ಚಿತ್ರದುರ್ಗಆಗಸ್ಟ್19:
ಗ್ರಾಹಕರು ಅನಾಮಧೇಯ ಕರೆಗಳಿಗೆ ದನಿಯಾಗಬೇಡಿ, ಅನಾವಶ್ಯಕ ಡಿಜಿಟಲ್ ಲಿಂಕ್ಗಳನ್ನು ತಿರಸ್ಕರಿಸಿ, ಜನ್ಧನ್ ಯೋಜನೆ ಖಾತೆಗಳಿಗೆ ಈ ಕೆವೈಸಿ ಮಾಡಿಸಿಕೊಂಡು ಸಕ್ರಿಯಗೊಳಿಸಿಕೊಳ್ಳಿ. ಇದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಹಕಾರಿಯಾಗಲಿದೆ ಎಂದು ಆರ್.ಬಿ.ಐ. ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ ತಿಳಿಸಿದರು.
ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಚಿತ್ರದುರ್ಗ ಕೆನರಾ ಬ್ಯಾಂಕ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಜಾನಕಲ್ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಪಂಚಾಯತ್ ಮಟ್ಟದ ಸಾಮಾಜಿಕ ಭದ್ರತಾ ಯೋಜನೆಗಳ ಸ್ಯಾಚುರೇಶನ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮೊಬೈಲ್ಗಳೇ ಇಂದು ನಮ್ಮ ಬ್ಯಾಂಕ್ ಆಗಿವೆ. ಡಿಜಿಟಲ್ ವಂಚನೆಗೆ ಒಳಗಾಗಿ ಹಣ ಕಳೆದುಕೊಳ್ಳಬೇಡಿ. ಗ್ರಾಹಕರು ಡಿಜಿಟಲ್ ವಂಚನೆಗಳಿಂದ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ಮಾರ್ಗದರ್ಶಿ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಎಂ.ರಾಘವೇಂದ್ರ ಮಾತನಾಡಿ, ಪ್ರಧಾನಮಂತ್ರಿ ಜೀವನ್ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಅಟಲ್ ಪಿಂಚಣಿ ಯೋಜನೆಗಳನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಬೇಕು, ಇಲ್ಲವಾದಲ್ಲಿ ಸರ್ಕಾರದ ಯೋಜನೆಯ ಹಣ ಜಮೆಯಾಗುವುದಿಲ್ಲ, ಹಾಗಾಗಿ ಅಭಿಯಾನದಡಿ ವ್ಯವಹಾರ ಮಾಡದೆ ನಿಷ್ಕ್ರಿಯೆಗೊಂಡ ಖಾತೆಗಳನ್ನು ಸ್ಥಳದಲ್ಲೇ ಸಕ್ರಿಯಗೊಳಿಸಿ ಕೊಡಲಾಗುತ್ತದೆ, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಾನಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳನ್ನು ನೋಂದಣಿ ಮಾಡಿಸಿಕೊಂಡು ಪ್ರತಿ ವರ್ಷ ನಿಮ್ಮ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಬೇಕು. ಈ ಖಾತೆಗಳು ತನ್ತಾನೆ ಸಕ್ರಿಯಗೊಂಡಿರುತ್ತವೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್.ಬಿ.ಐ. ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯವಸ್ಥಾಪಕಿ ಮೀನಾಕ್ಷಿ, ಆರ್.ಬಿ.ಐ ಸಹಾಯಕ ನಿರ್ದೇಶಕ ಅರುಣ್ ಕುಮಾರ್, ಕೆನರಾ ಬ್ಯಾಂಕ್ ದಾವಣಗೆರೆ ಪ್ರಾದೇಶಿಕ ಕಚೇರಿಯ ಡಿಜಿಎಂ ತನ್ಮಯ್ ದಾಸ್, ಜಾನಕಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್, ಎಸ್ಬಿಐ ಆರ್ಥಿಕ ಸಮಾಲೋಚಕ ಮಧುಸೂಧನ್, ಹಿರಿಯೂರು ಆರ್ಥಿಕ ಸಾಕ್ಷರತ ಕೇಂದ್ರದ ಜಿಲ್ಲಾ ಸಂಯೋಜಕ ಟಿ.ಆರ್.ಗಿರೀಶ್, ಜಾನಕಲ್ ಕೆನರಾ ಬ್ಯಾಂಕ್ ವ್ಯವಸ್ಥಾಪಕ, ಸಿಬ್ಬಂದಿ ವರ್ಗದವರು, ಮತ್ತಿತರರು ಇದ್ದರು.
ಫೋಟೋ ವಿವರ: ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಪಂಚಾಯತ್ ಮಟ್ಟದ ಸಾಮಾಜಿಕ ಭದ್ರತಾ ಯೋಜನೆಗಳ ಸ್ಯಾಚುರೇಶನ್ ಅಭಿಯಾನ ಕಾರ್ಯಕ್ರಮವನ್ನು ಆರ್.ಬಿ.ಐ. ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ ಉದ್ಘಾಟಿಸಿದರು.