Ad image

ಪ್ರೀತಿ ಮತ್ತು ಆತ್ಮೀಯತೆಯ ಪ್ರತಿಫಲ

Vijayanagara Vani
ಪ್ರೀತಿ ಮತ್ತು ಆತ್ಮೀಯತೆಯ ಪ್ರತಿಫಲ
ತನ್ನ ಮುರುಕಲು ಮನೆಯ ಕಿಟಕಿಯಲ್ಲಿ ನಿಂತು ಒಂದೇ ಸಮನೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಿದ್ದಳು ಆ ಹೆಣ್ಣು ಮಗಳು. ಆಕೆಯ ಕಣ್ಣುಗಳಿಂದ ನೀರು ಸುರಿಯುತ್ತಿತ್ತು. ನಾಲ್ಕು ಪುಟ್ಟ ಪುಟ್ಟ ಮಕ್ಕಳನ್ನು ಹೊಂದಿರುವ ಆಕೆ ತನ್ನ ಪತಿಯನ್ನು ಕಳೆದುಕೊಂಡಿದ್ದಳು. ಬದುಕಿನ ಹೋರಾಟ ಆಕೆಗೆ ಸಾಕಾಗಿತ್ತು.
ಪುಟ್ಟ ಮನೆಯೊಂದನ್ನು ಬಿಟ್ಟರೆ ಆಕೆಯ ಬಳಿ ಮತ್ತೇನೂ ಇರಲಿಲ್ಲ..ಈಗಾಗಲೇ ದಿನಸಿ ಅಂಗಡಿಯ ಸಾಲ ಏರುತ್ತಿತ್ತು… ಅಂಗಡಿಯ ಮಾಲೀಕನ ಕಡೆಗಣ್ಣಿನ ನೋಟ ಆಕೆಯನ್ನು ಹಿಂಸಿಸುತ್ತಿದ್ದರೂ ಮಕ್ಕಳಿಗಾಗಿ ಅನಿವಾರ್ಯವಾಗಿ ಸಹಿಸುತ್ತಿದ್ದಳು. ಮಕ್ಕಳ ಪಾಲನೆ ಪೋಷಣೆ ಆಕೆಗೆ ಹೊರೆಯಾಗಿತ್ತು…. ಆದರೆ ಅನಿವಾರ್ಯವಾಗಿತ್ತು ಕೂಡ. ಮಕ್ಕಳು ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಿರಲಿ ಎಂದು ಏಕಾಂತದಲ್ಲಿ ಮಾತ್ರ ಕಣ್ಣೀರನ್ನು ಹಾಕುವ ಸ್ವಾತಂತ್ರ್ಯ ಆಕೆಯದಾಗಿತ್ತು.
ಕಿಟಕಿಯ ಬಳಿ ನಿಂತು ಕಣ್ಣೀರು ಹಾಕುತ್ತಿದ್ದ ಆಕೆಯ ಕಣ್ಣಿಗೆ ಓರ್ವ ವಯಸ್ಸಾದ ವ್ಯಕ್ತಿ ಸುರಿಯುವ ಮಳೆಯಲಿ ಕೈಯಲ್ಲಿ ಛತ್ರಿಯನ್ನು ಕೂಡ ಹಿಡಿಯದೆ ಕುಂಟುತ್ತಲೆ ಮುಂದೆ ಸಾಗಿದ್ದ. ಆತ ನಡೆಯುತ್ತಿದ್ದ ರೀತಿಯನ್ನು ನೋಡಿದರೆ ಎಲ್ಲೋ ಕಳೆದು ಹೋದವನಂತೆ ತೋರುತ್ತಿತ್ತು.
ಆ ತಾಯಿಯ ಮಾತೃತ್ವ ಎಚ್ಚೆತ್ತು ಕೂಡಲೇ ಆಕೆ ತನ್ನ ಪುಟ್ಟ ಕೊಡೆಯನ್ನು ಹಿಡಿದು ಚಪ್ಪಲಿಯನ್ನು ಕೂಡ ಹಾಕಿಕೊಳ್ಳದೆ ಮನೆಯ ಹೊರಗೆ ಓಡಿದಳು. ಆ ವೃದ್ಧ ವ್ಯಕ್ತಿಯನ್ನ ಸಮೀಪಿಸಿ ಆತನ ಭುಜವನ್ನು ತಟ್ಟಿ “ಇಷ್ಟು ಮಳೆಯಲ್ಲಿ ನೆನೆಯುತ್ತಾ ಹೋಗುತ್ತಿದ್ದೀರಲ್ಲ ಅಷ್ಟು ಗೊತ್ತಾಗಲ್ವೆ ನಿಮಗೆ? ಆರೋಗ್ಯವಾಗಿದ್ದೀರಿ ತಾನೇ?” ಎಂದು ಕೇಳಿದಳು.
ಎಲ್ಲೋ ಕಳೆದು ಹೋದವನಂತೆ ತೋರುತ್ತಿದ್ದ ಅಜ್ಜ… “ನಾನು ಸರಿಯಾಗಿದ್ದೇನೆ ಇದೇ ದಾರಿಯಲ್ಲಿ ನನ್ನ ಮನೆಗೆ ಹೋಗಬೇಕು” ಎಂದು ಬಡಬಡಿಸಿದ.
“ನೀವು ಈಗಾಗಲೇ ತೋಯ್ದು ಹೋಗಿದ್ದೀರಿ. ಈ ಬಿರುಗಾಳಿ ಮಳೆಯಲ್ಲಿ ಹೀಗೆ ಇದ್ದರೇ ನಿಮ್ಮ ಆರೋಗ್ಯ ಕೆಡುತ್ತದೆ. ದಯವಿಟ್ಟು ಮನೆಯ ಒಳಗೆ ಬನ್ನಿ. ಸುಧಾರಿಸಿಕೊಳ್ಳಿ. ಅಷ್ಟಕ್ಕೂ ನನ್ನ ಬಳಿ ನಿಮಗೆ ಕೊಡಲು ಬಹಳಷ್ಟು ಇಲ್ಲ ನಿಜ ಆದರೆ ಇದ್ದರಲ್ಲಿಯೇ ಬೆಚ್ಚಗಿನ ವಾತಾವರಣ, ತಲೆ ಒರೆಸಿಕೊಳ್ಳಲು ಟವಲ್, ಬದಲಾಯಿಸಲು ನನ್ನ ಗಂಡನ ಹಳೆಯ ಬಟ್ಟೆ ಮತ್ತು ಒಂದಷ್ಟು ಬಿಸಿ ಚಹಾ ಬ್ರೆಡ್ ಕೊಡಬಲ್ಲೆ… ಬನ್ನಿ” ಎಂದು ಒತ್ತಾಯಿಸಿದಳು
ಕ್ಷಣ ಕಾಲ ಏನು ತೋಚದೆ ಸುಮ್ಮನೆ ನಿಂತ ಆ ವೃದ್ದ ನಂತರ ಮೆಲ್ಲನೆ ತಲೆಯಾಡಿಸಿ ಆಕೆಯ ಮನೆಯೊಳಗೆ ಆಕೆಯೊಂದಿಗೆ ಕಾಲಿರಿಸಿದ.
ಒಳಗೆ ಬಂದ ಆ ವಯಸ್ಸಾದ ವ್ಯಕ್ತಿ ಅಲ್ಲಿಯೇ ಮುದುಡಿ ಮಲಗಿದ್ದ ನಾಲ್ಕು ಪುಟ್ಟ ಮಕ್ಕಳನ್ನು ನೋಡಿದನು. ಆ ಹೆಣ್ಣು ಮಗಳು ಆತನ ಕೈಗೆ ಒಂದು ಟವಲ್ ಅನ್ನು ನೀಡಿ ಬಚ್ಚಲಿನ ಕಡೆ ಕೈ ತೋರುತ್ತ “ಬಿಸಿ ನೀರಿದೆ, ಹೋಗಿ ಫ್ರೆಶ್ ಆಗಿ ಬನ್ನಿ” ಎಂದು ಹೇಳಿದಳು.
ಮರು ಮಾತನಾಡದೆ ಆಕೆ ಕೈ ತೋರಿದ ಕಡೆ ಹೆಜ್ಜೆ ಇರಿಸಿದ ಆತ ಬಚ್ಚಲಿನ ಬಾಗಿಲನ್ನು ಮುಂದೆ ಮಾಡಿ ನಿಧಾನವಾಗಿ ತನ್ನೆಲ್ಲ ಬಟ್ಟೆಗಳನ್ನು ತೆಗೆದುಹಾಕಿ ಬಿಸಿ ನೀರಿನಲ್ಲಿ ಕೈ ಕಾಲು ಮುಖ ತೊಳೆದುಕೊಂಡು ಚೆನ್ನಾಗಿ ತಲೆ ಮತ್ತು ಮೈಯನ್ನು ಒರೆಸಿಕೊಂಡು ಆಕೆ ಕೊಟ್ಟ ಆಕೆಯ ಗಂಡನ ಹಳೆಯ ಬಟ್ಟೆಗಳನ್ನು ಧರಿಸಿ ಹೊರಗೆ ಬಂದನು.
ಅಷ್ಟರಲ್ಲಿ ಆಕೆ ಬಿಸಿಬಿಸಿಯಾದ ಚಹಾ ಮತ್ತು ಬ್ರೆಡ್ ನ ಒಂದೆರಡು ತುಂಡುಗಳನ್ನು ಆತನಿಗಾಗಿ ತಂದಿಟ್ಟಳು.
ಇದುವರೆಗೂ ಒಂದು ಮಾತನ್ನು ಆಡದೆ ಆಕೆಯನ್ನು ಹಿಂಬಾಲಿಸಿ ಆಕೆಯ ಮಾತುಗಳನ್ನು ಪಾಲಿಸಿದ ವೃದ್ದ ವ್ಯಕ್ತಿ ಹೊಟ್ಟೆ ಹಸಿವಾಗಿದ್ದರಿಂದ ಬ್ರೆಡ್ ತಿಂದು ಚಹಾ ಕುಡಿದನು. ಚಳಿಯಿಂದ ನಡುಗುತ್ತಿದ್ದ ಆತನಿಗೆ ಇದೀಗ ತುಸು ಬೆಚ್ಚಗಿನ ಅನುಭವ. ಚಹಾ ಪಡೆಯುತ್ತಾ ಕುಳಿತ ಆತನ ಸುತ್ತಲೂ ಆ ನಾಲ್ಕು ಮಕ್ಕಳು ಬಂದು ಕುಳಿತವು.
ಎಲ್ಲರನ್ನು ಪರಿಚಯಿಸಿಕೊಂಡ ವೃದ್ಧ ವ್ಯಕ್ತಿ ನಿಧಾನವಾಗಿ ಎಲ್ಲರೂ ಮೈಚಳಿ ಬಿಟ್ಟು ಮಾತನಾಡ ತೊಡಗಿದರು. ಅಜ್ಜನ ಕಥೆಗೆ ಮಕ್ಕಳು ಕಿವಿಯಾದರು.
ತನ್ನ ಬಾಲ್ಯದ ನೆನಪುಗಳಲ್ಲಿ ಕಳೆದು ಹೋದ ಅಜ್ಜ ತನ್ನ ಪುಟ್ಟ ಮನೆ, ಬಾಲ್ಯದ ಆಟ ಪಾಠಗಳು ತಂಟೆ ತಕರಾರುಗಳನ್ನು ಕಥೆ ಮಾಡಿ ಹೇಳಿದ. ಮಕ್ಕಳು ಸಂತಸದಿಂದ ನಗುತ್ತಾ ಆತನ ಕಥೆಗೆ ಚಪ್ಪಾಳೆ ತಟ್ಟಿದರು. ಮೊದಲ ಬಾರಿ ತನ್ನ ಮನೆಯಲ್ಲಿ ಹೊಸದೊಂದು ವಾತಾವರಣ ಕಂಡ ತಾಯಿಗೆ ಸಂತೋಷವಾಯಿತು
ಮರುದಿನ ಮುಂಜಾನೆ ಹೆಣ್ಣು ಮಗಳು ಕೊಟ್ಟ ಚಹಾ ಕುಡಿಯುತ್ತಾ ವೃದ್ಧ ವ್ಯಕ್ತಿ ಈ ಮನೆ ನನಗೆ ನನ್ನ ಅರವತ್ತು ವರ್ಷ ಹಿಂದಿನ ಬಾಲ್ಯದ ದಿನಗಳನ್ನು ನೆನಪಿಸಿತು. ಚಿಕ್ಕದಾಗಿದ್ದರೂ ಮನೆಯ ಪ್ರತಿ ಮೂಲೆಯಲ್ಲಿಯೂ ಜೀವಂತಿಕೆಯನ್ನು ತುಂಬಿ ಕೊಂಡಿರುವ ಈ ಮನೆ ಬಹಳ ಚೆನ್ನಾಗಿದೆ ಎಂದು ಹೇಳಿದನು.
ತುಸು ಸಂಕೋಚದಿಂದ ಅಷ್ಟೇನು ದೊಡ್ಡದಾಗಿಲ್ಲ ನನ್ನ ಮನೆ…. ನಮ್ಮದು ಎಂದು ಹೇಳಿಕೊಳ್ಳಲು ಇದೊಂದೇ ನನ್ನ ಪಾಲಿಗೆ ಉಳಿದಿರುವುದು ಎಂದಳು ಆ ಹೆಣ್ಣು ಮಗಳು.
ಕಣ್ಣುಗಳಲ್ಲಿ ಗಾಂಭೀರ್ಯವನ್ನು ತುಳುಕಿಸುತ್ತಾ ಆದ್ದರಿಂದಲೇ ನಾನು ನಿನಗೆ ಇದನ್ನು ಕೊಡಬಯಸುವೆ ಎಂದು ಹೇಳುತ್ತಾ ಆತ ತನ್ನ ಕೋಟಿನ ಜೇಬಿನಲ್ಲಿದ್ದ ಮಡಚಿದ ಲಕೋಟೆಯೊಂದನ್ನು ತೆಗೆದು ಅಲ್ಲಿದ್ದ ಪುಟ್ಟ ಟೀಪಾಯಿಯ ಮೇಲೆ ಇಟ್ಟನು. ಆ ಹೆಣ್ಣು ಮಗಳು ಆತ ಕೊಟ್ಟ ಲಕೋಟೆಯನ್ನು ನಿಧಾನವಾಗಿ ತೆರೆದು ನೋಡಿದಳು. ಆಕೆಯ ಕಣ್ಣುಗಳು ಇಷ್ಟಗಲವಾದವು ಅದೊಂದು ಆಸ್ತಿಯ ಪತ್ರವಾಗಿತ್ತು. ತುಂಬಾ ಬೆಲೆ ಬಾಳುವ ಊರಿನ ಹೊರ ವಲಯದಲ್ಲಿರುವ ಒಂದು ಪುಟ್ಟ ಮನೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಇದ್ದ ಒಂದಷ್ಟು ಹೊಲಕ್ಕೆ ಸಂಬಂಧಿಸಿದ ಕಾಗದ ಪತ್ರ ಅದಾಗಿತ್ತು.
ಬಹಳ ವರ್ಷಗಳ ಕಾಲ ನಾನು ಒಬ್ಬನೇ ಇದ್ದೆ, ಆದರೆ ನಿನ್ನೆಯ ದಿನ ನನ್ನನ್ನು ಮನೆಯೊಳಗೆ ಕರೆದು ಉಪಚರಿಸಿದ. ನೀನು ನನಗೆ ಮನೆ ಎಂದರೇನು ಎಂಬುದರ ಅರಿವು ಮೂಡಿದೆ. ಮನೆ ಹೇಗಿರಬೇಕು ಮತ್ತು ನಿನಗೆ ಕೊಂಚವೂ ಗೊತ್ತಿರದ ವ್ಯಕ್ತಿಯನ್ನು ಉಪಚರಿಸುವ ಮೂಲಕ ನೀನು ತಾಯ್ತನ ಎಂದರೇನು ಎಂಬುದನ್ನು ನನಗೆ ಗೊತ್ತು ಮಾಡಿಕೊಟ್ಟೆ. ನಿನ್ನ ದಯಾಳು ವ್ಯಕ್ತಿತ್ವಕ್ಕೆ ಏನು ಕೊಟ್ಟರೂ ಸಾಲದು! ನನಗೆ ಯಾರು ಇಲ್ಲದ ಕಾರಣ ನಾನು ಈ ಮನೆಯನ್ನು ಮತ್ತು ಆಸ್ತಿಯನ್ನು ಮಾರುತ್ತಿದ್ದೆ… ನನಗೆ ಹಣದ ಅವಶ್ಯಕತೆ ಇಲ್ಲ ಆದ್ದರಿಂದ ನಿನ್ನ ಅಭ್ಯಂತರವಿಲ್ಲದೆ ಹೋದರೆ ಇದನ್ನು ನಿನಗೆ ಕೊಡುತ್ತೇನೆ… ನೀನಿದನ್ನು ಸ್ವೀಕರಿಸಲೇ ಬೇಕು ಎಂದು ಹೇಳಿದ
ಆಕೆಯ ಕಣ್ಣಾಲಿಗಳಲ್ಲಿ ನೀರು ತುಂಬಿ ದ್ವನಿ ಗದ್ಗದಿತವಾಯಿತು. ಬಹಳ ಪ್ರಯಾಸದಿಂದ ತನ್ನೆಲ್ಲ ಧೈರ್ಯವನ್ನು ಒಗ್ಗೂಡಿಸಿಕೊಂಡು ಆಕೆ ಇದನ್ನು ನಾನು ಒಪ್ಪಲು ಹೇಗೆ ಸಾಧ್ಯ? ನೀವು ಯಾರೆಂದು ಗೊತ್ತಿಲ್ಲದೆ ನಿಮ್ಮ ಆಸ್ತಿಯನ್ನು ನಾನು ಹೇಗೆ ಪಡೆಯಬಲ್ಲೆ. ಖಂಡಿತ ಬೇಡ ಎಂದು ಹೇಳಿದಳು
ಉಹೂಂ! ನೀನು ನನ್ನ ಈ ಆಸ್ತಿಯನ್ನು ಪಡೆಯಲೇಬೇಕು…. ಆದರೆ ಒಂದು ಕರಾರಿನ ಮೇಲೆ. ನೀನು ನನ್ನ ಮನೆ ಮತ್ತು ಆಸ್ತಿಯನ್ನು ತೆಗೆದುಕೋ ಬದಲಾಗಿ ನಿನ್ನ ಈ ಮನೆಯನ್ನು ಒಂದು ರೂಪಾಯಿಗೆ ಖರೀದಿಸಲು ಅವಕಾಶ ಕೊಡು ಎಂದು ವೃದ್ಧ ಹೇಳಿದಾಗ ಅಚ್ಚರಿಯಿಂದ ಆ ಹೆಣ್ಣು ಮಗಳು ಆತನನ್ನು ದಿಟ್ಟಿಸಿ ನೋಡಿದಳು.
ಹೌದು ನನಗೆ ಪ್ರೀತಿ, ಅಕ್ಕರೆ ಮತ್ತು ಕಾಳಜಿಯ ನಗೆಯಿಂದ ಕೂಡಿರುವ ಈ ಮನೆಗೆ ನನಗೆ ಬೇಕೆನಿಸಿದಾಗೆಲ್ಲ ನಾನು ಬರಲು ನನಗೆ ಅವಕಾಶ ಬೇಕು ಎಂದು ವೃದ್ಧ ಗಂಭೀರವಾಗಿ ಆದರೆ ಅಷ್ಟೇ ಪ್ರೀತಿಪೂರ್ವಕವಾಗಿ ಹೇಳಿದನು..
ಹೆಣ್ಣು ಮಗಳು ಸಂತಸದಿಂದ ಆತನ ಮಾತಿಗೆ ಒಪ್ಪಿದಳು. ಆಸ್ತಿಯ ಪತ್ರಗಳನ್ನು ಆಕೆಯ ಹೆಸರಿಗೆ ಮಾಡಿ ಆಕೆಯ ಕೈಗೆ ಒಪ್ಪಿಸಿದ ವೃದ್ಧ ವ್ಯಕ್ತಿ ಒಂದು ರೂಪಾಯಿ ಮತ್ತು ಒಂದು ಕಪ್ಪು ಚಹಾ ಕೇಳಿ ಪಡೆದನು. ಮತ್ತೊಂದಿಷ್ಟು ಹೊತ್ತು ಮಕ್ಕಳ ಜೊತೆಗೆ ಆಟವಾಡಿದ ಆತ ಎಲ್ಲರಿಂದ ಬೀಳ್ಕೊಂಡು ನಸು ನಗುತ್ತ ಅಲ್ಲಿಂದ ಹೊರ ಬಿದ್ದನು. ಆತನ ಹೃದಯ ಪ್ರೀತಿಯಿಂದ ತುಂಬಿತ್ತು.
ಮುಂದಿನ ಒಂದು ವಾರದಲ್ಲಿ ಆ ಹೆಣ್ಣು ಮಗಳು ತನ್ನ ನಾಲ್ಕು ಮಕ್ಕಳೊಡನೆ ವೃದ್ದ ವ್ಯಕ್ತಿಯಿಂದ ಕೊಡಲ್ಪಟ್ಟ ಸುಂದರವಾದ ಫಾರ್ಮ ಹೌಸ್ ಗೆ ತೆರಳಿ ಅಲ್ಲಿಯೇ ವಾಸ್ತವ್ಯವನ್ನು ಹೂಡಿದರು. ಸೇಬು ಹಣ್ಣಿನ ಪುಟ್ಟ ತೋಟ, ವಿಶಾಲವಾದ ಮನೆ ಓಡಾಡಲು ಅಂಗಳ ಉಸಿರಾಡಲು ಸಾಕಷ್ಟು ದೊಡ್ಡ ಕೋಣೆಗಳು ಮಕ್ಕಳ ಸಂತಸಕ್ಕೆ ಮೇರೆಯೇ ಇಲ್ಲವಾಗಿದ್ದು ಇಡೀ ತೋಟದಲ್ಲಿ ಅವರ ನಗು ಕೇಕೆಯ ಧ್ವನಿ ಅನುರಣಿತವಾಗುತ್ತಿತ್ತು ಮಕ್ಕಳ ಸಂತಸವನ್ನು ಕಂಡು ತಾಯಿಯ ಹೃದಯ ತುಂಬಿ ಬಂದಿತ್ತು… ಬದುಕಿನಲ್ಲಿ ಭರವಸೆ ಮೂಡಿತ್ತು.
ಪ್ರತಿವಾರ ಆ ವೃದ್ಧ ವ್ಯಕ್ತಿ ಮಕ್ಕಳನ್ನು ಮತ್ತು ಅವರ ತಾಯಿಯನ್ನು ಭೇಟಿಯಾಗುತ್ತಿದ್ದ. ಕಟ್ಟಿಗೆಯಲ್ಲಿ ಪುಟ್ಟ ಆಟದ ಸಾಮಾನುಗಳನ್ನು ಆ ಮಕ್ಕಳಿಗೆ ಮಾಡಿಕೊಡುತ್ತಿದ್ದ. ಯಾವ ರೀತಿ ಟೊಮ್ಯಾಟೋ ಗಿಡಗಳನ್ನು ಬೆಳೆಸಬೇಕೆಂದು ಕಲಿಸುತ್ತಿದ್ದ.ಮಕ್ಕಳಿಗೆ ಕಥೆಗಳನ್ನು ಹೇಳಿ ಮಲಗಿಸುತ್ತಿದ್ದ. ವೃದ್ಧನ ಮತ್ತು ಮಕ್ಕಳ ನಡುವಿನ ಒಡನಾಟವನ್ನು ಕಂಡು ಆಕೆ ಸಂತಸ ಪಡುತ್ತಿದ್ದಳು. ಕಳೆದುಕೊಂಡ ತನ್ನ ತಂದೆಯನ್ನು ಆ ವೃದ್ಧ ವ್ಯಕ್ತಿಯಲ್ಲಿ ಆಕೆ ಕಾಣುತ್ತಿದ್ದಳು.
ಮಕ್ಕಳೊಂದಿಗೆ ವೃದ್ಧ ಸಂತೋಷವಾಗಿ ಒಡನಾಡುವುದನ್ನು ಕಂಡು ಕೆಲವೊಮ್ಮೆ ಆತನ ಸ್ನೇಹಿತರು ಅದೇನೋ ಅಷ್ಟೊಂದು ಆಸ್ತಿಯನ್ನು ಆ ಮಕ್ಕಳಿಗೆ ಕೊಟ್ಟುಬಿಟ್ಟೆ ಎಂದು ಕೇಳುತ್ತಿದ್ದರು. ಆಗ ಆತ ಅತ್ಯಂತ ಸರಳವಾಗಿ ಯಾರಾದರೂ ನಿಮಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರೀತಿಸಿದರೆ ನೀವು ಅದಕ್ಕೆ ಹತ್ತು ಪಟ್ಟು ಹೆಚ್ಚಿನ ಪ್ರೀತಿಯನ್ನು ಕೊಡ ಮಾಡಬೇಕು ಎಂದು.
ಹೌದಲ್ಲವೇ ಸ್ನೇಹಿತರೆ?
ದ್ವೇಷದಿಂದ ದ್ವೇಷವನ್ನು ಗೆಲ್ಲಲು ಸಾಧ್ಯವಿಲ್ಲ. ನಿಜ.
ಆದರೆ ಪ್ರೀತಿಯಿಂದ ದ್ವೇಷವನ್ನು ಗೆಲ್ಲಬಹುದು ಪ್ರೀತಿಯಿಂದ ಪ್ರೀತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅಂತಹ ಪ್ರೀತಿ ನಮ್ಮೆಲ್ಲರ ಬದುಕಿನಲ್ಲಿ ಸಂಜೀವಿನಿಯಂತೆ ಹಾಸು ಹೊಕ್ಕಾಗಿರಲಿ ಎಂದು ಆಶಿಸುವ
ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ, ಗದಗ್

Share This Article
error: Content is protected !!
";