ಶಿವಮೊಗ್ಗ ಜ.03
ಎಲ್ಲ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಗುರಿ, ಕನಸು ಮತ್ತು ಪ್ರತಿಭೆಗಳು ಇರುತ್ತವೆ. ಸಮರ್ಪಕವಾದ ಯೋಜನೆ ರೂಪಿಸಿಕೊಂಡು ಅವುಗಳನ್ನು ಸಾಧಿಸಬೇಕೆಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ 10 ನೇ ಅಂತರ ಮಹಾವಿದ್ಯಾಲಯಗಳ ಯುವ ಜನೋತ್ಸವ 2024-25 ‘ಯುವ ಸವಿಷ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರ ಕಾಲೇಜಿನ ಯುವ ಜನೋತ್ಸವ ಒಂದು ವಿಶೇಷವಾದ ಮತ್ತು ಅಪರೂಪದ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿನ ವಿವಿಧ ರೀತಿಯ ಪ್ರತಿಭೆ ಅನಾವರಣಗೊಳಿಸಲು ಇದು ಸೂಕ್ತ ವೇದಿಕೆ.
ವಿದ್ಯಾರ್ಥಿಗಳಿಗೆ ಈಗ ಗುರು ಇದ್ದಾರೆ. ತಮ್ಮದೇ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವೆಡೆ ಗಮನ ಹರಿಸಬೇಕು. ತಂದೆ ತಾಯಿಗಳು, ಶಿಕ್ಷಕರು ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಕನಸು ಕಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ಹೆಮ್ಮೆ ಪಡುವಂತಹ ಸಾಧನೆ ಮಾಡಿರಿ. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ಕೃಷಿಯಲ್ಲಿ ಸಹ ಉತ್ತಮ ಸಾಧನೆ ತೋರಬಹುದು. ವಿದ್ಯಾರ್ಥಿಗಳು ತಮ್ಮ ಕನಸು ಮತ್ತು ಗುರಿ ಸಾಧಿಸಲು ದೃಢ ಹೆಜ್ಜೆಗಳನ್ನು ಇಡಬೇಕೆಂದರು ಹುರಿದುಂಬಿಸಿದರು.
ಚಲನಚಿತ್ರ ನಟ ಭದ್ರಾವತಿಯ ದಿಲೀಪ್ ಪ್ರಕಾಶ್ ನಗಾರಿ ಬಾರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಓದು ಮುಖ್ಯ. ಆದರೆ ಪ್ರತಿಭೆ ಅನಾವರಣ ಸಹ ಬಹಳ ಮುಖ್ಯ. ನಮ್ಮನ್ನು ನಾವು ಸಮಾಜದಲ್ಲಿ ಒಂದಿಲ್ಲೊAದು ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಹಗಲು ರಾತ್ರಿ ಶ್ರಮಿಸಬೇಕು. ನಮ್ಮ ಕನಸು, ಗುರಿ ತಲುಪುವವರೆಗೆ ನಿಲ್ಲಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಕೃಷಿ ಮಾಡಬಹುದು ಎಂದು ತಾವು ನೆದರ್‌ಲ್ಯಾಂಡ್‌ನಲ್ಲಿ ಕಂಡ ಮಾದರಿ ಕೃಷಿ ಬಗ್ಗೆ ಉಲ್ಲೇಖಿಸಿದರು.
ಶಿಕ್ಷಣ ತಜ್ಞರು ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಪಿ.ಕೆ.ಬಸವರಾಜ ಯುವ ಸವಿಷ್ಕಾರದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಮತ್ತು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು.
ಕೃಷಿ ಉದ್ದಿಮೆದಾರ ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಬಿ.ಕೆ.ಕುಮಾರಸ್ವಾಮಿ ಮಾತನಾಡಿ, ಹಿಂದೆಲ್ಲ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಉತ್ಸಾಹ ಬಹಳ ಇತ್ತು. ಈಗಲೂ ಅದು ಕಡಿಮೆ ಆಗಬಾರದು. ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳು ದೂರ ಇದ್ದು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸು ಹಾಗೂ ದೇಹವನ್ನು ಸದೃಢಗೊಳಿಸುತ್ತದೆ ಜೊತೆಗೆ ಸಾಧನೆಗೆ ಸಹಕಾರಿಯಾಗಿದೆ. ಆದ್ದರಿಂದ ನಿರ್ಲಕ್ಷ್ಯ ವಹಿಸದೇ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ ಮಾತನಾಡಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಮಾಡಬೇಕು. ಹಾಗೂ ವಿದ್ಯಾರ್ಥಿಗಳು ಪ್ರತಿ ವಿಭಾಗದಲ್ಲಿ ಉತ್ಕೃಷ್ಟತೆ ತೋರಬೇಕು. ಎಲ್ಲರಲ್ಲಿ ಒಂದಿಲ್ಲೊoದು ಪ್ರತಿಭೆ ಇದ್ದೇ ಇರುತ್ತದೆ.
ವಿಶ್ವವಿದ್ಯಾಲಯ ಎಲ್ಲ ವಿಭಾಗಗಳಲ್ಲಿ ಜಾಗರೂಕತೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿಶ್ವವಿದ್ಯಾಲಯಕ್ಕೆ ಕೃಷಿಕರು ಮತ್ತ ವಿದ್ಯಾರ್ಥಿಗಳು ಮುಖ್ಯ ಅಂಗವಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರತರುವುದು ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿದೆ.
ನಮ್ಮ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ 7 ಜಿಲ್ಲೆಗಳೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿವೆ. ಕಳೆದ ಬಾರಿ ಅಂತರ ವಿಶ್ವವಿದ್ಯಾಲಯದ ಎರಡು ವಿಭಾಗದಲ್ಲಿ ಪ್ರಶಸ್ತಿ ಲಭಿಸಿತ್ತು. ಅಂತರ ಮಹಾವಿದ್ಯಾಲಯಗಳಲ್ಲಿ ಉತ್ತಮ ತಂಡಗಳು ಆಯ್ಕೆಗೊಂಡು ಅಂತರ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ಸ್ಪರ್ಧೆ ನೀಡಿ ಗೆದ್ದು ಬರಲಿ ಎಂದು ಹಾರೈಸಿದರು.
ಮಾಜಿ ಕುಲಪತಿ ಡಾ.ವಾಸುದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡೀನ್ (ವಿದ್ಯಾರ್ಥಿ ಕಲ್ಯಾಣ) ಡಾ.ಎನ್.ಎಸ್.ಮಾವರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೀನ್(ಕೃಷಿ) ಡಿ.ತಿಪ್ಪೇಶ್, ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ, ಡಾ.ಧನಂಜಯ ನಾಯಕ್, ಡಾ. ಶಶಿಧರ್, ಡಾ. ದುಷ್ಯಂತ ಕುಮಾರ್, ಡಾ.ಬಿ.ಕೆ.ಶಿವಣ್ಣ, ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.