Ad image

ನಮ್ಮ ಬದುಕಿನ ಭರವಸೆ….ವೈದ್ಯರು

Vijayanagara Vani
ನಮ್ಮ ಬದುಕಿನ ಭರವಸೆ….ವೈದ್ಯರು
ಕೆಲ ವರ್ಷಗಳ ಹಿಂದಿನ ಮಾತು. ಅದೊಮ್ಮೆ ನಾವು ಶ್ರೀಶೈಲ ಕ್ಷೇತ್ರ ದರ್ಶನಕ್ಕೆ ಹೋಗಿದ್ದೆವು. ಮಧುಮೇಹದಿಂದ ಬಳಲುತ್ತಿದ್ದ ನನ್ನ ಅತ್ತೆ ಬರುವಾಗ ಆಯುರ್ವೇದದ ನಾಗಮುಷ್ಟಿ ಕಟ್ಟಿಗೆಯ ತುಂಡನ್ನು ತರಲು ಹೇಳಿದರು. ಶ್ರೀಶೈಲ ಮಲ್ಲಯ್ಯನ ದರ್ಶನ ಮಾಡಿ ವಿವಿಧ ದೇವಸ್ಥಾನಗಳಿಗೆ ಭೇಟಿಕೊಟ್ಟು ಪೂಜೆ ಮಾಡಿಸಿ ಪ್ರಸಾದಗಳನ್ನು ತೆಗೆದುಕೊಂಡು ಬರುವಾಗ ನಾಗಮುಷ್ಟಿಬೇರನ್ನು ತೆಗೆದುಕೊಂಡು ಮರಳಿದೆವು.
ಮನೆಗೆ ಬಂದ ನಂತರ ಒಂದು ವಾರವಾದರೂ ಆ ನಾಗಮುಷ್ಟಿಬೇರನ್ನು ಬಳಸಲೇ ಇಲ್ಲ. ಆ ದಿನ ನಮ್ಮ ಅತ್ತೆಯವರು ನಾಗಮುಷ್ಟಿಬೇರನ್ನು ತಂದು ಹಾಗೆಯೇ ಇಟ್ಟುಬಿಟ್ಟೆಯಲ್ಲ…. ಇಂದು ರಾತ್ರಿ ಅದನ್ನು ನೀರಿನಲ್ಲಿ ನೆನೆ ಇಟ್ಟು ನಾಳೆ ಮುಂಜಾನೆ ನನಗೆ ಅದರ ನೀರನ್ನು ಕುಡಿಯಲು ಕೊಡು ಎಂದು ಹೇಳಿದರು. ಅಂದು ರಾತ್ರಿ ಮರೆಯದೆ ನಾಗಮುಷ್ಟಿ ಬೇರಿನ ಕಟ್ಟಿಗೆಯ ತುಂಡನ್ನು ಒಂದು ತಟ್ಟೆಯಲ್ಲಿಟ್ಟು ಅದರ ಮೇಲೆ ನೀರು ಹಾಕಿಟ್ಟೆ.
ಮರುದಿನ ಮುಂಜಾನೆ ಮಾವನವರು ಊರಿಗೆ ಹೋಗುತ್ತಿದ್ದುದರಿಂದ ಅಡುಗೆ ತಯಾರಿಯಲ್ಲಿದ್ದ ನನಗೆ ಅತ್ತೆ ಮುಂಜಾನೆಯ ಕಾಫಿ ಕುಡಿಯಲು ಬಂದು ಕುಳಿತು ಆ ನೀರನ್ನು ಕುಡಿಯಲು ಕೇಳಿದರು. ಕೂಡಲೇ ಆ ನೀರನ್ನು ಸೋಸಿ ಅವರಿಗೆ ಒಂದು ಸಣ್ಣ ಗ್ಲಾಸಿನಲ್ಲಿ ಹಾಕಿ ಕೊಟ್ಟ ನಾನು ಚಟ್ನಿಗೆ ಬೇಕಾದ ಕೊಬ್ಬರಿಯನ್ನು ಹೆರೆಯಲು ಕುಳಿತುಕೊಂಡೆ. ಒಂದೆರಡು ಗುಟುಕು ನಾಗ ಮುಷ್ಟಿ ಬೇರಿನ ಔಷಧೀಯ ಪಾನೀಯವನ್ನು ಕುಡಿದ ಅತ್ತೆ ಮುಖವನ್ನು ಒಂಥರಾ ಮಾಡಿಕೊಂಡು ಬಹಳ ಕಹಿ ಇದೆ. ನನ್ನ ಕೈಯಲ್ಲಿ ಕುಡಿಯೋಕೆ ಆಗಲ್ಲಪ್ಪ ಎಂದು ಹೇಳಿ ಅದನ್ನು ಹಾಗೆಯೇ ಬಿಟ್ಟರು.
ಅದೇ ಸಮಯಕ್ಕೆ ಅಡುಗೆ ಮನೆಗೆ ಬಂದು ತಾವು ಊರಿಗೆ ಹೋಗುತ್ತಿರುವ ಕೆಲಸ ಮುಂದಕ್ಕೆ ಹೋಗಿದೆ ಆದ್ದರಿಂದ ನಾನು ಹೊಲಕ್ಕೆ ( ಪರ ಊರಿನಲ್ಲಿರುವ) ಹೋಗುತ್ತಿಲ್ಲ ಎಂದು ಮಾವನವರು ಹೇಳಿದರು.
ಅಯ್ಯೋ ಆಕೆ ಬೆಳಿಗ್ಗೆ ಬೆಳಿಗ್ಗೆನೇ ಅಡುಗೆ ಶುರು ಮಾಡಿದ್ಲು ನಿಮಗೆ ಬುತ್ತಿ ಕಟ್ಟಿಕೊಡೋದಕ್ಕೆ ಎಂದು ಹೇಳಿದ ಅತ್ತೆ ಅಡುಗೆ ಮನೆಯಿಂದ ತನ್ವ ಕೋಣೆಗೆ ಹೊರಟು ಹೋದರು.
ಮುಂದಿನ ಕೆಲವೇ ಕ್ಷಣಗಳಲ್ಲಿ ಅವರು ಜೋರಾಗಿ ಕೂಗಿದ್ದನ್ನು ಕೇಳಿ ನಾನು ಓಡಿ ಹೋದೆ. ನನ್ನ ಪತಿ, ಮಾವ, ನಾದಿನಿ, ಕೆಲಸದವರು ಎಲ್ಲರೂ ಕೂಗನ್ನು ಕೇಳಿ ಅತ್ತೆಯ ಕೋಣೆಗೆ ಓಡಿ ಬಂದರು. ಹಾಸಿಗೆಯ ಮೇಲೆ ಅಡ್ಡಲಾಗಿ ಕುಳಿತಿದ್ದ ಅವರು ಜೋರಾಗಿ ಉಸಿರು ಬಿಡುತ್ತಿದ್ದರು.ವಿಪರೀತ ಒದ್ದಾಡುತ್ತಿದ್ದ ಅವರನ್ನು ಅಂಗಾತ ಮಲಗಿಸಿ ಕೂಡಲೇ ನಾನು ವೈದ್ಯರಿಗೆ ಫೋನ್ ಮಾಡಿ ನಡೆದ ವಿಷಯವನ್ನು ಹೇಳಿ ಬರಲು ಹೇಳಿದೆ.
ಇತ್ತ ಅತ್ತೆಯ ಪರಿಸ್ಥಿತಿ ಬಿಗಡಾಯಿಸಲಾರಂಭಿಸಿತು. ಒಮ್ಮಿಂದೊಮ್ಮೆಲೆ ಅವರ ಕೈ ಕಾಲುಗಳು ತಣ್ಣಗಾಗಲಾರಂಭಿಸಿದ್ದವು. ಅವರನ್ನು ನೋಡಿ ನನ್ನ ಪತಿ ವೈದ್ಯರನ್ನು ಕರೆತರಲು ಓಡಿದರೆ ನಾವು ಅವರ ಕೈ ಕಾಲು ತಿಕ್ಕಲಾರಂಭಿಸಿದೆವು.
ನನ್ನ ಅತ್ತೆಯ ಪರಿಸ್ಥಿತಿಯನ್ನು ನೋಡಿ ಒಂದು ಹಂತದಲ್ಲಿ ನನ್ನ ಮಾವನವರು ಹೋಯ್ತು ಹೋಯ್ತು ಕೈಬಿಡುತ್ತಾಳೆ ಈಕೆ ಎಂದು ನೋವಿನಿಂದ ಹೇಳಲಾರಂಭಿಸಿದರು. ವಿಪರೀತ ರಕ್ತದೊತ್ತಡ, ತೀವ್ರ ಮಧುಮೇಹ ಕಾಯಿಲೆ ಮತ್ತು ಹೃದಯದ ತೊಂದರೆಯಿಂದ ಬಳಲುತ್ತಿದ್ದ ಅತ್ತೆ ಆಗಾಗ ಆರೋಗ್ಯ ತಪ್ಪುವುದು ಸಹಜವಾದರೂ ಇಂದಿನ ಅವರ ನಡವಳಿಕೆ ಬೇರೆ ಎಲ್ಲಾ ದಿನಗಳಿಗಿಂತ ವ್ಯತಿರಿಕ್ತವಾಗಿತ್ತು.
ಮುಂದಿನ ಒಂದೆರಡು ನಿಮಿಷಗಳಲ್ಲಿ ಅವರಿಗೆ ಕಾಲು ತಿಕ್ಕುತ್ತಿದ್ದ ನಾನು ಕಿಟಕಿಯಲ್ಲಿ ನನ್ನ ಪತಿಯ ವಾಹನದಲ್ಲಿ ಹಿಂದೆ ವೈದ್ಯರು ಕುಳಿತು ಬರುತ್ತಿದ್ದುದನ್ನು ನೋಡಿ ಡಾಕ್ಟರ್ ಬಂದ್ರು ಎಂದು ಹೇಳುತ್ತಿದ್ದಂತೆಯೇ ನನ್ನ ಅತ್ತೆಯ ತೀವ್ರ ಉಸಿರಾಟ ನಿಧಾನವಾಗಿ ಕಡಿಮೆಯಾಯಿತು. ವೈದ್ಯರು ಬರುವಷ್ಟರಲ್ಲಿ ಅವರು ತುಸು ಸುಧಾರಿಸಿಕೊಂಡಿದ್ದರು. ಅವರ ರಕ್ತದೊತ್ತಡವನ್ನು ವೈದ್ಯರು ಪರೀಕ್ಷಿಸಿದಾಗ ಬಿಪಿ ಕೂಡ ಅಷ್ಟೇನೂ ಹೆಚ್ಚಾಗಿರಲಿಲ್ಲ. ಅಚ್ಚರಿ ಎಂಬಂತೆ ವೈದ್ಯರು ಅವರನ್ನು ಪರೀಕ್ಷಿಸುವ ಹೊತ್ತಿಗೆ ಅವರಲ್ಲಿದ್ದ ಎಲ್ಲ ಲಕ್ಷಣಗಳು ಸ್ವಲ್ಪ ಕಡಿಮೆಯಾಯಿತು. ವೈದ್ಯರು ಅವರ ತೊಂದರೆಗೆ ಸೂಕ್ತ ಚಿಕಿತ್ಸೆ ನೀಡಿದರು. ಮುಂದಿನ ಕೆಲವೇ ನಿಮಿಷಗಳಲ್ಲಿ ಅವರು ತುಸು ದಣಿದಂತೆ ಕಂಡರೂ ಚೇತರಿಸಿಕೊಂಡಿದ್ದರು. ನಿಧಾನವಾಗಿ ನೀರು ಕೊಡು ಎಂಬಂತೆ ಸನ್ನೆ ಮಾಡಿದರು. ಹಾಗಿದ್ದರೆ ಒಮ್ಮಿಂದೊಮ್ಮೆಲೆ ಈ ರೀತಿ ಆಗಲು ಕಾರಣವೇನು? ಎಂದು ಅಚ್ಚರಿಯಿಂದ ವೈದ್ಯರು ಪ್ರಶ್ನಿಸಲು ನಾಗಮುಷ್ಠಿ ಬೇರಿನ ನೀರು ಕಾರಣವಿರಬಹುದೇ ಎಂದು ಅನುಮಾನ ಪಟ್ಟುಕೊಳ್ಳುವಂತಾಯಿತು. ಬೆಳಗಿನ ಸಮಯದಲ್ಲಿ ಏನನ್ನು ಸೇವಿಸದೆ ಆ ರಸವನ್ನು ಕುಡಿದ ಪರಿಣಾಮವಾಗಿ ಇದ್ದಕ್ಕಿದ್ದಂತೆ ಅವರ ದೇಹದಲ್ಲಿನ ಸಕ್ಕರೆಯ ಅಂಶ ಕಡಿಮೆಯಾಗಿ ಈ ರೀತಿ ತೊಂದರೆಯಾಗಿರಬಹುದು ಎಂದು ಊಹೆ ಮಾಡಿದರಷ್ಟೇ. ಈ ರೀತಿಯ ಆಕಸ್ಮಿಕ ತೊಂದರೆಗೆ ಕಾರಣ ಏನು ಎಂಬುದು ತತ್ ಕ್ಷಣಕ್ಕೆ ( ನಿಜ! ರಕ್ತದಲ್ಲಿನ ಸಕ್ಕರೆಯ ಅಂಶ ಸಂಪೂರ್ಣ ಕಡಿಮೆಯಾಗಿತ್ತು ) ನಮಗೆ ಅರಿವಾಗದಿದ್ದರೂ ಡಾಕ್ಟರ್ ಬಂದ್ರು ಎಂಬ ಒಂದೇ ಮಾತಿಗೆ ನೆಮ್ಮದಿಯನ್ನು, ಇನ್ನು ನನಗೇನು ಆಗುವುದಿಲ್ಲ ಎಂಬ ಭರವಸೆಯನ್ನು ಹೊಂದಿದ ಅತ್ತೆಯ ಅಂದಿನ ಹದಗೆಟ್ಟ ಆರೋಗ್ಯ ಪರಿಸ್ಥಿತಿ ಇಂದಿಗೂ ನಮಗೆ ಕಣ್ಣಿಗೆ ಕಟ್ಟಿದಂತಿದೆ.
ಆದ್ದರಿಂದಲೇ ನಮ್ಮ ಹಿರಿಯರು ‘ವೈದ್ಯೋ ನಾರಾಯಣೋ ಹರಿ’ ಎಂದು ಹೇಳಿರಬಹುದು.
ಏನು ಬೇಕಾದರೂ ಆಗಿ ಬಿಡಬಹುದು, ಮಾರಣಾಂತಿಕ
ತೊಂದರೆಗಳೇ ಆಗಿದ್ದರೂ ವೈದ್ಯರ ಕಾಳಜಿಯಿಂದ ಆರೋಗ್ಯ ಸುಧಾರಿಸುವ, ಮತ್ತೆ ಚೇತರಿಸಿಕೊಂಡು ಜೀವನ್ಮುಖಿಯಾಗಿ ಬದುಕುವ ಚೈತನ್ಯವನ್ನು ತುಂಬುವ ವೈದ್ಯರು ಆಧುನಿಕ ಧನ್ವಂತರಿಗಳು ಎಂದರೆ ತಪ್ಪಿಲ್ಲ ಅಲ್ಲವೇ?
ನಮ್ಮೆಲ್ಲಾ ಮನದ ಕ್ಲೇಶಗಳನ್ನು ಕಳೆಯುವ ಭಗವಂತ ಕಣ್ಣಿಗೆ ಕಾಣದ ದೇವರಾದರೆ ನಮ್ಮ ಮನೋದೈಹಿಕ ಕ್ಲೇಶಗಳನ್ನು ತನ್ನ ಚಿಕಿತ್ಸೆಯ ಮೂಲಕ ಗುಣಪಡಿಸುವ ಭವದ ದೇವರು ವೈದ್ಯ.
ಗಮನವಿಟ್ಟು ಆಲಿಸುವಿಕೆ, ರೋಗ ಲಕ್ಷಣಗಳನ್ನು ಗುರುತಿಸುವಿಕೆ, ಮೆಲುವಾದ ಆದರೆ ಅಷ್ಟೇ ಭರವಸೆಯನ್ನು ತುಂಬುವ ಮಾತು, ಶುಭ್ರ ವಸ್ತ್ರ ಮೇಲೊಂದು ಬಿಳಿಯ ಕೋಟು, ಕೈಯಲ್ಲಿ ಸ್ಟೆತಸ್ಕೊಪ ಹಿಡಿದು ಬರುವ ವೈದ್ಯರನ್ನು ಧರೆಗಿಳಿದ ಭಗವಂತ ಎಂಬಂತೆ ಭಾವಿಸುವ ಜನ ಎಂದೆಂದಿಗೂ ಇದ್ದಾರೆ.
ವೈದ್ಯರು ವೃತ್ತಿಪರವಾಗಿ ವೈದ್ಯಕೀಯ ಅಭ್ಯಾಸವನ್ನು ಮಾಡಿದವರಾಗಿದ್ದು ಮಾನವ ಶರೀರ ರಚನಾ ಶಾಸ್ತ್ರ ವಿವಿಧ ಅಂಗಗಳ ಕಾರ್ಯನಿರ್ವಹಣೆ, ರೋಗದ ಲಕ್ಷಣಗಳು, ಮುನ್ನರಿವು, ಮನೋ ದೈಹಿಕ ಕಾಯಿಲೆಗಳು, ಅವುಗಳನ್ನು ಗುಣಪಡಿಸುವ ವಿಧಾನಗಳು ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳ ಕುರಿತು ಅಧ್ಯಯನ ಮಾಡಿದ ಪರಿಣತರಾಗಿರುತ್ತಾರೆ. ತಾವು ಕಲಿತ ವಿದ್ಯೆಯ ಮೂಲಕ ಅವರು ಇಡೀ ಮಾನವ ಜನಾಂಗದ ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಯಾವುದೇ ಒಂದು ಸಣ್ಣ ಕಾಯಿಲೆ ಬಂದರೂ ನಾವು ಓಡುವುದು ವೈದ್ಯರ ಬಳಿಗೆ. ಸಂಕೋಚವಿಲ್ಲದೆ ನಮಗೆ ಆಗುತ್ತಿರುವ ತೊಂದರೆಗಳನ್ನು ಹೇಳಿಕೊಳ್ಳುವುದು ಕೂಡ ವೈದ್ಯರ ಬಳಿ.
ಯಾವುದೇ ಆಕಸ್ಮಿಕ ಅಪಘಾತಗಳು ಸಂಭವಿಸಲಿ ಅಲ್ಲಿ ವೈದ್ಯರ ಹಾಜರಿ ಕಡ್ಡಾಯ. ಅದೆಷ್ಟೇ ರಕ್ತ ಹರಿದಿರಲಿ, ಕೀವು, ವಾಸನೆ, ಆಳವಾದ ಗಾಯಗಳು, ಸುಟ್ಟ ಗಾಯಗಳು ಇದ್ದರೂ ಕೂಡ ಯಾವುದೇ ರೀತಿಯ ವಿಕಾರಗಳನ್ನು ತೋರದೆ ಚಿಕಿತ್ಸೆ ಮಾಡುವವರು ವೈದ್ಯರು
ರೋಗಿ ಬಡವನೇ ಇರಲಿ ಬಲ್ಲಿದನೇ ಇರಲಿ ಚಿಕಿತ್ಸೆ ಮಾಡಬೇಕಾದದ್ದು ವೈದ್ಯರ ಕರ್ತವ್ಯ. ತನ್ನ ಬಳಿ ಬರುವ ಎಲ್ಲ ರೋಗಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅವರಿಗೆ ಚಿಕಿತ್ಸೆ ಮತ್ತು ಭರವಸೆಯನ್ನು ತುಂಬುವ ವೈದ್ಯ ಅವರ ಪಾಲಿನ ಆಶಾಕಿರಣ.
ತನ್ನ ವೈಯುಕ್ತಿಕ ಜೀವನಕ್ಕೆ ಸಮಯವನ್ನು ನೀಡಲಾಗದ, ಆದರೆ ಸಾಮಾಜಿಕವಾಗಿ ತನ್ನೆಲ್ಲ ಸಮಯವನ್ನು ಜನರ ಸೇವೆಗೆ ಬಳಸುವ ವೈದ್ಯರ ಬದುಕು ಅಭಿನಂದನಾರ್ಹವಾದದು. ವೈದ್ಯಕೀಯ ವೃತ್ತಿ ದಿನದ 24/7 ಸಮಯವನ್ನು ಬೇಡುತ್ತದೆ. ಎಷ್ಟೋ ಬಾರಿ ಯುದ್ಧ, ಕ್ಷಾಮ, ಪ್ರವಾಹ ಅಪಘಾತಗಳಂತಹ ಆಕಸ್ಮಿಕ ತೊಂದರೆಗಳ ಸಮಯದಲ್ಲಿ ಊಟ ನಿದ್ರೆಗಳಿಲ್ಲದೆ ಕಾರ್ಯನಿರ್ವಹಿಸಬೇಕಾದಂತಹ ಪರಿಸ್ಥಿತಿಗಳನ್ನು ವೈದ್ಯರು ಎದುರಿಸುತ್ತಾರೆ. ಡ್ಯೂಟಿ ಫಸ್ಟ್ (ಕರ್ತವ್ಯವೇ ಮೊದಲು) ಎಂಬ ಅನಿವಾರ್ಯತೆಯು ಕೂಡ ಅವರನ್ನು ಸೇವಾ ತತ್ಪರ ರನ್ನಾಗಿಸುತ್ತದೆ. ಹಲವಾರು ಜನರ ಜೀವನವನ್ನು ರಕ್ಷಿಸುವ ನಿಟ್ಟಿನಲ್ಲಿ ತಮ್ಮ ಬದುಕನ್ನು ಪಣಕ್ಕಿಡುವ ವೃತ್ತಿ ವೈದ್ಯರದ್ದು.
ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ತಮ್ಮನ್ನು ಹಣಿದು ಹಾಕುವ ವೈದ್ಯಕೀಯ ವೃತ್ತಿಯನ್ನು ಪ್ರೀತಿಯಿಂದ ಒಪ್ಪಿ ಅಪ್ಪಿಕೊಳ್ಳುವ ವೈದ್ಯರು ಎಷ್ಟೋ ಬಾರಿ ರೋಗಿಗಳಿಗೆ ಚಿಕಿತ್ಸೆ ನೀಡ ನೀಡುತ್ತಲೇ ಖುದ್ದು ತಮ್ಮ ವೈಯಕ್ತಿಕ ಕಾಳಜಿಯನ್ನು ಮಾಡಿಕೊಳ್ಳಲಾಗದೆ
ಜೀವಕ್ಕೆ ಹಾನಿ ಮಾಡಿಕೊಂಡವರು. ವೈದ್ಯಕೀಯ ವೃತ್ತಿಯಲ್ಲಿ ಎಷ್ಟೋ ಬಾರಿ ಹಗಲಿರುಳೆನ್ನದೆ ಕೆಲಸ ನಿರ್ವಹಿಸಿ ಜನರ ಬದುಕಿಗೆ ಬೆಳಕನ್ನು ನೀಡಿ ತಾವು ಕತ್ತಲಿನಲ್ಲಿ ಕರಗಿ ಹೋದವರು ವೈದ್ಯರು.
ಏನೆಲ್ಲಾ ಕ್ರಾಂತಿಕಾರಕ ಆವಿಷ್ಕಾರಗಳಾಗಿದ್ದರೂ ಕೂಡ ವೈದ್ಯಕೀಯ ವೃತ್ತಿಯಲ್ಲಿ ತಮ್ಮ ಇತಿಮಿತಿಗಳನ್ನು ಅರಿತವರು ವೈದ್ಯರು. ರೋಗಿಗಳು ವೈದ್ಯರ ಮೇಲೆ ಭರವಸೆ ಇಟ್ಟರೆ, ವೈದ್ಯರು ಕೂಡ ಆ ಕಾಣದ ದೇವರ ಮೇಲೆ ನಂಬಿಕೆಯನ್ನು ಇಟ್ಟು ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆ ಏಕೆಂದರೆ ಅವರಿಗೂ ಗೊತ್ತು ಅವರ ಒಂದು ಕ್ಷಣದ ವಿಸ್ಮೃತಿ ಜೀವನ್ಮರಣಗಳಿಗೆ ದಾರಿ ಮಾಡಿಕೊಡುತ್ತದೆ ಎಂದು.
ಭ್ರೂಣವೊಂದು ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವಾಗಲೇ ವೈದ್ಯಕೀಯ ಸಲಹೆಗಳು, ಚಿಕಿತ್ಸೆ, ಔಷಧಿಗಳು, ಮಾತ್ರೆಗಳು ಹೀಗೆ ಆರಂಭವಾಗುವ ವೈದ್ಯರೊಂದಿಗಿನ ಒಡನಾಟ ಬದುಕಿನ ಅಂತಿಮ ಘಟ್ಟವಾದ ಸಾವಿನವರೆಗೂ ವೈದ್ಯರೊಂದಿಗೆ ನಮ್ಮನ್ನು ಬೆಸೆಯುತ್ತದೆ. ತಾಯಿ ಗರ್ಭದಲ್ಲಿ ಮಿಡಿಯುವ ಹೃದಯದ ಬಡಿತವನ್ನು ಕೇಳುವ ವೈದ್ಯ ಅಂತಿಮವಾಗಿ ಸತ್ತ ನಂತರ ನಿಲ್ಲುವ ಕೊನೆಯ ಬಡಿತವನ್ನು ಕೂಡ ಅರಿಯಬಲ್ಲ, ಅಷ್ಟರಮಟ್ಟಿಗೆ ವೈದ್ಯರು ನಮ್ಮ ಬದುಕಿನಲ್ಲಿ ಪ್ರಭಾವಶಾಲಿಗಳಾಗಿ ನಿಲ್ಲುತ್ತಾರೆ. ನಾನು ವೈದ್ಯರ ಬಳಿ ಚಿಕಿತ್ಸೆಗೆ ಹೋಗುವುದೇ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಜನರದ್ದು.
ಅದರಲ್ಲೂ ಬದಲಾವಣೆಯ ಪರ್ವವನ್ನು ಕಾಣುತ್ತಿರುವ ಪ್ರಸ್ತುತ ಸಮಾಜದಲ್ಲಿ ಜನರ ಜೀವನ ಶೈಲಿ, ಅವರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮದಿಂದಾಗಿ ಹೆಚ್ಚು ಹೆಚ್ಚು ಜನರು ವೈದ್ಯರನ್ನು ಪ್ರತಿದಿನ ಭೇಟಿಯಾಗುವುದು ಅನಿವಾರ್ಯವಾಗಿದೆ.
ಎಲ್ಲವನ್ನು ವ್ಯಾಪಾರದ ದೃಷ್ಟಿಯಿಂದ ನೋಡುತ್ತಿರುವ 21ನೇ ಶತಮಾನದಲ್ಲಿಯೂ ಕೂಡ ವೈದ್ಯಕೀಯ ಚಿಕಿತ್ಸೆಯ ವೆಚ್ಚಗಳು ಗಣನೀಯವಾಗಿ ಹೆಚ್ಚುತ್ತಿರುವ ದಿನಮಾನಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಹೈಟೆಕ್ ಆಸ್ಪತ್ರೆಗಳು ಜನರ ಸೇವೆಗೆ ತುದಿಗಾಲಲ್ಲಿ ನಿಂತಿರುವಾಗ, ವೈದ್ಯಕೀಯ ಕ್ಷೇತ್ರದಲ್ಲಿ ಯುವ ಕಾರ್ಪೊರೇಟ್ ಮನಸ್ಥಿತಿಗಳು ಹುಟ್ಟಿಕೊಂಡಿವೆ. ಪರಿಣಾಮವಾಗಿ ಎಲ್ಲವನ್ನೂ ಲಾಭ ನಷ್ಟಗಳ ದೃಷ್ಟಿಯಿಂದ ನೋಡುತ್ತಿರುವ ಜಗತ್ತಿನಲ್ಲಿಯೂ ಕೂಡ
ಜಾಗತಿಕವಾಗಿ ವಿಶ್ವವನ್ನೇ ನಡುಗಿಸಿದ ಕೋವಿಡ್ 19 ಸಮಯದಲ್ಲಿ ಕೊರೊನಾ ತೊಂದರೆಯಿಂದ ರೋಗಿಗಳನ್ನು ರಕ್ಷಿಸಲು ಜನರ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಯಾವೊಬ್ಬ ವೈದ್ಯರೂ ತಮ್ಮ ಸೇವೆಯಿಂದ ಹಿಂಜರಿಯಲಿಲ್ಲ ಎಂಬುದು ಅವರ ಸೇವಾ ಮನೋಭಾವ, ಕರ್ತವ್ಯ ನಿಷ್ಠೆ, ಬದ್ಧತೆ ಮತ್ತು ಮತ್ತು ಕಾರ್ಯ ತತ್ಪರತೆಗೆ ಹಿಡಿದ ಕನ್ನಡಿಯಾಗಿದೆ..
ನಾಡಿನ ಜನರ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಸಿದ ಡಾ. ಬಿ.ಸಿ ರಾಯ್ ಅವರ ಜನ್ಮದಿನವನ್ನು ನಾವು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸುತ್ತಿರುವಾಗ, ನಮ್ಮ ವೈದ್ಯರು ನಮ್ಮ ಯೋಗಕ್ಷೇಮದ ರಕ್ಷಕರಾಗಿ, ನಮ್ಮ ದೇಹ ಮತ್ತು ಮನಸ್ಸಿನ ಗುಣಪಡಿಸುವವರಾಗಿ ಮತ್ತು ಕಾಲಕ್ರಮೇಣ ಭರವಸೆಯ ದೀಪಗಳಾಗಿ ಸೇವೆ ಸಲ್ಲಿಸುವ ವ್ಯಕ್ತಿಗಳ ಗುಂಪನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸಲು ನಾವು ಒಂದು ಕ್ಷಣ ತೆಗೆದುಕೊಳ್ಳುತ್ತೇವೆ. ಈ ವಿಶೇಷ ದಿನವು ವೈದ್ಯರು ಪ್ರತಿದಿನ ನಮ್ಮ ಜೀವನದಲ್ಲಿ ತರುವ ಬದ್ಧತೆ, ಸಹಾನುಭೂತಿ ಮತ್ತು ಅಸಾಧಾರಣ ಕೌಶಲ್ಯಕ್ಕಾಗಿ ನಮ್ಮ ಮೆಚ್ಚುಗೆ ಮತ್ತು ಗೌರವವನ್ನು ವ್ಯಕ್ತಪಡಿಸಲು ನಮಗೆ ಒಂದು ಅವಕಾಶವಾಗಿದೆ
ನಮ್ಮನ್ನು ಆರೋಗ್ಯವಾಗಿಡಲು ಮತ್ತು ನಮ್ಮ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವೈದ್ಯರು ತಮ್ಮನ್ನು ತಾವು ಅರ್ಪಿಸಿಕೊಂಡಿರುವುದಕ್ಕೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು. ಕಷ್ಟಗಳ ನಡುವೆಯೂ ತಮ್ಮ ನಿರಂತರ ಪ್ರಯತ್ನಗಳ ಮೂಲಕ, ದುರ್ಬಲತೆಯ ಕ್ಷಣಗಳಲ್ಲಿ ನಮಗೆ ಅಗತ್ಯವಿರುವ ಆರೈಕೆ ಮತ್ತು ಸಹಾಯವನ್ನು ನೀಡುವ ಎಲ್ಲ ವೈದ್ಯರಿಗೆ
ವೈದ್ಯಕೀಯ ದಿನದ ಶುಭಾಶಯಗಳು
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";