ದಾವಣಗೆರೆ,ಡಿಸೆಂಬರ್ 10: ಸೋಲಾರ್ ರೂಫ್ ಟಾಪ್ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಸರ್ಕಾರ ಪಿಎಂ ಸೂರ್ಯಘರ್ ಮುಪ್ತ್ ಬಿಜಲಿ ಯೋಜನೆ ರೂಪಿಸಿದೆ. ಗ್ರಾಹಕರು ಯೋಜನೆಗೆ ನೊಂದಾಯಿಸಿಕೊಂಡು ಮನೆಯಲ್ಲಿ ಉಚಿತ ವಿದ್ಯುತ್ ಪಡೆದು ಖರ್ಚು ಕಡಿಮೆ ಮಾಡಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಪಿಎಂ ಸೂರ್ಯಘರ್ ಮುಪ್ತ್ ಬಿಜಲಿ ಯೋಜನೆಯ ಕುರಿತಂತೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಯೋಜನೆ ಅಡಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು, ಮಾನದಂಡ ವೆಚ್ಚದ ಶೇ.60% ರಷ್ಟು ಸಹಾಯಧನ ರೂಪದಲ್ಲಿ ಒದಗಿಸಲಾಗುತ್ತದೆ. 1ಕಿಲೋವ್ಯಾಟ್ಗೆ ರೂ.30 ಸಾವಿರ ರೂಪಾಯಿ, 2 ಕಿಲೋವ್ಯಾಟ್ಗೆ ರೂ.60 ಸಾವಿರ ರೂಪಾಯಿ ಮತ್ತು 3 ಕಿಲೋವ್ಯಾಟ್ಗೆ ರೂ.78 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು, ತಮಗೆ ಸಾಕಾಗುವಷ್ಟು ವಿದ್ಯುತ್ ಬಳಸಿದ ಮೇಲೆ ವಿದ್ಯುತ್ನ್ನು ಬೆಸ್ಕಾಂಗೆ ಮಾರಾಟ ಮಾಡಲು ಅವಕಾಶ ಇದೆ.
ಈ ಯೋಜನೆಯ ಲಾಭ ಪಡೆಯಲು ಯಾವುದೇ ಆರ್ಥಿಕ ಮಿತಿ ಇರುವುದಿಲ್ಲ. ಎಲ್ಲಾ ವರ್ಗದ ಗ್ರಾಹಕರು ನೊಂದಣಿ ಮಾಡಿಕೊಳ್ಳಬಹುದಾಗಿದೆ. ತಮ್ಮ ಮನೆ ಆರ್ಸಿಸಿ ಹೊಂದಿ ಕನಿಷ್ಠ 10/10 ಸ್ಥಳಾವಕಾಶ ಇದ್ದಲ್ಲಿ ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಫೋಟೋದೊಂದಿಗೆ pmsuryaghar.gov.in ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ನೊಂದಣಿ ಮಾಡಿಕೊಳ್ಳಬಹುದು, ರೂ.1500 ನೊಂದಣಿ ಶುಲ್ಕವಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ತಿಪ್ಪೇಸ್ವಾಮಿ ಎ.ಕೆ ಹಾಗೂ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು.