Ad image

ಛಾವ ( ಛತ್ರಪತಿ ಸಂಭಾಜಿ ಬೋಸ್ಲೆ )ಹಿಂದೂ ಸಾಮ್ರಾಜ್ಯದ ಸ್ಥಾಪನೆಯ ಹರಿಕಾರ ಛತ್ರಪತಿ ಶಿವಾಜಿಯ ಪುತ್ರ….

Vijayanagara Vani
ಛಾವ ( ಛತ್ರಪತಿ ಸಂಭಾಜಿ ಬೋಸ್ಲೆ )ಹಿಂದೂ ಸಾಮ್ರಾಜ್ಯದ ಸ್ಥಾಪನೆಯ ಹರಿಕಾರ ಛತ್ರಪತಿ ಶಿವಾಜಿಯ ಪುತ್ರ….

ಜಗತ್ತಿನ ಉಳಿದ ಭಾಗಗಳಲ್ಲಿ ಮನುಷ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾಗ ಭಾರತದಲ್ಲಿ ಸರ್ವ ಧರ್ಮ ಸಮನ್ವತೆಯ, ಸಾಮರಸ್ಯದಿಂದ ಒಗ್ಗೂಡಿ ಬಾಳುವ ಮಹಾನ್ ಸಂಸ್ಕೃತಿಯ ನಿರ್ಮಾಣವಾಗಿತ್ತು.ಅಖಂಡ ಭಾರತವು ಪರಕೀಯರ ಆಕ್ರಮಣಕ್ಕೆ ತುತ್ತಾಗಲಾರಂಭಿಸಿ 16 ನೇ ಮೊಘಲರು ದೆಹಲಿಯ ಸುತ್ತ ಮುತ್ತಲ ಪ್ರದೇಶಗಳನ್ನು ಆಕ್ರಮಿಸಿಕೊಂಡು ಅಂತಿಮವಾಗಿ 17ನೇ ಶತಮಾನದ ಹೊತ್ತಿಗೆ ಮೊಘಲರ ಅತ್ಯಂತ ನಿರ್ದಯಿ,ಕ್ರೂರಿಯಾದ ದೊರೆ ಔರಂಗಜೇಬನ ಕಾಲದಲ್ಲಿ ಅಖಂಡ ಭಾರತವನ್ನು ಹಿಂದೂ ಸಾಮ್ರಾಜ್ಯವನ್ನಾಗಿಸುವ ಬೃಹತ್ ಕನಸೊಂದನ್ನು ತನ್ನ ತಾಯಿಯ ಪ್ರೇರಣೆಯಿಂದ ಹೊಂದಿದ್ದ ಆ ವ್ಯಕ್ತಿ ಬಹುತೇಕ ತನ್ನ ಗುರಿಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದರೆ ಅದಕ್ಕೆ ಕಾರಣ ಆತನ ಅದಮ್ಯ ದೇಶ ಭಕ್ತಿ, ಚಾಣಾಕ್ಷತೆ ಮತ್ತು ಕೆಚ್ಚೆದೆಯ ಶೌರ್ಯ ಎದುರಾಳಿಗಳ ಕಣ್ಣಲ್ಲಿ ಸಿಂಹನಂತೆ ತೋರುತ್ತಿದ್ದ ಹಿಂದೂ ಸಾಮ್ರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿಯ ಕನಸನ್ನು ನನಸು ಮಾಡಲು ಅಹರ್ನಿಶಿ ಹೋರಾಡಿದ ಆತನ ಪುತ್ರ ಮರಿ ಸಿಂಹ ಅರ್ಥಾತ್ ಶಾವಾ ಎಂಬ ಹೆಸರಿನಿಂದ ಕರೆಯಲ್ಪಟ್ಟವರೇ
ಛತ್ರಪತಿ ಸಂಭಾಜಿ ರಾವ್ ಬೋಸ್ಲೆ.

ಪುಟ್ಟ ಮಗು ಶಂಭು ಉರ್ಫ್ ಸಂಭಾಜಿ ರಾವ್ 2 ವರ್ಷದ ಮಗುವಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದು ತನ್ನ ಸ್ವರಾಜ್ಯದ ಕಲ್ಪನೆಯಲ್ಲಿ ತನ್ನ ಮಗ ತಬ್ಬಲಿಯಾಗಬಾರದು ಎಂದು ಆತನನ್ನು ದೂರವೇ ಇರಿಸಿದ್ದರೂ ಕೂಡ ತಂದೆಯ ಎಲ್ಲಾ
ಧ್ಯೇಯೋದ್ದೇಶಗಳನ್ನು ಶೌರ್ಯ,ಸಾಹಸಗಳನ್ನು ಬಳುವಳಿಯಾಗಿ ಪಡೆದವ ಶಂಭು. ಒಂದೊಮ್ಮೆ ತಂದೆ
ಮರಾಠರ ಸಾಮ್ರಾಟ ಶಿವಾಜಿ ಮತ್ತು ದೆಹಲಿ ಗದ್ದುಗೆಯ ಮೊಘಲರ ಔರಂಗಜೇಬರ ನಡುವಿನ ಮಾತುಕತೆಯನ್ನು ಏರ್ಪಡಿಸಲಾಗಿದ್ದು ಪುಟ್ಟ ಬಾಲಕ ಶಂಭು ತನ್ನ ತಂದೆಯ ಅನುಪಸ್ಥಿತಿಯಲ್ಲಿ ಔರಂಗಜೇಬನನ್ನು ಆಸ್ಥಾನಕ್ಕೆ ಬಂದು ಭೇಟಿಯಾಗುತ್ತಾನೆ. ನಿನಗೆ ಭಯವಾಗುವುದಿಲ್ಲವೇ ಎಂದು ಔರಂಗಜೇಬನು ಪುಟ್ಟ ಶಂಭುವನ್ನು ಕೇಳಿದಾಗ
ನನಗೆ ಭಯ ಹುಟ್ಟಿಸುವುದು ಗೊತ್ತಾಗುತ್ತದೆ ಎಂದು ಹೇಳಿದ ಪುಟ್ಟ ಬಾಲಕನನ್ನು ಕಂಡು ಸ್ವತಹ ಔರಂಗಜೇಬನೇ ದಂಗಾಗುತ್ತಾನೆ.

ದಿನೇಶ್ ವಿಜನ್ ನಿರ್ಮಾಣದ ಅತ್ಯಂತ ಬಿಗುವಾದ ನಿರೂಪಣೆಯನ್ನು ಹೊಂದಿರುವ ಶಾವಾ ಚಲನಚಿತ್ರದಲ್ಲಿ ಸಂಭಾಜಿ ಪಾತ್ರಧಾರಿಯಾಗಿ
ಅಭಿನಯಿಸಿರುವ ವಿಕ್ಕಿ ಕೌಶಲ್ ನಟನೆಯಲ್ಲಿ ವೀರಾವೇಶ, ತಾಯಿಯ ಪ್ರೀತಿಗಾಗಿ ಹಂಬಲಿಸುವ ಪುಟ್ಟ ಮುಗ್ಧ ಮನಸ್ಸಿನ ಯುವಕ, ಬಾಲ್ಯದಲ್ಲಿ ತಾಯಿ ಪ್ರೀತಿಯಿಂದ ವಂಚಿತನಾಗಿ ಒಂದೊಮ್ಮೆ ಆತಂಕ ಮತ್ತು
ಭಯದಿಂದ ನರಳಿದ ಪುಟ್ಟ ಬಾಲಕ ಅಜ್ಜಿಯ ಮಮತೆಯ ಮಡಿಲಿನಲ್ಲಿ ಬೆಳೆಯುತ್ತಾನಾದರೂ ಬಾಲ್ಯದ ಮಾನಸಿಕ ತೊಳಲಾಟಗಳು ಆಗಾಗ ನೆನಪಿನ ಪಟಲದಲ್ಲಿ ಹಾದು ಹೋಗುತ್ತವೆ.ಅಪಾರ ಪ್ರೀತಿಯ ಪತಿ, ಸ್ವರಾಜ್ಯಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಡುವ ಶೌರ್ಯ, ತನ್ನ ವಿರುದ್ಧ ಷಡ್ಯಂತ್ರವನ್ನೇ ಮಾಡಿದ ಮಲತಾಯಿಯ ಆಶೀರ್ವಾದ ಪಡೆಯುವ ವಿನಯವಂತಿಕೆ, ತಂದೆ ಶಿವಾಜಿಯ ಕನಸನ್ನು ನನಸು ಮಾಡುವ ಹಪಹಪಿಕೆ ಸರ್ವಧರ್ಮ ಸಮನ್ವಯದ ಸ್ವರಾಜ್ಯ ಸೃಷ್ಟಿಯ ಕನಸು ಹೀಗೆ ಹತ್ತು ಹಲವು ಭಾವಗಳು ನಮ್ಮನ್ನು ಗಾಢವಾಗಿ ತಟ್ಟುತ್ತವೆ. ಸಂಭಾಜಿ ಪತ್ನಿ ಯೇಸು ಬಾಯಿಯ ಪಾತ್ರದಲ್ಲಿ ರಶ್ಮಿಕ ಮಂದಣ್ಣ ಕೂಡ ಪ್ರಬುದ್ಧವಾಗಿ ನಟಿಸಿದ್ದು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಔರಂಗಜೇಬನ ಕ್ರೌರ್ಯ ಮತ್ತು ವಂಚನೆಗಳನ್ನು ಮೇಳಯಿಸಿಕೊಂಡ ಪಾತ್ರವಾಗಿ ಅಕ್ಷಯ್ ಖನ್ನ ಮುಂತಾದ ಪಾತ್ರಗಳು ಬಹಳ ದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತವೆ.

ಮರಾಠ ಸಾಮ್ರಾಟ್ ಶಿವಾಜಿಯ ಕಡು ವೈರಿಯಾದ ಔರಂಗಜೇಬನ ದೂತನು ಶಿವಾಜಿ ಮಹಾರಾಜನ ಮರಣದ ಸುದ್ದಿಯನ್ನು ತುಂಬಿದ ಸಭೆಯಲ್ಲಿ ಬಂದು ಹೇಳಿದಾಗ ತನ್ನ ಸಾಮ್ರಾಜ್ಯದಲ್ಲಿ ಸಂಭ್ರಮಾಚರಣೆ ಮಾಡಲು ಹೇಳಿದ ಕಟು ಮನಸ್ಸಿನ ಔರಂಗಜೇಬ ಕೂಡ ಅಂತಹ ವೀರ ಶಿವಾಜಿಗೆ ಮರಣವನ್ನು ಕರುಣಿಸಿ ತನ್ನ ಅತಿ ದೊಡ್ಡ ಶತ್ರುವನ್ನು ಕಳೆದುಕೊಳ್ಳುವಂತೆ ಮಾಡಿದ ಅಲ್ಲಾಹನೊಂದಿಗೆ ತನಗೆ ಮುನಿಸಿದೆ ಎಂದೂ ಛತ್ರಪತಿ ಶಿವಾಜಿಗೆ ಸ್ವರ್ಗದಲ್ಲಿ ಜಾಗ ಕೊಡು ಎಂದು ಅಲ್ಲಾಹನಲ್ಲಿ ಬೇಡಿಕೊಂಡಾಗ ಮನಸ್ಸು ಶಿವಾಜಿ ಮಹಾರಾಜರ ಕುರಿತಾದ ಅಭಿಮಾನದಿಂದ ಕೇಕೆ ಹಾಕುತ್ತದೆ. ಅಂತಿಮವಾಗಿ ಅದೇ ಔರಂಗಜೇಬನು ತನಗೆ ಪತ್ರ ತಂದು ಕೊಟ್ಟು ರಾಜಾಜ್ಞೆಯಂತೆ ಅದನ್ನು ಓದಿದ ದೂತನನ್ನು ಕೊಂದು ನನಗೆ ಶಿವಾಜಿಯ ಮಗ ಸಂಬಾಜಿಯಂತಹ ಒಂದಾದರೂ ಮಕ್ಕಳು ಹುಟ್ಟಲಿಲ್ಲ ಎಂದು ಹಲುಬಿ ಹತಾಶನಾಗಿ ಧರಾಶಾಯಿಯಾದಾಗ
ಸಂಭಾಜಿಯ ಅಪ್ರತಿಮ ವೀರತ್ವ, ಸಾವಿನಲ್ಲಿಯೂ ಮೆರೆದ ಸಂಯಮ, ಸೋತರೂ ತಲೆ ಬಾಗದ ಸ್ವಾಭಿಮಾನ, ಅವಡುಗಚ್ಚಿ ನೋವನ್ನು ಸಹಿಸಿದ ರೀತಿ ಶತ್ರುವಿನಂತಹ ಶತ್ರು ಕೂಡ ಆತನ ಕುರಿತು ಈರ್ಶೆ ಪಟ್ಟಾಗ ಕಣ್ಣಲ್ಲಿ ನೀರು ತುಂಬಿ ಗಂಟಲುಬ್ಬಿ ಬರುತ್ತದೆ.

ತಂದೆಯ ಹತಾಶ ಭಾವವನ್ನು ಕಂಡ ಔರಂಗಜೇಬನ ಮಗಳು ‘ಸಂಭಾಜಿ ಸಡಗರ ಸಂಭ್ರಮದಿಂದ ಮರಣವನ್ನು ಎದುರುಗೊಂಡರೆ ನಾವು ಮೊಘಲರು ಬದುಕಿದ್ದು ಸತ್ತವಾರತಾಗಿದ್ದೇವೆ ‘ ಎಂದು ಮೊಘಲರ ಕುರಿತು ಹೇಳಿದ್ದು ಮೊಘಲ್ ಸಾಮ್ರಾಜ್ಯದ ಅವನತಿಗೆ ಮುನ್ನುಡಿಯಂತೆ ತೋರುತ್ತದೆ.

ಪತಿಯೆಡೆಗಿನ ಪತ್ನಿಯ ವಿಶ್ವಾಸ ಸಾಂಭಾಜಿಯಲ್ಲಿ ಯುದ್ಧವನ್ನು ಹಬ್ಬದಂತೆ ಎದುರುಗೊಳ್ಳಲು ಹುರಿದುಂಬಿಸಿದರೆ, ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಆಕೆಯ ಪ್ರೀತಿಯ ಆಸರೆಗಾಗಿ ಹಂಬಲಿಸುವ ಪುಟ್ಟ ಮಗುವಿನಂತೆ ತೋರುವ ಸಂಭಾಜಿಗಾಗಿ ಮುಂದಿನ ಜನ್ಮದಲ್ಲಿ ತಾನು ತಾಯಾಗಿ ಆತನಿಗೆ ದೊರೆಯಬೇಕಾದರೆ ಎಲ್ಲ ತಾಯಿ ಪ್ರೀತಿಯನ್ನು ಕೊಡ ಮಾಡುವೆ ಎಂದು ಹೇಳುವಾಗ ಆಕೆ ಆತನ ರಾಣಿಗಿಂತ ಹೆಚ್ಚಾಗಿ ತಾಯಿತನದ ಪ್ರತೀಕವಾಗಿ ತೋರುತ್ತಾಳೆ.

ಸಾಂಭಾಜಿಯು ತಾನು ಔರಂಗಜೇಬನೊಂದಿಗೆ ಯುದ್ಧಕ್ಕೆ ಹೋಗುತ್ತಿರುವುದು ಪತ್ನಿಗೆ ಕೊಂಚವೂ ಭಯವನ್ನು ತರುತ್ತಿಲ್ಲವೇ ಎಂದು ತನ್ನ ಪತ್ನಿಗೆ ಪ್ರಶ್ನಿಸಿದಾಗ ಆಕೆ ಹೀಗೆ ಹೇಳುತ್ತಾಳೆ” ಶಿವಾಜಿಯ ತಾಯಿ ಜೀಜಾ ಮಾತೆ ಸಾಂಬಾಜಿಯ ಪತ್ನಿ ಯೇಸು ಬಾಯಿಯನ್ನು ಮನೆ ತುಂಬಿಸಿಕೊಂಡಾಗ ಈ ಮರಾಠ ವೀರರು ಪರ್ವತಗಳಲ್ಲಿ ಬೀಸುವ ತೂಫಾನಿ ಶೌರ್ಯವುಳ್ಳವರು ಪರ್ವತಗಳಿಗೆಯೇ ಇವರ ತೂಪಾನಿನಂತಹ ಶಕ್ತಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದರೆ ಅವರ ಶೌರ್ಯದ ಅಂದಾಜನ್ನು ಮಾಡು ಎಂದು ಹೇಳಿದ್ದನ್ನು ನೆನೆದು ಪತಿಗೆ ಈ ವಿಷಯವನ್ನು ಹೇಳುತ್ತಾ ‘ನಿಜ ನನಗೆ ಭಯವಾಗುತ್ತಿದೆ ಆದರೆ ನಿಮ್ಮ ಮುಂದೆ ಔರಂಗಜೇಬನ ಮತ್ತು ಆತನ ಸೈನಿಕರ ಗತಿ ಏನಾಗಬಹುದು ಎಂದು ಅತ್ಯಂತ ವಿಶ್ವಾಸದಿಂದ ಹೇಳುತ್ತಾಳೆ.
ಅಧಿಕಾರಕ್ಕಾಗಿ ತನ್ನವರನ್ನೇ ಕೊಂದು ಇಲ್ಲವೇ ಕೊಲ್ಲಬೇಕೆನ್ನುವ ಆಶಯದಿಂದ ಯುದ್ಧ ಮಾಡಲು ದೂರದ ದೆಹಲಿಯಿಂದ 25 ಲಕ್ಷಕ್ಕೂ ಹೆಚ್ಚು ಸೈನ್ಯದೊಂದಿಗೆ ಬರುವ ಮೊಘಲರನ್ನು ಕೇವಲ 25000 ಸೈನಿಕರನ್ನು ಹೊಂದಿರುವ ಹಿಂದೂ ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯದ ಕನಸಿನ ಸಾಕಾರಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮರಾಠ ಸೈನಿಕರು ತಮ್ಮ ಗೆರಿಲ್ಲ ತಂತ್ರಗಳಿಂದ, ಮಹಾರಾಷ್ಟ್ರದ ಭೌಗೋಳಿಕ ಪರಿಸ್ಥಿತಿಯ ಅನುಕೂಲ, ಸಹ್ಯಾದ್ರಿಯ ಬೆಟ್ಟ ಕಣಿವೆಗಳಲ್ಲಿ, ನದಿಯ ಏರಿಳಿತಗಳ ಜಾಗಗಳನ್ನು, ಆಳ ಕೊರಕಲುಗಳನ್ನು ಬಳಸಿಕೊಂಡು
ಹಣ್ಣುಗಾಯಿ ನೀರುಗಾಯಿ ಮಾಡಿ ಅರ್ಧಕ್ಕರ್ಧ ಸೈನ್ಯವನ್ನು ನಾಶ ಮಾಡಿ ಅವರ ಮಹತ್ವಕಾಂಕ್ಷೆಯನ್ನು ನಿರಾಶೆಯಲ್ಲಿ ಬದಲಿಸುತ್ತಾರೆ.

ಕುಲಕ್ಕೆ ಮೃತ್ಯು ಕೊಡಲಿಯ ಕಾವು ಎಂಬಂತೆ ಅಧಿಕಾರದ ಲಾಲಸೆಗೆ ಬಿದ್ದ ತಮ್ಮವರೇ ಆದ ಮಾಳೋ ಸಾ ಮತ್ತು ಗಣೋಸಾ ಎಂಬ ಬೆಂಬಲಿಗರ ಕಾರಸ್ಥಾನದಿಂದಾಗಿ ಮೊಘಲರ ಕೈವಶವಾಗುವ ಮುನ್ನ ನೂರಾರು ಸೈನಿಕರನ್ನು ಏಕಕಾಲದಲ್ಲಿ ಎದುರಿಸಿದ ಸಂಬಾಜಿ ಮಹಾರಾಜನನ್ನು ಕಂಡು ಶತ್ರುಗಳ ಎದೆ ಝಲ್ಲೆನ್ನುತ್ತದೆ. ಆತನ ಶೌರ್ಯ ಪರಾಕ್ರಮಕ್ಕೆ ಸರಿಸಾಟಿ ಯಾರೂ ಇಲ್ಲವಾದ್ದರಿಂದಲೇ ಸಿಂಹದೊಂದಿಗೆ ಸೆಣಸಿದ ಸಾಂಭಾಜಿ ಶಾವ( ಮರಿ ಸಿಂಹ ) ಎನ್ನಲು ಅಡ್ಡಿಯಿಲ್ಲ ಎಂಬ ಉದ್ಧಾರ ಆತನ ಶತ್ರುಗಳಿಂದಲೇ ಬಂದಾಗ ತನು ಮನ ರೋಮಾಂಚನಗೊಳ್ಳುತ್ತದೆ.

ನಾವು ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು ಖಂಡಿತವಾಗಿಯೂ ಪರಕೀಯರು ನಮ್ಮನ್ನು ಆಕ್ರಮಿಸಿಕೊಂಡ ಕಾರಣಕ್ಕಾಗಿ ಅಲ್ಲ, ನಮ್ಮೊಳಗಿನ ಒಳ ಜಗಳ, ಅಧಿಕಾರ ಲಾಲಸೆ, ಕುಟಿಲ ಕಾರಸ್ಥಾನ ಮತ್ತು ವಿದ್ರೋಹಗಳಿಂದ ಎಂಬ ಅಂತಿಮ ಸತ್ಯವನ್ನು ಮುಖಕ್ಕೆ ರಾಚಿದಂತೆ ಹೇಳುವ ಈ ಚಿತ್ರವನ್ನು ಒಮ್ಮೆ ಥೇಟರಿನಲ್ಲಿ ಖಂಡಿತವಾಗಿಯೂ ನೋಡಿ. ಸಾವಿರದಲ್ಲಿ ಒಂದು ಭಾಗವಾದರೂ ನಿಮ್ಮಲ್ಲಿ ಸ್ವರಾಜ್ಯದ ಪರಿಕಲ್ಪನೆ ಮೂಡಿದರೆ ಚಿತ್ರ ನಿರ್ಮಿಸಿದ್ದಕ್ಕೂ ಸಾರ್ಥಕ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

 

Share This Article
error: Content is protected !!
";