ಬಳ್ಳಾರಿ,ಜೂ.20
ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಗೌರವ ಲಭಿಸಬೇಕೆಂದರೆ ಶಿಕ್ಷಣ ಅತ್ಯಗತ್ಯವಾಗಿದ್ದು, ಅವರಲ್ಲಿ ಆತ್ಮವಿಶ್ವಾಸ ಮತ್ತು ಸಬಲೀಕರಣ ಹೆಚ್ಚಿಸಿ ಉತ್ತಮವಾದ ಶಿಕ್ಷಣ ನೀಡುವುದು ಪೋಷಕರ ಜವಾಬ್ದಾರಿ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ಹೇಳಿದರು.
ರೀಡ್ಸ್ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ವಿಶೇಷ ಪೋಲಿಸ್ ಘಟಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಬಾಲ್ಯವಿವಾಹ ನಿಷೇಧ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ನಗರದ ಬಿಡಿಎಎ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಹದಿಹರೆಯದ ಹೆಣ್ಣು ಮಕ್ಕಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣುಮಕ್ಕಳ ಆರೋಗ್ಯಕರ ಜೀವನಶೈಲಿ, ಶಿಕ್ಷಣ ಮತ್ತು ಪೋಷಣೆ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು. ತಮ್ಮ ಗುರಿ ತಲುಪಲು ಸಹಾಯ ಮಾಡಬೇಕು. ಶ್ರದ್ಧೆ ಮತ್ತು ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿದರೆ ಕನಸು ಕಂಡ ಗುರಿಯನ್ನು ತಲುಪಬಹುದು ಎಂದು ತಿಳಿಸಿದರು.
ಇಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಹಾಗೂ ವಿದ್ಯಾಭ್ಯಾಸ ಮಾಡಲು ಬಹಳಷ್ಟು ಅನುಕೂಲವಿದೆ ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾಜದಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿ ಇದ್ದು, ಅದನ್ನು ಹೋಗಲಾಡಿಸಲು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು. ಓದುವ ವಯಸ್ಸಿನಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರೆ ಸಮಾಜದ ಪಿಡುಗು ಆಗಿರುವ ಬಾಲ್ಯವಿವಾಹದ ಪ್ರಕರಣಗಳನ್ನು ಆದಷ್ಟು ಕಡಿಮೆಗೊಳಿಸಬಹುದು ಎಂದು ತಿಳಿಸಿದರು.
ಪೋಲಿಸ್ ಇಲಾಖೆಯಿಂದ ಶಾಲಾ-ಕಾಲೇಜು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ‘ನವದುರ್ಗಿ’ ತಂಡ ರಚನೆ ಮಾಡಿದ್ದು, ಈ ತಂಡವು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಬಗ್ಗೆ ಹೆಚ್ಚಿನ ನಿಗಾವಹಿಸುವ ಮೂಲಕ ಅವರ ಸುರಕ್ಷತೆ ಮತ್ತು ಹೆಚ್ಚಿನ ಭದ್ರತೆಗಾಗಿ ಕಾರ್ಯನಿರ್ವಹಿಸುತ್ತಿದೆ. ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಯಾವುದೇ ಸಮಸ್ಯೆ ಉಂಟಾದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಸಂಪರ್ಕಿಸಬಹುದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು. ಯಾವುದೇ ಸಮಯವನ್ನು ವ್ಯರ್ಥ ಮಾಡದೇ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಪಡೆದು ಗೌರವದಿಂದ ಬದುಕಬೇಕು. ಬಾಲ್ಯವಿವಾಹ ಮತ್ತ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸಿ ಸುಂದರವಾದ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಕೈಜೋಡಿಸಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ ಅವರು ಬಾಲ್ಯವಿವಾಹದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಎಎಸ್‌ಪಿ ರವಿಕುಮಾರ್, ಬಳ್ಳಾರಿ ನಗರ ಉಪವಿಭಾಗ ಡಿಎಸ್‌ಪಿ ಚಂದ್ರಕಾ0ತ ನಂದಾರೆಡ್ಡಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷೀ ಮೈದೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಸಿ.ರಾಘವೇಂದ್ರ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್, ವಕೀಲರಾದ ಶಿವಲೀಲಾ, ಸಂಚಾರಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಅಯ್ಯನಗೌಡ ಪಾಟೀಲ್, ಸೈಬರ್ ಕ್ರೆöÊಂ ಪೋಲಿಸ್ ಅಧಿಕಾರಿ ಸುಭಾಶ್ ಚಂದ್ರ, ರೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಸ್ವಾಮಿ ಸೇರಿದಂತೆ ರೀಡ್ಸ್ ಸಂಸ್ಥೆಯ ಸಿಬ್ಬಂದಿ ವರ್ಗ, ಮಕ್ಕಳ ವಿಶೇಷ ಪೋಲಿಸ್ ಘಟಕದ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಗಮನ ಸೆಳೆದ ಜಾಗೃತಿ ಜಾಥಾ:
ಬಾಲ್ಯವಿವಾಹ ನಿಷೇಧ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ನಗರದಲ್ಲಿ ಆಕರ್ಷಕ ಜಾಥಾ ನಡೆಯಿತು. ಜಾಥಾದಲ್ಲಿ ಬಾಲ್ಯವಿವಾಹ ಮತ್ತು ಶಿಕ್ಷಣದ ಬಗ್ಗೆ ಕುರಿತ ವಿವಿಧ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಗಮನ ಸೆಳೆದರು.