ಚಿತ್ರದುರ್ಗಜುಲೈ.02:
ಕುಟುಂಬ ಯೋಜನೆ ಅಳವಡಿಸಿಕೊಂಡು ಸುರಕ್ಷಿತ ತಾಯ್ತತನ ಪಡೆಯಲು ಅಂತರದ ಹೆರಿಗೆ ಸಹಕಾರಿ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ವ್ಯಾಪ್ತಿಯ ಕ್ಯಾದಿಗೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ನಡೆದ ಜನಸಂಖ್ಯಾ ಸ್ಥಿರತೆಗಾಗಿ ಸಮುದಾಯ ಜಾಗೃತೀಕರಣ ಕಾರ್ಯಕ್ರದಲ್ಲಿ ಅತ್ತೆ ಸೊಸೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು
ತಾಯಿ ಮರಣ ಶಿಶು ಮರಣ ನಿಯಂತ್ರಿಸುವ ಸಲುವಾಗಿ ಕುಟುಂಬ ಯೋಜನೆ ಅನುಸರಿಸುವುದು ಅವಶ್ಯವಾಗಿದೆ. ಮಕ್ಕಳ ನಡುವೆ ಅಂತರ ಕಾಯುವಿಕೆಯಲ್ಲಿ ಅತ್ತೆ ಸೊಸೆಯರ ಪಾತ್ರ ದೊಡ್ಡದು. ಕುಟುಂಬ ಗಾತ್ರ ಹೆಚ್ಚುವುದರಿಂದ ಕುಟುಂಬದ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಯೋಜಿತ ಕುಟುಂಬ ಸುಖೀ ಕುಟುಂಬ ಆರೋಗ್ಯ ಇಲಾಖೆಯಲ್ಲಿ ವಿವಿಧ ವಿನೂತನ ಕುಟುಂಬ ಯೋಜನೆಗಳ ಲಭ್ಯವಿದೆ. ನಿಮ್ಮ ಗ್ರಾಮಕ್ಕೆ ಭೇಟಿ ನೀಡುವ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ, ಸಮುದಯ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರ ಬಳಿ ಯೋಜನೆಗಳ ಮಾಹಿತಿ ಪಡೆದು ಆಯ್ಕೆ ಮಾಡಿಕೊಳ್ಳಿ ನಿಮ್ಮ ಕುಟುಂಬ ಸದಾಕಾಲವೂ ಸುಖವಾಗಿರುವಂತೆ ನೋಡಿಕೊಂಡು ಜವಾಬ್ದಾರ ಮೆರೆಯಿರಿ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಎಂಟು ತಿಂಗಳ ಬಾಣಂತಿ ಮೂರು ತಿಂಗಳ ಗರ್ಭಿಣಿಯಾದರೆ ಜನ್ಮ ನೀಡಿದ ಮಗುವಿಗೆ ಕನಿಷ್ಠ ಎರಡು ವರ್ಷದ ತನಕ ತಾಯಿಯ ಎದೆ ಹಾಲು ಬೇಕು. ಹೊಟ್ಟೆಯಲ್ಲಿ ಬೆಳೆಯುವ ಭ್ರೂಣಕ್ಕೆ ಯಾವ ರೀತಿ ಪೆÇೀಷಕಾಂಶಗಳು ಸಿಗಬಹುದು ಎಂಬುದನ್ನ ಚಿಂತನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ದಿನತುಂಬದ ಹೆರಿಗೆ, ಹೆರಿಗೆಯ ಸಮಯದಲ್ಲಿ ತಾಯಿಗೆ ರಕ್ತಸ್ರಾವ, ತಾಯಿ ಮರಣ ಇಲ್ಲವೇ ಶಿಶುಮರಣ ಆಗಬಹುದು. ಇವುಗಳಿಗೆ ಕಡಿವಾಣ ಹಾಕಬೇಕಾದರೆ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಉಚಿತವಾಗಿ ಎಲ್ಲಾರಿ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯ ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು.
ಒಂದೆರಡು ಮಕ್ಕಳ ಜನನದ ನಂತರ ಸ್ವಯಂ ಪ್ರೇರಿತವಾಗಿ ತಾಯಂದಿರೇ ಮಕ್ಕಳು ಬೇಡವೆಂದು ನಿರ್ಧರಿಸಿ ಕುಟುಂಬ ಕಲ್ಯಾಣ ಶಾಶ್ವತ ವಿಧಾನವನ್ನು ಅನುಸರಿಸಲು ಮುಂದೆ ಬರುತ್ತಾರೆ ಆದರೆ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಒಂದು ಸೂಕ್ತ ಸರಳ ವಿಧಾನ, ಹೊಲಿಗೆ ಇಲ್ಲ, ಗಾಯ ಇಲ್ಲ, ಆಸ್ಪತ್ರೆಯಲ್ಲಿ ತಂಗುವ ಹಾಗೆ ಇಲ್ಲ, ಪುರುಷರಲ್ಲಿ ದೈಹಿಕ ನಿಶಕ್ತಿ ಉಂಟಾಗುವುದಿಲ್ಲ, ಲೈಂಗಿಕ ಸಂಪರ್ಕದಲ್ಲಿ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ, ಇಂತಹ ಸರಳ ವಿಧಾನದ ಕಡೆಗೆ ಸಾಕ್ಷರತೆ ಹೊಂದಿದ ನಾವುಗಳು ಮುಂದೆ ಬಂದು ಸೂಕ್ತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕುಟುಂಬದಲ್ಲಿ ದಂಪತಿಗಳು ಸುಖಮಯ ದಾಂಪತ್ಯ ಜೀವನ ನಡೆಸಬಹುದು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ರೇಣುಕಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಮಾರುತಿ, ಆರೋಗ್ಯ ಸುರಕ್ಷತಾಧಿಕಾರಿ ಮಂಜುಳ, ಆಶಾ ಕಾರ್ಯಕರ್ತೆ ಶಾಹಿನಾ, ಅಂಗನವಾಡಿ ಕಾರ್ಯಕರ್ತೆಯರು ಅತ್ತೆ ಸೊಸೆಯರು ಭಾಗವಹಿಸಿದ್ದರು.