ದಾವಣಗೆರೆ,ಜುಲೈ.11 ಸ್ವಾತಂತ್ರ್ಯ ನಂತರದಲ್ಲಿ 36 ಕೋಟಿ ಇದ್ದ ಜನಸಂಖ್ಯೆ 2024 ರ ವೇಳೆಗೆ 140 ಕೋಟಿಗೆ ತಲುಪಿದ್ದು ಜನಸಂಖ್ಯಾ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ ಮುಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಅವರು ಗುರುವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬಿಐಇಟಿ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕøತಿಕ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಲಾದ ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಪಂಚದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶ ಚೀನಾವನ್ನು ಹಿಂದಿಕ್ಕಿ ಭಾರತ ಜನಸಂಖ್ಯೆ ಬೆಳವಣಿಗೆಯಲ್ಲಿ ಮುಂದೆ ಹೋಗುತ್ತಿದೆ. ದೇಶದಲ್ಲಿ 1.95 ರಷ್ಟು ಜನನ ಪ್ರಮಾಣವಿದ್ದರೆ, ಇದು ರಾಜ್ಯದಲ್ಲಿ 1.6 ರಷ್ಟಿದೆ. ಜನನ ಮತ್ತು ಮರಣ ಪ್ರಮಾಣಗಳನ್ನು ಗಣನೆಗೆ ತೆಗೆದುಕೊಂಡಲ್ಲಿ ಜನಸಂಖ್ಯಾ ಬೆಳವಣಿಗೆ ಹೆಚ್ಚಾಗುತ್ತಿಲ್ಲ. ಸಮೀಕ್ಷೆಯ ಪ್ರಕಾರ 2050 ರ ನಂತರ ಜನಸಂಖ್ಯಾ ಬೆಳವಣಿಗೆ ದರವು ಇಳಿಮುಖವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.
ಉತ್ತರ ಭಾರತ ರಾಜ್ಯಕ್ಕಿಂತಲೂ ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯಾ ಬೆಳವಣಿಗೆಯನ್ನು ತಡೆಗಟ್ಟಲು ಪರಿಣಾಮಕಾರಿಯಾದ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿವೆ. ಅದರಲ್ಲಿ ರಾಜ್ಯ ಮುಂದಿದ್ದು ಜನಸಂಖ್ಯೆ ನಿಯಂತ್ರಣಕ್ಕಾಗಿ ತಳಮಟ್ಟದಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ. ಹುಟ್ಟುವ ಪ್ರತಿಯೊಂದು ಮಗು ದೇಶದ ಆಸ್ತಿಯಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯವಂತ ಮಗು ಬೆಳೆಸಲು ಹುಟ್ಟುವ ಮಗುವಿನ ಅಂತರ ಕನಿಷ್ಠ 3 ವರ್ಷಗಳಿರಬೇಕು. ಮತ್ತು ತಾಯಿಯ ಆರೋಗ್ಯ ಚನ್ನಾಗಿಟ್ಟುಕೊಳ್ಳಲು ಸಕಾಲಕ್ಕೆ ಪೌಷ್ಠಿಕ ಆಹಾರ ಸಿಗಬೇಕು, ಬಾಲ್ಯ ವಿವಾಹಗಳನ್ನು ತಡೆಗಟ್ಟಬೇಕು, ಚಿಕ್ಕ ವಯಸ್ಸಿಗೆ ಮಕ್ಕಳಾಗದಂತೆ ತಡೆಗಟ್ಟಲು ಗರ್ಭನಿರೋಧಕತೆ ಪ್ರಮುಖ ಪಾತ್ರ ವಹಿಸುತ್ತದೆ.
ಹೆಣ್ಣು ಭ್ರೂಣಹತ್ಯೆಯಿಂದ ಲಿಂಗಾನುಪಾತ ಕುಸಿತವಾಗಲಿದೆ, ಹೆಣ್ಣು ಹುಟ್ಟಿದರೆ ಮದುವೆ ಮಾಡಬೇಕೆಂದು ಯೋಚನೆ ಮಾಡುತ್ತಾರೆ. ಆದರೆ ಹೆಣ್ಣು ಗಂಡಿಗಿಂತ ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲ ಎಂಬ ಚಿಂತನೆ ಇರಬೇಕು. ಹೆಣ್ಣು ಹುಟ್ಟಿದರೆ ಅವಳನ್ನು ಭೇಗ ಮದುವೆ ಮಾಡಬೇಕೆಂದು ಯೋಚನೆ ಮಾಡುವುದು ತಪ್ಪು, ಹೆಣ್ಣಿಗೆ ಶಕ್ತಿ ತುಂಬಲು ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದ್ದು ಆಸ್ತಿ ಹಕ್ಕುಗಳಿವೆ, ಅನೇಕರು ಹೆಣ್ಣು ಭಾರ ಎಂದು ಭ್ರೂಣಹತ್ಯೆಗೆ ಮುಂದಾಗುವರು, ಇದು ಅಪರಾಧವಾಗಿದ್ದು ನಿಷಿದ್ದವಾಗಿದೆ. ಇಂತಹ ಮನೋಭಾವ ದೂರ ಮಾಡಲು ಪತಿ, ಪತ್ನಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಲೋಪ ಸರಿಪಡಿಸಲು ನಿರಂತರ ಪ್ರಯತ್ನ ಮಾಡಬೇಕಾಗಿದೆ ಎಂದರು.
ದೇಶದ ಜನರಿಗೆ ಆರೋಗ್ಯ ಮತ್ತು ಶಿಕ್ಷಣ ನೀಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ದೇಶದ ಸಂಪತ್ತನ್ನಾಗಿ ಮಾಡುವ ಮೂಲಕ ಭಾರವಾಗದೆ ಆಸ್ತಿಯನ್ನಾಗಿಸಬೇಕು. ಆಗ ಮಾತ್ರ ಭಾರತ ವಿಶ್ವ ಗುರುವಾಗಲಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದಲ್ಲಿ ಪ್ರತಿ ಚದುರ ಕಿಲೋಮೀಟರ್ಗೆ 1300 ರಷ್ಟು ಜನಸಾಂಧ್ರತೆ ಇದ್ದು ಇದು ಕೆನಾಡದಲ್ಲಿ 4.26 ರಷ್ಟಿದೆ. ಜನಸಂಖ್ಯೆ ಹೆಚ್ಚಾದಂತಲ್ಲಾ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ, ಇದಕ್ಕಾಗಿ ಪ್ರಾಕೃತಿಕ ಸಂಪತ್ತನ್ನು ಬಳಕೆ ಮಾಡಿಕೊಳ್ಳುವ ಒತ್ತಡ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಬೇಕಾಗಿದೆ ಎಂದರು.
ದಾವಣಗೆರೆ ನಗರದಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿ ಸುಮಾರು 4000 ರಷ್ಟು ಬೆಡ್ಗಳಿವೆ. ಇಲ್ಲಿನ ಜನಸಂಖ್ಯೆ ಸುಮಾರು 5 ಲಕ್ಷ ಇದ್ದು ಮಾನದಂಡದನ್ವಯ ಪ್ರತಿ ಸಾವಿರ ಜನರಿಗೆ ಒಂದು ಬೆಡ್ ಇರಬೇಕೆಂಬ ನಿಯಮವಿದ್ದು ಅದಕ್ಕಿಂತಲೂ ಹೆಚ್ಚಿನ ಆರೋಗ್ಯ ಸೌಲಭ್ಯಗಳು ಇಲ್ಲಿವೆ. ಹಳೆ ಆಸ್ಪತ್ರೆ ಹಾಗೂ ಚಿಗಟೇರಿ ಆಸ್ಪತ್ರೆಗೆ ಕೆಲವು ಅಗತ್ಯ ಕಾಯಕಲ್ಪ ಕಲ್ಪಿಸಬೇಕಾಗಿದ್ದು ಇದಕ್ಕಾಗಿ ತಕ್ಷಣದ ಕ್ರಮವಾಗಿ ರೂ.50 ಕೋಟಿಗಳ ಅಗತ್ಯವಿರುತ್ತದೆ ಎಂದರು.
ಸಂಸದರಾದ ಡಾ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ ವಿಶ್ವದ ಜನಸಂಖ್ಯೆ 1987 ರ ಜುಲೈ 11 ರಂದು 500 ಕೋಟಿ ತಲುಪಿದ್ದರಿಂದ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನಾಚರಣೆ ಆಚರಣೆ ಮಾಡುತ್ತಾ ಬರಲಾಗಿದೆ. 1952 ರಲ್ಲಿ ಕುಟುಂಬ ಕಲ್ಯಾಣ ಯೋಜನೆ ಜಾರಿಗೆ ಬಂದರೂ ಸಹ 1951 ರಲ್ಲಿ ಇದ್ದ 36 ಕೋಟಿ 2024 ಕ್ಕೆ 140 ಕೋಟಿಗೆ ಏರಿಕೆಯಾಗಿದೆ. ಇನ್ನೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾಗಿದೆ ಎಂದರು.
ಸರ್ಕಾರ ಜನರ ಆರೋಗ್ಯ ದೃಷ್ಟಿಯಿಂದ ಅನೇಕ ಕಾರ್ಯಕ್ರಮ, ಸೌಲಭ್ಯಗಳನ್ನು ನೀಡಿದ್ದರೂ ಸಹ ಅವು ಜನರಿಗೆ ತಲುಪುತ್ತಿಲ್ಲ. ಕಳೆದ ಆರು ತಿಂಗಳ ಹಿಂದೆ ಎಸ್.ಎಸ್.ಕೇರ್ ಟ್ರಸ್ಟ್ ಮೂಲಕ ಆರೋಗ್ಯ ತಪಾಸಣೆ ಮಾಡುವಾಗ 8 ತಿಂಗಳ ಗರ್ಭಿಣಿ ಯಾವುದೇ ಚುಚ್ಚುಮದ್ದು, ಚಿಕಿತ್ಸೆ ಪಡೆಯದಿರುವುದು ಗಮನಕ್ಕೆ ಬಂದಿತು. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕಾಗಿದೆ ಎಂದ ಅವರು ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ತಲುಪುವಂತಾಗಬೇಕೆಂದರು.
ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಾಗ ಮಾತ್ರ ಜನಸಂಖ್ಯೆ ನಿಯಂತ್ರಣ ಮಾಡಲು ಸಾಧ್ಯ, ನಿಯಂತ್ರಿತ ಜನಸಂಖ್ಯೆ ಇದ್ದಲ್ಲಿ ದೇಶಾಭಿವೃದ್ದಿಯಾಗಲಿದೆ. ಧರ್ಮಾಂದತೆಯಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು ಇದು ಶಿಕ್ಷಣಾಧಾರಿತವಾಗಲಿ ಎಂದ ಅವರು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಅನೇಕ ಮೂಲಭೂತ ಸೌಕರ್ಯಗಳು ಬೇಕಾಗಿದ್ದು ಆದಷ್ಟು ಬೇಗ ಇವುಗಳನ್ನು ಕಲ್ಪಿಸಲು ಮನವಿ ಮಾಡಿದರು.
ನಿವೃತ್ತ ಪ್ರಾಂಶುಪಾಲರಾದ ಜಿ.ಎಂ.ಮಲ್ಲಿಕಾರ್ಜುನಪ್ಪ ಉಪನ್ಯಾಸ ನೀಡಿ ಜಾಗತಿಕ ಮಟ್ಟದಲ್ಲಿ ದೇಶದ ಮಾನವ ಅಭಿವೃದ್ದಿ ಸೂಚ್ಯಾಂಕ 139 ನೇ ಸ್ಥಾನದಲ್ಲಿದ್ದು ಭ್ರಷ್ಟಾಚಾರದ ಶ್ರೇಯಾಂಕದಲ್ಲಿ 85 ಇದ್ದದು 93 ಕ್ಕೆ ಹೆಚ್ಚಳವಾಗಿದೆ. ಅಭಿವೃದ್ದಿಗೆ ಸಂಶೋಧನೆಗಳು ಹೆಚ್ಚಾಗಬೇಕಾಗಿದೆ. ಇಸ್ರೇಲ್ ಈ ನಿಟ್ಟಿನಲ್ಲಿ ಮುಂದಿದ್ದು ಬಹುತೇಕ ಎಲ್ಲ ಹಂತದಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುತ್ತಿದೆ. ಮಾನವ ಅಭಿವೃದ್ದಿ ಸೂಚ್ಯಾಂಕ ಹೆಚ್ಚಿಸಲು ಆರೋಗ್ಯ, ಅಕ್ಷರ, ಪಾರದರ್ಶಕ ಆಡಳಿತ ಬಹಳ ಪ್ರಮುಖವಾಗಿರುತ್ತದೆ ಎಂದರು.
ಜಗಳೂರು ಶಾಸಕರಾದ ಬಿ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುರೇಶ್ ಬಿ. ಇಟ್ನಾಳ್, ರಾಷ್ಟ್ರೀಯ ಆರೋಗ್ಯ ಅಭಿಯಾನದದ ಯೋಜನಾ ನಿರ್ದೇಶಕರಾದ ಡಾ.ನವೀನ್ ಭಟ್ ಪೈ, ಮಾಜಿ ಶಾಸಕರಾದ ರಾಮಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಬೆಂಗಳೂರು ವಿಭಾಗದ ಉಪನಿರ್ದೇಶಕರು, ವಿಭಾಗೀಯ ಸಹ ನಿರ್ದೇಶಕರು ಹಾಗೂ ನೋಡೆಲ್ ಅಧಿಕಾರಿ ಡಾ ನಂದಾ ಕಾರ್ಯಕ್ರಮದ ಉಪನಿರ್ದೇಶಿಕಿ ಡಾ ಚಂದ್ರಿಕಾ.ಬಿ.ಆರ್ ಇನ್ನಿತರರು ಉಪಸ್ಥಿತರಿರುವರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಷಣ್ಮುಖಪ್ಪ ಸ್ವಾಗತಿಸಿದರು.
ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ಜಿಲ್ಲೆಗಳು, ಅತ್ಯುತ್ತಮವಾಗಿ ಕೆಲಸ ಮಾಡಿದ ಸಾರ್ವಜನಿಕ ಆಸ್ಪತ್ರೆಗಳಿಗೆ ರಾಜ್ಯ ಮಟ್ಟದ ಮಾನದಂಡವನ್ನಾಧರಿಸಿ ಪ್ರಶಸ್ತಿಯನ್ನು ನೀಡಲಾಯಿತು. ಕುಟುಂಬ ಕಲ್ಯಾಣ ಪದ್ದತಿ ಅಳವಡಿಕೆ ಬಗ್ಗೆ ಸೆಲ್ಪ್ ಕೇರ್ ಕಿಟ್ಗಳ ವಿತರಣೆ, ನವ ದಂಪತಿಗಳಿಗೆ ನಯಿ ಪೆಹಲೀ ಕಿಟ್ ವಿತರಣೆ ಮಾಡಲಾಯಿತು.