ಚಿತ್ರದುರ್ಗಜೂ.02:
ಸಮಾಜದಲ್ಲಿ ಪ್ರತಿ ಮಹಿಳೆಯು ತಮ್ಮದೇಯಾದ ಹಣಕಾಸಿನ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದು ಹಿರಿಯ ವಕೀಲೆ ಡಿ.ಕೆ.ಶೀಲಾ ಹೇಳಿದರು.
ನಗರದ ಸ್ಟೇಡಿಯಂ ರಸ್ತೆಯ ಜಿ.ಜಿ.ಸಮುದಾಯ ಭವನದಲ್ಲಿ ಸೋಮವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಪ್ರತಿಭೋತ್ಸವ ಸಮಾರಂಭ”ದಲ್ಲಿ ಅವರು ಮಾತನಾಡಿದರು.
ನಮ್ಮಿಂದ ಹಾಗೂ ನಮ್ಮ ಕುಟುಂಬದಿಂದಲೇ ಸಮಾನತೆ ಶುರುವಾಗಬೇಕು. ಪೋಷಕರು ಗಂಡು, ಹೆಣ್ಣು ಇಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ನಮ್ಮನ್ನು ನಾವು ಬದಲಾಯಿಸಿಕೊಳ್ಳುವ ಮೂಲಕ ಬದಲಾವಣೆ ಪ್ರಾರಂಭವಾಗಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಕುಟುಂಬಕ್ಕೆ ಉತ್ತಮ ಹೆಸರು ತರುವ ಮೂಲಕ ಸ್ವಾವಲಂಬಿಗಳಾಗಿ, ಆರ್ಥಿಕ ಸ್ವಾತಂತ್ರ್ಯದಲ್ಲಿ ಯಶಸ್ವಿಗಳಾಗಬೇಕು. ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಕಂಡ ಮಹಿಳೆಯರು ನೀವಾಗಬೇಕು ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಮಹಿಳಾ ಕಾಲೇಜಿನ ನೂತನ ಕಟ್ಟಡಕ್ಕೆ ಕೆಎಂಇಆರ್ಸಿಯಿಂದ ರೂ.25 ಕೋಟಿಗೆ ಆಡಳಿತಾತ್ಮಕ ಅನುಮೋದನೆ ದೊರೆತ್ತಿದ್ದು, ಟೆಂಡರ್ ಪ್ರಕ್ರಿಯೆಗೆ ಆಯುಕ್ತರಿಗೆ ಅನುಮೋದನೆಗೆ ಕಳಿಸಲಾಗಿದೆ. ಸರ್ಕಾರದಿಂದ ವಿದ್ಯಾರ್ಥಿಗಳ ಮೂಲ ಸೌಕರ್ಯಕ್ಕೆ ರೂ.2 ಕೋಟಿ ಹಾಗೂ ವಿಶ್ರಾಂತಿ ಕೊಠಡಿಗೆ ರೂ.1 ಕೋಟಿ ಮಂಜೂರಾಗಿದೆ. ಇನ್ನೂ ಕೇವಲವೇ ದಿನಗಳಲ್ಲಿ ಅತ್ಯಂತ ಉತ್ತಮ ಕಾಲೇಜ್ ಆಗಿ ಮಹಿಳಾ ಕಾಲೇಜು ಮಾರ್ಪಾಡಲಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ “ಮಹಿಳಾ ಸಿರಿ” ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ಬಿ.ಕಾಂ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದ ಎಂ.ಜೆ.ಸಿಂಧು ಹಾಗೂ ಬಿಎ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದ ಎಂ.ಎಸ್.ದೀಪಾ ಅವರಿಗೆ ತಲಾ ಮೂರು ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. 40 ಜನ ಉನ್ನತ ಶ್ರೇಣಿ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ 180 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರದಲ್ಲಿ ಮಹಿಳಾ ಸಿರಿ ವಾರ್ಷಿಕ ಸಂಚಿಕೆ ಸಂಪಾದಕ ಡಾ.ಡಿ.ಓ.ಸಿದ್ದಪ್ಪ, ಸಾಂಸ್ಕøತಿಕ ಸಮಿತಿ ಸಂಚಾಲಕ ಡಾ.ಶಿವಣ್ಣ, ಅಧ್ಯಾಪಕರ ಸಂಘ ಕಾರ್ಯದರ್ಶಿ ಡಾ.ಪಿ.ಎನ್.ಮಧುಸೂದನ, ಐಕ್ಯೂಎಸಿ ಸಂಚಾಲಕ ಹಲಸಂದಿ ಸತೀಶ, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಹೆಚ್.ಶಕುಂತಲ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಎಂ.ಗಿರೀಶ್, ಕ್ರೀಡಾ ಸಮಿತಿ ಸಂಚಾಲಕ ಆರ್.ಶಿವಪ್ರಸಾದ್, ಪತ್ರಾಂಕಿತ ವ್ಯವಸ್ಥಾಪಕ ಆರ್.ವೆಂಕಟೇಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.


