Ad image

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಅಭಿಮತ ಕುಟುಂಬ ಯೋಜನೆ ಅನುಷ್ಠಾನ: ಒಂದೆರಡು ಕುಟುಂಬದ ಕತೆಯಲ್ಲ, ಇದು ಮನೆ ಮನಗಳ ಮಾತಾಗಬೇಕು

Vijayanagara Vani
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಅಭಿಮತ ಕುಟುಂಬ ಯೋಜನೆ ಅನುಷ್ಠಾನ: ಒಂದೆರಡು ಕುಟುಂಬದ ಕತೆಯಲ್ಲ, ಇದು ಮನೆ ಮನಗಳ ಮಾತಾಗಬೇಕು
ಚಿತ್ರದುರ್ಗಜೂನ್.28:
ಕುಟುಂಬ ಯೋಜನೆ ಒಂದೆರಡು ಕುಟುಂಬದ ಕಥೆಯಾಗದೆ ಮನೆ ಮನಗಳ ಮಾತಾಗಬೇಕು. ಚಿಕ್ಕ ಕುಟುಂಬದ ಆದರ್ಶ ಪಾಲಿಸಿದಲ್ಲಿ ಸುಖಿ ಜೀವನ ಹೊಂದಬಹುದು ಎಂದು ಚಿತ್ರದುರ್ಗ ತಾಳ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ಇಲ್ಲಿನ ಮಾರುತಿ ನಗರ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅತ್ತೆ ಸೊಸೆಯರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜನಸಂಖ್ಯಾ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಸಮುದಾಯ ಜಾಗೃತಿಕರಣ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಸಾರ್ವಜನಿಕರಲ್ಲಿ ವಿಭಿನ್ನವಾದ ಮನಸ್ಸುಗಳಿದ್ದು, ಕೆಲವರಿಗೆ ಚಿಕ್ಕ ಕುಟುಂಬ ಅನುಸರಿಸುವುದು. ಕೆಲವರಿಗೆ ಹಲವು ಮಕ್ಕಳ ಬಯಕೆ ಇವು ಸರ್ವೇಸಾಮಾನ್ಯ. ಆಧುನಿಕ ಯುಗದಲ್ಲಿ ಮಕ್ಕಳಿಗೆ ಸಮಾನ ಶಿಕ್ಷಣ ಸಮಾನ ಸವಲತ್ತುಗಳನ್ನು ಒದಗಿಸುವುದು ಫೋಷಕರ ಜವಾಬ್ದಾರಿಯಾಗಿದ್ದು, ಚಿಕ್ಕ ಕುಟುಂಬ ಇದ್ದಲ್ಲಿ ಮನೆಯ ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾತನಾಡಿ, ತಾಯಿ ಮರಣ ಮತ್ತು ಶಿಶು ಮರಣ ತಪ್ಪಿಸುವ ನಿಟ್ಟಿನಲ್ಲಿ ಒಂದು ಮಗುವಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷಗಳು ಅಂತರಬೇಕಾಗುತ್ತದೆ. ಜಮೀನಿನಲ್ಲಿ ಬತ್ತವನ್ನ ದೂರ ದೂರ ಹಚ್ಚಿದಾಗ ಮಾತ್ರ ಚೆನ್ನಾಗಿ ಫಸಲು ಬರುತ್ತದೆ, ತೆಂಕಿನ ಮರ ಒಂದರ ಪಕ್ಕದಲ್ಲಿ ಒಂದು ಬೆಳೆಸಿದರೆ ಯಾವ ಮರವು ಪಸಲು ಬಿಡಲಾಗದು, ಅದೇ ರೀತಿ ಒಂದು ಮಗುವಿಗೆ ಜನ್ಮ ನೀಡುವಾಗ ತಾಯಿಯು ಮಗುವಿಗೆ ರಕ್ತವನ್ನು ಹಂಚಿಕೊಳ್ಳಬೇಕಾಗುತ್ತದೆ. ಬಾಣಂತಿಯ ಆರೋಗ್ಯ ಸರಿ ಹೊಂದಬೇಕಾದರೆ ಕಾಲಾವಕಾಶ ಬೇಕು. ಆರು ತಿಂಗಳ ಬಾಣ್ತಿ ಮೂರು ತಿಂಗಳ ಗರ್ಭಿಣಿಯಾದರೆ ಜನ್ಮ ನೀಡಿದ ಮಗುವಿಗೆ ಕನಿಷ್ಠ ಎರಡು ವರ್ಷದತನಕ ತಾಯಿಯ ಎದೆ ಹಾಲು ಬೇಕು. ಹೊಟ್ಟೆಯಲ್ಲಿ ಬೆಳೆಯುವ ಭ್ರೂಣಕ್ಕೆ ಯಾವ ರೀತಿ ಪೋಷಕಾಂಶಗಳು ಸಿಗಬಹುದು ಎಂಬುದನ್ನ ಚಿಂತನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ದಿನತುಂಬದ ಹೆರಿಗೆ, ಹೆರಿಗೆಯ ಸಮಯದಲ್ಲಿ ತಾಯಿಗೆ ರಕ್ತಸ್ರಾವ, ತಾಯಿ ಮರಣ ಇಲ್ಲವೇ ಶಿಶುಮರಣ ಆಗಬಹುದು. ಇವುಗಳಿಗೆ ಕಡಿವಾಣ ಹಾಕಬೇಕಾದರೆ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಉಚಿತವಾಗಿ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯ ಇದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು.
ಒಂದೆರಡು ಮಕ್ಕಳ ಜನನದ ನಂತರ ಸ್ವಯಂ ಪ್ರೇರಿತವಾಗಿ ತಾಯಂದಿರೇ ಮಕ್ಕಳು ಬೇಡವೆಂದು ನಿರ್ಧರಿಸಿ ಕುಟುಂಬ ಕಲ್ಯಾಣ ಶಾಶ್ವತ ವಿಧಾನವನ್ನು ಅನುಸರಿಸಲು ಮುಂದೆ ಬರುತ್ತಾರೆ. ಆದರೆ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಒಂದು ಸೂಕ್ತ ಸರಳ ವಿಧಾನ, ಹೊಲಿಗೆ ಇಲ್ಲ, ಗಾಯ ಇಲ್ಲ, ಆಸ್ಪತ್ರೆಯಲ್ಲಿ ತಂಗುವ ಹಾಗೆ ಇಲ್ಲ, ಪುರುಷರಲ್ಲಿ ದೈಹಿಕ ನಿಶಕ್ತಿ ಉಂಟಾಗುವುದಿಲ್ಲ, ಲೈಂಗಿಕ ಸಂಪರ್ಕದಲ್ಲಿ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ, ಇಂತಹ ಸರಳ ವಿಧಾನದ ಕಡೆಗೆ ಸಾಕ್ಷರತೆ ಹೊಂದಿದ ನಾವುಗಳು ಮುಂದೆ ಬಂದು ಸೂಕ್ತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕುಟುಂಬದಲ್ಲಿ ದಂಪತಿಗಳು ಸುಖಮಯ ದಾಂಪತ್ಯ ಜೀವನ ನಡೆಸಬಹುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಜಾನಕಿ ಮಾತನಾಡಿ, ಕುಟುಂಬದಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಅಪಾಯದ ಅಂಚಿನಲ್ಲಿರುವ ತಾಯಂದಿರುಗಳಿಗೆ ಕುಟುಂಬ ಯೋಜನೆ ಅಳವಡಿಸುವುದಕ್ಕಿಂತ ಪುರುಷರು ಮುಂದೆ ಬಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಅಂದೆ ಕೆಲಸ ಕಾರ್ಯಗಳಲ್ಲಿ ತೊಡಗಬಹುದು. ತಾಯಂದಿರಿಗೆ ತಾತ್ಕಾಲಿಕ ವಿಧಾನಗಳಾದ ಡಿಮ್ಪ ಇಂಜೆಕ್ಷನ್, ವಾರಕ್ಕೊಮ್ಮೆ ಛಾಯಾ ಮಾತ್ರೆಗಳು, ವಂಕಿ ಅಳವಡಿಕೆ, ಪುರುಷರಿಗೆ ನಿರೋದ್ಗಳು ಉಚಿತವಾಗಿ ಲಭ್ಯವಿದ್ದು, ಇದರ ಸದುಪಯೋಗ ಪಡಿಸಿಕೊಂಡು ಜನಸಂಖ್ಯಾ ಸ್ಥಿರತೆ ಕಾಪಾಡಿ ಸುಖೀ ಕುಟುಂಬದತ್ತ ದಾಪುಗಾಲು ಹಾಕಬಹುದು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ ರೆಡ್ಡಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಆರೋಗ್ಯ ಅಧಿಕಾರಿ ವೃಂದದವರು, ಸಾರ್ವಜನಿಕರ ಮನೆ ಬಾಗಿಲಿಗೆ ಬಂದು ಕುಟುಂಬ ಯೋಜನೆಗಳ ಬಗ್ಗೆ ಸದಾ ಮಾಹಿತಿ ನೀಡುತ್ತಿರುತ್ತಾರೆ. ಹೆಚ್ಚಿನ ಆರೋಗ್ಯ ಮಾಹಿತಿಗಾಗಿ 104ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ತಿಪ್ಪಮ್ಮ. ಹೆಚ್ಐಓ ಸುಪ್ರೀತಾ. ಪಿಎಚ್ಸಿಓ ರೂಪ, ಲಕ್ಷ್ಮಮ್ಮ, ಎನ್ಸಿ ರೂಪ, ಭಾಗ್ಯಲಕ್ಷ್ಮಿ ಸೇರಿದಂತೆ 25ಕ್ಕೂ ಹೆಚ್ಚು ಅತ್ತೆ ಸೊಸೆಯರು ಮತ್ತು ಪುರುಷರು ಹಾಜರಿದ್ದರು.

Share This Article
error: Content is protected !!
";