ಚಿತ್ರದುರ್ಗ
ವಿದ್ಯಾರ್ಥಿಗಳ ಜೀವನದಲ್ಲಿ ಸೋಲು-ಗೆಲುವು, ಸಂಕಷ್ಟಗಳು ಎದುರಾಗುವುದು ಸಹಜ. ಜೀವನದ ಸಂಕಷ್ಟಗಳಿಗೆ ಎದೆಗುಂದದೆ ಧೈರ್ಯವಾಗಿ ಎದುರಿಸಬೇಕು ಎಂದು ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಸೋಮವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಆಯೋಜಿಲಾಗಿದ್ದ ಸ್ನೇಹ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಅದರಂತೆ ಹೆಣ್ಣು ಸಮಾಜ, ಕುಟುಂಬ, ಸಂಕಷ್ಟಗಳನ್ನು ಸರಾಗವಾಗಿ ಸಾಗಿಸುತ್ತಾಳೆ. ಹಾಗಾಗಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು. ಮುಂದೆ ಯಾವುದೇ ಉನ್ನತ ಹುದ್ದೆಗಳಿಗೆ ಸೇರಿದರೆ ಸಮಾಜಕ್ಕೆ, ಸುತ್ತಮುತ್ತಲಿನವರಿಗೆ, ನಿಮ್ಮ ಕುಟುಂಬಗಳಿಗೆ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ವಿನಯವಂತರಾಗಿ ಬಾಳಬೇಕು ಕಿವಿಮಾತು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ ಮಾತನಾಡಿ, ಉನ್ನತ ಶಿಕ್ಷಣ ಮಹಿಳೆಯರಿಗೆ ವಿಶೇಷ ಅವಕಾಶ ನೀಡಲಿದೆ. ನೋವುಗಳನ್ನು ಸವಾಲಾಗಿ ಸ್ವೀಕರಿಸಬೇಕು. ಸೋಲು ಎದುರಾದಾಗ ಎದೆಗುಂದದೆ ನಿರಂತರ ಛಲದಿಂದ ಸಾಗಿದರೆ ಖಂಡಿತ ಗೆಲವು ಲಭಿಸಲಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಮಂಜುನಾಥ್ ಮಾತನಾಡಿ, ಜೀವನದಲ್ಲಿ ಸ್ವಾಭಿಮಾನ, ಆತ್ಮಗೌರವ, ವೃತ್ತಿಗೌರವಕ್ಕೆ ಧಕ್ಕೆ ಬಾರದಂತೆ ಬದುಕಬೇಕು. ನಾವು ಮಾತನಾಡುವ ಮಾತಿಗೆ ಸಮಾಜದಲ್ಲಿ ಮನ್ನಣೆ ಸಿಗಬೇಕು. ಹಣ ಸಂಪಾದನೆ ಮಾಡುವುದು ಸಂಪಾದನೆಯಲ್ಲ, ಉತ್ತಮ ವ್ಯಕ್ತಿತ್ವ ಸಂಪಾದನೆ ಮಾಡಬೇಕು. ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಅತ್ಯುತ್ತಮ ವ್ಯಕ್ತಿಗಳಾಗಿ, ಜೀವನದಲ್ಲಿ ಇನ್ನಷ್ಟು ಉತ್ಕøಷ್ಟವಾಗಿ ಬೆಳೆಯಬೇಕು. ವಿದ್ಯೆ, ವಿನಯ, ಆತ್ಮ ವಿಶ್ವಾಸ ನಿಮ್ಮಲ್ಲಿದ್ದರೆ ಯಶಸ್ಸು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸಿ.ಚನ್ನಕೇಶವ, ಲೀಲಾವತಿ, ಡಾ. ಡಿ.ಓ.ಸಿದ್ದಪ್ಪ, ಡಾ.ಶಿವಣ್ಣ, ಡಾ. ಮಧುಸೂದನ್, ಬಿ.ಹೆಚ್.ಕುಮಾರಸ್ವಾಮಿ, ಎಂ.ಗಿರೀಶ್, ಆರ್. ಶಿವಪ್ರಸಾದ್, ಆರ್.ವೆಂಕಟೇಶ್, ಸರಿತಾ, ಶಕುಂತಲ ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.