ಚಿತ್ರದುರ್ಗಜುಲೈ31:
ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ವಿವಿಧೆಡೆ ಡೆಂಗ್ಯೂ ಹಾಟ್‌ಸ್ಪಾಟ್ ಎಂದು ಗುರುತಿಸಲಾದ ಗ್ರಾಮ, ನಗರ ಪ್ರದೇಶಗಳಿಗೆ ಮಂಗಳವಾರ ರಾಜ್ಯ ಸರ್ವೇಕ್ಷಣಾ ಘಟಕ ಹಾಗೂ ಸಾಂಕ್ರಾಮಿಕ ರೋಗಗಳ ವಿಭಾಗದ ಉಪನಿರ್ದೇಶಕಿ ಹಾಗೂ ಚಿತ್ರದುರ್ಗ ಜಿಲ್ಲಾ ನೋಡಲ್ ಅಧಿಕಾರಿ ಡಾ.ಎಂ.ಆರ್.ಪದ್ಮಾ ಅವರು ಡೆಂಗ್ಯೂ ನಿಯಂತ್ರಣ ಪರಿಶೀಲನೆ ಭೇಟಿ ನಡೆಸಿದರು.
ಡೆಂಗ್ಯೂ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ವಿಶೇಷವಾಗಿ ಸೊಳ್ಳೆಗಳ ತಾಣ ನಾಶ ಪಡಿಸಲು ನಡೆಸುತ್ತಿರುವ ಲಾರ್ವಾ ಸಮೀಕ್ಷೆಗಳ ಗುಣಮಟ್ಟ ಪರಿಶೀಲಿಸಿ, ಸೂಕ್ತ ಮಾರ್ಗದರ್ಶನ ನೀಡಿದರು.

ಲಾರ್ವಾ ಸಾಂದ್ರತೆ ಕಡಿಮೆ ಮಾಡಲು ಅಂತರ್ ಇಲಾಖೆಗಳ ಸಮನ್ವಯ ಪಡೆದು ಡೆಂಗ್ಯೂ ಪ್ರಕರಣ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಜರುಗಿಸಿ ಎಂದು ಸೂಚನೆ ನೀಡಿದರು.
ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಕ್ಷಯ ರೋಗ ನಿರ್ಮೂಲನೆಗೆ ಮರಣ ಪ್ರಮಾಣ ಶೇ.8ರಷ್ಟು ಇರುತ್ತದೆ. ಶೀಘ್ರ ರೋಗಪತ್ತೆ ಹಚ್ಚಿ ತ್ವರಿತ ಚಿಕಿತ್ಸೆಗೆ ಕ್ರಮ ವಹಿಸಿ. ಡೆಂಗ್ಯೂ ನಿಯಂತ್ರಣಕ್ಕೆ ಜಾಗೃತಿಯೇ ಮದ್ದು. ಗುಣಾತ್ಮಕ ಲಾರ್ವಾ ಸಮೀಕ್ಷೆ ನಡೆಸಿ, ಸೊಳ್ಳೆ ತಾಣ ನಾಶ ಮಾಡಿ ಎಂದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಜಿಲ್ಲೆಯಲ್ಲಿ ಬಾಲಿಕಾ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಎಮ್.ಎಲ್.ಸಿ ಪ್ರಕರಣ ದಾಖಲಿಸಿ ವರದಿ ಸಲ್ಲಿಸಿ, ಆಗಸ್ಟ್ 01 ರಿಂದ ಒಂದು ವಾರ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಿ ತಾಯಿ ಮಕ್ಕಳ ಬಾಂದವ್ಯ ವೃದ್ಧಿಸಲು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಉಪಕೇಂದ್ರಗಳಲ್ಲಿ ಜಾಗೃತಿ ಮೂಡಿಸಿ, ಗರ್ಭಿಣಿ ಮಹಿಳೆಯರ ಶೀಘ್ರ ನೋಂದಾವಣೆಗಾಗಿ ಅರ್ಹ ದಂಪತಿಗಳ ಸಂಪರ್ಕ ಸಭೆ ಮಾಡಿ ಬೇಗನೇ ನೊಂದಾವಣಿಯ ಉಪಯೋಗ ತಿಳಿಸಿ ಎಂದರು.
ಸಭೆಯಲ್ಲಿ ರಾಜ್ಯ ಸರ್ವೇಕ್ಷಣಾ ಘಟಕದ ರೋಗಾಣು ತಜ್ಞ ಡಾ.ಬಿ.ಚಂದ್ರಶೇಖರ್, ಸಹಾಯಕ ಕೀಟ ಶಾಸ್ತçಜ್ಞೆ ಸುನಂದ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ರೇಖಾ, ಡಾ.ಕಾಶಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರಾಘವೇಂದ್ರ ಪ್ರಸಾದ್, ಡಾ.ವೆಂಕಟೇಶ್, ಡಾ.ಮಧುಕುಮಾರ್, ತಾಲ್ಲೂಕು ವ್ಯವಸ್ಥಾಪಕರಾದ ಮಹಮ್ಮದ್ ಅಲಿ, ಸಂತೋಷ, ಹಬೀಬ್, ಜಿಲ್ಲಾ ವ್ಯವಸ್ಥಾಪಕರಾದ ಪ್ರಫುಲ್ಲಾ, ಮೇಟಿ, ಕುಮಾರ್, ಅರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಇದ್ದರು.