Ad imageAd image

ಮೌನದ ಕಣ್ಣೀರು,ಮತ್ತು ಗಟ್ಟಿತನ

Vijayanagara Vani
ಮೌನದ ಕಣ್ಣೀರು,ಮತ್ತು ಗಟ್ಟಿತನ
ಅದೊಂದು ಕೂಡು ಕುಟುಂಬ. ಅಜ್ಜ ಅಜ್ಜಿ ನಾಲ್ಕೈದು ಜನ ಮಕ್ಕಳು ಸೊಸೆಯಂದಿರು ಅಳಿಯಂದಿರು ಮೊಮ್ಮಕ್ಕಳು ತುಂಬಿದ ಆ ಮನೆಯಲ್ಲಿ ಇಂದಿಗೂ ಕುಟುಂಬದ ಹಿರಿತನ ಅಜ್ಜನ ಕೈಯಲ್ಲಿಯೇ ಇತ್ತು. ಆತನ ಮಾತಿನಂತೆಯೇ ಇಡೀ ಕುಟುಂಬ ನಡೆಯುತ್ತಿತ್ತು. ಆತನ ಒಂದು ಸಿಟ್ಟಿನ, ಅಸಹನೆಯ ಮಾತಿಗೆ ಕುಟುಂಬದ ಎಲ್ಲರಲ್ಲೂ ತಪ್ಪಿತಸ್ಥ ಭಾವ ಮೂಡುತ್ತಿತ್ತು.
ಅಂತಹ ಕುಟುಂಬದ ಯಜಮಾನ ಒಂದು ದಿನ ಸಿಟ್ಟಿನಿಂದ ತನ್ನ ಹಿರಿಯ ಮಗನ ಕೆನ್ನೆಗೆ ಬಾರಿಸಿದ.
ಆಗಾಗ ಇಂತಹ ಘಟನೆಗಳು ನಡೆಯುತ್ತಿದ್ದುದರಿಂದ ಎಲ್ಲರೂ ಮೌನವಾಗಿ ಊಟ ಮಾಡಿ ತಮ್ಮ ತಮ್ಮ ಕೋಣೆ ಸೇರಿದರು.
ಕೆನ್ನೆಗೆ ಬಾರಿಸಿಕೊಂಡು ಕೋಣೆಯನ್ನು ಸೇರಿದ ಹಿರಿಯ ಮಗ ಮಂಚದ ಒಂದು ತುದಿಗೆ ಕುಳಿತು ಕಣ್ಣೀರು ಹಾಕುತ್ತಿರುವುದನ್ನು ಕಂಡ ಆತನ ಪತ್ನಿ ಮಾವನವರು ಹೀಗೆ ಸಿಟ್ಟು ಮಾಡಿಕೊಳ್ಳುವುದು ನಿಮಗೇನು ಹೊಸದೇ! ಅದಕ್ಕೇಕೆ ಹೀಗೆ ಕಣ್ಣೀರು ಹಾಕುತ್ತಿರುವಿರಿ? ಎಂದು ಪ್ರಶ್ನಿಸಿದಳು.
ಹೊಡೆಸಿಕೊಂಡದ್ದಕ್ಕೆ ನಾನು ಕಣ್ಣೀರು ಹಾಕುತ್ತಿಲ್ಲ. ಆತನ ಕೈಯಲ್ಲಿನ ಕಸುವು ಕಡಿಮೆಯಾಗಿದೆ ನನ್ನಪ್ಪನಿಗೆ ವಯಸ್ಸಾಯ್ತು ಅಂತ ಅನ್ಸುತ್ತೆ ಎಂದು ದುಃಖದಿಂದ ಹೇಳಿದ.
ಕುಟುಂಬದ ಹಿರಿಯ ಮಗನಾದ ಆತ ತಂದೆಯ ಮಾತಿಗೆ ಎದುರು ಹೇಳಲಿಲ್ಲ… ಬೆಳೆದ ಮಕ್ಕಳ ಮುಂದೆ ಮಾವ ಮಾಡಿದ್ದು ತಪ್ಪೆಂದು ಸೊಸೆ ಹೀಗಳೆಯಲಿಲ್ಲ… ಬದಲಾಗಿ ತಮ್ಮ ಕುಟುಂಬದ ಹಿರಿಯ ಮನುಷ್ಯ ಅಶಕ್ತನಾಗಿದ್ದಾನೆ ಎಂದು ಚಿಂತಿಸುತ್ತಿದ್ದ ಆ ಹಿರಿಯ ಮಗ ಮತ್ತು ಸೊಸೆ ನಮ್ಮ ಭಾರತೀಯ ಅವಿಭಕ್ತ ಕುಟುಂಬದ ಗಟ್ಟಿತನಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.
ಹಾಗಾದರೆ ಅಂತಹ ಗಟ್ಟಿಗರು ತಮ್ಮ ದುಃಖವನ್ನು ಹೊರ ಹಾಕುವುದಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಮೂಡಿ ಬಂದರೆ ತಪ್ಪಿಲ್ಲ.
ಉತ್ತರ ಕೂಡ ಅಷ್ಟೇ ಸರಳವಾದದ್ದು..
ಖಂಡಿತವಾಗಿಯೂ ಅವರು ತಮ್ಮ ದುಃಖವನ್ನು ಸಾರ್ವಜನಿಕವಾಗಿ ಹೊರಹಾಕುವುದಿಲ್ಲ… ತಮ್ಮ ವಾಸದ ಕೋಣೆಯ ಬಾಗಿಲನ್ನು ಮುಚ್ಚಿ ತಮ್ಮ ಮನದ ಕೋಣೆಯ ಬಾಗಿಲನ್ನು ತೆರೆಯುವ ಅವರ ನೋವು, ನಿಟ್ಟುಸಿರುಗಳಿಗೆ ಅವರ ಹಾಸಿಗೆ ದಿಂಬುಗಳು ಮತ್ತು ಕೋಣೆಯ ನಾಲ್ಕು ಗೋಡೆಗಳು ಮಾತ್ರ ಕಿವಿಯಾಗುತ್ತವೆ.
ಗಟ್ಟಿಗರು ತಮ್ಮ ಶಕ್ತಿಯನ್ನು ಗುರಾಣಿಯಂತೆ ಬಳಸುತ್ತಾರೆ. ಅವರ ಮನದ ತಾಕಲಾಟಗಳು ಜಗತ್ತಿನ ಕಣ್ಣಿಗೆ ಕಾಣದಂತೆ ಮರೆಮಾಚುತ್ತಾರೆ
ಬೇರೆಯವರ ಹೊರೆಗಳನ್ನು ಹೊರುವ ಅವರು, ತಮ್ಮ ಹೃದಯವನ್ನು ಮತ್ತೊಬ್ಬರಿಗಾಗಿ ಮೆದುವಾಗಿಸುತ್ತಾರೆ. ತಮ್ಮದೇ ಧ್ವನಿ ಆತಂಕ, ಭಯಗಳಿಂದ ನಡುಗುತ್ತಿದ್ದರೂ ಬೇರೆಯವರ ಕಿವಿಯಲ್ಲಿ ಭರವಸೆಯ ಮಾತುಗಳನ್ನು ಪಿಸುಗುಡುತ್ತಾರೆ.
ಆದರೆ ರಾತ್ರಿಯ ನೀರವ ಅಂಧಕಾರದಲ್ಲಿ ಅವರ ಗಟ್ಟಿತನ ಮೌನದ ಮುಸುಕು ಹೊದ್ದು ನರಳುತ್ತದೆ. ಚಂದಿರನ ನಸು ಬೆಳಕಿನಲ್ಲಿ ನಿಟ್ಟುಸಿರ ಧಾರೆ ನಿರಂತರ ಹೊರಬೀಳುತ್ತದೆ.
ತಮ್ಮ ಕೈಲಾಗದತನದಿಂದ ಅವರು ಅಳುವುದಿಲ್ಲ… ಬದಲಾಗಿ ಅವರ ಹೃದಯ ತನ್ನ ನೋವನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಮೌನದ ಚಿಪ್ಪಿನೊಳಗೆ ತಾವು ಹೋರಾಡಿದ ಯುದ್ಧಗಳನ್ನು
ನೆನೆದು ಅವರ ಹೃದಯ ಕಳವಳಿಸುತ್ತದೆ. ತಾವು ಸಹಿಸಿದ ನೋವು ಸಂಕಷ್ಟಗಳನ್ನು ನೆನೆದು ಮನ ಕಣ್ಣೀರಿಡುತ್ತದೆ.
ಬೇರೆಯವರ ಕಷ್ಟಕ್ಕೆ ಹೆಗಲಾಗುವ, ನೋವಿನ ದನಿಯ ಆಲಿಸುವ, ಇತರರ ಕಷ್ಟಗಳನ್ನು ಕೈಹಿಡಿದು ನಿವಾರಿಸುವ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದನ್ನು ಮರೆತಿರುತ್ತಾರೆ. ಅವರಿಗೆ ತಮ್ಮ ಕಣ್ಣೀರಿನ ಬೆಲೆ ಗೊತ್ತಿದೆ. ತಾವು ಕಣ್ಣೀರು ಹಾಕಿದರೆ ತಮ್ಮ ಮುಂದಿರುವವರು ಭಯದಿಂದ ತತ್ತರಿಸುತ್ತಾರೆ ಎಂಬ ಅರಿವಿರುತ್ತದೆ. ಅಳುವುದು ತಮ್ಮ ನೋವನ್ನು ಕಡಿಮೆ ಮಾಡದೆ ಮತ್ತಷ್ಟು ಹೆಚ್ಚಿಸುತ್ತದೆ ಎಂಬ ಅರಿವು ಅವರಿಗಿರುತ್ತದೆ.
ತಮ್ಮ ಹೋರಾಟಗಳು ನಿಜವಾದದ್ದು ಮತ್ತು ತಾವು ಮನುಷ್ಯರು ಎಂಬುದರ ಅರಿವನ್ನು ಮೂಡಿಸುತ್ತವೆ.
ಎಷ್ಟೇ ಬಲಿಷ್ಠವಾದ ಕಟ್ಟಡವಾದರೂ ಕೆಲವೊಮ್ಮೆ ಅದನ್ನು ಮರು ನಿರ್ಮಾಣ ಮಾಡಲು ಒಡೆಯಲೇಬೇಕಾಗುತ್ತದೆ ಎಂಬ ಸತ್ಯ ಅವರಿಗೆ ಗೊತ್ತಿರುತ್ತದೆ.
ಈ ಮೌನದ ಕಣ್ಣೀರು ಅತ್ಯಂತ ಪವಿತ್ರವಾಗಿದ್ದು ಅವರ ತಾಳ್ಮೆ, ಪರಿಶ್ರಮ ಮತ್ತು ದೃಢತೆಯ ಸಂಕೇತವಾಗಿರುತ್ತವೆ.ಮತ್ತೆ ಮರುದಿನ ಮುಂಜಾನೆ ಅದೇ ಗಟ್ಟಿತನದ ಮುಖವಾಡವನ್ನು ಹೊತ್ತು ಏಳುವ ಅವರ ಮನ ತನ್ನ ದುಗುಡವನ್ನು ಹೊರಹಾಕಿ ಹಗುರವಾಗಿರುತ್ತದೆ. ಅವರ ಆತ್ಮ ಮತ್ತಷ್ಟು ದೃಢವಾಗಿ ಬದುಕು ಒಡ್ಡುವ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುತ್ತದೆ.
ನೆನಪಿಡಿ,ಯಾವತ್ತಾದರೂ ನೀವು ರಾತ್ರಿಯ ನೀರವ ಮೌನದಲ್ಲಿ, ಏಕಾಂತದಲ್ಲಿ ಕಣ್ಣೀರು ಹಾಕಿದರೆ
*ನೀವು ಅಶಕ್ತರಲ್ಲ… ಸಶಕ್ತರು
*ನೀವು ದುಃಖಿಗಳಲ್ಲ… ಸುಖಿಗಳಾಗಲು ಪ್ರಯತ್ನಿಸುವವರು
*ನೀವು ನೊಂದು ಬೇಯುವವರಲ್ಲ…. ಸುಣ್ಣದ ಕಲ್ಲಿಗೆ ಬಿಸಿನೀರು ಹಾಕಿದಂತೆ ಬದುಕಿನ ಬೇಗೆಗೆ ಬೆಂದು ಅರಳಿ ಹೂವಾಗುವವರು.
*ನೀವು ಮುರಿದು ಹೋಗುವವರಲ್ಲ… ಮರಳಿ ಗಟ್ಟಿಯಾಗಿ ಕಟ್ಟಲ್ಪಡುವವರು.
*ನೀವು ಸೋಲುವವರಲ್ಲ…. ಸೋಲಲ್ಲೂ ಗೆಲುವನ್ನು ಅರಸಿ ವಿಜಯಿಗಳಾಗುವವರು
ಅದುವೇ ನಿಮ್ಮ ಗಟ್ಟಿತನ.
ಅಂತಹ ಗಟ್ಟಿತನ ನಮ್ಮೆಲ್ಲರಲ್ಲೂ ಸ್ಥಿರವಾಗಿ ನೆಲೆಸಲಿ ಎಂಬ ಹಾರೈಕೆಯೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್.
Share This Article
error: Content is protected !!
";