ಬಹುತೇಕ ಎಲ್ಲ ಊರುಗಳ ಮಠಮಾನ್ಯಗಳಲ್ಲಿ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ಶ್ರಾವಣ ಮಾಸದಲ್ಲಿಯೇ ಈ ಕಾರ್ಯಕ್ರಮಗಳು ಏಕೆ ನಡೆಯುತ್ತವೆ ಎಂಬುದಕ್ಕೆ ಹಿನ್ನೆಲೆ ಇದೆ.
ಬೇಸಿಗೆ ಮುಗಿಯುತ್ತ ಬಂದು ಮುಂಗಾರು ಮಳೆ ಪ್ರಾರಂಭವಾದಾಗ ಮೊದಲ ಮಳೆ ಬೀಳುವ ಹೊತ್ತಿಗೆ ತನ್ನ ಹೊಲವನ್ನು ಹದ ಮಾಡಿಕೊಳ್ಳುವ ರೈತ ಒಂದು ಹದವಾದ ಮಳೆ ಬಿದ್ದೊಡನೆ ತನ್ನ ಹೊಲದಲ್ಲಿ ಬೀಜವನ್ನು ಬಿತ್ತುತ್ತಾನೆ. ಮತ್ತೊಂದೆರಡು ಸಣ್ಣ ಪುಟ್ಟ ಮಳೆಗಳಿಂದ ಆ ಬೀಜಗಳು ಮೊಳಕೆ ಒಡೆದು ಸಣ್ಣ ಕುಡಿಯಾಗಿ ನಂತರ ಸಸಿಯಾಗಿ ಮಾರ್ಪಡುವ ಈ ಸಮಯದಲ್ಲಿ ಆತನಿಗೆ ತನ್ನ ರೈತಾಪಿ ಕೆಲಸಗಳಿಂದ ತುಸು ಮಟ್ಟಿನ ಬಿಡುಗಡೆ. ಪ್ರತಿದಿನ ಮುಂಜಾನೆ ನಿಯಮಿತವಾಗಿ ಹೊಲಕ್ಕೆ ಹೋಗಿ ನಿಧಾನವಾಗಿ ಕುಡಿಯೊಡೆದ ಸಸಿಗಳ ಬೆಳವಣಿಗೆಯನ್ನು ನೋಡಿ ಹರ್ಷಿಸಿ ಮನೆಯಲ್ಲಿರುವ ಜಾನುವಾರುಗಳ ದೈನಂದಿನ ಜವಾಬ್ದಾರಿಯನ್ನು ನಿರ್ವಹಿಸಿದರೆ ಆತನ ಬಹುತೇಕ ಕೆಲಸ ಮುಗಿಯುತ್ತದೆ.
ಈ ರೀತಿಯ ತುಸು ವಿರಾಮ ಸಮಯದಲ್ಲಿ ಆತ ಕುಟುಂಬದೊಡನೆ ಒಂದೆರಡು ದಿನಗಳ ಮಟ್ಟಿಗೆ ಮನೆದೇವರ,ಧರ್ಮ ಕ್ಷೇತ್ರಗಳ ದರ್ಶನ ಮಾಡಲು ಹೋಗುವುದೂ ಉಂಟು. ಶ್ರಾವಣ ಮಾಸದ ಈ ಪವಿತ್ರ ಸಮಯದಲ್ಲಿ ದೈವ ದರ್ಶನ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ದಣಿದ ತನು ಮನಗಳಿಗೆ ತುಸುಮಟ್ಟಿನ ವಿಶ್ರಾಂತಿ ದೊರೆಯುವುದರ ಜೊತೆಗೆ ಒಕ್ಕಲುತನದ ಬದುಕಿನ ಏಕತಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಮಾಸದಲ್ಲಿ ಆತ ದೇಗುಲ ದರ್ಶನ, ಪುರಾಣ, ಪ್ರವಚನ, ಭಜನೆ, ಪೂಜೆ, ಪುನಸ್ಕಾರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ.
ಇನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುವುದಾದರೆ ನಮ್ಮ ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸ ಅತ್ಯಂತ ಪವಿತ್ರವಾದ ಮಾಸವಾಗಿದ್ದು ಈ ಸಮಯದಲ್ಲಿ ಶಿವನ ಆರಾಧಕರು ಮಹಾದೇವನ ಪೂಜೆ ಆರಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಪ್ರತಿ ಸೋಮವಾರ ಉಪವಾಸ ಮಾಡುವ ಮೂಲಕ ಕಾಲ್ನಡಿಗೆಯಲ್ಲಿ ಹತ್ತಿರದ ಕ್ಷೇತ್ರ ದರ್ಶನಗಳನ್ನು ಮಾಡುವ ಭಕ್ತರು ತಮ್ಮ ಇಷ್ಟದೈವದ ಆರಾಧನೆಯಲ್ಲಿ ಸಂತೃಪ್ತಿ ಹೊಂದುತ್ತಾರೆ.
ಪ್ರತಿ ಸೋಮವಾರ ಪರಶಿವನ ಪೂಜೆ ಮಾಡುವ ಮಹಿಳೆಯರು ಪತಿಯ ಆಯುರಾರೋಗ್ಯ, ಸಮೃದ್ಧಿ, ಕುಟುಂಬದ ಯೋಗಕ್ಷೇಮವನ್ನು ಮತ್ತು ಮುತ್ತೈದೆ ಭಾಗ್ಯವನ್ನು ಸದಾ ಕರುಣಿಸು ಎಂದು ಗೌರಿ ದೇವಿಯನ್ನು ಪ್ರತಿ ಮಂಗಳವಾರ ಪೂಜಿಸುತ್ತಾರೆ. ತಂತಮ್ಮ ಇಚ್ಛಾನುಸಾರ ದೇವಿಯನ್ನು ಅಲಂಕರಿಸಿ, ವಿವಿಧ ಬಗೆಯ ಹಣ್ಣು, ಹೂಗಳನ್ನು ಇರಿಸಿ ಪೂಜೆ ಮಾಡುತ್ತಾರೆ. ಅಕ್ಕಪಕ್ಕದ ಮನೆಯ ಮುತ್ತೈದೆಯರನ್ನು ಕರೆದು ಉಡಿ ತುಂಬಿ ದೇವಿಯ ಕಥೆಯನ್ನು ಓದಿ ಕೇಳಿ ಭಕ್ತಿ ಭಾವದಿಂದ ತೇಲುತ್ತಾರೆ.
ಇನ್ನೂ ಪ್ರತಿದಿನ ಸಣ್ಣ ಪುಟ್ಟ ಗುಡಿ ಗುಂಡಾರಗಳಿಂದ ಹಿಡಿದು ದೊಡ್ಡ ದೊಡ್ಡ ಮಠಗಳಲ್ಲಿ ದೇವರ ಆರಾಧನೆ ಗೀತೆಗಳೊಂದಿಗೆ ಬೆಳಗಿನ ಸುಪ್ರಭಾತ ಸೇವೆ ಆರಂಭವಾಗುತ್ತದೆ. ದೇಗುಲಗಳಲ್ಲಿ ದೇವರಿಗೆ ರುದ್ರಾಭಿಷೇಕ ಪೂಜೆ,ಹೂವಿನ ಅಲಂಕಾರ ಮಾವಿನ ಎಲೆಯ ತೋರಣಗಳಿಂದ ಸಿಂಗಾರ ಮಾಡಿ, ಮಂಗಳಾರತಿ ಮಾಡಿ ಪೂಜಿಸುತ್ತಾರೆ.
ನಸುಕಿನ ಜಾವದಲ್ಲಿಯೇ ಎದ್ದು ಮನೆ ಕೆಲಸಗಳನ್ನು ಪೂರೈಸಿ ಮಿಂದು ಮಡಿಯುಟ್ಟು ಪೂಜಾ ಪರಿಕರಗಳನ್ನು ಹಿಡಿದು ಕುಟುಂಬದ ಬಹುತೇಕ ಎಲ್ಲಾ ಸದಸ್ಯರು ದೇಗುಲಕ್ಕೆ ತೆರಳಿ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ಧನ್ಯತೆಯ ಭಾವವನ್ನು ಅನುಭವಿಸುತ್ತಾರೆ.
ಸಾಯಂಕಾಲದ ವಿರಾಮ ಸಮಯದಲ್ಲಿ ಈ ಹಿಂದೆ ಆಗಿಹೋದ ಶರಣರ,ದಾರ್ಶನಿಕರ, ಮಹಾಮಹಿಮರ ಜೀವನ ಚರಿತ್ರೆಗಳನ್ನು ಪುರಾಣ ಪ್ರವಚನಗಳ ಮೂಲಕ ಕೇಳಿ ಆನಂದಿಸುತ್ತಾರೆ. ಇದು ಶತ ಶತಮಾನಗಳಿಂದಲೂ ನಡೆದು ಬಂದಿರುವ ಶ್ರಾವಣ ಮಾಸದ ಪ್ರತೀತಿಯಾಗಿದ್ದು ಶ್ರಾವಣ ಮಾಸ ಎಂದರೆ ಶ್ರವಣಮಾಸ ಎಂದು ಕೂಡ ಅರ್ಥ.
ಶ್ರವಣ ಎಂದರೆ ಕೇಳುವುದು… ಈ ಸಮಯದಲ್ಲಿ ಒಳ್ಳೆಯ ವಿಚಾರಗಳನ್ನು, ಚಿಂತನೆಗಳನ್ನು ಕೇಳುವ, ಅವುಗಳನ್ನು ಮನನ ಮಾಡಿಕೊಳ್ಳುವ ಮತ್ತು ತಮ್ಮ ಬದುಕಿನಲ್ಲಿ ಸಾತ್ವಿಕ ಆಚರಣೆಗಳನ್ನು ಕೈಗೊಳ್ಳುವ ಕಾಲ.
ವಿರಾಮ ಸಮಯದಲ್ಲಿ ಕುಳಿತು ಕೇಳಿದ ವಿಷಯಗಳು ಮನಸ್ಸಿಗೆ ಹೆಚ್ಚು ತಾಕುತ್ತವೆ. ಶ್ರಾವಣ ಮಾಸದ ಸಾತ್ವಿಕ ಶಕ್ತಿ ಮತ್ತು ಭಕ್ತಿಯಿಂದ ತುಂಬಿದ ಪರಿಪೂರ್ಣ ಭಾವ ತನು ಮನಗಳನ್ನು ಉತ್ತಮ ವಿಚಾರಗಳತ್ತ ಆಕರ್ಷಿಸುತ್ತದೆ. ಇಂದು ಬಹುತೇಕ ಎಲ್ಲ ಜನರೂ ಸಾಕ್ಷರರಾಗಿರಬಹುದು, ಆದರೆ ಪ್ರವಚನಗಳನ್ನು ಹೇಳುವವರು ಕೇವಲ ದಾರ್ಶನಿಕರ ಪುರುಷರ ಕಥೆಗಳನ್ನು ಮಾತ್ರ ಹೇಳುವುದಿಲ್ಲ ಅದರೊಂದಿಗೆ ಮೌಲ್ಯವರ್ಧಕ ಕಥೆಗಳು, ಉಪಕಥೆಗಳನ್ನು ಹೇಳುತ್ತಾ ಮನುಷ್ಯನಲ್ಲಿ ಮೌಲ್ಯಗಳನ್ನು ಬಿತ್ತುವ ಪ್ರಯತ್ನವನ್ನು ಮಾಡುತ್ತಾರೆ. ಸಾಮೂಹಿಕವಾಗಿ ಈ ರೀತಿ ಪುರಾಣ, ಪುಣ್ಯಕಥೆಗಳನ್ನು ಕೇಳುವ ಜನರ ಮನಸ್ಸಿನಲ್ಲಿ ತಪ್ಪು ಸರಿಗಳ ಕುರಿತು ಆಳವಾದ ಪರಿಕಲ್ಪನೆ ಮೂಡುತ್ತದೆ.
ವಿವಿಧ ಧರ್ಮ ಗುರುಗಳ ಮೂಲಕ ವೈವಿಧ್ಯಮಯ ವಿಷಯಗಳ ಕುರಿತು ಅರಿತುಕೊಳ್ಳುವ ಜನರು ಮಠಗಳಲ್ಲಿ ಏರ್ಪಡಿಸುವ ಸಾಮೂಹಿಕ ಭಜನೆ, ಶ್ರವಣ, ಪ್ರಾರ್ಥನೆ ಮತ್ತು ಅಂತಿಮವಾಗಿ ಭೋಜನಗಳಲ್ಲಿ ಪಾಲ್ಗೊಂಡು ಸರ್ವಧರ್ಮ ಸಾಮರಸ್ಯವನ್ನು ಮೆರೆಯುತ್ತಾರೆ.
ಇನ್ನು ಈ ಪುರಾಣಗಳಲ್ಲಿ ಬರುವ ಮಹಿಮಾ ಪುರುಷರ ಹುಟ್ಟು, ನಾಮಕರಣ ಬೆಳವಣಿಗೆ,ಕನ್ಯೆ ನೋಡುವ, ವಧು-ವರರ ನಿಶ್ಚಿತಾರ್ಥ ಮದುವೆ ನಂತರದ ಸಾಂಸಾರಿಕ ಜೀವನ ಹೀಗೆ ಹೇಳುತ್ತಾ ಹೋಗುವಾಗ ಆಯಾ ಸಂದರ್ಭಕ್ಕೆ ತಕ್ಕಂತೆ ನಾಮಕರಣದ ಶಾಸ್ತ್ರದಲ್ಲಿ ತೊಟ್ಟಿಲು ಪೂಜೆ ಮಾಡಿ ಪುರಾಣದಲ್ಲಿ ಹೇಳಲ್ಪಡುವ ಮಹಿಮಾನ್ವಿತರ ಬದುಕಿನ ಮಹತ್ತರ ಘಟನೆಗಳನ್ನು ಸಾದ್ಯಂತವಾಗಿ ದೃಶ್ಯ ರೂಪದಲ್ಲಿ ಅನುಭವಿಸುತ್ತಾರೆ.
ಉದಾಹರಣೆಗೆ ಬಸವಣ್ಣನವರ ಕುರಿತು ಪುರಾಣ ಹೇಳುತ್ತಿದ್ದರೆ ಮಕ್ಕಳಿಗಾಗಿ ಪರಿತಪಿಸುತ್ತಿದ್ದ ಆತನ ತಂದೆ ತಾಯಿ ದೇವರ ಕಾರುಣ್ಯದ ವರಪ್ರಸಾದವಾಗಿ ಆತನ ತಾಯಿ ಗರ್ಭಿಣಿಯಾಗುವ ಸಮಯದಲ್ಲಿ ಆಕೆಗೆ ಉಂಟಾದ ದೈವಿಕ ಅನುಭವಗಳನ್ನು ಮನಮುಟ್ಟುವ ಹಾಗೆ ವಿವರಿಸುತ್ತಾರೆ. ಆಕೆಯ ಬಸಿರಿನ ಬಯಕೆಗಳನ್ನು ತೀರಿಸುವ ಸಲುವಾಗಿ ಊರಿನ ಜನರೆಲ್ಲರೂ ತಮ್ಮ ಶಕ್ತ್ಯಾ ನುಸಾರ ವಿಧ ವಿಧದ ಅಡುಗೆಗಳನ್ನು ಸಿಹಿ ತಿಂಡಿಗಳನ್ನು ತಯಾರಿಸಿ ಬಯಕೆಯ ಬುತ್ತಿಯನ್ನು ಮೆರವಣಿಗೆಯಲ್ಲಿ ತಂದು ಅರ್ಪಿಸುತ್ತಾರೆ. ಹೀಗೆ ಜನರೆಲ್ಲರೂ ತಂದ ಬುತ್ತಿಯನ್ನು ಪೂಜಿಸಿ ಅಂದಿನ ದಾಸೋಹ ಸೇವೆಯಲ್ಲಿ ಎಲ್ಲರಿಗೂ ಉಣ ಬಡಿಸುತ್ತಾರೆ.
ನಂತರ ಸೀಮಂತ ಕಾರ್ಯ ಮಾಡುವಾಗ ಊರಿನ ಹೆಣ್ಣು ಮಕ್ಕಳಿಗೆಲ್ಲಾ ಉಡಿ ತುಂಬಿ ಸೋಬಾನೆ ಪದಗಳನ್ನು, ಬಸರಿನ ಬಯಕೆಯ ಪದಗಳನ್ನು ಹಾಡಿ ಹರಸುತ್ತಾರೆ. ಶಾಲೆಯ ಗಂಡು ಮಗನಾಗಿ ಪಾರ್ವತಿ ದೇವಿಯೇ ಹೆಣ್ಣು ಮಗಳಾಗಿ ಅವತರಿಸಲಿ ಎಂದು ಆಶಿಸಿ ಹಾಡುವ ಈ ಪದಗಳು ನಮ್ಮ ಗ್ರಾಮೀಣ ಜನರ ಪದ ಕಟ್ಟುವ ಕಲೆಯನ್ನು, ಅವುಗಳನ್ನು ತಲೆತಲಾಂತರದಿಂದ ಉಳಿಸಿಕೊಂಡು ಬರಲು ಇಂತಹ ಪೂಜೆ ಪುನಸ್ಕಾರಗಳು ಪುರಾಣ, ಪುಣ್ಯ ಕಥೆಗಳನ್ನು ಶ್ರವಣ ಮಾಡುವುದು ಕೂಡ ಒಂದು ರೀತಿಯಲ್ಲಿ ಕಾರಣವಾಗುತ್ತದೆ.
ಪುರಾಣ ಪುಣ್ಯ ಕಥೆಗಳು, ಪ್ರವಚನಗಳು ಕೇವಲ ವಯಸ್ಸಾದವರಿಗೆ ಮಾತ್ರವಲ್ಲ…. ಎಲ್ಲಾ ವಯೋಮಾನದವರು ಕುಳಿತು ಕೇಳುವ ಮೂಲಕ ಕಥೆಗಳಲ್ಲಿ ಅಡಗಿರುವ ಮೌಲ್ಯಗಳ ಅರಿವನ್ನು ಹೊಂದಬಹುದು. ಮಹಾನ್ ವ್ಯಕ್ತಿಗಳ ಜೀವನ ಸಾರವನ್ನು ತಿಳಿದುಕೊಳ್ಳಬಹುದು. ಘನ ಮಹಿಮರ ಭಕ್ತಿಯ ಶಕ್ತಿ, ಶ್ರದ್ಧೆ ಮತ್ತು ಬದ್ಧತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪುರಾಣ ಮತ್ತು ಪ್ರವಚನಗಳು ಬೇಕೇ ಬೇಕು.
ಕಾಲ ಯಾವುದಾದರೇನು? ಮಠಗಳು ಮಂದಿರಗಳು ಇರುವವರೆಗೂ ನಮ್ಮಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಪುರಾಣ ಪ್ರವಚನಗಳು ಖಂಡಿತವಾಗಿಯೂ ನಡೆಯುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುಸ್ತಕದಲ್ಲಿ ಇಲ್ಲದ ಹತ್ತು ಹಲವು ವಿಷಯಗಳನ್ನು ಪ್ರಾಪಂಚಿಕ ಜ್ಞಾನವನ್ನು ಪ್ರವಚನಕಾರರಿಂದ ಕೇಳಿ ಮಸ್ತಕಕ್ಕೆ ತುಂಬಿಕೊಳ್ಳುವ ಮತ್ತು ಉತ್ತಮ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಶ್ರಾವಣ ಮಾಸದಲ್ಲಿ ಜರುಗುವ ಪುರಾಣ ಶ್ರವಣ ಮಾಡೋಣ. ಧಾರ್ಮಿಕ ಚಿಂತನೆಯ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ನಾಂದಿ ಹಾಡೋಣ ಎಂಬ ಆಶಯದೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್