Ad image

ಬಿತ್ತನೆಗಾಗಿ ಅಗತ್ಯ ಪ್ರಮಾಣದಲ್ಲಿ ಬೀಜ, ರಸಗೊಬ್ಬರ ದಾಸ್ತಾನು ಲಭ್ಯ: ಎಂ.ಎಸ್.ದಿವಾಕ

Vijayanagara Vani
ಬಿತ್ತನೆಗಾಗಿ ಅಗತ್ಯ ಪ್ರಮಾಣದಲ್ಲಿ ಬೀಜ, ರಸಗೊಬ್ಬರ ದಾಸ್ತಾನು ಲಭ್ಯ: ಎಂ.ಎಸ್.ದಿವಾಕ
ಹೊಸಪೇಟೆ (ವಿಜಯನಗರ) ಮೇ 30 : ಈಗಾಗಲೇ ಮುಂಗಾರು ಹಾಗೂ ಪೂರ್ವ ಮುಂಗಾರು ಮಳೆಗಳು ಆರಂಭವಾಗಿವೆ. ಹೀಗಾಗಿ ಬಿತ್ತನೆ ಮಾಡಲು ವಿಜಯನಗರ ಜಿಲ್ಲೆಯಲ್ಲಿ ರೈತರ ಅವಶ್ಯಕತೆಗೆ ತಕ್ಕಂತೆ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರದ ದಾಸ್ತಾನು ಲಭ್ಯವಿದ್ದು ರೈತರು ಆತಂಕಪಡಬಾರದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.
ಮೇ 30ರಂದು ಹೊಸಪೇಟೆ ನಗರದಲ್ಲಿ ಜಿಲ್ಲಾಡಳಿತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.
ವಿಜಯನಗರ ಜಿಲ್ಲೆಯಲ್ಲಿ ಮೇ 1ರಿಂದ ಮೇ 29ರವರೆಗೆ ವಿವಿಧ ತಾಲೂಕುಗಳಲ್ಲಿ 57 ವಾಡಿಕೆ ಮಳೆಗಿಂತ 100ರಷ್ಟು ಹೆಚ್ಚಿನ ಮಳೆ ಸುರಿದಿದೆ. ಹೊಸಪೇಟೆ ತಾಲೂಕಿನಲ್ಲಿ ವಾಡಿಕೆ ಮಳೆ 42.7 ಮಿಮಿ ಇದ್ದು ವಾಸ್ತವಿಕವಾಗಿ 132.7 ಮಿಮಿ ಸುರಿದಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ವಾಡಿಕೆ ಮಳೆ 53.6 ಮಿಮಿ ಇದ್ದು ವಾಸ್ತವಿಕವಾಗಿ 100.0 ಮಿಮಿ ಸುರಿದಿದೆ. ಹರಪನಹಳ್ಳಿ ತಾಲೂಕಿನಲ್ಲಿ ವಾಡಿಕೆ ಮಳೆ 79.8 ಮಿಮಿ ಇದ್ದು ವಾಸ್ತವಿಕವಾಗಿ 97.8 ಮಿಮಿ ಸುರಿದಿದೆ. ಕೊಟ್ಟೂರ ತಾಲೂಕಿನಲ್ಲಿ ವಾಡಿಕೆ ಮಳೆ 50.8 ಮಿಮಿ ಇದ್ದು ವಾಸ್ತವಿಕವಾಗಿ 133.8 ಮಿಮಿ ಸುರಿದಿದೆ. ಕೂಡ್ಲಿಗಿ ತಾಲೂಕಿನಲ್ಲಿ ವಾಡಿಕೆ ಮಳೆ 34.5 ಮಿಮಿ ಇದ್ದು ವಾಸ್ತವಿಕವಾಗಿ 109.1 ಮಿಮಿ ಮಳೆ ಸುರಿದಿದೆ. ಹಡಗಲಿ ತಾಲೂಕಿನಲ್ಲಿ ಮಾತ್ರ ವಾಸ್ತವಿಕವಾಗಿ 50.9 ಮಿಮಿ ಸುರಿದಿದೆ.
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ನವಣೆ, ಹೆಸರು, ಅಲಸಂದಿ, ಸೋಯಾಅವರೆ, ಸೂರ್ಯಕಾಂತಿ, ನೆಲಗಡಲೆ ಸೇರಿ ರಿಯಾಯಿತಿಯಲ್ಲಿ ಬಿತ್ತನೆ ಬೀಜ ವಿತರಣೆಗೆ ಮೇ 30ರವರೆಗೆ 3967.55 ಕ್ವಿಂಟಲ್‌ನಷ್ಟು ಬಿತ್ತನೆ ಬೀಜ ಲಭ್ಯವಿದ್ದು, ಈ ಪೈಕಿ 1159.93 ಕ್ವಿಂಟಲ್ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಸದ್ಯ 2807.62 ಕ್ವಿಂಟಲ್ ನಷ್ಟು ಬಿತ್ತನೆ ಬೀಜ ದಾಸ್ತಾನು ಇರುತ್ತದೆ.
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ ಯೂರಿಯಾ 13,023.6 ಮೆ.ಟನ್, ಡಿಎಪಿ 2644.0 ಮೆ.ಟನ್, ಎಂಓಪಿ 709.7, ಎನ್‌ಪಿಕೆ 12,368.9 ಮೆ.ಟನ್, ಎಸ್‌ಎಸ್‌ಪಿ 147.4 ಮೆ.ಟನ್ ರಷ್ಟು ವಿವಿಧ ರಸಗೊಬ್ಬರ ಲಭ್ಯ ದಾಸ್ತಾನು ಇರುತ್ತದೆ. ಯೂರಿಯಾ, ಡಿಎಪಿ, ಎಂಒಪಿ, ಎನ್‌ಪಿಕೆ ಮತ್ತು ಎಸ್‌ಎಸ್‌ಪಿ ಸೇರಿ ಒಟ್ಟು 103360.0 ಮೆ.ಟನ್‌ದಷ್ಟು ಮುಂಗಾರು ಬೇಡಿಕೆ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಕುಡಿವ ನೀರಿನ ಪೂರೈಕೆ: ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಕೆಲವು ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಅಗತ್ಯವಿರುವ ಕಡೆಗೆ ಮಾತ್ರ ಖಾಸಗಿ ಬೋರವೆಲ್‌ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮಳೆ ಕೊರತೆ ಕಾಣಿಸಿಕೊಂಡಲ್ಲಿ ಸಮಸ್ಯೆ ಎದುರಿಸಬಹುದಾದ ಗ್ರಾಮಗಳು ಮತ್ತು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾರ್ಡಗಳಲ್ಲಿ ಒಪ್ಪಂದಕ್ಕಾಗಿ ಹೆಚ್ಚಿನ ಇಳುವರಿ ನೀಡುವ ಬೋರವೆಲ್‌ಗಳನ್ನು ಗುರುತಿಸುವ ಕಾರ್ಯ ಮಾಡಿದ್ದು ಕೆಲವು ಖಾಸಗಿ ಬೋರವೆಲ್‌ಗಳ ಮಾಲೀಕರೊಂದಿಗೆ ಮುಂಗಡ ಒಪ್ಪಂದ ಮಾಡಿಕೊಂಡು ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಇದ್ದರು.

Share This Article
error: Content is protected !!
";