳ ಮೂಲಕ ವಾರ್ಷಿಕ ಪರೀಕ್ಷೆಗಳ ಬಗ್ಗೆ ಆತ್ಮವಿಶ್ವಾಸ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಸಭೆಯಲ್ಲಿ ಹತ್ತನೇಯ ವರ್ಗದ ವಿದ್ಯಾರ್ಥಿ ವಿದ್ಯಾರ್ಥಿನೀಯರು ತಮ್ಮ ಆತಂಕ, ಆಕಾಂಕ್ಷೆ, ಗೊಂದಲಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಪ್ರಗತಿ ವರದಿಯನ್ನು ಜಿಲ್ಲಾಧಿಕಾರಗಳಿಗೆ ಸಲ್ಲಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರು ಮಿಶನ್ ವಿದ್ಯಾಕಾಶಿ ಯೋಜನೆಯಡಿ ಕೈಗೊಂಡ ಕ್ರಮಗಳಿಂದ ತಮ್ಮ ಮಕ್ಕಳಲ್ಲಿ ಉಂಟಾಗಿರುವ ಒದು ಬರಹಗಳಲ್ಲಿ ಬದಲಾವಣೆ ಮತ್ತು ಶೈಕ್ಷಣಿಕ ಸುಧಾರಣೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ದಾಸ್ತಿಕೊಪ್ಪ ಆದರ್ಶ ವಿದ್ಯಾಲಯದ ಪ್ರಾಂಶುಪಾಲ ತಿಮ್ಮಾರಡ್ಡಿ ಎನ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರೂಬಿನಾ ಮುಲ್ಲಾ ಸ್ವಾಗತಿಸಿದರು. ಲೀನಾ ಮೇರಿ ಆಲೂರ ಅವರು ಕಾರ್ಯಕ್ರಮ ನಿರೂಪಿಸಿದರು. ಕಲಘಟಗಿ ತಹಶೀಲ್ದಾರ ವಿರೇಶ ಮುಳಗುಂದ ಮಠ ವಂದಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರೌಢ ಶಾಲಾ ಶಿಕ್ಷಣ ಸಂಯೋಜಕ ನಿಂಗೋಜಿ ಮ್ಯಾಗಳಮನಿ, ಪ್ರಭಾರ ಬಿಆರ್ಸಿ ಸುಜಾತಾ ಚವ್ಹಾಣ, ಬಿಆರ್ಪಿ ಪಾಂಡುರಂಗ ಪೂಜಾರ ಸೇರಿದಂತೆ ಕಲಘಟಗಿ ತಾಲೂಕಿನ ವಿವಿಧ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಸ್ಥರು ಭಾಗವಹಿಸಿದ್ದರು.