ಜನ ಮೆಚ್ಚುವ ಕೆಲಸಕ್ಕಿಂತ ದೈವ ಮೆಚ್ಚುವಂಥ ಕೆಲಸ ದೊಡ್ಡದು : ಶ್ರೀ ರಂಭಾಪುರಿ ಜಗದ್ಗುರುಗಳು

Vijayanagara Vani
ಜನ ಮೆಚ್ಚುವ ಕೆಲಸಕ್ಕಿಂತ ದೈವ ಮೆಚ್ಚುವಂಥ ಕೆಲಸ ದೊಡ್ಡದು : ಶ್ರೀ ರಂಭಾಪುರಿ ಜಗದ್ಗುರುಗಳು
????????????

ಸ್ವಾರ್ಥ  ರಹಿತವಾದ  ಬದುಕಿಗೆ ಬೆಲೆ ನೆಲೆಯಿದೆ. ಅದರಲ್ಲಿ ಅಂಥ ಅದ್ಭುತ ಶಕ್ತಿಯಿದೆ. ಜೀವನದಲ್ಲಿ ಉತ್ಸಾಹ ಇದ್ದರೆ ಸಾಧನೆ  ಸಿದ್ಧಿಯಾಗುತ್ತದೆ. ಜನ ಮೆಚ್ಚುವಂತಹ ಕೆಲಸ ದೊಡ್ಡದಾದರೆ ದೈವ ಮೆಚ್ಚುವಂತಹ ಕೆಲಸ ಅದಕ್ಕಿಂತಲೂ ದೊಡ್ಡದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

 ಅವರು ಗುರುವಾರ ಮಾಚಗೊಂಡನಹಳ್ಳಿ ಶ್ರೀ ಬೇರುಗಂಡಿ ಬೃಹನ್ಮಠದ ಶ್ರೀ ಸಿದ್ಧೇಶ್ವರಸ್ವಾಮಿ ದೇವಾಲಯದ ಕಳಸಾರೋಹಣ ಹಾಗೂ ರೇಣುಕ ಮಹಂತ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ

ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

????????????

 ಮನುಷ್ಯ ಜೀವನದಲ್ಲಿ ನಿರ್ದಿಷ್ಟ ಗುರಿಯಿರಬೇಕು. ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ ಬೇಕು. ಮನುಷ್ಯನಲ್ಲಿ ದೃಢ ಸಂಕಲ್ಪ ಗಟ್ಟಿಯಾಗಿದ್ದರೆ ಸತ್ಫಲ ಕಟ್ಟಿಟ್ಟ ಬುತ್ತಿ. ಕರ್ತವ್ಯದ ಕಾಲು ದಾರಿ ಕೀರ್ತಿಯ ಹೆದ್ದಾರಿ. ಸೌಂದರ್ಯ ಜನರ ಗಮನ ಸೆಳೆಯಬಹುದು. ಆದರೆ ವ್ಯಕ್ತಿತ್ವ ಮನಸ್ಸನ್ನು ಆವರಿಸುತ್ತದೆ. ಭಾರವಿಲ್ಲದ ನೋಟಿಗೆ ಇರುವ ಬೆಲೆ ಭಾವನೆಗಳಿರುವ ಮನುಷ್ಯನಿಗೆ ಇಲ್ಲ. ಬದುಕಿಗೆ ಬಲ ಬರಬೇಕಾಗಿದ್ದರೆ ಸತ್ಕಾರ್ಯ ಸೇವಾ ಮನೋಭಾವ ಮತ್ತು ಉತ್ತಮ ಸಂಸ್ಕಾರ ಪಡೆದರೆ ಬಾಳಿನಲ್ಲಿ ಶ್ರೇಯಸ್ಸನ್ನು ಕಾಣಬಹುದು. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಆಧ್ಯಾತ್ಮಿಕ ಜ್ಞಾನ ಸಂಪತ್ತನ್ನು ಬೋಧಿಸಿದ್ದಾರೆ. ಕಾಯಕದಿಂದಲೇ ಕಳಾ ಚೈತನ್ಯ ದೊರಕುತ್ತದೆ. ಬೇರುಗಂಡಿ ಬೃಹನ್ಮಠ ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ಲಿಂ.ಚAದ್ರಶೇಖರ ಶಿವಾಚಾರ್ಯರ ಪರಿಶ್ರಮದಿಂದ ಜನರ ಕಣ್ಣಿಗೆ ಕಂಡಿತು. ಇಂದಿನ ರೇಣುಕ ಮಹಂತ ಶ್ರೀಗಳು 12 ವರುಷದ ಸಂದರ್ಭದಲ್ಲಿ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಶ್ರೀ ಮಠದ ಪರಿಸರದಲ್ಲಿ ಅಭಿವೃದ್ಧಿ ಕಾರ್ಯಗಳು ಶ್ರೀಗಳವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ. ದ್ವಾದಶ ಪಟ್ಟಾಧಿಕಾರ ವರ್ಧಂತಿ ಆಚರಿಸಿಕೊಳ್ಳುತ್ತಿರುವ ಶ್ರೀಗಳು ಮುಂದಿನ ದಿನಗಳಲ್ಲಿ ರಜತ ಮಹೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಪ್ರಾಪ್ತವಾಗಲೆಂದು ಬಯಸಿ ಶ್ರೀಗಳವರಿಗೆ ರೇಶ್ಮೆ ಮಡಿ, ಮುಕುಟ, ಚಿನ್ನದುಂಗುರ ಸ್ಮರಣಿಕೆಯಿತ್ತು ಶುಭ ಹಾರೈಸಿದರು.

 ಸಮಾರಂಭ ಉದ್ಘಾಟಿಸಿದ ಶಾಸಕ ಟಿ.ಡಿ.ರಾಜೇಗೌಡರು ಮಾತನಾಡಿ ಬೆಂದು ಬಸವಳಿದ ಮನಸ್ಸಿಗೆ ನೆಮ್ಮದಿ ಸಿಗಲು ಮನುಷ್ಯ ಧಾರ್ಮಿಕ ಕ್ಷೇತ್ರಗಳಿಗೆ ಹೋಗಬೇಕಾಗುತ್ತದೆ. ಶಾಂತಿ ನೆಮ್ಮದಿಗಿಂತ ಮಿಗಿಲಾದ ಯಾವುದೇ ಸಂಪತ್ತಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಸಕಲರ ಬಾಳ ಬದುಕಿನಲ್ಲಿ ಆಶಾ ಕಿರಣವಾಗಿವೆ. ಧರ್ಮ ಪಾಲನೆಯಿಂದ ಜೀವನ ಉಜ್ವಲಗೊಳ್ಳುವುದೆಂದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು ಬದುಕಲು ಹಣ ಬೇಕು. ಹೊಂದಿಕೊಂಡು ಬಾಳಲು ಗುಣ ಬೇಕು. ಕಟ್ಟವರು ತುಂಬಾ ಬೆಳೆಯಬಹುದು. ಆದರೆ ಉಳಿಯಲು ಸಾಧ್ಯವಿಲ್ಲ. ಒಳ್ಳೆಯವರನ್ನು ತುಂಬಾ ತುಳಿಯಬಹುದು ಆದರೆ ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಶ್ರೀ ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನ ಲಿಂ.ಚಂದ್ರಶೇಖರ ಶ್ರೀಗಳ ಆಶೀರ್ವಾಧ ಮತ್ತು ಭಕ್ತರ ಸಹಕಾರದಿಂದ ಇಷ್ಟೆಲ್ಲ ಕಾರ್ಯ ಮಾಡಲು ಸಾಧ್ಯವಾಗಿದೆ. 12ವರುಷಗಳ ಅವಧಿಯಲ್ಲಿ ನಡೆದಿರುವ ಕಾರ್ಯಗಳು ಸಂತೃಪ್ತಿ ತಂದಿವೆ ಎಂದರು. ನೊಣವಿನಕೆರೆ ಡಾ|| ಕರಿವೃಷಭ ಶಿವಯೋಗೀಶ್ವರ ಸ್ವಾಮಿಗಳು ನೇತೃತ್ವ ವಹಿಸಿ ಲಿಂ.ಶ್ರೀಮದ್ರAಭಾಪುರಿ ವೀರಗಂಗಾಧರ ಜಗದ್ಗುರುಗಳವರ ವಿಶ್ವ ಬಂಧುತ್ವದ ಚಿಂತನೆಗಳನ್ನು ಹಂಚಿಕೊಂಡರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಚಿಕ್ಕಮಗಳೂರು ಶಂಕರದೇವರಮಠದ, ಹುಣಸಘಟ್ಟ ಹಾಲುಸ್ವಾಮಿಮಠದ, ಬೀರೂರು ಬಾಳೆಹೊನ್ನೂರು ಖಾಸಾ ಮಠದ, ತೆಂಡೇಕೆರೆ ಮಠದ, ಹೆಗ್ಗಡಹಳ್ಳಿ ಹಿರೇಮಠದ, ಸಂಗೊಳ್ಳಿ ಹಿರೇಮಠದ, ನೆಗಳೂರು ಹಿರೇಮಠದ, ಹಣ್ಣೆ ಮಠದ ಶ್ರೀಗಳು ಉಪಸ್ಥಿತರಿದ್ದರು.   ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಮ್.ಪಿ.ಕುಮಾರಸ್ವಾಮಿ, ಚಿಕ್ಕಮಗಳೂರಿನ ಹೆಚ್.ಎಮ್. ಲೋಕೇಶ್, ಕೆಳಗೂರಿನ ಕೆ.ವಿ.ವೀರರಾಜಗೌಡರು, ಆಲ್ದೂರಿನ ಮಹೇಶ್ ಕೆ.ಎಸ್., ಚಿಕ್ಕಮಗಳೂರಿನ ಜಿ.ಎಮ್.ರಾಜಶೇಖರ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಶ್ರೀಮತಿ ಅರ್ಪಿತಾ ಮತ್ತು ಎನ್.ಎನ್.ಯುವರಾಜ ದಂಪತಿಗಳಿಗೆ ವಿಶೇಷ ಗುರುರಕ್ಷೆಯಿತ್ತು ಆಶೀರ್ವದಿಸಿದರು. ದೇವಿ ಗುರುಕುಲದವರಿಂದ ಪ್ರಾರ್ಥನೆ, ಬಿ.ಎ.ಶಿವಶಂಕರ್ ಇವರಿಂದ ಸ್ವಾಗತ, ಕುಮಾರಿ ವೇದಶ್ರೀ ಇವರಿಂದ ಭರತ ನಾಟ್ಯ ಜರುಗಿತು. ಗೋಣಿಬೀಡು ಮೋಹನ್ ರಾಜಣ್ಣ ಮತ್ತು ರಂಭಾಪುರಿ ಪೀಠದ ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.                   

ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,

                                ಬಾಳೆಹೊನ್ನೂರು

WhatsApp Group Join Now
Telegram Group Join Now
Share This Article
error: Content is protected !!