ಶಿವಮೊಗ್ಗ : ಮಾರ್ಚ್ 28 : : ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಈ ಸಂಘ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಿಬ್ಬಂಧಿಗಳು ತ್ವರಿತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮನವಿ ಮಾಡಿದ್ದಾರೆ.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನಿಯೋಜಿತ ಶಿವಮೊಗ್ಗ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮದ್ಯವರ್ತಿಗಳ ಹಾವಳಿ, ಏಜೆನ್ಸಿಗಳ ಶೋಷಣೆಯಿಂದ ಹೊರಗುತ್ತಿಗೆ ನೌಕರರನ್ನು ಸಂರಕ್ಷಿಸುವ ನಿಟ್ಟನಿಲ್ಲಿ ಕಾರ್ಮಿಕ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಅಧಿಕಾರಿಗಳು ಹಾಗೂ ಕಾರ್ಮಿಕ ಪ್ರತಿನಿಧಿಗಳನ್ನೊಳಗೊಂಡ ಕಾರ್ಮಿಕ ಸೇವೆಗಳ ಸಹಕಾರ ಸಂಘವನ್ನು ಪ್ರಾರಂಭಿಸುವ ಸಲುವಾಗಿ ಅಭಿಪ್ರಾಯ ಸಂಗ್ರಹಿಸಿ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ರಾಜ್ಯದ ಹಲವಾರು ಏಜೆನ್ಸಿಗಳು ಸರಕಾರದ ನಾನಾ ಇಲಾಖೆ ಮತ್ತು ಅವುಗಳ ಅಧೀನದಲ್ಲಿರುವ ನಿಗಮ, ಮಂಡಳಿಗಳು ಹಾಗೂ ಖಾಸಗಿ ಸಂಸ್ಥೆಗಳ ಬೇಡಿಕೆಗೆ ತಕ್ಕಂತೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ಒದಗಿಸುವ ಕೆಲಸ ಮಾಡುತ್ತಿವೆ. ಆದರೆ, ನಿಗದಿತ ಕನಿಷ್ಠ ವೇತನ, ಇಎಸ್‌ಐ, ಪಿಎಫ್‌ಸಂದಾಯ ಮಾಡದಿರುವುದು ಹಾಗೂ ಕಾಲಮಿತಿಯೊಳಗೆ ವೇತನ ಪಾವತಿ ಮಾಡದೇ ಇರುವುದರಿಂದ ಗುತ್ತಿಗೆ ನೌಕರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವೆಲ್ಲದಕ್ಕೂ ಪರಿಹಾರ ಕಲ್ಪಿಸಲು ಕಾರ್ಮಿಕ ಇಲಾಖೆ, ಮೈಸೂರು, ಧಾರವಾಡ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಾಯೋಗಿಕವಾಗಿ ಸೊಸೈಟಿ ಪ್ರಾರಂಭಿಸಲು ಆದೇಶ ಹೊರಡಿಸಿದೆ. ಈಗಾಗಲೇ ಬೀದರ್‌ಜಿಲ್ಲೆಯಲ್ಲಿ ರಚಿಸಲಾದ ಸಂಘದ ಚಟುವಟಿಕೆಗಳ ಮಾದರಿಯಾಗಿದ್ದು, ಅದನ್ನು ಅನುಸರಿಸಿ, ಸಂಘ ರಚನೆಗೆ ಮುಂದಾಗುವಂತೆಯೂ ಕಾರ್ಮಿಕ ಇಲಾಖಾ ಸಚಿವರು ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸಂಬಂಧ ಸ್ಥಳೀಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಬೀದರ್‌ಜಿಲ್ಲೆಗೆ ಭೇಟಿ ನೀಡಿ, ಬೀದರ್‌ಸಂಘದ ವಾಸ್ತವ ಸ್ಥಿತಿಗತಿಗಳನ್ನು ಅರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದ ಅವರು, ಸಂಘದ ರಚನೆಯಿಂದಾಗಿ ಹೊರಗುತ್ತಿಗೆ ಮೂಲಕ ನೇಮಕಗೊಳ್ಳುವ ನೌಕರರಿಗೆ ಅನುಕೂಲವಾಗಲಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಈ ಸೊಸೈಟಿಯು ವಿವಿಧ ಇಲಾಖೆಗಳು, ಮಂಡಳಿಗಳು, ಕಾರ್ಪೊರೇಷನ್‌ಸೇರಿದಂತೆ ಇತರೆ ಸಂಸ್ಥೆಗಳು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಮತ್ತು ಭದ್ರತಾ ಸಿಬ್ಬಂದಿ, ಗ್ರೂಪ್‌ಡಿ, ಟೆಕ್ನಿಕಲ್‌ಸೇರಿದಂತೆ ವಿವಿಧ ಬಗೆಯ ಕಾರ್ಮಿಕರು ಬೇಕೆಂದು ಬೇಡಿಕೆ ಸಲ್ಲಿಸಿದಾಗ ಅಂತಹ ನೌಕರರ ಸೇವೆ ಒದಗಿಸಲಿದೆ. ವೇತನ ಹಾಗೂ ಇತರೆ ಭತ್ಯೆಯ ಮೊತ್ತವನ್ನು ಸಂಸ್ಥೆಗಳಿಂದ ಸ್ವೀಕರಿಸಿ, ಸೊಸೈಟಿಯಿಂದಲೇ ನೌಕರರ ಖಾತೆಗೆ ನೇರವಾಗಿ ವೇತನ ಪಾವತಿಸುವ ಉದ್ದೇಶ ಹೊಂದಲಾಗಿದೆ ಎಂದವರು ತಿಳಿಸಿದ್ದಾರೆ.
ಸಂಘವು ಸೇವಾ ಶುಲ್ಕ ಹಾಗೂ ಇತರೆ ಮೂಲಗಳಿಂದ ಸಂಗ್ರಹಿಸಿದ ಮೊತ್ತವನ್ನು ಸೊಸೈಟಿಯಲ್ಲಿ ಸದಸ್ಯತ್ವ ಪಡೆದ ಎಲ್ಲ ಕಾರ್ಮಿಕರಿಗೆ ಸಾಲಸೌಲಭ್ಯ ಹಾಗೂ ಕೆಲಯೋಜನೆಗಳ ಜಾರಿಗೆ ಬಳಕೆ ಮಾಡಲಿದೆ. ಸಹಕಾರ ಸಂಘದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಪತ್ರವ್ಯವಹಾರ ನಡೆಸಿ, 4ಜಿ ವಿನಾಯಿತಿ ಪಡೆದುಕೊಳ್ಳಲು ಯತ್ನಿಸಲಾಗುವುದು ಎಂದರು.
ಸಂಘದ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ, ಕಾರ್ಯದರ್ಶಿಯಾಗಿ ಜಿಪಂ ಸಿಇಒ, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ನಿರ್ದೇಶಕರಾಗಿ ಯೋಜನಾ ನಿರ್ದೇಶಕರು, ಯೋಜನಾ ಅಧಿಕಾರಿಗಳು, ಸಹಕಾರ ಸಂಘಗಳ ಉಪನಿರ್ದೇಶಕರು ಹಾಗೂ ಗುತ್ತಿಗೆ ನೌಕರರ ಸಂಘದ ಚುನಾಯಿತ ಅಧ್ಯಕ್ಷರೂ ಸೇರಿ 14ಜನರ ಆಡಳಿತ ಮಂಡಳಿ ಇರಲಿದೆ ಎಂದವರು ತಿಳಿಸಿದರು.
ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಇಲಾಖೆಗಳು, ಅಲ್ಲಿನ ಸಿಬ್ಬಂಧಿಗಳಿಗೆ ಈ ಕುರಿತಾದ ಮಾಹಿತಿ ನೀಡಿ, ಸಂಘ ರಚನೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯೋಜನೆಯ ಲಾಭ ಪಡೆದುಕೊಳ್ಳಲು ಮುಂದಾಗುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್‌ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು