ವಿಶೇಷ ಲೇಖನ ಗೃಹಜ್ಯೋತಿ ಯೋಜನೆಗೆ ಒಂದು ವರ್ಷ: ಉತ್ತರ ಕನ್ನಡ ಜಿಲ್ಲೆಯಲ್ಲಿ 200 ಕೋಟಿ ರೂ ಗೂ ಅಧಿಕ ಮೊತ್ತದ ಉಚಿತ ವಿದ್ಯುತ್

Vijayanagara Vani
ವಿಶೇಷ ಲೇಖನ ಗೃಹಜ್ಯೋತಿ ಯೋಜನೆಗೆ ಒಂದು ವರ್ಷ: ಉತ್ತರ ಕನ್ನಡ ಜಿಲ್ಲೆಯಲ್ಲಿ 200 ಕೋಟಿ ರೂ ಗೂ ಅಧಿಕ ಮೊತ್ತದ ಉಚಿತ ವಿದ್ಯುತ್
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಗೃಹ ಬಳಕೆಗಾಗಿ ಪ್ರತೀ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಗೆ ಒಂದು ವರ್ಷ ಪೂರ್ಣಗೊಂಡಿದ್ದು, ಈ ಯೋಜನೆಯಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಸ್ಕಾಂ ವತಿಯಿಂದ ಅರ್ಹ ಎಲ್ಲಾ ಕುಟುಂಬಗಳನ್ನು ಈ ಯೋಜನೆಯಡಿ ನೋಂದಣಿ ಮಾಡಿ, ಉಚಿತ ವಿದ್ಯುತ್ ಸರಬರಾಜು ಮಾಡುವ ಮೂಲಕ ಯೋಜನೆಯಲ್ಲಿ ಶೇ. 100 ರಷ್ಟು ಗುರಿ ಸಾಧಿಸಲಾಗಿದ್ದು, ಜುಲೈ ಅಂತ್ಯದ ವೇಳೆಗೆ 200 ಕೋಟಿ ರೂ ಗಳಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಹರಿರುವ 3,86,426 ಕುಟುಂಬಗಳನ್ನು ಗೃಹಜ್ಯೋತಿ ಯೋಜನೆಯಡಿ ಈಗಾಗಲೇ ನೋಂದಣಿ ಮಾಡಿ ಅವರಿಗೆ ಶೂನ್ಯ ದರದ ವಿದ್ಯುತ್ ಬಿಲ್ ವಿತರಿಸಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ (ಎಲ್.ಟಿ.1) ಮತ್ತು ಗೃಹಬಳಕೆಯ (ಎಲ್.ಟಿ.1) ಸೇರಿದಂತೆ ಒಟ್ಟು ಇರುವ ಸ್ಥಾವರ (ಮೀಟರ್) ಗಳ ಸಂಖ್ಯೆ 4,28,200 ಆಗಿದ್ದು, ಇದರಲ್ಲಿ ಯೋಜನೆಗೆ ಅರ್ಹವಾಗಿಲ್ಲದ ಸ್ಥಾವರಗಳ ಸಂಖ್ಯೆ 31,668 ಮತ್ತು ವಿವಿಧ ಕಾರಣಗಳಿಂದ ನೋಂದಣಿ ತಿರಸ್ಕರಿಸಿದ ಮತ್ತು ನೋಂದಣಿಗೆ ಆಸಕ್ತಿ ತೋರದ ಗ್ರಾಹಕರ ಸಂಖ್ಯೆ 10,106 ಆಗಿದ್ದು ಬಾಕಿ ಉಳಿದ ಎಲ್ಲಾ 3,86,426 ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಡಿ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಜಿಲ್ಲೆಯ ಶಿರಸಿ ವಿಭಾಗದ, ಶಿರಸಿ ಪಟ್ಟಣ, ಶಿರಸಿ ಗ್ರಾಮಂತರ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು ವ್ಯಾಪ್ತಿಯಲ್ಲಿ 1,25,013, ದಾಂಡೇಲಿ ವಿಭಾಗದ ದಾಂಡೇಲಿ ಮತ್ತು ಹಳಿಯಾಳ ವ್ಯಾಪ್ತಿಯಲ್ಲಿ 58,826 ಕಾರವಾರ ವ್ಯಾಪ್ತಿಯ ಕಾರವಾರ, ಅಂಕೋಲಾ, ಸದಾಶಿವಗಡದಲ್ಲಿ 80,999, ಹೊನ್ನಾವರ ವಿಭಾಗದ, ಹೊನ್ನಾವರ, ಕುಮಟಾ, ಭಟ್ಕಳದಲ್ಲಿ 1,21,588 ಅರ್ಹ ಕುಟುಂಬಗಳನ್ನು ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಲಾಗಿದೆ.
ಜಿಲ್ಲೆಯಲ್ಲಿನ ಒಟ್ಟು 4,28,200 ಸ್ಥಾವರಗಳಲ್ಲಿ 200 ಕ್ಕಿಂತ ಹೆಚ್ಚಿನ ಬಳಕೆ ಮೀರಿದ ಗ್ರಾಹಕರ ಸ್ಥಾವರಗಳು 15,690, ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿ ಸ್ಥಾವರಗಳು 2,911, ಶಾಲೆ, ಕಾಲೇಜು ಹಾಗೂ ಇತ್ಯಾದಿ ಸರ್ಕಾರಿ ಸ್ಥಾವರಗಳು 4,585, ನೋಂದಣಿ ಮಾಡಲು ತಿರಸ್ಕರಿಸಿದ ಗ್ರಾಹಕರ ಸಂಖ್ಯೆ 159, ಮನೆ ಖಾಲಿ/ ಎರಡಕ್ಕಿಂತ ಹೆಚ್ಚು ಮನೆ ಸ್ಥಾವರಗಳು 8,482 ಆಗಿದ್ದು, ನೋಂದಣಿಗೆ ಆಸಕ್ತಿ ತೋರದ ಗ್ರಾಹಕರ ಸಂಖ್ಯೆ 9,947 ಆಗಿದ್ದು, ಒಟ್ಟೂ 41,774 ಸ್ಥಾವರಗಳು ನೋಂದಣಿಗೆ ಅರ್ಹವಾಗಿರುವುದಿಲ್ಲ.
ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ ಜೂನ್ 2024 ರ ವರೆಗೆ ಜಿಲ್ಲೆಯಲ್ಲಿ ಹೆಸ್ಕಾಂನಿAದ 185.61 ಕೋಟಿ ರೂ ಗಳಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ವಿತರಿಸಲಾಗಿದ್ದು, ಶಿರಸಿ ವಿಭಾಗದಲ್ಲಿ 52.12 ಕೋಟಿ ರೂ, ದಾಂಡೇಲಿ ವಿಭಾಗದಲ್ಲಿ 21.68 ಕೋಟಿ ರೂ, ಕಾರವಾರ ವಿಭಾಗದಲ್ಲಿ 43.11 ಕೋಟಿ ರೂ ಹಾಗೂ ಹೊನ್ನಾವರ ವಿಭಾಗದಲ್ಲಿ 68.70 ಕೋಟಿ ರೂ, ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯನ್ನು ಶೇ. 100 ರಷ್ಟು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೆಸ್ಕಾಂ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಲಾಖೆಯ ಸಿಬ್ಬಂದಿಗಳು ಜಿಲ್ಲೆಯ ಪ್ರತೀ ಮನೆಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಮಾಹಿತಿ ನೀಡುವುದರ ಮೂಲಕ ಹಾಗೂ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಕ್ಯಾಂಪ್ಗಳನ್ನು ಆಯೋಜಿಸಿ ಗ್ರಾಹಕರ ನೋಂದಣಿಗೆ ಕ್ರಮ ಕೈಗೊಳ್ಳಲಾಗಿದೆ. ಜೂನ್ 2024 ರ ವರೆಗೆ 185.61 ಕೋಟಿ ರೂ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಿದ್ದು, ಪ್ರಸ್ತುತ ಜುಲೈ 2024 ರ ಮಾಹೆಯ ವಿದುತ್ ಬಳಕೆಯ ಬಿಲ್ಗಳು ಜನರೇಟ್ ಆಗುತ್ತಿದ್ದು, ಜುಲೈ ಮಾಹೆಯ ಉಚಿತ ವಿದ್ಯುತ್ ಬಳಕೆಯ ಮೊತ್ತ ಸೇರಿದಲ್ಲಿ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಒಟ್ಟು 200 ಕೋಟಿ ರೂ ಅಧಿಕ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ. ಯೋಜನೆಯಡಿ ಶೇ. 100 ರಷ್ಟು ಪ್ರಗತಿ ಸಾಧಿಸಲಾಗಿದೆ.: ದೀಪಕ್ ಕಾಮತ್, ಅಧೀಕ್ಷಕ ಇಂಜಿನಿಯರ್ (ವಿದ್ಯುತ್), ಹೆಸ್ಕಾಂ, ಶಿರಸಿ ವೃತ್ತ.
WhatsApp Group Join Now
Telegram Group Join Now
Share This Article
error: Content is protected !!