Ad image

ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮ — ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಿಂದ 91 ವಲಯದ ಜನರಿಗೆ ಅನುಕೂಲ- ಸಚಿವ ಸಂತೋಷ ಲಾಡ್ —-

Vijayanagara Vani
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮ — ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಿಂದ 91 ವಲಯದ ಜನರಿಗೆ ಅನುಕೂಲ- ಸಚಿವ ಸಂತೋಷ ಲಾಡ್ —-
ಕೊಪ್ಪಳ ಜುಲೈ 18 : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ನೀಡಲಾಗುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯು 91 ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಮಧುಶ್ರೀ ಗಾರ್ಡನ್‌ನಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕೊಪ್ಪಳ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದಲ್ಲಿ ಶೇ 98ರಷ್ಟು ಜನರು ಅಸಂಘಟಿತ ಕಾರ್ಮಿಕರಿದ್ದು, ನಮ್ಮ ರಾಜ್ಯದಲ್ಲಿ ಶೇ. 83 ರಿಂದ 85ರಷ್ಟು ಜನರು ಈ ಅಸಂಘಟಿತ ಕಾರ್ಮಿಕರ ವಲಯದಲ್ಲಿದ್ದಾರೆ. ಸುವಾರು 1 ಕೋಟಿ 60 ಲಕ್ಷ ಅಸಂಘಟಿತ ಕಾರ್ಮಿಕರು ನಮ್ಮಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಡಿ ಬರುವ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಅಸಂಘಟಿತ ವಲಯದ ಕಾರ್ಮಿಕರಿಗೂ ನೀಡುವಂತೆ ಬಹಳಷ್ಟು ಜನರು ಕೇಳಿಕೊಂಡಿದ್ದರು. ಆದರೆ, ಮಂಡಳಿಯಲ್ಲಿ ನೋಂದಾಯಿತರಾದವರಿಗೆ ಮಾತ್ರ ಸೌಲಭ್ಯಗಳನ್ನು ನೀಡಲು ಅವಕಾಶವಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ 91 ವಲಯಗಳ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಜಾರಿಗೆ ತರಲಾಗಿದೆ. ಅಸಂಘಟಿತ ಕಾರ್ಮಿಕರಿಗೆ ಇರುವ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಕಾರ್ಮಿಕ ಇಲಾಖೆಯ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ ಎಂದರು.
ಆನ್‌ಲೈನ್ ಆ್ಯಪ್ ಮೂಲಕ ಅಮೇಜಾನ್, ಫ್ಲೀಪ್‌ಕಾರ್ಡ್, ಸ್ವೀಗ್ಗಿ, ಜೂಮ್ಯಾಟೋಗಂತಹ ಕಂಪನಿಗಳಲ್ಲಿ ನೋಂದಾಯಿಸಿಕೊಂಡು ಟ್ರಾನ್ಸ್ಪೋರ್ಟ್ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ವಿಶೇಷವಾದ ಮಸೂದೆಯನ್ನು ತಂದಿದ್ದು, ಕರ್ನಾಟಕ ರಾಜ್ಯದಲ್ಲಿ ಇಂತಹ ಸಮರ್ಪಕವಾದ ಬಿಲ್ ಜಾರಿಗೆ ತಂದಿರುವುದು ದೇಶದಲ್ಲಿ ಎಲ್ಲಿಯೂ ಇಲ್ಲ. ಇದರ ಜೊತೆಗೆ ಸಿನಿ ಬಿಲ್‌ನ್ನು ತಂದಿದ್ದು, ಸಿನಿಮಾ ಕ್ಷೇತ್ರದಲ್ಲಿ ದುಡಿಯುವ ಮೇಕಪ್ ಆರ್ಟಿಸ್ಟ್, ಡ್ಯಾನ್ಸರ್, ಪೋಷಕ ಕಲಾವಿದರು, ಪೌರಾಣಿಕ ನಾಟಕಗಳು ಮತ್ತು ಗ್ರಾಮ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿರುವ ಹಲವಾರು ಕಲಾವಿದರಿಗೆ ಇದರಿಂದ ಅನುಕೂಲವಾಗಲಿದೆ. ಖಾಸಗಿ ಬಸ್, ಲಾರಿ, ಆಟೋ, ಟಂಟಂ ಹೀಗೆ ಯಾವುದೇ ಸರಕು ಮತ್ತು ಸೇವಾ ಕಂಪನಿಗಳಲ್ಲಿ ವಾಹನ ಚಾಲಕರು, ಕ್ಲೀನರ್‌ಗಳು ಮತ್ತು ಇತರೆ ಕಾರ್ಮಿಕರ ಜೀವಹಾನಿಗೆ 5 ಲಕ್ಷದವರೆಗೆ ಪರಿಹಾರ ನೀಡಲಾಗುವುದು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯ ರಸ್ತೆ ಅಪಘಾತಗಳ ವಲಯಗಳನ್ನು ಗುರುತಿಸಿ ಅಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಯಾವುದೇ ಸಣ್ಣ-ಸಣ್ಣ ಕಂಪನಿಗಳು ಎಸ್.ಸಿ ಮತ್ತು ಎಸ್.ಟಿ ಅಭ್ಯರ್ಥಿಗಳಿಗೆ ಕೆಲಸ ನೀಡಿದರೆ, ಎರಡು ವರ್ಷದವರೆಗೆ ಅಭ್ಯರ್ಥಿಗಳ ಇ.ಎಸ್.ಐ ಮತ್ತು ಪಿ.ಎಫ್ ಮೊತ್ತವನ್ನು ಕಾರ್ಮಿಕ ಇಲಾಖೆಯಿಂದ ಆಶಾದೀಪ ಯೋಜನೆಯಡಿ ಸಂಬಂಧಿಸಿದ ಕಂಪನಿಗಳಿಗೆ ಮರುಪಾವತಿಸಲಾಗುತ್ತಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ ಮತ್ತು ಕಂಪನಿಗಳಿಗೂ ಅನುಕೂಲವಾಗುತ್ತದೆ. ಈ ಯೋಜನೆಯ ಬಗ್ಗೆ ಸಂಬಂಧಿಸಿದ ಕಾರ್ಖಾನೆಗಳಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಹೊರಗುತ್ತಿಗೆ ಆಧಾರದಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ರಾಜ್ಯಾದ್ಯಂತ ಎಜೆನ್ಸಿ ಬದಲಿಗೆ ಸೋಸೈಟಿ ಮೂಲಕವೇ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಂಟಿ ಕಾರ್ಮಿಕ ಆಯುಕ್ತರಾದ ಡಾ. ಎಸ್.ಬಿ. ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡಗಳನ್ನು ವಿತರಿಸುವುದರ ಜೊತೆಗೆ ಅವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. 1 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರು ನಮ್ಮ ರಾಜ್ಯದಲ್ಲಿ ಇದ್ದಾರೆ. ಹಮಾಲರು. ಮಡಿವಾಳರು. ಟೈಲರಗಳು. ಚಿಂದಿ ಅಯುವವರು. ಅಲೆಮಾರಿ ಹಾಗೂ ಅರೆ ಅಲೆಮಾರಿಗಳು. ಕ್ಷೌರಿಕರು. ಬೀದಿ ಬದಿ ವ್ಯಾಪಾರಿಗಳು. ಮೆಕ್ಯಾನಿಕಗಳು. ಕಟ್ಟಡ ಕಾರ್ಮಿಕರು. ಅಕ್ಕಸಾಲಿರು. ಡೆಲಿವರಿ ಬಾಯ ಸೇರಿದಂತೆ 91 ವರ್ಗದ ಅಸಂಘಟಿತ ಕಾರ್ಮಿಕರು ಇದರಲ್ಲಿ ಬರುತ್ತಾರೆ. ಅಸಂಘಟಿತ ಕಾರ್ಮಿಕರು ಅಪಘಾತದಲ್ಲಿ ಮರಣ ಹೊಂದಿದಾಗ ಅವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗುತ್ತದೆ. ಮಹಿಳೆಯರಿಗೆ ಹೆರಿಗೆ ಭತ್ಯ. ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ಸೇರಿದಂತೆ ಇತರೆ ಹಲವಾರು ಯೋಜನೆಗಳಿದ್ದು, ತೆರೆಯ ಮರೆಯಲ್ಲಿ ದುಡಿಯುತ್ತಿರುವ ಲಕ್ಷ್ಯಾಂತರ ಅಸಂಘಟಿತ ಕಾರ್ಮಿಕರನ್ನು ಗುರುತಿಸುವ ಕೆಲಸವನ್ನು ಕಾರ್ಮಿಕ ಇಲಾಖೆಯಿಂದ ಮಾಡುತ್ತಿದ್ದೆವೆ ಎಂದು ಹೇಳಿದರು.
ಸಂವಿಧಾನ ಪೀಠಿಕೆ ವಾಚನ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. 91ಕ್ಕು ಹೆಚ್ಚಿನ ಅಸಂಘಟಿತ ಕಾರ್ಮಿಕರಿಗೆ ಸಚಿವರು ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ ನಂತರ ಆಶಾದೀಪ ಯೋಜನೆ ಅಡಿ ಎಸ್.ಸಿ.ಎಸ್.ಟಿ ಉದ್ಯೋಗಿಗಳ ಇ.ಎಸ್.ಐ & ಇ.ಪಿಫ್ ಮೊತ್ತ ಮರುಪಾವತಿ ಚೆಕ್‌ಗಳ ವಿತರಣೆ ಹಾಗೂ ಖಾಸಗಿ ವಾಣಿಜ್ಯ ಚಾಲಕರ ಮಕ್ಕಳಿಗೆ 10 ಸಾವಿರ ರೂ. ಚೆಕ್‌ಗಳನ್ನು ವಿತರಣೆ ಮಾಡಿದರು. ವಿವಿಧ ಸ್ಟಾಲ್‌ಗಳ ಮೂಲಕ ಕಾರ್ಮಿಕ ಇಲಾಖೆಯ ಯೋಜನೆಗಳ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀ ನಿವಾಸ, ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾದ ಮುಂಡರಗಿ ನಾಗರಾಜ, ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕಾರ್ಮಿಕ ಇಲಾಖೆ ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಡಾ. ವೆಂಕಟೇಶ ಶಿಂಧಿಹಟ್ಟಿ, ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಮಹ್ಮದ್ ಬಶೀರ್ ಅನ್ಸಾರಿ, ಕೊಪ್ಪಳ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಕೊಪ್ಪಳ ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ ಮತ್ತು ಮುತ್ತುರಾಜ ಕುಷ್ಟಗಿ, ಕೊಪ್ಪಳ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳಾದ ಸುಧಾ ಗರಗ, ಕಾರ್ಮಿಕ ನಿರೀಕ್ಷಕರಾದ ಕೊಪ್ಪಳ ವೃತ್ತದ ಮಂಜುಳಾ ವಿಶ್ವನಾಥ, ಗಂಗಾವತಿ ವೃತ್ತದ ಎಂ.ಅಶೋಕ ಹಾಗೂ ಕುಷ್ಟಗಿ ವೃತ್ತದ ನಿವೇದಿತಾ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಿದ ಅಸಂಘಟಿತ ಕಾರ್ಮಿಕರು ಹಾಗೂ ಕಾರ್ಮಿಕ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.

Share This Article
error: Content is protected !!
";