ಚಿತ್ರದುರ್ಗಜುಲೈ25:
ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಪರೀಕ್ಷೆ ಮಾಡಿಸುವುದು ಬಹಳ ಮುಖ್ಯ. ರಕ್ತದ ಗುಂಪು ಪರೀಕ್ಷೆ ಸುಲಭ ಮತ್ತು ಸರಳ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಐನಳ್ಳಿ ಕುರುಬರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಮತ್ತು ವಿಮುಕ್ತಿ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಎಂಟು ವಿಭಿನ್ನ ರಕ್ತದ ಗುಂಪುಗಳಿದ್ದು, ವಿದ್ಯಾರ್ಥಿಗಳು ರಕ್ತ ಪರೀಕ್ಷೆ ಮಾಡಿಸಿ, ತಮ್ಮ ರಕ್ತದ ಗುಂಪನ್ನು ತಿಳಿದಿರಬೇಕು. 18 ವರ್ಷದ ನಂತರ ರಕ್ತದಾನ ಮಾಡಲು ಅಥವಾ ಪಡೆಯಲು ರಕ್ತದ ಗುಂಪು ಪರೀಕ್ಷೆ ಅತ್ಯವಶ್ಯಕ ಎಂದರು.
ಆರೋಗ್ಯ ಇಲಾಖೆಯ ಆರ್ಬಿಎಸ್ಕೆ ತಂಡದ ವೈದ್ಯಾಧಿಕಾರಿಗಳು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ, ಗಂಭೀರ ಸ್ವರೂಪದ ಕಾಯಿಲೆಗಳನ್ನು ಪತ್ತೆ ಹಚ್ಚಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಲು ಪ್ರಯತ್ನಿಸುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಭವಿಷ್ಯದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಎದುರಾದಾಗ ಯೋಜನೆ ಮಾಡಲು, ರಕ್ತದ ಗುಂಪು ಪರೀಕ್ಷೆ ಅವಶ್ಯಕತೆ ಇದ್ದು, ಯುವಕರು ರಕ್ತದಾನದ ಮಹತ್ವದ ಬಗ್ಗೆ ತಿಳಿದು, ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಕ್ಯಾಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶಮೈಲಾ ಅವರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು, ಪ್ರೌಢಶಾಲೆಯಲ್ಲಿನ 108 ವಿದ್ಯಾರ್ಥಿಗಳಿಗೆ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ರಕ್ತದ ಗುಂಪು ಪರೀಕ್ಷೆ ಮಾಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಹೆಚ್.ಎನ್.ಮಂಜಪ್ಪ, ವಿಮುಕ್ತಿ ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ, ಸಿಬ್ಬಂದಿಗಳಾದ ಬಿಬಿ ಜಾನ್, ನಾಗರತ್ನ, ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ, ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ಬಿ.ಕವಿತಾ, ಆಶಾ ಕಾರ್ಯಕರ್ತೆಯರಾದ ಲಕ್ಷ್ಮಿಬಾಯಿ, ಸುಮಾ, ಸುಮಿತ್ರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು