ತೆಂಗುಬೆಳೆಯಲ್ಲಿ ರೋಗ ಕೀಟ ಬಾದೆ : ಪೋಷಕಾಂಶ ನೀಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಲಹೆ

Vijayanagara Vani
ತೆಂಗುಬೆಳೆಯಲ್ಲಿ ರೋಗ ಕೀಟ ಬಾದೆ : ಪೋಷಕಾಂಶ ನೀಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಲಹೆ
ಚಿತ್ರದುರ್ಗಆಗಸ್ಟ್.01:
ಜಿಲ್ಲೆಯ ತೆಂಗಿನ ಬೆಳೆಗಳಿಗೆ ರೋಗ ಮತ್ತು ಕೀಟದ ಬಾದೆ ಹೆಚ್ಚಾಗಿದೆ. ಇದರಿಂದ ಇಳುವರಿ ಕುಂಠಿತವಾಗುವ ಆತಂಕ ರೈತರಲ್ಲಿ ಕಾಡುತ್ತಿದ್ದು, ತೆಂಗಿನ ಗಿಡಗಳಿಗೆ ಸೂಕ್ತ ರೀತಿಯ ಪೋಷಕಾಂಶಗಳನ್ನು ನೀಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಅಧಿಕ ಇಳುವರಿ ಪಡೆಯುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣ ಬಸಪ್ಪ ಬೋಗಿ ರೈತರಿಗೆ ಸಲಹೆ ನೀಡಿದ್ದಾರೆ.
ತೆಂಗಿನ ಗಿಡಗಳಿಗೆ ವರ್ಷವಿಡೀ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ತೆಂಗು ನಾಟಿ ಮಾಡಿದ ಮೊದಲನೇ ವರ್ಷದಿಂದ ಪೋಷಕಾಂಶಗಳನ್ನು ಗಿಡಗಳಿಗೆ ಕೊಡುವುದರಿಂದ ಸರ್ವತೋಮುಖ ಬೆಳವಣಿಗೆ, ಬೇಗನೆ ಹೂ ಬಿಡುವುದು ಮತ್ತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಸಂಶೋಧನೆ ಆಧಾರದ ಮೇಲೆ ಪೊಟಾಷ್ ರಾಸಾಯನಿಕ ತೆಂಗಿನ ಕಾಯಿಗಳ ಅಭಿವೃದ್ದಿಯಲ್ಲಿ ಮತ್ತು ಗಿಡದಲ್ಲಿ ರೋಗ ಮತ್ತು ಕೀಟಭಾದೆ ಪ್ರತಿರೋಧಕ ಶಕ್ತಿಯಲ್ಲಿ ಬೆಳಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆದ್ದರಿಂದ ಗಿಡ ನೆಟ್ಟ ಎರಡನೇ ವರ್ಷದಿಂದ ಮುಂಗಾರು ಅವಧಿಯಲ್ಲಿ ಪ್ರತಿ ಗಿಡಕ್ಕೆ 135.ಗ್ರಾಂ, ಮೂರನೇ ವರ್ಷದಲ್ಲಿ 270.ಗ್ರಾಂ ಹಾಗೂ ನಾಲ್ಕು ಮತ್ತು ನಂತರದ ವರ್ಷದಲ್ಲಿ 400.ಗ್ರಾಂ ಪೊಟಾಷ್‌ಅನ್ನು ಗಿಡವೊಂದಕ್ಕೆ ನೀಡಬೇಕು. ಹಿಂಗಾರು ಅವಧಿಯಲ್ಲಿ ಪೊಟಾಷ್‌ನ್ನು ಮೊದಲನೇ ವರ್ಷಕ್ಕೆ 135.ಗ್ರಾಂ, ಎರಡನೇ ವರ್ಷಕ್ಕೆ 270.ಗ್ರಾಂ, ಮೂರನೇ ವರ್ಷಕ್ಕೆ 540.ಗ್ರಾಂ, ನಾಲ್ಕು ಮತ್ತು ನಂತರದ ವರ್ಷದಲ್ಲಿ 800.ಗ್ರಾಂ. ಪ್ರತಿ ಗಿಡಕ್ಕೆ ನೀಡಬೇಕು. ಇದೇ ಮಾದರಿಯಲ್ಲಿ ಮುಂಗಾರು ಅವಧಿಯಲ್ಲಿ ಎರಡನೇ ವರ್ಷಕ್ಕೆ ಸಾರಜನಕ 50.ಗ್ರಾಂ, ರಂಜಕ 40.ಗ್ರಾಂ, ಮೂರನೇ ವರ್ಷ ಸಾರಜನಕ 110.ಗ್ರಾಂ, ರಂಜಕ 80.ಗ್ರಾಂ, ನಾಲ್ಕು ಮತ್ತು ನಂತರದ ವರ್ಷಗಳಲ್ಲಿ ಸಾರಜನಕ 170.ಗ್ರಾಂ, ರಂಜಕ 120.ಗ್ರಾಂ ನೀಡಬೇಕು. ಇದರ ಜೊತೆಗೆ ಹಿಂಗಾರು ಅವಧಿಯಲ್ಲಿ ಮೊದಲನೇ ವರ್ಷ ಸಾರಜನಕ 50.ಗ್ರಾಂ, ರಂಜಕ 40.ಗ್ರಾಂ, ಎರಡನೇ ವರ್ಷ ಸಾರಜನಕ 110.ಗ್ರಾಂ, ರಂಜಕ 80.ಗ್ರಾಂ, ಮೂರನೇ ವರ್ಷ ಸಾರಜನಕ 220.ಗ್ರಾಂ, ರಂಜಕ 160.ಗ್ರಾಂ, ನಾಲ್ಕು ಹಾಗೂ ನಂತರದ ವರ್ಷದಲ್ಲಿ ಸಾರಜನಕ 330.ಗ್ರಾಂ, ರಂಜಕ 200.ಗ್ರಾಂ ಪ್ರತಿ ಗಿಡಕ್ಕೆ ನೀಡಬೇಕು. ಇದರೊಂದಿಗೆ 100.ಗ್ರಾಂ ಬೋರನ್, 500.ಗ್ರಾಂ ಮೆಘ್ನೇಶಿಯಂ ಸಲ್ಪೇಟ್ ಹಾಗೂ 250.ಗ್ರಾಂ ಜಿಂಕ್ ಸಲ್ಪೇಟ್‌ನ್ನು ಮಣ್ಣಿಗೆ ಸೇರಿಸುವುದರಿಂದ ಉತ್ತಮ ಇಳುವರಿ ಪಡೆಯಬಹುದು.
ಪ್ರತಿ ಗಿಡಕ್ಕೆ ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರವನ್ನು 10 ಕೆ.ಜಿ, ಕಾಂಪೋಷ್ಟ್ ಅಥವಾ ಸಗಣಿ ಗೊಬ್ಬರವನ್ನು 50 ಕೆ.ಜಿ ಪ್ರತಿ ವರ್ಷ ಹಾಕಬೇಕು. ಹಸಿರೆಲೆ ಗೊಬ್ಬರಗಳ ಬೆಳೆಗಳಾದ ಸೆಣಬು, ಡಯಾಂಚ್, ಹಲಸಂದಿ ಮತ್ತು ಹುರಳಿ ಮುಂತಾದವುಗಳನ್ನು ಮಳೆಗಾಲದ ಪ್ರಾರಂಭ ಹಂತದಲ್ಲಿ ತೋಟಗಳಲ್ಲಿ ಬಿತ್ತನೆ ಮಾಡಿ, ಹೂ ಬಿಡುವ ಮುಂಚೆ ಉಳುಮೆ ಮಾಡಿ ಮಣ್ಣಿಗೆ ಸೇರಿಸುವುದರಿಂದ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ಈ ನಿರ್ವಹಣಾ ಕ್ರಮಗಳನ್ನು ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆ ಕಛೇರಿಯನ್ನು ಸಂಪರ್ಕಿಸುವoತೆ ಉಪನಿರ್ದೇಶಕ ಶರಣ ಬಸಪ್ಪ ಬೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!