Ad image

ಕಾತ್ಯಾಯಿನಿ ದೇವಿ ನವರಾತ್ರಿ ಹಬ್ಬದ ಆರನೆಯ ದಿನ

Vijayanagara Vani
ಕಾತ್ಯಾಯಿನಿ ದೇವಿ ನವರಾತ್ರಿ ಹಬ್ಬದ ಆರನೆಯ ದಿನ

ನವರಾತ್ರಿ ಹಬ್ಬದ ಆರನೇ ದಿನ ದೇವಿ ಪಾರ್ವತಿಯನ್ನು ಕಾತ್ಯಾಯಿನಿ ದೇವಿಯ ರೂಪದಲ್ಲಿ ಆರಾಧಿಸುತ್ತಾರೆ. ದೇವಿ ಕಾತ್ಯಾಯಿನಿಯು ಜಾಣ್ಮೆ ಮತ್ತು ಸಾಮರಸ್ಯಗಳ ಅಧಿದೇವತೆಯಾಗಿದ್ದಾಳೆ. ಪಾಪನಾಶಿನಿಯಾಗಿರುವ ಈಕೆ ಭಕ್ತರಿಗೆ ಅಭಯ ಪ್ರದಳಾಗಿದ್ದಾಳೆ. ಅವಿವಾಹಿತ ತರುಣಿಯರು ತಾವು ಇಚ್ಚಿಸುವ ಗುಣಗಳುಳ್ಳ ವರನನ್ನು ಪಡೆಯಲು ಕಾತ್ಯಾಯನಿ ದೇವಿಯನ್ನು ಪೂಜಿಸುತ್ತಾರೆ.

ಭೂಲೋಕದ ಜನರನ್ನು ಕಾಡುತ್ತಿದ್ದ ಮಹಿಶಾಸುರ ಎಂಬ ರಾಕ್ಷಸನ ಉಪಟಳ ತಡೆಯದೆ ದೇವತೆಗಳೆಲ್ಲರೂ ತ್ರಿಮೂರ್ತಿಗಳಿಗೆ ಮೊರೆಯಿಟ್ಟಾಗ
ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮೆಲ್ಲಾ ಶಕ್ತಿಯನ್ನು ಧಾರೆಯೆರೆದು ಕಾತ್ಯಾಯಿನಿಯನ್ನು ಸೃಷ್ಟಿಸಿದರು.
ತಮ್ಮ ವಿಶೇಷ ಉಡುಗೆಗಳನ್ನು,ಆಭರಣಗಳನ್ನು, ಆಯುಧಗಳನ್ನು ಆಕೆಗೆ ಉಡುಗೊರೆಯಾಗಿ ನೀಡಿದರು. ತ್ರಿಮೂರ್ತಿಗಳು ಮತ್ತು ಅಷ್ಟದಿಕ್ಪಾಲಕರ ಎಲ್ಲ ವಿಶೇಷ ಶಕ್ತಿಯನ್ನು ಪಡೆದುಕೊಂಡ ಆಕೆಯನ್ನು ಮಹಿಷಾಸುರನನ್ನು ಯುದ್ಧ ಮಾಡಿ ಸಂಹರಿಸಲು ಕೇಳಿಕೊಂಡರು.ದೇವಿಯು ಕಾತ್ಯಾಯಿನಿಯ ರೂಪದಲ್ಲಿ ಮಹಿಷಾಸುರನೊಂದಿಗೆ ಯುದ್ಧ ಮಾಡಿ ಆತನನ್ನು ಸಂಹರಿಸಿದಳು.

ಈ ದಿನ ವಿಶೇಷವಾಗಿ ಮಹಿಳೆಯರು ಶ್ವೇತ ವಸ್ತ್ರವನ್ನು ಧರಿಸಿ ದೇವಿಯನ್ನು ಪೂಜಿಸಿ ಧೈರ್ಯ ಮತ್ತು ಸಂರಕ್ಷಣೆಗಾಗಿ ದೇವಿಯನ್ನು ಬೇಡಿಕೊಳ್ಳುತ್ತಾರೆ. ದೇವಿಗೆ ಶುದ್ಧವಾದ ಜೇನುತುಪ್ಪವನ್ನು ನೈವೇದ್ಯವಾಗಿ ಅರ್ಪಿಸಿ ಸಂಪತ್ತು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ.

ಉಗ್ರ ಸ್ವರೂಪಿಣಿಯಾಗಿ ಅವತಾರವೆತ್ತಿರುವ ಕಾತ್ಯಾಯಿನಿ ದೇವಿಗೆ ಒಂದೆಡೆ ನಾಲ್ಕು ಕೈಗಳಿದ್ದರೆ ಮತ್ತೊಂದೆಡೆ 10, 18 ಕೈಗಳನ್ನು ಹೊಂದಿರುವ ವಿವಿಧ ರೂಪಗಳಲ್ಲಿ ಸಿಂಹವಾಹಿನಿಯಾಗಿ ಆಕೆ ಪೂಜಿಸಲ್ಪಡುತ್ತಾಳೆ. ಕಾತ್ಯಾಯಿನಿ ದೇವಿಯು ಮಹಿಷಾಸುರನನ್ನು ಸಂಹರಿಸಿ ಮಹಿಷಾಸುರ ಮರ್ದಿನಿ ಎಂದು ಕರೆಯಲ್ಪಟ್ಟಳು.

ಚಂದ್ರಹಾಸೋಜ್ವಲಕರಾ ಶಾರ್ದೂಲ ವರ ವಾಹನಾ
ಕಾತ್ಯಾಯನಿ ಶುಭಂ ದದ್ಯಾ ದೇವಿ ದಾನವ ಘಾತಿನಿ

ಚಂದ್ರನಂತೆ ಉಜ್ವಲವಾದ ಬೆಳಕನ್ನು ಚೆಲ್ಲುವ, ಸಿಂಹವಾಹಿನಿಯಾಗಿರುವ ಕಾತ್ಯಾಯಿನಿ ದೇವಿಯು ದಾನವರ ಪಾಲಿಗೆ ದುಷ್ಟಹಂತ್ರಿಯಾಗಿ ದುಷ್ಟರನ್ನು ಶಿಕ್ಷಿಸಿ ತನ್ನ ಭಕ್ತರಾದ ಶಿಷ್ಟರನ್ನು ಪರಿಪಾಲಿಸುವಳು.

ಕಾಂಚನ ಮಾಲೆ ಮತ್ತು ಪದ್ಮ ಪುಷ್ಪವನ್ನು ತನ್ನ ಮುಕುಟದಲ್ಲಿ ಧರಿಸಿರುವ ಶಿವನ ಪತ್ನಿಯಾದ ಕಾತ್ಯಾಯಿನಿ ದೇವಿಯು ಪೀತಾಂಬರ ಮತ್ತು ನಾನಾಲಂಕಾರಗಳಿಂದ ಭೂಷಿತವಾಗಿದ್ದಾಳೆ. ಪರಮಾನಂದವನ್ನು ನೀಡುವ ಪರಬ್ರಹ್ಮ ಸ್ವರೂಪಿಣಿಯಾಗಿದ್ದಾಳೆ. ತನ್ನ ಭಕ್ತರ ಪರಮ ಶಕ್ತಿಯಾಗಿರುವ ವಿಶ್ವಕರ್ತಳು ವಿಶ್ವಾತೀತಳು, ವಿಶ್ವ ಪ್ರೇಮಿ ವಿಶ್ವ ಕ್ಷೇಮವನ್ನು ಬಯಸುವ ತಾಯಿ ಕಾತ್ಯಾಯಿನಿದೇವಿಯಾಗಿದ್ದಾಳೆ.

ಕಾತ್ಯಾಯಿನಿ ದೇವಿಯು ಆಜ್ಞಾಚಕ್ರದ ಅಧಿದೇವತೆ. ಮಾನಸಿಕ ಅಸಮತೋಲನವನ್ನು ಸರಿಪಡಿಸಲು ಜ್ಞಾನ, ಸ್ಪಷ್ಟತೆಗಳನ್ನು ಹೊಂದಲು ಆಜ್ಞಾಚಕ್ರದ ಅದಿದೇವತೆಯಾದ ಕಾತ್ಯಾಯಿನಿಯನ್ನು ಪೂಜಿಸಬೇಕು.

ವಂದೇ ವಾಂಛಿತ ಮನೋರಥಾರ್ಥ ಚಂದ್ರಾರ್ಧ ಕೃತಶೇಖರಾಂ
ಸಿಂಹಾರೂಢ ಚತುರ್ಭುಜ ಕಾತ್ಯಾಯಿನಿಮ್ ಯಶಸ್ವಿನಿಮ್
ಸ್ವರ್ಣ ವರ್ಣ ಆಜ್ಞಾಚಕ್ರ ಸ್ಥಿತಮ್, ಷಷ್ಠಮ ದುರ್ಗ ತ್ರಿನೇತ್ರಂ
ವರಾಭಿಕಂ ಶಗಪಾದಧರಂ ಕಾತ್ಯಾಯನ ಸುತಂ ಭಜಾಮಿ
ಪೀತಾಂಬರ ಪರಿಧಾನಂ ಸ್ಮೆರಮುಖಿ ನಾನಾಲಂಕಾರ ಭೂಷಿತಂ
ಮಂಜೀರ ಹರ ಕೇಯೂರ ಕಿಂಕಿಣಿ ರತ್ನಕುಂಡಲ ಮಂಡಿತಂ
ಪ್ರಸನ್ನವದನಾ ಪಲ್ಲವಾಧರಮ ಕಾಂತ ಕಪೋಲ ತುಗಾಮ್ ಕುಚಂ
ಕಮನೀಯಂ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಾಭಿಂ

ಎಂದು ಧ್ಯಾನಪೂರ್ವಕವಾಗಿ ದೇವಿಯನ್ನು ಕಲ್ಪಿಸಿಕೊಳ್ಳಬೇಕು.

ಷೋಡಶೋಪಚಾರ ಪೂಜೆಯನ್ನು ಮಾಡಿ
“ಓಂ ನಮೋ ಕಾತ್ಯಾಯಿನಿ ನಮಹ” ಎಂಬ ಮಂತ್ರವನ್ನು ಹೇಳಿ ಆರತಿ ಮಾಡಬೇಕು.

ಯಾ ದೇವಿ ಸರ್ವಭೂತೇಶು ಕಾತ್ಯಾಯನಿ ರೂಪೇಣ ಸಂಸ್ಥಿತಮ್
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಎಂದು ದೇವಿಯನ್ನು ಸ್ತುತಿಸಬೇಕು.

ಎಲ್ಲರಿಗೂ ನವರಾತ್ರಿ ಹಬ್ಬದ ಆರನೇ ದಿನದ ಶುಭಾಶಯಗಳು

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್

Share This Article
error: Content is protected !!
";