ಸಮಾಜದ ಶುದ್ಧಿ ಎಂದರೆ ವ್ಯಕ್ತಿಯ ಅಂತರoಗ ಮತ್ತು ಬಹಿರಂಗ ಶುದ್ಧಿ ಎಂದು ನಂಬಿ ಅದರಂತೆ ಬದುಕಿದವರು ಶರಣರು. ವಚನಕಾರರು ವಿಶ್ವದಲ್ಲೇ ವಿಶಿಷ್ಟ ಸ್ಥಾನದಲ್ಲಿ ನಿಲ್ಲುವಂತವರು.ಯಾಕೆoದರೆ ಜನಸಾಮಾನ್ಯರ ಬದುಕನ್ನು ತಿದ್ದಲು ಸೃಷ್ಠಿಯಾದ ಸಾಹಿತ್ಯ ವಿಶ್ವದಾದ್ಯಂತ ಅಪಾರವಾಗಿದೆ, ಜೊತೆಗೆ ಹಾಗೆ ಬರೆದವರೆಲ್ಲರೂ ಶುದ್ಧಿತನದಿಂದ ಬದಕಿದರು ಎಂದು ಹೇಳಲು ಸಾಧ್ಯವಿಲ್ಲ.ಕೆಲವರ ಬರವಣಿಗೆಯೇ ಬೇರೆ ಅವರ ಬದುಕೇ ಬೇರೆ. ಈ ಪರಿಸ್ಥಿಯನ್ನು ಕಂಡ ನಮ್ಮವರು ಕವಿಯ ಬದುಕು ಏನೇ ಇರಲಿ ಅವರ ಸಾಹಿತ್ಯ ನಮಗೆ ಮಾರ್ಗದರ್ಶಿಯಾಗಿದೆ ಎಂದು ಕವಿಯ ವೈಯಕ್ತಿಕ ಬದುಕನ್ನು ಬದಿಗಿಟ್ಟು ಅವರ ಬರೆಹಗಳನ್ನು ಆದರಿಸುತ್ತಾ ಬಂದಿದ್ದಾರೆ.ಆದರೆ ವಚನಕಾರು ಹಾಗಲ್ಲ ನುಡಿದಂತೆ_ನಡೆದರು,ನಡೆದ0ತೆ_ಬರೆದರು. ಹಾಗಾಗಿ ಅವರ ಮಾತು “ವಚನ” ಆಯ್ತು, ಬದುಕು ಆದರ್ಶವಾಯ್ತು. ಮತ್ತೊಂದು ಬಹು ಮುಖ್ಯ ವಿಚಾರವೆಂದರೆ ಬಹುತೇಕ ಶರಣರು ವಚನಗಳನ್ನು ಬರೆದಿದ್ದಾರೆ, ಹಾಗಾಗಿ ಬಸವಾದಿ ಶರಣರು ಶ್ರೀಸಾಮಾನ್ಯರನ್ನು ಶರಣರನ್ನಾಗಿಸಿ, ಅವರ ಕೈಯಿಂದ ಸಾಹಿತ್ಯ ಸೃಷ್ಠಿ ಮಾಡಿಸಿದ್ದು ಹೆಗ್ಗಳಿಕೆಯ ಮಾತು. ಅದರಲ್ಲೂ ಅಕ್ಷರ ಲೊಕದಿಂದ ದೂರವಿದ್ದ ಸತಿ_ಪತಿಗಳಿಬ್ಬರನ್ನೂ ವಚನಕಾರರನ್ನಾಗಿಸಿದ್ದು ಮತ್ತೊಂದು ಹೆಗ್ಗಳಿಕೆ.ವಚನಗಳಲ್ಲಿ ಅನುಭವ ಮತ್ತು ಅನುಭಾವದ ಸಂಗಮವಿದೆ.ಅವರು ಬರೆಯುವಾಗ ವ್ಯಾಕರಣ ,ಛಂದಸ್ಸು,ರಾಗ ತಾಳ ಹೀಗೆಲ್ಲ ಯೋಚಿಸಿ ಬರೆದವರಲ್ಲ.ಅದಕ್ಕೆ ಬಸವಣ್ಣನವರು ಒಂದೆಡೆ ಹೀಗೆ ಬರೆಯುತ್ತಾರೆ:
ತಾಳಮಾನ ಸರಿಸಮನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲ ಸಂಗಮದೇವಾ ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ.
ಶರಣರು ತಮ್ಮ ಶುದ್ಧ ಬದುಕಿನ ಮೂಲಕ ಸಾಹಿತ್ಯಕ್ಕೆ ಹೊಸ ಮೆರಗನ್ನು ನೀಡಿ ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಪರೂಪದ ಕ್ರಾಂತಿ ಮಾಡಿದವರು.
ಸಾಮಾನ್ಯರನ್ನು ಸರಿದಾರಿಗೆ ತರುವಲ್ಲಿ ಸಾರಸ್ವತ ಲೋಕದ ವಿವಿಧ ಪ್ರಾಕಾರಗಳು ಆದಿ ಕಾಲದಿಂದಲೂ ಯತ್ನಿಸುತ್ತಾ ಬಂದಿವೆ. ಆದರೆ ವಚನ ಸಾಹಿತ್ಯ ತಂದ ಪರಿವರ್ತನೆ ಅಗಾಧವಾದುದು. “ಪರುಷ ಮುಟ್ಟಿದ ಲೋಹದಂತೆ “ ಎಂಬ ರೂಪಕವನ್ನು ಬಳೆಸುತ್ತೇವೆ,ಶರಣರ ಸಂಗದಲ್ಲಿ ಬಂದವರು ಬಂಗಾರವೇ ಆದರು, ಆದರೆ ಶರಣರ ಬದುಕು ಒಂದು ಹೆಜ್ಜೆ ಮುಂದೆ ಹೋಗಿ ಜ್ಯೋತಿ ಮುಟ್ಟಿದ ಜ್ಯೋತಿ (ಬತ್ತಿ) ಆಗಿತ್ತು. ಒಂದು ಜ್ಯೋತಿ ಮತ್ತೊಂದು ಬತ್ತಿಯನ್ನು ಮುಟ್ಟಿದರೆ ಜ್ಯೋತಿಯಾಗಿ ಬಿಡುತ್ತದೆ, ಅದಕ್ಕೂ ಮೂಲಕ್ಕು ವ್ಯತ್ಯಾಸ ವಿರುವುದಿಲ್ಲ.ಅಲ್ಲಿ ಯಾವ ಜ್ಯೋತಿಯು ಕನಿಷ್ಠವಲ್ಲ_ಶ್ರೇಷ್ಟವಲ್ಲ.ಎಲ್ಲ ಜ್ಯೋತಿಗಳು ಬೆಳಕನ್ನು ನೀಡುತ್ತವೆ.ಪರುಷಮಣಿ ಹಾಗಲ್ಲ ತನ್ನಿಂದ ಮುಟ್ಟಿಸಿಕೊಂಡ ಲೋಹ ಬಂಗಾರವಾಗಿರುತ್ತದೆ, ಆದರೆ ಅದು ಮತ್ತೊಂದು ಲೋಹವನ್ನು ಬಂಗಾರ ಮಾಡುವ ಸಾಮರ್ಥ್ಯವಿರುವುದಿಲ್ಲ.ಈ ದಿಶೆಯಲ್ಲಿ ಪರುಷ ಮಣಿ ಇತರ ಲೋಹ ಮತ್ತು ಚಿನ್ನಗಳಿಂದ ಪ್ರತ್ಯೇಕತೆ ಕಾಯ್ದುಕೊಳ್ಳುತ್ತದೆ.ಆ ಮೂಲಕ ಪರುಷಮಣಿ ತಾನೆ ಶ್ರೇಷ್ಠವೆಂದು ಬೀಗ ಬಹುದು. ಆದರೆ 12ನೆ ಶತಮಾನದ ಶರಣರ ಸಂಪರ್ಕಕ್ಕೆ ಬಂದವರೆಲ್ಲ ಶರಣರೇ ಆದರು
ತಳ ಸಮುದಾಯದ ವ್ಯಕ್ತಿಗಳಿಂದ ಹಿಡಿದು ರಾಜರೂ ಈ ತತ್ವಕ್ಕೆ ಮಾರು ಹೋಗಿ ಬದುಕಿನಲ್ಲಿ ಪರಿವರ್ತನೆಗೆ ಅಣಿಯಾದರು. ತುಳಿತಕ್ಕೆ ಒಳಗಾದ ವ್ಯಕ್ತಿ ಬಸವಾದಿ ಶರಣರ ಪ್ರಯತ್ನದಿಂದಾಗಿ ಮೇಲೆ ಬಂದರೆ, ಕಾಶ್ಮೀರದ ರಾಜ ಮೋಳಿಗೆ ಮಾರಯ್ಯನಾಗಿ ಆತನ ಪತ್ನಿ (ರಾಣಿ) ಮೋಳಿಗೆ ಮಹಾ ದೇವಿಯಾಗಿ ಕಾಯಕ_ದಾಸೋಹಕ್ಕೆ ಮಾರು ಹೋಗಿ ಕೆಳವರ್ಗೀಕರಣಗೊಂಡು ಬದುಕುವ ರೀತಿ ವಿಶ್ವದಲ್ಲೇ ಮಾದರಿಯಾಗಿದೆ.ಬಹುತೇಕ ಯಾವ ಸಾಹಿತ್ಯ ವರ್ಗವೂ ಮಾಡದ ಕೆಲಸವನ್ನು ವಚನ ಸಾಹಿತ್ಯ ಮಾಡಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಹೆಸರಲ್ಲಿ ಸುಲಿಗೆ ಮಾಡಲು ಬರೀ ಗ್ರಾಹಕರನ್ನೇ ಸೃಷ್ಠಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಮನುಷ್ಯತ್ವದ ಮಾತುಗಳು ಗೇಲಿಗೆ ಒಳಗಾಗುತ್ತಿವೆ.ಅಭಿವೃದ್ಧಿಯನ್ನು ಸಾಧಿಸಬೇಕು ಎಂಬ ಭರದಲ್ಲಿ ಮಾನವೀಯತೆಯನ್ನು ಮರೆಯುತ್ತಿದ್ದೇವೆ. ಐಷರಾಮಿ ಬದುಕಿನ ಗುರಿಯಲ್ಲಿ ತೆರಪಿಲ್ಲದೆ ದುಡಿಯುವ ಸಡಗರದಲ್ಲಿ ನಮ್ಮನ್ನು ನಾವು ಕಳೆದುಕೊಂಡು ಮತ್ತೆಲ್ಲೋ ಹುಡಿಕಿಕೊಳ್ಳುತ್ತಿದ್ದೇವೆ.ಜನಸಂಸ್ಕೃತಿ ಎಂಬುದು ಅನಾದಿ ಕಾಲದಿಂದ ಬಂದ ಮಾನವ ಸಂಬ0ಧಗಳ ಬಲೆ.ಹೃದಯಕ್ಕೆ ಹೃದಯ ಬೆಂಬಲವಾಗಿ ನಿಲ್ಲುವ ಸಂಸ್ಕೃತಿಯನ್ನು ಆದಷ್ಟು ಸೊರಗಿಸುತ್ತಿರುವ ಇಂದಿನ ವ್ಯವಸ್ಥೆ ಮನುಷ್ಯನ ಸಾಮಾಜಿಕ ಬದುಕನ್ನು ಕಸಿಯುತ್ತಿವೆ.ಇದರಿಂದಾಗಿ ತುಂಬಾ ದಿನಗಳಿಂದ ಹಲವರ ಪ್ರಯತ್ನದಿಂದಾಗಿ ಉಂಟಾಗಿರುವ ಸಾಮಾಜಿಕ ವ್ಯಕ್ತಿತ್ವವನ್ನು ನಾವೀಗ ಕಳೆದುಕೊಳ್ಳುತ್ತಿದ್ದೇವೆ.ಸಾಮಾಜಿಕ ವ್ಯಕ್ತಿತ್ವ ಎನ್ನುವುದು ವ್ಯಕ್ತಿಯನ್ನು ಸಮಾಜದ ಭಾಗವಾಗಿಸುತ್ತದೆ., ಮಾತ್ರವಲ್ಲ ಜನರ ನಡುವೆ ಭದ್ರತೆ, ಪ್ರೀತಿ, ವಿಶ್ವಾಸ,ಉತ್ಸಾಹ ನೀಡುವಂತಹದ್ದು.ಇAತಹ ಸಾಮಾಜಿಕ ವ್ಯಕ್ತಿತ್ವವನ್ನು ನಾವೀಗ ಕಳೆದುಕೊಳ್ಳುತ್ತಿದ್ದೇವೆ.ಐಹಿಕ ವಸ್ತುಗಳಿಗಾಗಿ ಎಲ್ಲ ಮೌಲ್ಯಗಳನ್ನು ತೊರೆಯಬಲ್ಲ ಜನರು ಹೆಚ್ಚಾಗುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಇವನಾರವಾ ? ಇವನಾರವಾ ? ಎಂದೆಣಿಸದಿರಯ್ಯಾ.. ..ಎಂಬ ಮನೋಭಾವದ , ಸಮಾಜದ ಎಲ್ಲ ವಿಧದ ಶೋಷಣೆಗೆ ಒಳಗಾದವರ ಬದುಕನ್ನು ತಿದ್ದಲು ಯತ್ನಿಸಿದ್ದು ಮತ್ತು ಸಂಗ್ರಹ ನೀತಿಗೆ ವಿರುದ್ಧವಾದ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿ ಇಂದು ಮದ್ದಾಗಿ ಕೆಲಸ ಮಾಡಬಲ್ಲುದು.ವಚನ ಸಾಹಿತ್ಯ ಕೇವಲ ಬೋಧನೆ ಮಾಡಲಿಲ್ಲ, ಅನುಸರಿಸಿತು,ಆಚರಿಸಿತು.ಕೆಲವೊಮ್ಮೆ ಸಮಾಜದ ಪಿಡುಗುಗಳಿಗೆ ಶಸ್ತಚಿಕಿತ್ಸೆ ಮಾಡಿತು.
ವಚನ ಸಾಹಿತ್ಯವು ಹಲವಾರು ಕಾಯಕ ಮೂಲಗಳಿಂದ ಬಂದ ಶರಣರ ವಚನಗಳಿಂದ ಕೂಡಿದೆ.ಅಲ್ಲಿ ಅವರೆಲ್ಲರೂ ಮುಖಾ_ಮುಖಿಯಾಗಿ ಚರ್ಚೆ ಸಂವಾದ ನಡೆಸಿ ಅನುಭವಗಳನ್ನು ವಚನಗಳಾಗಿಸಿದರು.ಮೇಲ್ನೋಟಕ್ಕೆ ನೋಡಿದರೆ ವಚನಗಳಲ್ಲಿ ಅನೇಕ ಒಂದೇ ರೀತಿ ಮತ್ತು ಒಂದೇ ವಿಷಯವನ್ನು ಹೇಳಿದರೂ ಅವುಗಳನ್ನು ಒಳಹೊಕ್ಕು ನೋಡಿದರೆ ಹಲವು ನೆಲೆಗಳ ಕನ್ನಡದ ಬದುಕನ್ನು, ಕನ್ನಡ ಸಂಸ್ಕೃತಿಯನ್ನು, ಕಾಯಕದ ಮೂಲ ಸ್ವರೂಪವನ್ನು ತಿಳಿಸುತ್ತವೆ.ವಚನದ ಅಂಕಿತ ತೆಗೆದು ಓದಿದರೂ ನಮಗೆ ಅನಿಸಿಬಿಡುತ್ತದೆ ಇದು ಇಂತಹ ಶರಣರ ವಚನ ಎಂದು.ಅಷ್ಟರ ಮಟ್ಟಿಗೆ ಪ್ರತಿಯೊಂದು ವಚನದಲ್ಲಿ ವಚನಕಾರರು ಅಡಗಿದ್ದಾರೆ.
ಬಸವಣ್ಣನವರ ಸಮಾಜ ಸುಧಾರಣೆ ವೈವಿಧ್ಯಮಯವಾದುದು.ಸಮಾಜದ ಸಮಸ್ಯೆಗಳನ್ನು ಎಕ್ಸರೇ ಕಣ್ಣುಗಳಿಂದ ನೋಡಿ ಮಾತೃಹೃದಯದಿಂದ ಪರಿಹಾರ ನೀಡಿದವರು.ಜಾತಿ_ಧರ್ಮ_ಪಂಥ_ವರ್ಗ ಅಸಮಾನತೆಯನ್ನು ಹೋಗಲಾಡಿಸುವ ಕೈಕಂರ್ಯದೊ0ದಿಗೆ ಸಮಾಜದ ಪಿಡುಗುಗಳಾದ ಮೂಢನಂಬಿಕೆ, ಕಂದಾಚಾರ, ಭ್ರಷ್ಠಾಚಾರ ಸ್ತಿç ಶೋಷಣೆ ಮೊದಲಾವುಗಳನ್ನು ಹೋಗಲಾಡಿಸಲು ಹೊರಾಡಿದರು. ಅದರಲ್ಲಿ ಒಂದಾದ ವೇಶ್ಯವೃತ್ತಿಗೆ ಒಳಗಾದ ಮಹಿಳೆಯರಿಗೂ ಎಲ್ಲರಂತೆ ಬಾಳಲು ಅವಕಾಶವನ್ನು ಒದಗಿಸುವ ಕಾರ್ಯವೂ ಮಾಡಿದರು.ಅದರಲ್ಲಿ ಒಂದು ಉದಾಹರಣೆಗಗಿ ನೊಡುವುದಾದರೆ..
ಪುಣ್ಯ ಸ್ತಿçÃಯರು:_ ವಚನಕಾರ್ತಿಯರಲ್ಲಿ ಕೆಲವರು ಪುಣ್ಯ ಸ್ತಿçಯರು ಬರುತ್ತಾರೆ,ಇವರು ತಮ್ಮ ಗಂಡನ ಹೆಸರಿನ ತರುವಾಯದಲ್ಲಿ ಈ ಪದವನ್ನು ಬಳಸಿ ನಂತರ ತಮ್ಮ ಹೆಸರನ್ನು ಹೇಳಿಕೊಂಡಿದ್ದಾರೆ ಉದಾಹರಣೆಗೆ ಉರಿಲಿಂಗ ಪೆದ್ದಿಗಳ ಪುಣ್ಯಸ್ತಿ ಕಾಳವ್ವೆ, ಈ ಪುಣ್ಯ ಸ್ತಿಪದದ ಬಗ್ಗೆ ಹಲವಾರು ಸಂಶೋಧಕರು ಕೆಲವು ವಿಚಾರಗಳನ್ನು ಮಂಡಿಸಿದ್ದಾರೆ, ಪ್ರೊ. ಎಸ್ ಜಿ ಸಿದ್ಧರಾಮಯ್ಯನವರು ಈ ರೀತಿ ಪ್ರತಿಪಾದಿಸುತ್ತಾರೆ. _ ಪುಣ್ಯ ಸ್ತಿ ಎಂಬುದು ಪತೀವ್ರತೆಗೆ ಪರ್ಯಾಯ ಪದವಲ್ಲ,ಪಣ್ಯ ಎಂಬ ಪದವನ್ನು ಪುಣ್ಯ ಎಂದು ಮಾಡಿದ್ದಾರೆ_ಎನ್ನುವುದು ಹಲವು ತಜ್ಞರ ಅಭಿಮತವಾಗಿದೆ, ಆದರೆ ಅದು ಪಣ್ಯಕ್ಕೆ ಕೊಂಬು ಕೊಟ್ಟಂತೆ ಆಗಿರುವ ಸಣ್ಣ ಬದಲಾವಣೆಯ ಪುಣ್ಯವಲ್ಲ ಅದು,ಇದರ ಹಿಂದೆ ಅಂತಹ ಸ್ತಿçಯರಿಗೆ ಸಮಾಜದಲ್ಲಿ ಗೌರವ ಸ್ಥಾನ ಸಿಗಬೇಕೆಂಬ ಉದ್ದೇಶದಿಂದ ಬಹು ದೊಡ್ಡ ಸಾಮಾಜಿಕ ಸ್ಥಾನ ಮಾನದ ಪಲ್ಲಟವೇ ಆಗಿದೆ ಎನ್ನುತ್ತಾರೆ.ಅಥವಾ ಅದೊಂದು ಕ್ರಾಂತಿಯೂ ಹೌದು.
ನವಸಮಾಜದ ಮತ್ತು ಸಮಸಮಾಜದ ನಿರ್ಮಾಣಕ್ಕೆ ಪಣತೊಟ್ಟ ಬಸವಣ್ಣ ಸಮಾಜದಲ್ಲಿರುವ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಯತ್ನಿಸಿದರು ಅದರಲ್ಲಿ ಪುರುಷ ಪ್ರಧಾನ ಸಮಾಜದ ಹಲವು ಜನರು ನಿರ್ಮಿಸಿದ ವೇಶ್ಯವಾಟಿಕೆಯನ್ನು ನಿರ್ನಾಮ ಮಾಡಿ ವೇಶ್ಯೆಯರನ್ನು ವಿಮೋಚನಗೊಳಿಸುವ ಹೋರಾಟವೂ ಇತ್ತು.ಮೈಕೂಲಿ (ವೇಶ್ಯವಾಟಿಕೆಯನ್ನು ಹೀಗೂ ಕರೆದದ್ದುಂಟು) ಮಾಡುತ್ತಾ ಪಣ್ಯಾಂಗನೆಯರೆನಿಸಿದ ವೇಶ್ಯೆಯರಿಗೂ ಬಸವಣ್ಣನವರು ಆತ್ಮ ಗೌರವ ಪಾಠ ಕಲಿಸಿದರು.ಪಣ್ಯಾಂಗನೆಯರು ಇಷ್ಠಲಿಂಗ ದೀಕ್ಷೆ ಪಡೆದು ಪುಣ್ಯಾಂಗನೆಯರಾದರು, ಅಂಥವರಲ್ಲಿ ಸೂಳೆ ಸಂಕವ್ವೆಯ0ಥ ಶರಣೆಯರು ವಚನಕಾರ್ತಿಯರೂ ಆದರು.ಮೈಕೂಲಿಯಿಂದಾಗಿ ಅಪಮಾನಕ್ಕೊಳಗಾದವರು ಆತ್ಮ ಗೌರವದೊಂದಿಗೆ ಕೈಕೂಲಿ ಮಾಡತೊಡಗಿದರು, ಇಂತಹ ಮಹಿಳೆಯರನ್ನು ಶರಣ ಬಳಗದ ಹಲವು ಯುವಕರು/ಶರಣರು ಮದುವೆಯಾಗಿ ಬಾಳನ್ನು ಕೊಡುವಂತೆ ಪ್ರೇರೇಪಿಸಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಬಸವಣ್ಣನವರು ಶ್ರಮಿಸಿದರು. ಇಂತಹ ಮಹಿಳೆಯರನ್ನು ಪುಣ್ಯ ಸ್ತಿಯರೆಂದರು ಕರೆದರು.ಮಾತ್ರವಲ್ಲ ಇವರ ಮಕ್ಕಳಿಗೆ ಇಷ್ಟಲಿಂಗ ದೀಕ್ಷೆಕೊಟ್ಟು “ದಾಸಿ ಪುತ್ರನಾಗಲಿ, ವೇಶ್ಯಾಪುತ್ರನಾಗಲಿ ” ಶಿವ ದಿಕ್ಷೆಯಾದ ಬಳಿಕ ಸಾಕ್ಷಾತ್ ಶಿವನ ಅಂಶವೆ0ದು ಭಾವಿಸ ಬೇಕೆಂದು ಸಾರಿದರು.ಇಂತಹ ಸಮಾನತೆಯ ಹರಿಕಾರ ನಮ್ಮ ಬಸವಣ್ಣ.ಇಂತಹ ಸರ್ವ ಸಮತ್ವದ ವ್ಯವಸ್ಥೆಯನ್ನು ಇಡೀ ವಿಶ್ವದಲ್ಲೇ ಪ್ರಥಮಬಾರಿಗೆ ತಂದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ.
ಶಿವಶರಣೆ ಅಕ್ಕಮ್ಮ:_ ಇಂತಹ ಪುಣ್ಯ ಸ್ತಿಯರ ಸಾಲಿನಲ್ಲಿ ಬರುವ ಶಿವಶರಣೆ ಅಕ್ಕಮ್ಮ 154 ವಚನಗಳನ್ನು ಬರೆದಿದ್ದಾಳೆ ಎಂದು ಸಂಶೋಧಕರು ಹೇಳಿದ್ದಾರೆ.ಪ್ರಸ್ತುತ ದಿನ ಮಾನಗಳಲ್ಲೂ ಇಂತಹ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವುದು ಸಾಹಸದ ಕೆಲಸ, ಆದರೆ ಬಸವಣ್ಣನವರು 12ನೇ ಶತಮಾನದಲ್ಲಿ ಇಂತಹ ಮಹತ್ತರ ಸಾಧನಗೈದರು.ಅಕ್ಕಮ ವಚನಕಾರ್ತಿಯಾಗಿ ಒಂದೆಡೆ ಹೀಗೆ ಬರೆಯುತ್ತಾಳೆ..
ಎನ್ನ ಕಣ್ಣಿನಲ್ಲಿ ನೋಡೆ ಜಿಹ್ವೆಯಲ್ಲಿ ನೆನೆಯೆ
ಮಿಕ್ಕಾದ ತಟ್ಟುವ ಮುಟ್ಟುವ ತಾಗುವ ಸೋಂಕುವ
ನಾನಾ ಗುಣಂಗಳಲ್ಲಿಶೋಧಿಸಿಯಲ್ಲದೆ ಬೆರೆಯೆ
ಕೊಂಬಲ್ಲಿ ಕೊಡುವಲ್ಲಿ
ಎನ್ನ ವೃತಾಚಾರವ ಅಂಗೀಕರಿಸಿದವರಲ್ಲಿಗಲ್ಲದೆ ಹೋಗೆ.
ಇಲ್ಲಿ ನಾವು ಗಮನಿಸಬೇಕಾದುದೇನೆಂದರೆ ಬಹುತೇಕ ವಚನಕಾರು,ವಚನಕಾರ್ತಿಯರು ತಾವು ಮಾಡುವ ಕಾಯಕದ ಅನುಭವದ ಮೂಲಕ ಆಧ್ಯಾತ್ಮ ವಿಚಾರಗಳನ್ನು ವಚನಗಳಲ್ಲಿ ಅಡಗಿಸಿಟ್ಟಿದ್ದಾರೆ.ಅದರಂತೆ ಈಕೆ ತನ್ನ ವೃತ್ತಿಯಲ್ಲೂ ರೂಢೀಗತ ವ್ಯವಹಾರ ಸಂಬ0ಧಗಳ ಕೀಳುತನವನ್ನು ತಿರಸ್ಕರಿಸಿ ಪರಸ್ಪರ ಅರಿವಿನ ಸ್ನೇಹಶೀಲತೆ ಗುಣವನ್ನು ಬಯಸುತ್ತಾಳೆ.ತನ್ನ ಸಮ ಗ್ರಾಹಕ ಶೀಲಸಂಪನ್ನಲ್ಲದಿದ್ದರೆ ಕಣ್ಣಿನಿಂದ ನೋಡಲಾರೆ,ನಾಲಗೆಯಿಂದ ನೆನೆಯಲಾರೆ, ಅನ್ನುತ್ತಾ ನನ್ನ ಈ ವ್ಯವಹಾರದಲ್ಲೂ ವೃತವನ್ನು ಬಿಡಲಾರೆ_ ಎನ್ನುತ್ತಾರೆ.
ಈ ಪುಣ್ಯದ ಮಹಿಳೆಯರನ್ನು ಮದುವೆಯಾಗಿ ಬಾಳಿನ ಪುಣ್ಯದ ಮಡದಿಯಾಗಿ ಮಾಡಿಕೊಂಡ ಮಹಾತ್ಮರು ಈ ಶರಣರು.
ಪುಣ್ಯ ಸ್ತಿಲಿಂಗಮ್ಮನ:_ ಆ ಸಾಲಿನಲ್ಲಿ ಬರುವ ಹಡದಪ್ಪಣ್ಣಗಳ ಪುಣ್ಯ ಸ್ತಿ ಲಿಂಗಮ್ಮನ ವಚನ ಹೀಗಿದೆ, ಅದು ಆಕೆಯ ಬದುಕಿನ ತಿರುವುಗಳನ್ನು ತಿಳಿಸುತ್ತಾ ಬಸವಾದಿ ಶರಣರ ಹೆಗ್ಗಳಿಕೆ ಸಾರುತ್ತದೆ..
ಕನಿಷ್ಟದಲ್ಲಿ ಹುಟ್ಟಿದೆ
ಉತ್ತಮದಲ್ಲಿ ಬೆಳೆದೆ
ಸತ್ಯ ಶರಣರ ಪಾದವಿಡಿದೆ
ಆ ಶರಣರ ಪಾದವಿಡಿದು ಗುರುವ ಕಂಡೆ
ಲಿ0ಗವ ಕಂಡೆ, ಜಂಗಮನ ಕಂಡೆ,
ಮಹಾ ಬೆಳಿಗಿನೊಳಗೋಲಾಡಿ
ಸುಖಿಯಾದೆ,ನಮ್ಮ ಅಪ್ಪಣ್ಣ ಪ್ರಿಯ ಚೆನ್ನ ಬಸವಣ್ಣಾ !
ಸೂಳೆ ಸಂಕವ್ವ :_ ಮತ್ತೊಬ್ಬ ಶರಣೆ ಸೂಳೆ ಸಂಕವ್ವ ಇವರ ಹೆಸರೇ ಸೂಚಿಸುವಂತೆ ವೇಶ್ಯ ವೃತ್ತಿ ಮಾಡುತ್ತಿದ್ದು ಬಸವಣ್ಣನವರ ವಚನ ಚಳುವಳಿಯ ಪ್ರಭಾವದಿಂದ ತಾನು ವೇಶ್ಯಾವೃತ್ತಿಯನ್ನು ತೊರೆದು ಶರಣರ ಸಂಪರ್ಕಕ್ಕೆ ಬಂದು ಶರಣೆಯಾಗಿ ವಚನಗಳನ್ನು ಬರೆದಳು.ವೇಶ್ಯಾ ವೃತ್ತಿಯಲ್ಲೂ ಆಕೆ ತೋರಿಸಿದ ರೀತಿ_ನೀತಿಗಳು,ವೃತ್ತಿಗೆ ಸಲ್ಲಬೇಕಾದ ಗೌರವ, ಮಾನ್ಯತೆ ಬೇಕೆಂಬ ಆಕೆಯ ಮಾತುಗಳನ್ನು ಬಸವಣ್ಣ ಮೆಚ್ಚಿಕೊಂಡಿದ್ದರು.ಆಕೆಯ ವಚನಗಳಲ್ಲಿ ಆತ್ಮವಿಶ್ವಾಸ, ದಿಟ್ಟ ನಿಲುವು, ಅಚಲ ಎದೆಗಾರಿಕೆ, ಕಾಯಕ ನಿಷ್ಟೆ ಆದ್ಯಾತ್ಮಿಕತೆ ಎದ್ದು ಕಾಣುತ್ತದೆ.ಅದಕ್ಕಾಗಿ ಆಕೆಯ ವಚನದ ಅಂಕಿತ “ನಿರ್ಲಜ್ಜೇಶ್ವರಾ”.ಆಕೆಯ ಲಭ್ಯವಿರುವ ವಚನ ಒಂದು ಹೀಗಿದೆ:
“ಒತ್ತೆಯ ಹಿಡಿದು ಮುತ್ತೊತ್ತೆಯ ಹಿಡಿಯೆ
ಹಿಡಿದೆಡೆ ಬತ್ತಲೆ ನಿಲಿಸಿ ಕೊಲುವರಯ್ಯಾ
ವೃತ ಹೀನನರಿದು ಬೆರೆದೆಡೆ
ಕಾದ ಕತ್ತಿಯಲ್ಲಿ ಕೈಕಿವಿಮೂಗ
ಕೊಯ್ವರಯ್ಯಾ ಒಲ್ಲೆನೊಲ್ಲೆ ಬಲ್ಲೆನಾಗಿ
ನಿಮ್ಮಾಣೆ ನಿರ್ಲಜ್ಜೇಶ್ವರಾ”
ಸಂಕವ್ವ ತನ್ನ ವೃತ್ತಿಯಲ್ಲಿ ಪಾಲಿಸಿದ ನಿಯಮಗಳನ್ನು ವಿವರಿಸುತ್ತಾ ಆಧ್ಯಾತ್ಮಿಕತೆ ಮತ್ತು ಅತೀಂದ್ರಿಯ ಅನುಭವವನ್ನು ವಿವರಿಸುತ್ತಾಳೆ.ಅವಳು ವೇಶ್ಯೆಯಾಗಿ ತನ್ನ ಲೌಕಿಕ ಅನುಭವವನ್ನು ಉತ್ಕೃಷ್ಟಗೊಳಿಸತ್ತಾಳೆ, ಈ ವಚನದಲ್ಲಿ ವೃತ್ತಿ ಪ್ರತಿಮೆಯ ಮೂಲಕ ಮಾತನಾಡಿದ್ದಾಳೆ.ಒತ್ತೆಯ ಹಿಡಿದು ಎಂಬಲ್ಲಿ ಒತ್ತೆ ಎಂದರೆ ವೇಶ್ಯಗೆ ನೀಡುವ ಹಣ, ಅದು ಒಬ್ಬರಿಂದ ಪಡೆದು ಅದೇ ಸಮಯದಲ್ಲಿ ಮತ್ತೊಬ್ಬರಿಂದ ಅಂತಹ ಹಣ ಪಡೆದರೆ,ಪ್ರಾಮಾಣಿಕತೆ ಅಲ್ಲ, ಅಪಾಯ ಕಾದಿರುತ್ತದೆ ಎನ್ನುತ್ತಾ, ತನ್ನ ಹಿಂದಿನ ವೃತ್ತಿ ಜೀವನದ ಬಗ್ಗೆ ಹೇಳುತ್ತಾ ವ್ರತಹೀನನ್ನು ಬೆರೆಯಬಾರದೆಂದು ಹೇಳುತ್ತಾಳೆ.
ಬಸವಯ್ಯನವರ ಪುಣ್ಯ ಸ್ತಿಕಾಳವ್ವೆ: 12 ನೇ ಶತಮಾನದಲ್ಲಿ ಬರುವ ಈ ಶರಣ ದಂಪತಿ ಬಾಚಿ_ಕಾಯಕ (ಬಡಿಗಿ ತನ-ಮರದ ತುಂಡನ್ನು ಕೆತ್ತುವುದು) ಮಾಡಿಕೊಂಡಿದ್ದರು, ಕಾಳವ್ವೆ ಗಂಡನ ಕಾಯಕ ದೃಷ್ಠಾಂತದೊ0ದಿಗೆ ತನ್ನ ಕಾಯಕ ನಿಷ್ಠೆ ಹಾಗೂ ವ್ರತಗಳ ಮಹತ್ವವನ್ನು ಈಕೆ ತನ್ನ ವಚನಗಳಲ್ಲಿ ಪ್ರತಿಪಾದಿಸಿದ್ದಾಳೆ ,ಈಕೆಯ ವಚನದ ಅಂಕಿತ: “ಕರ್ಮಹರ ಕಾಳೇಶ್ವರ” ಕಾಳೆವ್ವನ ಎರಡು ವಚನಗಳು ಲಭ್ಯವಿವೆ.ಅದರಲ್ಲಿ ಒಂದು ಹೀಗಿದೆ:
ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ
ಮಾತ ತಪ್ಪಿ ನುಡಿಯಲು ಬಾಯಿಗೆ ಮೂಲ
ವ್ರತ ಹೀನನ ನೆರೆವುದು ನರಕಕ್ಕೆ ಮೂಲ
ಕರ್ಮಹರ ಕಾಳೇಶ್ವರಾ!.
ಬಾಚಿಯಿಂದ ಕೆತ್ತಬೇಕಾದಾಗ ಕೈ ತಪ್ಪಿದರೆ ಕಾಲಿಗೆ ಬಿದ್ದು ನೋವಾಗ (ಗಾಯವಾಗ) ಬಹುದು,ನಮ್ಮ ಮಾತು ತಪ್ಪಿ ನುಡಿದರೆ ನಮಗೆ ಬೆಲೆ ಇರುವುದಿಲ್ಲ.ವ್ರತವಿಲ್ಲದ (ನಿಯಮವಿಲ್ಲದ) ನರಕಕ್ಕೆ / ಕಷ್ಟಕ್ಕೆ ಮೂಲ ಎನ್ನುತ್ತಾಳೆ.
ಉರಿಲಿಂಗ ಪೆದ್ದಿಗಳ ಪುಣ್ಯ ಸ್ತಿಕಾಳವ್ವೆ: ಈ ದಂಪತಿಗಳು ಮಹಾರಾಷ್ಟçದ ಕಡೆಯಿಂದ ಬಂದವರು,ಉರಿಲಿAಗ ಪೆದ್ದಿ ಕಳ್ಳತನವ ಮಾಡಿ ಜೀವಿಸುತ್ತಿದ್ದ ಈತ ಒಮ್ಮೆ ಮನಃ ಪರಿವರ್ತನೆಯಾಗಿ ಕಳ್ಳತನವನ್ನು ಬಿಟ್ಟು ಶರಣನಾದ.ಈಕೆಯೂ ಸಹ ಶರಣೆಯಾಗಿ ಗಂಡನನ್ನು ತಿದ್ದಿ ತಾನೂ ವಚನಗಳನ್ನು ಬರೆದಳು,12 ವಚನಗಳು ಲಭ್ಯ ಇವೆ.ಈಕೆಯ ವಚನಗಳಲ್ಲಿ ವ್ರತಾಚರಣೆಗೆ ಪ್ರಾಮುಖ್ಯತೆ ನೀಡಿದ್ದಾರೆ.
ಲಭ್ಯವಿರುವ ಮಾಹಿತಿ ಪ್ರಕಾರ ಕೆಲವರು ಪೂರ್ವಾಶ್ರಮದಲ್ಲಿ ವೇಶ್ಯ ವೃತ್ತಿ ಮಾಡಿದ್ದು ತಿಳಿದು ಬಂದರೆ ಮತ್ತೆ ಕೆಲವರದು ಮಾಹಿತಿ ಲಭ್ಯವಿಲ್ಲ ಆದರೆ ಹೆಸರಿನಲ್ಲಿ ಪುಣ್ಯ ಸ್ತಿ_ಎಂಬ ಪದ ಬಳಕೆಯಲ್ಲಿದೆ. ಒಟ್ಟಾರೆ 12 ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜದ ಅಂಕು_ಡೊoಕುಗಳನ್ನು ತಿದ್ದುತ್ತಾ ಸಮ_ಸಮಾಜದ ನಿರ್ಮಾಣಕ್ಕೆ ದುಡಿದಿದ್ದಾರೆ_ಎಂಬುದು ಸತ್ಯವಾದ ಮಾತು.
ಡಾ.ಯು ಶ್ರೀನಿವಾಸ ಮೂರ್ತಿ
ಉಪನ್ಯಾಸಕರು
“ವಿಚಾರ ಕುಟೀರ”
ರಾಮನಗರ 1 ನೇ ಕ್ರಾಸ್
ಹವಂಬಾವಿ_ಬಳ್ಳಾರಿ
ಫೋ:9731063950