ಬೆಳಗಿನ ಜಾವ ಮೂರು ಇಪ್ಪತ್ತಕ್ಕೆ ಮಗಳ ಕರೆಗೆ ಎದ್ದು ಟಿವಿ ಆನ್ ಮಾಡಿದಾಗ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಗಗನಯಾತ್ರಿಗಳನ್ನು ಹೊತ್ತು ಬರುತ್ತಿದ್ದ ಸ್ಟಾರ್ ಲೈನರ್ ಎಕ್ಸ್ ಕ್ಯಾಪ್ಸುಲ್ ಗಂಟೆಗೆ 27500 ಕಿಲೋಮಿಟರಿಗೂ ಹೆಚ್ಚು ವೇಗದಲ್ಲಿ ಭೂಮಿಯತ್ತ ಧಾವಿಸಿ ಬರುತ್ತಿತ್ತು. ಇನ್ನೇನು ನೌಕೆ ಅಮೇರಿಕಾದ ಅಟ್ಲಾಂಟಿಕ್ ಸಾಗರದ ಫ್ಲೋರಿಡಾದ ಬಳಿಯ ಕರಾವಳಿ ತೀರಕ್ಕೆ ಹತ್ತಿರದಲ್ಲಿ ಬಂದು ಸಾಗರದಲ್ಲಿ ತಳ ಊರುವ ಹೊತ್ತಿನಲ್ಲಿ ಮನಸ್ಸು ಈ ಹಿಂದಿನ ಕಹಿ ಘಟನೆಗಳನ್ನು ನೆನಪಿಸಿಕೊಂಡು ಎರಡೂ ಕೈಗಳು ತನ್ನಿಂತಾನೇ ಬೆಸೆದುಕೊಂಡು ಏನೂ ಆಗದೆ ಸುರಕ್ಷಿತವಾಗಿ ನೌಕೆ ಸಾಗರದ ಮೇಲ್ಮೈ ತಲುಪಲಿ ಎಂದು ಆಶಿಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದವು. ಮಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇಪ್ಪತ್ತೆರಡು ವರ್ಷಗಳ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ತಂತ್ರಜ್ಞಾನಗಳು ಇದ್ದು ಯಾವುದೇ ರೀತಿಯ ಅವಘಡಕ್ಕೆ ಅವಕಾಶ ಇಲ್ಲ ಎಂಬುದು ಖಚಿತವಾಗಿದ್ದರೂ, ಆಕಸ್ಮಿಕವಾಗಿ ಏನಾದರೂ ತಾಂತ್ರಿಕ ದೋಷಗಳು ಕಾಣಬಾರದು ಎಂಬ ಆಶಯ ಮಾತ್ರ ಬಲವಾಗಿತ್ತು. ಜಗತ್ತಿನ ಎಲ್ಲ ಜನರ ಹಾರೈಕೆಯಂತೆ ಅಟ್ಲಾಂಟಿಕ್ ಸಾಗರದಲ್ಲಿ ಬೃಹದಾಕಾರದ ಪ್ಯಾರಾಚೂಟ್‌ಗಳ ಸಹಾಯದಿಂದ ನೌಕೆ ಸಲೀಸಾಗಿ ಕೆಳಗಿಳಿಯಿತು.ಈ ಜಾಗತಿಕ ವಿದ್ಯಮಾನವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ ವೀಕ್ಷಕರಲ್ಲಿ ಅಪರಿಮಿತ ಸಂತಸವನ್ನು ಹುಟ್ಟು ಹಾಕಿ ಚಪ್ಪಾಳೆ ಮತ್ತು ಕೇಕೆಗಳ ಸಂಭ್ರಮ ಮುಗಿಲು ಮುಟ್ಟಿದರೆ ಮುಂದಿನ ಒಂದು ಗಂಟೆಯ ಕಾರ್ಯಾಚರಣೆ ಎದೆ ಬಡಿತವನ್ನು ಹೆಚ್ಚಿಸುವಂತಿತ್ತು.
ಸುಮಾರು 17 ಗಂಟೆಗಳ ಸತತ ಇಳಿಮುಖ ಪಯಣದ ನಂತರ ಅಂತರಿಕ್ಷ ನೌಕೆ ಸುರಕ್ಷಿತವಾಗಿ ಸಾಗರದ ಮೇಲ್ಮೈಯನ್ನು ಸ್ಪರ್ಶ ಮಾಡಿತು, ಆದರೆ ನಂತರದ ಕಾರ್ಯ ಚಟುವಟಿಕೆಗಳು ಮತ್ತಷ್ಟು ಹೆಚ್ಚಿದ್ದವು. ನೌಕೆ ದಡ ಸೇರುವುದನ್ನು ಕಾಯುತ್ತಿದ್ದ ನಾಸಾ ಬಾಹ್ಯಾಕಾಶ ಸಂಸ್ಥೆಯ ನುರಿತ ತಂತ್ರಜ್ಞರು ಮುಂದಿನ ಕೆಲವೇ ನಿಮಿಷಗಳಲ್ಲಿ ನೌಕೆಯನ್ನು ಸಮೀಪಿಸಿ ಅದರ ತಾಪಮಾನ ಮತ್ತು ಇತರ ಸುರಕ್ಷತಾ ಪರೀಕ್ಷೆಗಳನ್ನು ಮಾಡಿ ಪೂರೈಸಿ ನೌಕೆ ಎಲ್ಲ ರೀತಿಯಲ್ಲೂ ಸುರಕ್ಷಿತವಾಗಿದೆ ಎಂಬುದನ್ನು ಖಚಿತ ಪಡಿಸಿದರು. ನಂತರ ನೌಕೆಗೆ ಕುಣಿಕೆಯನ್ನು ಹಾಕಿ ತುಸು ದೂರದಲ್ಲಿ ಇದ್ದ ಬೃಹದಾಕಾರದ ಹಡಗಿನತ್ತ ಕೊಂಡೊಯ್ದು ಆ ಹಡಗಿನಲ್ಲಿ ನೌಕೆಯನ್ನು ಸೇರಿಸಲು ಯಶಸ್ವಿಯಾದರು. ನಂತರ ಮತ್ತೊಂದು ಬಾರಿ ಸ್ಪೇಸ್ ಶಿಪ್ ನ ಬಾಗಿಲನ್ನು ತೆರೆಯುವ ಮುನ್ನ ಪರೀಕ್ಷೆಯನ್ನು ಮಾಡಿ ತೆರೆದ ನಂತರ ಒಬ್ಬೊಬ್ಬರಾಗಿ ಗಗನಯಾನಿಗಳನ್ನು ಹೊರ ತಂದು ಸ್ಟ್ರೈಚರ್ ನ ಮೇಲೆ ಮಲಗಿಸಿದಾಗ ಅವರು ಎಲ್ಲರತ್ತ ಕೈಬೀಸಿ ಸಂತಸದ ನಗೆಯನ್ನು ಹೊರ ಚಿಮ್ಮಿದಾಗ ಇದನ್ನು ವೀಕ್ಷಿಸುತ್ತಿದ್ದವರ ಕಣ್ಣಲ್ಲಿ ಆನಂದದ ಕಣ್ಣೀರು ಹೊರಹೊಮ್ಮಿದ್ದಂತೂ ನಿಜ.
ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರ ತಂದೆ ಗುಜರಾತ್ ನ ಮೆಹಸಾನಾ ಜಿಲ್ಲೆಯವರು. ಅಮೆರಿಕಾದ ಒಹಾಯೋ ರಾಜ್ಯದಲ್ಲಿ ನೆಲೆಸಿರುವ ಅವರಿಗೆ 1965 ಸೆಪ್ಟೆಂಬರ್ 19 ರಂದು ಸುನೀತಾ ವಿಲಿಯಮ್ಸ್ ಜನಿಸಿದಳು. ತನ್ನ ಸಾಂಪ್ರದಾಯಿಕ ಶಿಕ್ಷಣವನ್ನು ಪೂರೈಸಿದ ಸುನಿತಾ ಅಮೆರಿಕಾದ ನೌಕಾಪಡೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಮುಂದೆ 1998ರಲ್ಲಿ ನಾಸಾದ ಗಗನಯಾನಿಯಾಗಿ ಆಕೆ ಆಯ್ಕೆಯಾದಳು. ಹಲವಾರು ವರ್ಷಗಳ ಸತತ ತರಬೇತಿಗಳ ನಂತರ ಮೊದಲ ಬಾರಿ 2007ರಲ್ಲಿ ಆಕೆ ನಾಸಾದ ಗಗನಯಾತ್ರಿಯಾಗಿ ಅಂತರಿಕ್ಷಯಾನ ಮಾಡಿದ್ದಳು. 2012ರಲ್ಲಿ ಎರಡನೇ ಬಾರಿ ಬಾಹ್ಯಾಕಾಶ ಯಾನವನ್ನು ಮಾಡಿ ಅತಿ ಹೆಚ್ಚು ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದ ಸುನೀತಾ ವಿಲಿಯಂ ಮೊದಲ ಬಾರಿ 2007ರಲ್ಲಿ ನಾಲ್ಕು ಸಲ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡರೆ, ಎರಡನೇ ಬಾರಿ ಮೂರು ಸಲ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡಿದ್ದರು. ಮೊದಲ ಎರಡು ಅವಧಿಯಲ್ಲಿ ಅವರು ಒಟ್ಟು 322 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿದ್ದಾರೆ.ಇದೀಗ ಆಕೆ ಅತ್ಯಂತ ಅನುಭವಿ ಮಹಿಳಾ ಗಗನಯಾನಿ.
ಈ ಹಿಂದೆ ಬಾಹ್ಯಾಕಾಶಯಾನಕ್ಕೆ ಬಳಸುತ್ತಿದ್ದ ಗಗನನೌಕೆಗೆ ಪರ್ಯಾಯವಾಗಿ ಇದೀಗ ಬೋಯಿಂಗ್ ಸ್ಟಾರ್ ಲೈನರ್ ನವರ ಸ್ಪೇಸ್ ಕ್ಯಾಪ್ಸುಲ್ನಲ್ಲಿ ಒಂದು ವಾರ ಕಾಲದ ಕಾರ್ಯನಿಮಿತ್ತ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 2024ರ ಜೂನ್ 5ರಂದು ತನ್ನ ಸಹೋದ್ಯೋಗಿ ಬುಚ್ ವಿಲ್ಮೋರ್ ಅವರೊಂದಿಗೆ ಪಯಣಿಸಿದ್ದ ಸುನಿತಾ 14ನೇ ತಾರೀಕಿನಂದು ಅದೇ ಸ್ಪೇಸ್ ಕ್ಯಾಪ್ಸೂಲ್ ನಲ್ಲಿ ಮರಳಿ ಬರಬೇಕಿತ್ತು…. ಆದರೆ ಕಾರಣಾಂತರಗಳಿಂದ ಅವರ ಪಯಣ ಸಾಧ್ಯವಾಗದೆ ಇಬ್ಬರೂ ಗಗನಯಾನಿಗಳು ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಈ ಹಿಂದೆ ಸ್ಟಾರ್ ಲೈನರ್ 2019 ರಲ್ಲಿ ತನ್ನ( ಸ್ಪೇಸ್ ಕ್ಯಾಪ್ಸುಲ್) ಬಾಹ್ಯಾಕಾಶಕೋಶವನ್ನು ಮಾನವರಹಿತವಾಗಿ ಉಡಾಯಿಸಿದ್ದು ಅದು ಕಕ್ಷೆಗೆ ಸೇರಲು ಯಶಸ್ವಿಯಾಗಿದ್ದರೂ ಕೂಡ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿರಲಿಲ್ಲ. ಮತ್ತೆ 2022 ರಲ್ಲಿ ಮತ್ತೊಮ್ಮೆ ಬಾಹ್ಯಾಕಾಶಯಾನ ಪರೀಕ್ಷೆ ನಡೆಸಿದಾಗ ಅದು ಯಶಸ್ವಿಯಾಗಿದ್ದರೂ ಹಿಂದಿರುಗಿದ ಬಾಹ್ಯಾಕಾಶಕೋಶ (ಸ್ಪೇಸ್ ಕ್ಯಾಪ್ಸುಲ್ನಲ್ಲಿ) ದಲ್ಲಿ ಹಲವಾರು ದೋಷಗಳಿದ್ದುದು ಪತ್ತೆಯಾಗಿತ್ತು.
ಇದೀಗ ಮೂರನೇ ಬಾರಿ ಅಮೆರಿಕದ ನಾಸಾ ಗಗನ ಯಾನ ಸಂಸ್ಥೆ ಮತ್ತು ಮತ್ತು ಬೋಯಿಂಗ್ ಸ್ಟಾರ್ ಲೈನರಗಳು ಜಂಟಿಯಾಗಿ ಜೂನ್ 5ರಂದು ಮೊದಲ ಮಾನವಸಹಿತ ಬಾಹ್ಯಾಕಾಶ ಪಯಣಕ್ಕೆ ನನ್ನದ್ದವಾಗಿರುವ ಸ್ಪೇಸ್ ಕ್ಯಾಪ್ಸುಲನ್ನು ಪರೀಕ್ಷಿಸುವ ಸಲುವಾಗಿ ಅಮೆರಿಕಾದ ಫ್ಲೋರಿಡಾದಿಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು 400 ಕಿಲೋಮೀಟರ್ ದೂರದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ದಿದ್ದವು.
ಪರಿಸ್ಥಿತಿ ಹೀಗೆಯೇ ಮುಂದುವರೆದು ಸುನಿತಾ ಮತ್ತು ವಿಲ್ಮೋರ್ ಹಲವಷ್ಟು ಮನೋದೈಹಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಸಾಕಷ್ಟು ವಿಕಿರಣಗಳಿಗೆ ಆಕೆ ಮತ್ತು ಆಕೆಯ ಸಹೋದ್ಯೋಗಿ ತೆರೆದುಕೊಳ್ಳುವುದರಿಂದ ವಿಕಿರಣ ಸಂಬಂಧಿ ರೋಗಗಳಿಗೆ ಒಳಗಾಗುವ ಅಪಾಯ ಇರುತ್ತದೆ. ಶೂನ್ಯ ಗುರುತ್ವಾಕರ್ಷಣೆ ಇರುವ ಬಾಹ್ಯಾಕಾಶದಲ್ಲಿ ಮೂಳೆಯ ಸಾಂದ್ರತೆ ಕಡಿಮೆಯಾಗುವ ಮಾಂಸ ಖಂಡಗಳು ಕ್ಷೀಣಿಸುವ ಅಪಾಯ ಎದುರಾಗಬಹುದು. ಇದರ ಜೊತೆಗೆ ಮಾನಸಿಕವಾಗಿಯೂ ಕುಗ್ಗಬಹುದಾದ ಸಂಭವನೀಯತೆಗಳು ಅಧಿಕ ಎಂಬುದು ವಿಜ್ಞಾನಿಗಳ ಮತ್ತು ಬಾಹ್ಯಾಕಾಶ ತಂತ್ರಜ್ಞಾನಿಗಳ ಆತಂಕವಾಗಿತ್ತು.
ಆಶಾದಾಯಕ ಸಂಗತಿ ಎಂದರೆ ಗಗನಯಾತ್ರಿಗಳು ಒಮ್ಮೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋದರೆ ಆರು ತಿಂಗಳುಗಳ ಕಾಲ ಅಲ್ಲಿಯೇ ಉಳಿಯಬೇಕಾಗುತ್ತದೆ… ಕೆಲವೊಮ್ಮೆ ಒಂದು ವರ್ಷವೂ ಆಗಬಹುದು. ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆಗಳನ್ನು ಬಾಹ್ಯಾಕಾಶಯಾನಿಗಳು ಮಾಡಿಕೊಂಡಿರುತ್ತಾರೆ.
ಏನೇ ಆದರೂ ಅನುಭವಿ ಗಗನಯಾನಿಗಳಾಗಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳಿ ಬರಲಿ ಎಂಬುದು ಎಲ್ಲರ ಆಶಯವಾಗಿತ್ತು.
ಇಲ್ಲಿಂದ ಸುಮಾರು ಎಂಟು ದಿನಗಳ ಕಾಲಕ್ಕೆ ಮಾತ್ರ ತೆರಳಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್
ವಿಲ್ಮೋರ್ ಸುಮಾರು 287 ದಿನಗಳ ಕಾಲ ಅಂತರಿಕ್ಷದಲ್ಲಿ ಉಳಿಯುವಂತಾಗಿದ್ದು ಎಲ್ಲರ ಭರವಸೆ ಉಡುಗಿತ್ತು. ಅತಿ ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಗಳನ್ನು ನಿರಂತರವಾಗಿ ಗುಳಿಗೆಯ ರೂಪದಲ್ಲಿ ಸೇವಿಸಿರುವುದರ ಪರಿಣಾಮ ಕೂಡ ಗಂಭೀರವಾಗಿರುತ್ತದೆ. ಇದರ ಜೊತೆಗೆ ಮಾನಸಿಕ ಒತ್ತಡವು ಹೆಚ್ಚಾಗಿ ಭೂಮಿಗೆ ಬಂದ ಮೇಲೂ ಕೂಡ ಅವರಲ್ಲಿ ಮಾನಸಿಕ ಅಸಮತೋಲನ ಉಂಟಾಗಿ
ಅವರು ಮತ್ತೆ ಒಳ್ಳೆಯ ಆರೋಗ್ಯ ಸ್ಥಿತಿಯನ್ನು ಗಳಿಸುವುದರಲ್ಲಿ ಏಳೆಂಟು ತಿಂಗಳುಗಳೇ ತಗಲಬಹುದು.
ಇಷ್ಟೆಲ್ಲಾ ಸಂಕೀರ್ಣತೆಗಳನ್ನು ಹೊಂದಿದ್ದರು ಕೂಡ ಸುರಕ್ಷಿತವಾಗಿ ಗಗನಗರ್ಭದಿಂದ ಭೂಮಿ ತಾಯಿಯ ಮಡಿಲಿಗೆ ಬಂದು ನಮ್ಮೆಲ್ಲರಲ್ಲೂ ಸಂತಸವನ್ನು ಉಂಟು ಮಾಡಿರುವ ಸುನಿತಾ ವಿಲಿಯಮ್ಸಗೆ ನಾವೆಲ್ಲರೂ ಒಕ್ಕೊರಲಿನಿಂದ ಹೇಳೋಣ
ಹಾರ್ಟಿ ವೆಲ್ಕಮ್ ಸುನಿತಾ
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್