ಸಿರುಗುಪ್ಪ: ನಗರದ ವಿಶ್ವಜ್ಯೋತಿ ಮಾಂಟೇಸರಿ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದ ‘ಸಿರುಗುಪ್ಪ ಬೀಚಿ’ ಎಂದು ಹೆಸರಾದ ನಿರೂಪಕರು ಹಾಸ್ಯ ಕಲಾವಿದರಾದ ಶ್ರೀ ಜೆ.ನರಸಿಂಹಮೂರ್ತಿಯವರು ಮಾತನಾಡಿ “ನಮ್ಮ ತಾಯಿ ಗರ್ಭದಿಂದ ಬಂದ ತೊದಲ್ ನುಡಿ ಮಾತೃಭಾಷೆ ಕನ್ನಡವಾಗಿದ್ದು, ಸಾವಿರಾರು ವರ್ಷಗಳ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವುದು ಹೆಮ್ಮೆಯ ವಿಷಯವಾಗಿದೆ. ಕನ್ನಡ ನಾಡು ಸರ್ವ ಜನಾಂಗದ ಶಾಂತಿಯ ನೆಲೆಯಾಗಿದ್ದು, ನಮ್ಮ ಭಾಷೆಯ ಸಾಹಿತ್ತಿಕ ಸೊಗಡು ಓದುಗರನ್ನು ಆಕರ್ಷಿಸುತ್ತದೆ. ಇಂತಹ ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಪ್ರೀತಿಸೋಣ, ಗೌರವಿಸೋಣ. ಕನ್ನಡ ನಾಡು ನುಡಿಗಾಗಿ ನಮ್ಮ ಕೈಲಾದಷ್ಟು ಸೇವೆಯನ್ನು ಸಲ್ಲಿಸೋಣ. ಪ್ರತಿಯೊಬ್ಬ ಅನ್ನಭಾಷಿಕರನ್ನು ಕನ್ನಡ ಭಾಷೆಯಲ್ಲಿ ಮಾತಾಡಲು ಪ್ರೇರೇಪಿಸುವ ಮೂಲಕ ಅನ್ಯ ಭಾಷೆಗಳ ಪ್ರಭಾವದ ನಡುವೆ ನಮ್ಮ ಕನ್ನಡ ಭಾಷೆಯ ಅನನ್ಯತೆಯನ್ನು ಉಳಿಸಿ ಬೆಳೆಸಲು ಶ್ರಮಿಸೋಣ” ಎಂದರು.
ಈ ಕಾರ್ಯಕ್ರಮದಲ್ಲಿ ಕನ್ನಡದ ಕವಿ ದ.ರಾ. ಬೇಂದ್ರೆಯವರ ನಾಕು ತಂತಿಯ ಒಂದು ಹಾಡನ್ನು ತೆಗೆದುಕೊಂಡು ಅದಕ್ಕೆ ಬೇಂದ್ರೆಯವರ ಬೇರೆ ಬೇರೆ ಹಾಡುಗಳನ್ನು ಸಂಯೋಜಿಸಿ ಇಡೀ ಬೇಂದ್ರೆಯವರ ಜೀವನ ಚರಿತ್ರೆಯನ್ನು ಹಾಡಿನ ರೂಪಕದ ಮೂಲಕ ಮಕ್ಕಳು ಪ್ರಸ್ತುತಪಡಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಬೇಂದ್ರೆಯವರ ನಾನು ಬಡವ ನೀನು ಬಡವಿ, ನೀ ಹಿಂಗ ನೋಡಬೇಡ ನನ್ನ ಇಂತಹ ಸಾಹಿತ್ಯದ ಮಜಲುಗಳನ್ನು ರೂಪಕದಲ್ಲಿ ಬಳಸಲಾಗಿತ್ತು. ಮಕ್ಕಳಿಂದ ನಡೆದ ಡೊಳ್ಳು ನೃತ್ಯ, ಜಾನಪದ ನೃತ್ಯಗಳು,ಕಾಂತಾರದ ದೃಶ್ಯ ಜನಮನ ಸೆಳೆದವು. ಇದೇ ಸಂದರ್ಭದಲ್ಲಿ ಹಾಸ್ಯ ಕಲಾವಿದರಾದ ಜೆ.ನರಸಿಂಹಮೂರ್ತಿಯವರು ತಮ್ಮ ಹಾಸ್ಯ ಪ್ರಸಂಗಗಳ ಮೂಲಕ ನೆರೆದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಸದರಿ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ವಿವೇಕಾನಂದ, ಶ್ರೀಮತಿ ಗೌರಿ, ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ರಾಜೇಶ್ವರಿ ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಭಾಗವಹಿಸಿದ್ದರು.





