ಬೇಲೂರು – ಜೂನ್-೬:
ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಗಳಿಸಿಕೊಂಡು ಬಾಳಬೇಕು. ಜೀವನದಲ್ಲಿ ಬರುವ ಕಷ್ಟಗಳು ಸುಖಾಗಮನದ ಹೆಗ್ಗುರುತು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಕಾರ್ಜುವಳ್ಳಿ ಸಂಸ್ಥಾನ ಹಿರೇಮಠದಲ್ಲಿ ಮನೆ ಮನೆಗೆ ರೇಣುಕ ಮನ ಮನಕೆ ರೇಣುಕ ತತ್ವ ಪ್ರಚಾರ ಅಭಿಯಾನದ ರಜತ ಸಂಚಿಕೆ ಬಿಡುಗಡೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವನದ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಜೀವಗಳು ಎಷ್ಟೋ ಹೇಳಲಾಗದು. ಅವರವರು ಬದುಕಿನಲ್ಲಿ ಅಳವಡಿಸಿಕೊಂಡ ನೀತಿ ನಿಯತ್ತುಗಳೇ ಕಾರಣ. ಭೌತಿಕ ಸಂಪನ್ಮೂಲಗಳಾಗಲಿ ಸಿರಿ ಸಂಪತ್ತಿನ ಸಂಗ್ರಹವಾಗಲಿ ಮಾನವನಿಗೆ ಸಂತೃಪ್ತಿ ಸಮಾಧಾನ ತರಲಾರವು. ಇದರೊಂದಿಗೆ ಒಂದಿಷ್ಟಾದರೂ ಆಧ್ಯಾತ್ಮಿಕ ಹಸಿವು ಬೇಕು. ಇಂದು ಎಲ್ಲೆಡೆ ಶಾಂತಿಗಾಗಿ ಹುಡುಕಾಟ ನಡೆದಿದೆ. ಆದರೆ ಕಳೆದ ಸ್ಥಾನದಲ್ಲಲ್ಲ ಬೇರೆಲ್ಲಿಯೋ ಅನ್ವೇಷಣೆ ನಡೆಯುತ್ತಿದೆ. ಮಂತ್ರ ತೀರ್ಥ ಗುರು ದೇವರು ದೈವ ಮತ್ತು ವೈದ್ಯರಲ್ಲಿ ಯಾವ ಭಾವನೆಗಳನ್ನು ಇಟ್ಟು ನಡೆಯುತ್ತೇವೆಯೋ ಅದಕ್ಕೆ ತಕ್ಕ ಫಲಗಳನ್ನು ಮನುಷ್ಯ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಜ್ಜನರ ಒಡನಾಟ ಜೀವನ ಉತ್ಕರ್ಷತೆಗೆ ಕಾರಣವಾದರೆ ದುರ್ಜನರ ಸಹವಾಸ ನಾಶಕ್ಕೆ ಮೂಲವಾಗುತ್ತದೆ. ತನುವೆಂಬ ತೋಟದಲ್ಲಿ ಆಧ್ಯಾತ್ಮದ ಕೃಷಿಗೈಯಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳವರು ಸಿದ್ಧಾಂತ ಶಿಖಾಮಣಿ ವಿಚಾರ ಧಾರೆಗಳನ್ನು ಪ್ರಚಾರ ಮಾಡುವ ಸದುದ್ದೇಶದಿಂದ ಮನೆ ಮನೆಗೆ ರೇಣುಕ-ಮನ ಮನಕೆ ರೇಣುಕ ವಿಶೇಷ ಹೆಸರಿನೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ಸಂಗತಿ ಎಂದು ಹರುಷ ವ್ಯಕ್ತಪಡಿಸಿ ಶ್ರೀಗಳವರಿಗೆ ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶ್ರೀ ಮಠದ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಸಿದ್ದೇಶ ನಾಗೇಂದ್ರ ಅವರು ದಿನಕ್ಕೊಂದು ಬಣ್ಣ ಕ್ಷಣಕ್ಕೊಂದು ಮಾತು ಬದಲಾಯಿಸಿ ಬದುಕುವವರಿಗೆ ಈ ಪ್ರಪಂಚದಲ್ಲಿ ಬೆಲೆ ಜಾಸ್ತಿ. ಧರ್ಮಕ್ಕೆ ಮನುಷ್ಯ ತಲೆ ಬಾಗಬೇಕೇ ಹೊರತು ದುಷ್ಟರಿಗಲ್ಲ. ಮಾನವೀಯತೆಗೆ ತಲೆ ಬಾಗಬೇಕೇ ಹೊರತು ಅವಿವೇಕಿಗಳಿಗಲ್ಲ. ಕಾರ್ಜುವಳ್ಳಿ ಸದಾಶಿವ ಶ್ರೀಗಳು ಬಹಳಷ್ಟು ಪರಿಶ್ರಮ ವಹಿಸಿ ಶ್ರೀ ಮಠದ ಅಭಿವೃದ್ಧಿ ಮಾಡುತ್ತಿರುವುದು ಭಕ್ತ ಸಮುದಾಯಕ್ಕೆ ಸಂತೋಷ ಉಂಟು ಮಾಡಿದೆ ಎಂದರು. ನೇತೃತ್ವ ವಹಿಸಿದ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಏನು ಹೇಳಬೇಕು ಎನ್ನುವುದು ಜ್ಞಾನ ಹೇಗೆ ಹೇಳಬೇಕೆನ್ನುವುದು ವ್ಯಕ್ತಿತ್ವ ಎಷ್ಟು ಹೇಳಬೇಕು ಎನ್ನುವುದು ಕೌಶಲ್ಯ ಹೇಳಬೇಕೋ ಬೇಡವೋ ಎಂಬುದು ವಿವೇಕ. ಅಶಾಂತಿಯಿAದ ಬಳಲುವ ಜನತೆಗೆ ಅಧ್ಯಾತ್ಮದ ಜ್ಞಾನದ ಅರಿವು ಮೂಡಿಸುವುದೇ ಸಮಾರಂಭದ ಮೂಲ ಉದ್ದೇಶವಾಗಿದೆ. ಭಕ್ತರ ಸಹಕಾರ-ಜಗದ್ಗುರುಗಳವರ ಆಶೀರ್ವಾದ ಬಲದಿಂದ ಶ್ರೀ ಮಠದ ಪರಿಸರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದು ತಮಗೆ ಸಂತೃಪ್ತಿ ತಂದಿದೆ ಎಂದರು. ಅಧ್ಯಕ್ಷತೆ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜೀವನದಲ್ಲಿ ಅನುಭವಗಳು ಕಲಿಸುವಷ್ಟು ಪಾಠಗಳನ್ನು ಯಾವುದೇ ವಿಶ್ವ ವಿದ್ಯಾಲಯಗಳು ಕಲಿಸಲಾರವು. ಕಾರ್ಜುವಳ್ಳಿ ಶ್ರೀಗಳವರು ಅಲ್ಪ ಸಮಯದಲ್ಲಿ ಅದ್ಭುತ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು, ಸಂಕಲಾಪುರದ ಧರ್ಮರಾಜೇಂದ್ರ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಎಸ್.ಎಸ್.ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎ.ದೇವರಾಜ ಶಾಸ್ತಿçಗಳು ನುಡಿ ನಮನ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಕೆ.ಎಸ್.ಮಂಜೇಗೌಡ, ಮುರುಳಿ ಮೋಹನ್, ಮಹೇಶ್ ಎಂ.ಎಸ್., ಬಿ.ರೇಣುಕಪ್ರಸಾದ್, ಡಿ.ಎಸ್.ಜಯಣ್ಣ, ಡಾ|| ಎಂ.ಈ.ಜಯರಾಜ್, ವೈ.ಬಿ.ಟೀಕರಾಜ್, ಪುನೀತ ಬನ್ನಹಳ್ಳಿ, ಅಜಿತ್ ಚಿಕ್ಕಣಗಾಲ್, ಶಾಂತಪ್ಪ ದೇವರಮನೆ, ಕೆ.ಶಾಂತರಾಜ್ ಕೆರೆಹಳ್ಳಿ, ಎಂ.ಜೆ.ಬಸವಣ್ಣ, ಸಿ.ಎಸ್.ಮಹೇಶ್ ಚಿಕ್ಕೊಟೆ, ಕಟ್ಟೆಗದ್ದೆ ನಾಗರಾಜು, ವಿನೋದಕುಮಾರ್ ಮರಸು, ಧರಣೇಂದ್ರ ಹೆಚ್.ಎಂ. ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಗಣ್ಯರು ಮತ್ತು ದಾನಿಗಳು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ವನದುರ್ಗಾ ಪರಮೇಶ್ವರಿ ಮಹಿಳಾ ಮಂಡಳಿಯಿAದ ಪ್ರಾರ್ಥನೆ, ಪೂಜಾ ಯಶವಂತ ಇವರಿಂದ ಸ್ವಾಗತ ಜರುಗಿತು. ಶ್ರೀಮತಿ ಪೂರ್ಣಿಮಾ ಎಸ್.ಎಸ್. ಮತ್ತು ಉಮೇಶ ಎಂ.ಬಿ. ಮುರುಡೂರು ಇವರಿಂದ ನಿರೂಪಣೆ ನಡೆಯಿತು.
ಸಮಾರಂಭಕ್ಕೂ ಮುನ್ನ ಶ್ರೀ ಮಠದ ಪ್ರಾಂಗಣದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವ ಇಷ್ಟಲಿಂಗ ಮಹಾಪೂಜಾ ಜರುಗಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.
ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಬಾಳೆಹೊನ್ನೂರು
ಕಷ್ಟಗಳು ಸುಖಾಗಮನದ ಹೆಗ್ಗುರುತು : ಶ್ರೀ ರಂಭಾಪುರಿ ಜಗದ್ಗುರುಗಳು
