Ad image

ಕೆರೆಯ ನೀರು ಕುಡಿಯಲು ಯೋಗ್ಯವಿಲ್ಲ, ಮಾಹಿತಿ ನೀಡಿದ ಆರೋಗ್ಯ ಇಲಾಖೆ:

Vijayanagara Vani
ಕೆರೆಯ ನೀರು ಕುಡಿಯಲು ಯೋಗ್ಯವಿಲ್ಲ, ಮಾಹಿತಿ ನೀಡಿದ ಆರೋಗ್ಯ ಇಲಾಖೆ:

ಸಿರುಗುಪ್ಪ.ಜೂ.11:- ತಾಲೂಕಿನ ಕೆ.ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮುದೇನೂರು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೆರೆಯ ನೀರು ವಾಸನೆ ಬರುತ್ತಿದ್ದು, ಇದೇ ನೀರನ್ನು ಗ್ರಾ.ಪಂ. ಅಧಿಕಾರಿಗಳು ಸಾರ್ವಜನಿಕರಿಗೆ ಕುಡಿಯಲು ಪೂರೈಕೆ ಮಾಡುತ್ತಿದ್ದಾರೆ. ಸುಮಾರು 2-3 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮವು ವೇದಾವತಿ ಹಗರಿನದಿ ಪಕ್ಕದಲ್ಲಿದ್ದು, 2009ರಲ್ಲಿ ಬಂದ ನೆರೆ ಹಾವಳಿಯಿಂದಾಗಿ ಈ ಗ್ರಾಮವನ್ನು ಸ್ಥಳಾಂತರ ಮಾಡಿದ್ದು, ಸ್ಥಳಾಂತರವಾದ ನವಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಕೆರೆಯನ್ನು ನಿರ್ಮಾಣ ಮಾಡಲಾಗಿದೆ, ಆದರೆ ಕೆರೆಯ ನಿರ್ವಹಣೆಯ ಕೊರತೆಯಿಂದ ಕೆರೆಯ ನೀರು ಕುಡಿಯಲು ಯೋಗ್ಯವಾಗಿಲ್ಲವೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಕಲುಷಿತ ನೀರು ಸೇವನೆ ಮಾಡಿ ಚಿತ್ರದುರ್ಗಾ ಮತ್ತು ಮೈಸೂರು ಜಿಲ್ಲೆಯಲ್ಲಿ ಅನೇಕರು ಸಾವನ್ನಪ್ಪಿದ್ದಾರೆ, ಅದ್ದರಿಂದ ಜನರಿಗೆ ಶುದ್ಧ ನೀರೊದಗಿಸಬೇಕು, ಅಶುದ್ಧ ನೀರು ಸೇವಿಸಿ ಯಾರಾದರು ಸಾವನ್ನಪ್ಪಿದರೆ ಸಂಬAಧಿಸಿದ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಇತ್ತೀಚೆಗಷ್ಟೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದರೆ ಸದ್ಯ ಮುದೇನೂರು ಕೆರೆಯಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಹಸಿರು ಪಾಚಿ ಕಂಡು ಬರುತ್ತಿದ್ದು, ಈ ನೀರನ್ನೆ ಶುದ್ಧೀಕರಣ ಮಾಡಿ ಗ್ರಾಮಸ್ಥರಿಗೆ ಪೂರೈಕೆ ಮಾಡಲಾಗುತ್ತಿದ್ದು, ಈ ನೀರು ಒಂದು ರೀತಿಯ ಕೆಟ್ಟ ವಾಸನೆ ಬರುತ್ತಿರುವುದರಿಂದ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕದಿಂದ ತಂದ ನೀರನ್ನು ಕುಡಿಯುತ್ತಿದ್ದಾರೆ.
ಕಳೆದ 15-20ದಿನಗಳಿಂದ ಕೆರೆಯಿಂದ ಪೂರೈಕೆಯಾಗುವ ನೀರಿನಲ್ಲಿ ಗಬ್ಬು ವಾಸನೆ ಬರುತ್ತಿದ್ದು, ಗ್ರಾಮಸ್ರ‍್ಯಾರು ಕೆರೆಯ ನೀರನ್ನು ಕುಡಿಯಲು ಮುಂದಾಗಿಲ್ಲ. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕುಡಿಯುವ ನೀರಿನ ಮೂಲದ ನೀರನ್ನು ಸಂಗ್ರಹಿಸಿ ಪರೀಕ್ಷಿಸಿ ಕುಡಿಯುಲು ಯೋಗ್ಯವಾಗಿದೆಯೇ ಇಲ್ಲವೋ ಎನ್ನುವುದನ್ನು ಖಾತರಿ ಪಡಿಸಬೇಕೆಂದು ಸರ್ಕಾರ ಸೂಚನೆ ನೀಡಿದ್ದು, ಮುದೇನೂರು ಕೆರೆಯ ನೀರನ್ನು ಪರೀಕ್ಷೆ ಮಾಡಿದ್ದು, ಕುಡಿಯಲು ಯೋಗ್ಯವಾಗಿಲ್ಲವೆಂದು ಗ್ರಾ.ಪಂ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಮ್ಮ ಗ್ರಾಮದಲ್ಲಿ ಕೆರೆಯಿಂದ ಪೂರೈಕೆಯಾಗುವ ನೀರಿನಲ್ಲಿ ಗಬ್ಬುವಾಸನೆ ಬರುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲವೆಂದು ಗ್ರಾಮಸ್ಥರ ಎಸ್.ವೀರೇಶ ತಿಳಿಸಿದ್ದಾರೆ.
ಕೆರೆಯ ನೀರನ್ನು ಪರೀಕ್ಷಿಸಲು ಪರಿಕರಗಳು ಲಭ್ಯವಿದ್ದು, ಇಲ್ಲಿಯೇ ಪರೀಕ್ಷೆ ಮಾಡಿದ್ದೇವೆ, ಆದರೆ ನೀರು ಕುಡಿಯಲು ಯೋಗ್ಯವಾಗಿದೆಯೋ ಎನ್ನುವ ಅಂಶಗಳು ತಿಳಿಯುತ್ತಿಲ್ಲ. ಆದ್ದರಿಂದ ಕೆರೆಯ ನೀರನ್ನು ಪರೀಕ್ಷೆಗಾಗಿ ಬಳ್ಳಾರಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ಆರೋಗ್ಯ ಇಲಾಖೆಯವರು ನಮ್ಮ ಕೆರೆಯ ನೀರನ್ನು ಪರೀಕ್ಷಿಸಿದ ಬಗ್ಗೆ ನಮಗೆ ಪತ್ರದ ಮುಖಾಂತರ ಸೋಮವಾರ ಮಾಹಿತಿ ನೀಡಿದ್ದಾರೆ, ಆದ್ದರಿಂದ ಜನರು ಕೆರೆಯ ನೀರನ್ನು ಕುಡಿಯಲು ಬಳಸದಂತೆ ಸೂಚನೆ ನೀಡಲಾತ್ತದೆ ಎಂದು ಪಿ.ಡಿ.ಒ. ರಾಜೇಗೌಡ ತಿಳಿಸಿದ್ದಾರೆ.
ಮುದೇನೂರು ಕೆರೆಯನೀರು ಕುಡಿಯಲು ಯೋಗ್ಯವಾಗಿಲ್ಲ, ಈ ನೀರನ್ನು ಜನರಿಗೆ ಕುಡಿಯಲು ಬಿಡಬೇಡಿ ಎಂದು ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬಸವರಾಜ್ ತಿಳಿಸಿದ್ದಾರೆ.
ಈ ಕೆರೆಯ ನೀರನ್ನು ಹೆಚ್ಚಿನ ಪರೀಕ್ಷೆಗಾಗಿ ಬಳ್ಳಾರಿಯ ನೀರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿಂದ ಮಾಹಿತಿ ಬರುವ ವರೆಗೆ ಈ ನೀರನ್ನು ಬಳಸದಂತೆ ಗ್ರಾಮಸ್ಥರಿಗೆ ಸೂಚನೆ ನೀಡುವಂತೆ ಗ್ರಾ.ಪಂ. ಪಿ.ಡಿ.ಒ.ಗೆ ತಿಳಿಸಲಾಗುವುದೆಂದು ತಾ.ಪಂ.ಇ.ಒ. ಪವನ್‌ಕುಮಾರ್ ತಿಳಿಸಿದ್ದಾರೆ.
ಸಿರುಗುಪ್ಪ: ತಾಲೂಕಿನ ಮುದೇನೂರು ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಕೆರೆಯ ನೀರು ಪಾಚಿಗಟ್ಟಿ ಹಸಿರು ಬಣ್ಣಕ್ಕೆ ತಿರುಗಿರುವುದು.
 ಸಿರುಗುಪ್ಪ: ತಾಲೂಕಿನ ಮುದೇನೂರು ಗ್ರಾಮದ ಕೆರೆಯ ನೀರಿನ ಶುದ್ಧೀಕರಣ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿರುವುದು.

Share This Article
error: Content is protected !!
";