Ad image

ರಸಾಯನಿಕ ಮುಕ್ತ ಕೃಷಿ ಅಳವಡಿಕೆಗೆ ರೈತರಿಗೆ ಅರಿವು- ಶಿವಶೇಖರ ಪಾಟೀಲ್

Vijayanagara Vani
ರಸಾಯನಿಕ ಮುಕ್ತ ಕೃಷಿ ಅಳವಡಿಕೆಗೆ ರೈತರಿಗೆ ಅರಿವು- ಶಿವಶೇಖರ ಪಾಟೀಲ್
ಕೊಪ್ಪಳ ಜುಲೈ 04 ರೈತರು ರಸಾಯನಿಕ ಮುಕ್ತ ಕೃಷಿಯನ್ನು ಅಳವಡಿಸಿಕೊಳ್ಳಲು ಪ್ರೇರೆಪಿಸಲು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯನ್ನು ರೂಪಿಸಿ, ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಹಾಯಕ ಕೃಷಿ ನಿರ್ದೇಶಕ (ವಿಷಯ ತಜ್ಞರು) ಶಿವಶೇಖರ ಪಾಟೀಲ್ ಹೇಳಿದರು.
ಅವರು ಗುರುವಾರ ಗಂಗಾವತಿ ತಾಲೂಕ ವೆಂಕಟಗಿರಿ ಹೋಬಳಿಯಲ್ಲಿ ಆಗೋಲಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ಪಂಚಯತ್, ಜಿಲ್ಲಾ ಕೃಷಿ ಇಲಾಖೆ ಹಾಗೂ ಗಂಗಾವತಿ ಕೃಷಿ ಇಲಾಖೆ ಸಹಯೋಗದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಯಾದ ರಾಸಾಯನಿಕ ಬಳಕೆಯಿಂದ ಕೃಷಿ ಕ್ಷೇತ್ರ ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಅನುಷ್ಟಾನಗೊಳಿಸಲಾಗುತ್ತಿದೆ. ಪ್ರಸ್ತುತ ರಾಸಾಯನಿಕ ಕೃಷಿಯಿಂದಾಗಿ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ವಾತಾವರಣದ ಮತ್ತು ಮನುಷ್ಯ ಹಾಗೂ ಇತರೆ ಜೀವಿಗಳ ಮೇಲು ಗಂಭಿರ ಪರಿಣಾಮ ಬೀರುತ್ತಿದೆ. ಆದ್ದರಿಂದ ರಸಾಯನಿಕ ಮುಕ್ತ ಕೃಷಿಯನ್ನು ಅಳವಡಿಸಲು ರೈತರನ್ನು ಪ್ರೇರೆಪಿಸಲು ಈ ಯೋಜನೆಯನ್ನು ರೂಪಿಸಿಲಾಗಿದ್ದು, ಗಂಗಾವತಿ ತಾಲೂಕ ವೆಂಕಟಗಿರಿ ಹೋಬಳಿಯಲ್ಲಿ ಆಗೋಲಿ, ವೆಂಕಟಗಿರಿ ಹಾಗೂ ಕೇಸರಟ್ಟಿ ಗ್ರಾಮವನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು, ಆಗೋಲಿ ಗ್ರಾಮದಲ್ಲಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನೈಸರ್ಗಿಕ ಕೃಷಿಯು ಜಾನುವಾರು ಮತ್ತು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಬಳಕೆಯ ಆಧಾರದ ಮೇಲೆ ಅವಲಂಬಿತವಾಗಿರುವ ರಾಸಾಯನಿಕ ಮುಕ್ತ ಕೃಷಿ ವ್ಯವಸ್ಥೆಯಾಗಿದ್ದು, ಭಾರತೀಯ ಸಂಪ್ರದಾಯದಲ್ಲಿ ಬೇರೂರಿರುವ ಸಮಗ್ರ ನೈಸರ್ಗಿಕ ಕೃಷಿ ಹಾಗೂ ವೈವಿಧ್ಯ ಬೆಳೆ ಪದ್ಧತಿಯಾಗಿರುತ್ತದೆ. ನೈಸರ್ಗಿಕ ಕೃಷಿಯು ಜಾನುವಾರುಗಳು ಮತ್ತು ಬೀಜಾಮೃತ, ಜೀವಾಮೃತ, ಘನಜೀವಾಮೃತ, ನೀಮಾಸ್ತ್ರ, ದಶಪರ್ಣಿ ಮುಂತಾದ ಕೃಷಿ ಜೈವಿಕ ಪರಿಕರಗಳ ಬಳಕೆ, ಬಹು ಬೆಳೆ ಪದ್ಧತಿಗಳು, ಮುಂಗಾರು ಪೂರ್ವ ಒಣ ಬಿತ್ತನೆ, ಹೊದಿಕೆ (ಮಲ್ಚಿಂಗ್), ಸಾಂಪ್ರದಾಯಿಕ ಬೀಜಗಳ ಬಳಕೆಯೊಂದಿಗೆ ಸ್ಥಳೀಯ, ಸಾಂಪ್ರದಾಯಿಕ ಬೇಸಾಯ ಪದ್ಧತಿಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ನಾರಪ್ಪ ಇವರು ನೈಸರ್ಗಿಕ ಕೃಷಿಯಲ್ಲಿ ಮಾಗಿ ಉಳುಮೆ, ಬೆಳೆ ಪದ್ದತಿ ಹೇಗಿರಬೇಕು, ಅಂತರ ಬೆಳೆ ಪದ್ದತಿ ಹಾಗೂ ಮಿಶ್ರ ಬೆಳೆ ಪದ್ದತಿಯಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮವನ್ನು ಆಯೋಜಿಸಿ ಮಾತನಾಡಿದ ವೆಂಕಟಗಿರಿ ಹೋಬಳಿಯ ಕೃಷಿ ಅಧಿಕಾರಿ ಹರೀಶ್ ಎಸ್.ಜಿ ಅವರು ನೈಸರ್ಗಿಕ ಕೃಷಿಯಲ್ಲಿ ದೇಸಿ ಆಕಳಿನ ಸಗಣಿ ಮತ್ತು ಗೋ ಮೂತ್ರದಿಂದ ಜೀವಾಮೃತ ತಯಾರು ಮಾಡುವ ವಿಧಾನ, ಬಳಕೆ ಮಡುವದರ ಬಗ್ಗೆ ಮತ್ತು ನೈಸರ್ಗಿಕ ಕೃಷಿಯು ಪರಿಸರ ಸ್ನೇಹಿ, ರಸಾಯನಿಕ ಮುಕ್ತ, ಕಡಿಮೆ ವೆಚ್ಚ ಹಾಗೂ ಆರ್ಥಿಕವಾಗಿ ಸುಸ್ಥಿರವಾದ ಕೃಷಿ ಪದ್ಧಿತಿಯಾಗಿದ್ದು ರೈತರು ಇದನ್ನು ಅಳವಡಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಿಬ್ಬಂದಿಗಳಾದ ಗಂಗಾಧರ, ಗಣೇಶ್ ಹಾಗೂ ಗಂಗಾಧರ ಹಳೆಕೋಟೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಪ್ರತಿನಿಧಿ ಲೋಕೆಶ್ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಮಾಜಪ್ಪ, ಸದಸ್ಯ ರಮೇಶ್ ಮತ್ತು ಗ್ರಾಮದ ರೈತರಾದ ರಾಯಪ್ಪ, ರಾಜು, ಹಾಲಪ್ಪ, ಯಮನೂರಪ್ಪ, ಮಂಜುನಾಥ, ಶರಣಪ್ಪ ಸೇರಿದಂತೆ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.

Share This Article
error: Content is protected !!
";