ಸಿರುಗುಪ್ಪ.ಜೂ.11:- ತಾಲೂಕಿನ ಬಲಕುಂದಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ರೂ.88ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿ 2024ರ ಫೆಬ್ರವರಿಯಲ್ಲಿ ಈ ಶಾಲೆಯನ್ನು ಉದ್ಘಾಟನೆ ಮಾಡಲಾಗಿದ್ದು, ಈಗಾಗಲೇ ಈ ಶಾಲೆಯ ಮೇಲ್ಛಾವಣಿಯಲ್ಲಿ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಇರುವುದರಿಂದ ಮೇಲ್ಛಾವಣಿಯಲ್ಲಿ ಸಂಗ್ರಹವಾಗುವ ಮಳೆನೀರು ಕಿಟಕಿಗಳ ಮೂಲಕ ಕೊಠಡಿಗಳಿಗೆ ಹರಿದು ಬರುತ್ತಿದ್ದು, ಕೊಠಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅನಾನುಕೂಲ ಉಂಟಾಗಿದೆ. ಮಳೆ ಬಂದರೆ ಇಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಕಟಪಡುವ ಪರಿಸ್ಥಿತಿ ಇರುತ್ತದೆ.
ಈ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶದಿಂದ ಸರ್ಕಾರ ಕಲ್ಯಾಣ ಕರ್ನಾಟಕ ಅಬಿವೃದ್ಧಿ ಮಂಡಳಿಯಿAದ ರೂ.88ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ ನೆಲಮಟ್ಟದಲ್ಲಿ 4 ಕೊಠಡಿ ಹಾಗೂ ಮೇಲ್ಮಹಡಿಯಲ್ಲಿ 4 ಕೊಠಡಿಗಳು ಒಟ್ಟು 8 ಕೊಠಡಿಗಳು ನಿರ್ಮಾಣವಾಗಿದ್ದು, ಇದರಲ್ಲಿ ಪೂರ್ವಬಾಗಿಲು ಹೊಂದಿರುವ 2 ಕೊಠಡಿಗಳ ಮೇಲ್ಮಹಡಿಯಲ್ಲಿ ಮಳೆನೀರು ಒಂದು ಕಡೆ ಹರಿದು ಹೋಗಲು ಫ್ಲೋರಿಂಗ್ ಹಾಕದೇ, ಸುತ್ತಲು ಗೋಡೆ ಕಟ್ಟದೆ, ನೀರು ಹೋಗಲು ಡೋಣಿ ಅಳವಡಿಸದೇ ಇರುವುದರಿಂದ ಛಾವಣಿಯ ನೀರು ಗೋಡೆಗಳ ಮೂಲಕ ಹರಿದುಬಂದು ಕಿಟಕಿಗಳಿಂದ ಭೋಧನ ಕೊಠಡಿಗಳಲ್ಲಿ ಹರಿದು ಬರುತ್ತಿದ್ದು, ಕೊಠಡಿಯಲ್ಲಿಯೇ ಮಳೆನೀರು ಸಂಗ್ರಹವಾಗುತ್ತಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಕಿರಿಕಿರಿ ಉಂಟು ಮಾಡಿದೆ.
ಕಳೆದ 2-3 ದಿನಗಳಿಂದ ಬಲಕುಂದಿ ಭಾಗದಲ್ಲಿ ಉತ್ತಮವಾದ ಮಳೆ ಸುರಿಯುತ್ತಿದ್ದು, ಶಾಲೆಯ ಮೇಲ್ಛಾವಣಿಯಲ್ಲಿ ಮಳೆನೀರು ಗೋಡೆಯ ಮೂಲಕ ನೆಲದ ಕಡೆ ಹರಿಯುವಾಗ ಸಬ್ಜಗಳಿಲ್ಲದ ಕಿಟಕಿಗಳ ಮೂಲಕ ತರಗತಿ ಕೊಠಡಿಗೆ ಹರಿದು ಬರುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ.
ಮಳೆನೀರು ಕ್ಲಾಸ್‌ರೂಂಗೆ ಬರುತ್ತಿದ್ದು, ನಮ್ಮ ಪಾಠ ಪ್ರವಚನಕ್ಕೆ ಅನಾನುಕೂಲವಾಗಿದೆ ಆದ್ದರಿಂದ ಮೇಲ್ಛಾವಣಿಯ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಕ್ಲಾಸ್‌ರೂಂಗೆ ಮಳೆನೀರು ಬರುತ್ತಿರುವ ಬಗ್ಗೆ ನಮ್ಮ ಮೇಲಾಧಿಕಾರಿಗಳು ಹಾಗೂ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ, ಸದ್ಯ ಮಳೆನೀರು ನಿಲ್ಲದಂತೆ ನೀರನ್ನು ಹೊರ ಹಾಕಿದ್ದೇವೆ, ಮಳೆನೀರು ಕ್ಲಾಸ್‌ರೂಂಗೆ ಬರುತ್ತಿರುವುದು ನಮಗೂ ಬೇಸರ ತರಿಸಿದೆ ಎಂದು ಮುಖ್ಯಗುರು ಸೋಮಪ್ಪ ತಿಳಿಸಿದ್ದಾರೆ.
ಬಲಕುಂದಿ ಶಾಲೆಯಲ್ಲಿ ಕ್ಲಾಸ್‌ರೂಂಗೆ ಮಳೆನೀರು ಬರುವ ಬಗ್ಗೆ ಮಾಹಿತಿ ಬಂದಿದೆ, ಈ ಕಾಮಗಾರಿಯನ್ನು ಅನುಷ್ಠಾನ ಮಾಡಿದ ಜಿ.ಪಂ. ಇಂಜಿನೀಯರಿoಗ್ ಉಪ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಬಿ.ಇ.ಒ. ಹೆಚ್.ಗುರಪ್ಪ ತಿಳಿಸಿದ್ದಾರೆ.