ಯುವತಿ ಸಾವಿನ ಪ್ರಕರಣ: ಅಗೋಲಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

Vijayanagara Vani
ಯುವತಿ ಸಾವಿನ ಪ್ರಕರಣ: ಅಗೋಲಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
ಕೊಪ್ಪಳ, ಸೆಪ್ಟೆಂಬರ್ 15  ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಸೆಪ್ಟೆಂಬರ್ 15ರಂದು ಗಂಗಾವತಿ ತಾಲೂಕಿನ ಅಗೋಲಿ ಗ್ರಾಮಕ್ಕೆ ಭೇಟಿ ನೀಡಿ, ದಲಿತ ಸಮುದಾಯಕ್ಕೆ ಸೇರಿದ ಯುವತಿ ಮರಿಯಮ್ಮ (21) ಸಾವಿನ ಪ್ರಕರಣದ ಬಗ್ಗೆ ಮಾಹಿತಿ ಪಡೆದರು.
ಸಂಸದರಾದ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ಧಿ ಅವರೊಂದಿಗೆ, ಗಂಗಾವತಿ ತಾಲೂಕಿನ ಅಗೋಲಿ ಗ್ರಾಮದ ಮರಿಯಮ್ಮಳ ತವರುಮನೆಗೆ ಭೇಟಿ ನೀಡಿದ ಸಚಿವರು, ಯುವತಿಯ ತಂದೆ ಗಾಳೆಪ್ಪ ಮತ್ತು ತಾಯಿ ಗಾಳೆಮ್ಮ ಅವರಿಗೆ ಘಟನೆಯ ಬಗ್ಗೆ ಕೇಳಿದರು. ಮರಿಯಮ್ಮಳ ಕುಟುಂಬದವರಿಗೆ ಸಾಂತ್ವನ ಹೇಳಿದರು.
ನಮ್ಮ ಮಗಳು 2023ರಲ್ಲಿ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದಳು. ಗಂಡನ ಮನೆಯಲ್ಲಿ ಹಿಂಸೆಯಿ0ದಾಗಿ ಇದೀಗ ಸಾವಿಗೀಡಾಗಿದ್ದಾಳೆ. ನಮ್ಮ ಮಗಳ ಮೇಲೆ ಹಲ್ಲೆಯಾಗಿದೆ. ಮಗಳ ಸಾವಿನಿಂದಾಗಿ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಇದಕ್ಕೆ ನ್ಯಾಯ ಒದಗಿಸಿಕೊಡಬೇಕು. ನಾವು ಕೂಲಿ ಮಾಡಿ ಬದುಕುವ ಜನ. ಉತ್ತಮ ಸಂಸಾರ ಕಟ್ಟಿಕೊಂಡು ಬಾಳು ಸಾಗಿಸಬೇಕಾದ ಮಗಳು ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದರಿಂದ ನಾವು ಕಂಗಾಲಾಗಿದ್ದೇವೆ. ಮುಂದೇನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ನಮಗೆ ಸರ್ಕಾರದಿಂದ ಪರಿಹಾರ ಕಲ್ಪಿಸಿಕೊಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮೃತ ಯುವತಿಯ ಪಾಲಕರು ಸಚಿವರಲ್ಲಿ ಮನವಿ ಮಾಡಿದರು.
ಈ ವೇಳೆ ಘಟನೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಚಿವರು ಚರ್ಚಿಸಿದರು. ಘಟನೆಯ ಬಗ್ಗೆ ಕೂಡಲೇ ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಚಿವರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಘಟನೆಯ ಬಗ್ಗೆ ವರದಿ ಪಡೆದುಕೊಂಡು ನಿಯಮಾನುಸಾರ ಪರಿಹಾರ ನೀಡುವುದಕ್ಕೆ ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಚಿವರಲ್ಲಿ ಮನವಿ : ಕೊಪ್ಪಳ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಇದರಿಂದ ದಲಿತ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಜಿಲ್ಲೆಯಲ್ಲಿ ಇನ್ನು ಸಹ ಅಸ್ಪೃಶ್ಯತೆ ಜೀವಂತವಾಗಿದೆ. ಇದನ್ನು ಬೇರುಸಮೇತ ಕಿತ್ತು ಹಾಕಲು ಕ್ರಮ ವಹಿಸಬೇಕು ಎಂದು ಇದೆ ವೇಳೆ ದಲಿತ ಮುಖಂಡರು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಪೊಲೀಸ್ ಅಧಿಕಾರಿಗಳಾದ ಸಿದ್ಧಲಿಂಗಗೌಡ ಪಾಟೀಲ, ಎಂ.ಡಿ.ಫೈಜುಲ್ಲಾ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಜು ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article
error: Content is protected !!