ಸ್ತ್ರೀ ಶಕ್ತಿಯ ಪಾರಮ್ಯವನ್ನು ಸೂಚಿಸುವ ನವರಾತ್ರಿಯ ಹಬ್ಬದಲ್ಲಿ ತಾಯಿ ಪಾರ್ವತಿಯನ್ನು ಒಂಬತ್ತು ದಿನ ಒಂಬತ್ತು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ. ದೇವಿಯ ಪ್ರತಿಯೊಂದು ರೂಪಕ್ಕೂ ತನ್ನದೇ ಆದ ವೈಶಿಷ್ಟವಿದ್ದು ಅವುಗಳನ್ನು ಇಲ್ಲಿ ವರ್ಣಿಸಲಾಗಿದೆ.
ನವರಾತ್ರಿ ಇಲ್ಲವೆ ದಸರಾ ಎಂದು ಕರೆಯಲ್ಪಡುವ ಈ ಹಬ್ಬದಲ್ಲಿ ನಾವು ಶಕ್ತಿ ದೇವತೆ ದೇವಿಯನ್ನು ಒಂಬತ್ತು ಬೇರೆ ಬೇರೆ ವಿಧದ ರೂಪಗಳಲ್ಲಿ ಪೂಜಿಸುತ್ತೇವೆ. ಹರಿಹರ ಬ್ರಹ್ಮಾದಿಗಳನ್ನು ಸೃಷ್ಟಿಸಿದ ದೇವಿಯು ಅವರಿಗೆ ಈ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು
ನಿರ್ವಹಿಸಲು ಆದೇಶಿಸಿದಳು.
ಹರಿಹರ ಬ್ರಹ್ಮಾದಿಗಳು ದೇವಿಯ ಆದೇಶದಂತೆ ತಮ್ಮ ಕಾರ್ಯವನ್ನು ನೆರವೇರಿಸುತ್ತಿದ್ದರೂ ಆಗಾಗ ಬಂದೊದಗುವ ವಿಘ್ನಗಳನ್ನು, ರಾಕ್ಷಸರನ್ನು ನಿವಾರಿಸಲು ಶ್ರೀದೇವಿಯಿಂದಲೇ ಸಾಧ್ಯವಾಗಿದ್ದು ಆಕೆ ಮಾತೃ ಸ್ವರೂಪಳು.
ಸ್ತ್ರೀ ಕುಲದ ಪಾರಮ್ಯವನ್ನು ಸೂಚಿಸುವ ಈ ನವರಾತ್ರಿಯ ಹಬ್ಬದಲ್ಲಿ ಶಕ್ತಿ ಸ್ವರೂಪಿಣಿ ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ.
ಪ್ರಥಮಂ ಶೈಲ ಪುತ್ರಿಚ,ದ್ವಿತೀಯಂ ಬ್ರಹ್ಮಚಾರಿಣಿ ತೃತೀಯಂ ಚಂದ್ರಘ0ಟೇತಿ,ಕೂಶ್ಮಾಂಡೇತಿ ಚತುರ್ಥಕಂ.
ಪಂಚಮಂ ಸ್ಕಂದ ಮಾತೇ ತೀ,ಷಷ್ಠಂ ಕಾತ್ಯಾಯನೀತಿ ಚ
ಸಪ್ತಮಂ ಕಾಲರೇತಿಚ,ಮಹಾ ಗೌರಿತಿ ಚಾಷ್ಟಮಂ
ನವಮಂ ಸಿದ್ದಿ ಧಾತ್ರಿಚ,ನವದುರ್ಗ ಪ್ರಕೀರ್ತಿತಹ
ಉಕ್ತಾನೇತ್ಯಾನಿ ನಾಮಾನಿ,ಬ್ರಹ್ಮಣ್ಣೈವ ಮಹಾತ್ಯನಾ
ಅಗ್ನಿನಾ ದಹ್ಯ ಮಾನಸ್ತು ಶತ್ರು ಮಧ್ಯೆ ಗತೋರಣೆ ವಿಷಮೆ ದುರ್ಗವೇ ಚೈವ ಭಯಾರ್ಥಾ ಶರಣಂ ಗತಹ
ನವರಾತ್ರಿಯ ಪ್ರಥಮ ದಿವಸ ಶೈಲ ಪುತ್ರಿಯನ್ನು ಪೂಜಿಸುವರು. ಶೈಲ ಪುತ್ರಿಯು ಹೆಸರೇ ಹೇಳುವಂತೆ ಹಿಮವಂತನ ಮಗಳಾಗಿದ್ದು ತಾಯಿ ದುರ್ಗೆಯ ಮೊದಲ ಪುನರ್ಜನ್ಮವಾಗಿದ್ದಾಳೆ. ಹಳದಿ ವರ್ಣದ ಬಟ್ಟೆಯನ್ನು ಧರಿಸಿದ್ದು ಶುದ್ಧತೆ ಮತ್ತು ಪ್ರಕೃತಿಯ ಪ್ರತೀಕವಾಗಿರುವ ಆಕೆ, ಶೂಲವನ್ನು ಕೈಯಲ್ಲಿ ಹಿಡಿದು ವೃಷಭಾರೂಢಳಾಗಿದ್ದಾಳೆ . ಹಳದಿ ಬಣ್ಣವು ಚೈತನ್ಯ ಮತ್ತು ಶಾಂತಿ ಸಮಾಧಾನಗಳ ಸಂಕೇತವಾಗಿದ್ದು ಬ್ರಾಹ್ಮಿ ಮುಹೂರ್ತದಲ್ಲಿ ಶುಬ್ರಸ್ನಾತರಾಗಿ ಹಳದಿ ಬಟ್ಟೆಗಳನ್ನು ಧರಿಸಿ ದೇವಿಯನ್ನು ಪೂಜಿಸಿ ಆಕೆಯ ಕೃಪೆಗೆ ಪಾತ್ರರಾಗಬೇಕು.
ವಂದೇ ವಾಂಚಿತ ಲಾಭಾಯ,ಚಂದ್ರಾರ್ಥಕೃತ ಶೇಖರಾಂ
ವೃಷಾರೂಢಮ್ ಶೂಲ ಧರಾಂ, ಶೈಲ ಪುತ್ರಿ ಯಶಸ್ವಿನಿಂ
ಎಂಬ ಮಂತ್ರವನ್ನು ಜಪಿಸುತ್ತಾ ದೇವಿಯನ್ನು ಪೂಜಿಸಬೇಕು.
ಚಂಚಲ ಚಿತ್ತವನ್ನು ಹೊಂದಿದವರು ಮೂಲಾಧಾರ ಚಕ್ರದಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ. ಆದ್ದರಿಂದ ಯೋಗ ಸಾಧಕರು ಚಂಚಲಚಿತ್ತರಿಗೆ ಶೈಲ ದೇವಿಯನ್ನು ಪೂಜಿಸಲು ಹೇಳುವರು.ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಯಸುವವರು ಶೈಲಪುತ್ರಿಯನ್ನು ಪೂಜಿಸಿ ಆರಾಧಿಸಬೇಕು. ಮೂಲಾಧಾರ ಚಕ್ರದ ಮೇಲೆ ಗಮನವಿಟ್ಟು ಧ್ಯಾನವನ್ನು ಮಾಡುವ ಮೂಲಕ ಆಧ್ಯಾತ್ಮ ಸಾಧನೆಯ ಮೊದಲ ಮೆಟ್ಟಿಲನ್ನು ಏರಬಹುದು.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್