ಚಿತ್ರದುರ್ಗ
ತಿಂಗಳಿಗೆ ಒಂದೆರೆಡು ತಂಬಾಕು ದಾಳಿಗಳು ಮಾತ್ರ ಆಗುತ್ತಿದ್ದು, ತಂಬಾಕು ದಾಳಿಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಾದ್ಯಂತ ತಂಬಾಕು ಕಾರ್ಯಾಚರಣೆ ನಡೆಸುವಾಗ ಪೊಲೀಸ್ ಇಲಾಖೆಯವರು ಹೆಚ್ಚಿನ ಸಹಕಾರ ನೀಡಬೇಕು ಎಂದು ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆದ ಕೋಟ್ಪಾ-2003ರ ಕಾಯ್ದೆಯ ತಾಲ್ಲೂಕುಮಟ್ಟದ ಸಮನ್ವಯತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ತಂಬಾಕು ದಾಳಿಗಳನ್ನು ಕೈಗೊಳ್ಳಬೇಕು ಮತ್ತು ಪ್ರತಿ ದಿನ ಕಸ ವಿಲೇವಾರಿ ವಾಹನಗಳಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಡಿಯೋ ಜಿಂಗಲ್ಸ್ಗಳ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸುವಂತೆ ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿಗಳಿಗೆ ತಿಳಿಸಿದರು.
ಶಾಲೆಗಳ ಸುತ್ತ-ಮುತ್ತ 100 ಗಜದ ವ್ಯಾಪ್ತಿಯಲ್ಲಿ ತಂಬಾಕು ದಾಳಿಯನ್ನು ಕೈಗೊಂಡು, ತಂಬಾಕು ಮಾರಾಟ ಮಾಡದಂತೆ, ಯಾವ ಶಾಲೆಗಳ ಹತ್ತಿರ ತಂಬಾಕು ಮಾರಾಟವಾಗುತ್ತಿದೆಯೋ ಅಂತಹ ಶಾಲೆಗಳ ಪಟ್ಟಿಯನ್ನು ಮಾಡಿ, ತಂಬಾಕು ದಾಳಿಯನ್ನು ಕೈಗೊಳ್ಳುವುದು. ಪ್ರತಿಯೊಂದು ಶಾಲೆಗಳ ಹತ್ತಿರ ತಂಬಾಕು ಮಾರಾಟವಾಗದಂತೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಶಾಲಾ ತಂಬಾಕು ನಿಯಂತ್ರಣ ಸಭೆಯನ್ನು ನಡೆಸುವಂತೆ ಹಾಗೂ ಎಲ್ಲಾ ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳೆಂದು ಮಾಡುವ ನಿಟ್ಟಿನಲ್ಲಿ ಮುಖ್ಯೋಪಾಧ್ಯಾಯರು ಸೂಕ್ತ ಕ್ರಮ ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಕಚೇರಿಗಳಾಗಿ ಮಾಡಬೇಕೆಂದು ಇಲಾಖೆಯ ಎಲ್ಲಾ ಕಚೇರಿ ಮುಖ್ಯಸ್ಥರಿಗೆ ಸೂಚಿಸಿದ ಅವರು, ಪ್ರತಿ ದಿನ ಕಸ ವಿಲೇವಾರಿ ವಾಹನಗಳಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಡಿಯೋ ಜಿಂಗಲ್ಸ್ಗಳ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಮಾತನಾಡಿ, ಕೋಟ್ಪಾ-2003 ರ ಕಾಯ್ದೆಯ ಅಡಿಯಲ್ಲಿ 2024-25ನೇ ಸಾಲಿನಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ಏಪ್ರಿಲ್ನಿಂದ ಜೂನ್ವರೆಗೆ 2 ತಂಬಾಕು ದಾಳಿಗಳನ್ನು ನಡೆಸಿದ್ದು, ಸೆಕ್ಷನ್-4 ಅಡಿಯಲ್ಲಿ 30 ಕೇಸುಗಳನ್ನು ದಾಖಲಿಸಿ ರೂ. 3125 ದಂಡವನ್ನು, ಸೆಕ್ಷನ್-6ಎ ಅಡಿಯಲ್ಲಿ 9 ಕೇಸುಗಳನ್ನು ದಾಖಲಿಸಿ ರೂ. 925 ದಂಡವನ್ನು ಮತ್ತು ಸೆಕ್ಷನ್-6ಬಿ ಅಡಿಯಲ್ಲಿ 7 ಕೇಸುಗಳನ್ನು ದಾಖಲಿಸಿ ರೂ. 1200 ದಂಡವನ್ನು ಒಟ್ಟು 46 ಕೇಸುಗಳನ್ನು ದಾಖಲಿಸಿ ರೂ. 5,250/- ದಂಡವನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜಂಟಿ ಖಾತೆಗೆ ಕಟ್ಟಿರುವ ಬಗ್ಗೆ ಮಾಹಿತಿಯನ್ನು ಸಭೆಗೆ ತಿಳಿಸಿದರು.
ತಂಬಾಕು ನಿಯಂತ್ರಣಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್ ಮಾತನಾಡಿ, ತಾಲ್ಲೂಕು ಮಟ್ಟದ ತಂಬಾಕು ತನಿಖಾ ತಂಡವು ಕನಿಷ್ಟ ವಾರಕ್ಕೊಮ್ಮೆಯಾದರೂ ತಂಬಾಕು ದಾಳಿಯನ್ನು ನಡೆಸಲು ತಹಶೀಲ್ದಾರ್ ಅವರಲ್ಲಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಡಾ.ನಾಗವೇಣಿ, ವಾರಕ್ಕೊಮ್ಮೆ ತನಿಖಾ ತಂಡವು ದಾಳಿ ನಡೆಸಬೇಕೆಂದು ತನಿಖಾ ತಂಡದ ಸದಸ್ಯರಿಗೆ ಸೂಚಿಸಿದರು.
ಸಭೆಯಲ್ಲಿ ಚಿತ್ರದುರ್ಗ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರು, ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಆರ್ಬಿಎಸ್ಕೆ ವೈದ್ಯಾಧಿಕಾರಿಗಳು ಮತ್ತು ನರ್ಸಿಂಗ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಸಿಓ, ನೋಡೆಲ್ ಅಧಿಕಾರಿ ಡಿಡಿಆರ್ಸಿ, ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯವರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.