Ad image

ಕಥೆ. ಜ್ಞಾನೋದಯ

Vijayanagara Vani
ಕಥೆ. ಜ್ಞಾನೋದಯ

 ರೀ , ಎಲ್ರೀ ಇದ್ದೀರಾ ?ಸ್ವಲ್ಪ ಬನ್ರೀ ಇಲ್ಲಿ.. ಎನ್ನುತ್ತ ಒಂದೇ ಸಮನೆ ರಶ್ಮಿ ಗಂಡನನ್ನು ಕೂಗಿ ಕರೆದಳು .ಎದ್ದನೋ, ಬಿದ್ದನೋ, ಅಂತ ಹೆಂಡತಿಯ ಕೂಗು ಕೇಳಿ ಹೊರಗೆ ವರಾಂಡಕ್ಕೆ,ಓಡೋಡಿ ಬಂದ ಗಂಡ ಹರ್ಷ .ತುಂಬ ಗಾಬರಿ ಆಯಿತು ಹರ್ಷನಿಗೆ .ಹೆಂಡತಿ ಗರ್ಭಿಣಿ ಬೇರೆ .ಎಲ್ಲಿ ಜಾರಿ ಬಿದ್ದು ಬಿಟ್ಟಳೊ ಎನ್ನುವ ಆತಂಕ ಬೇರೆ ..ಅರೇ ವರಾಂಡದಲ್ಲೂ ಇಲ್ಲ , ದೇವರೇ ಕಾಪಾಡಪ್ಪ ಅಂತ ಹರ್ಷ , ಮನದಲ್ಲೇ ದೇವರ ನೆನೆಯುತ್ತ ಹೊರ ಅಂಗಳಕ್ಕೇ ಬಂದ ..ಅಲ್ಲಿ ಉಬ್ಬಿದ ಹೊಟ್ಟೆಯನ್ನು, ಬಗ್ಗಿಸಲಾರದೇ ಕಷ್ಟ ಪಡುತ್ತಾ ಉದುರಿದ ಮರದ ಎಲೆಗಳಿಂದಾದ ಕಸವನ್ನು ಪೊರಕೆಯಿಂದ ಕಸ ಗುಡಿಸುತ್ತಿದ್ದಳು ರಶ್ಮಿ .ಅದನ್ನು ನೋಡಿ ಹರ್ಷನಿಗೆ ಅಯ್ಯೋ ಅನಿಸಿತು ..ಯಾಕೇ ಇಷ್ಟೆಲ್ಲ ಕಷ್ಟ ಪಡ್ತೀಯ .ನಾನಿಲ್ವಾ ?ಇದನ್ನೆಲ್ಲ ಮಾಡೋಕೆ .ಹೋಗು ಅಲ್ಲಿ ಆರಾಮ್ ಆಗಿ ಕೂತ್ಕೋ .ಅಂತ ಪ್ರೀತಿಯಿಂದ ಗದರಿ ಹೆಂಡತಿಯನ್ನು ಒಂದು ಕಡೆ ಕೂರಿಸಿದ ಹರ್ಷ .ರಶ್ಮಿಯ ಕೈಯಿಂದ ಪೊರಕೆ ತೆಗೆದುಕೊಂಡು ಕಸ ಗುಡಿಸಿದ .ಗಂಡ ಕಸ ತೆಗೆಯುವದನ್ನು ನೋಡಿ ರಶ್ಮಿಗೆ ಒಂತರಾ ಹಿಂಸೆ ಅನಿಸಿತು .ರೀ ಒಂದು ಕೆಲಸ ಮಾಡೋಣ್ವಾ ?ಅಂತ ರಶ್ಮಿ ಕೇಳಿದಾಗ , ಏನು ಎಂಬಂತೆ ಹೆಂಡತಿಯ ಕಡೆ ತಿರುಗಿ ನೋಡಿದ ಹರ್ಷ .ರೀ ನಾಳೆ ಈ ಮರಗಳನ್ನು ಕಡಿಸಿಬಿಡುವ.ಮರ ಕಡಿಯಲು ಯಾರಿಗಾದರೂ ಹೇಳಿ .ಅಂದಳು ರಶ್ಮಿ .ರಶ್ಮಿ ಹೇಳಿದ ಮಾತು ಕೇಳಿ , ಎನ್ ಹೇಳ್ತಾ ಇದ್ದೀಯ ರಶ್ಮಿ .ಈಗ ನೀನು ಗರ್ಭಿಣಿ .ಒಳ್ಳೊಳ್ಳೆ ಯೋಚನೆ ಮಾಡೋದು ಬಿಟ್ಟು , ಕಡಿ , ಗಿಡಿ ಅಂದರೆ , ನಾಳೆ ನಮಗೆ ಹುಟ್ಟೋ ಮಗೂನೂ ಅದೇ ಕಲಿಯುತ್ತೆ, ಗೊತ್ತೇನೆ .ಈ ಮರಗಳು ನಮಗೆ ಏನು ತೊಂದರೆ ಕೊಟ್ಟಿವೆ ಹೇಳು , ತಂಪಾದ ನೆರಳು ಕೊಟ್ಟಿವೆ .ಒಳ್ಳೆ ಗಾಳಿ ಸಿಕ್ಕಿದೆ .ಈಗ ಇಂತ ಮರಗಳನ್ನು ಕಡಿದರೆ ಪಾಪ ಸುತ್ತೋದಿಲ್ವ? ಎನ್ನುತ್ತ ಹೆಂಡತಿಗೆ ತಿಳಿ ಹೇಳಿದ ಹರ್ಷ .ಆದರೆ ರಶ್ಮಿ ಕೇಳುವ ಪರಿಸ್ಥತಿಯಲ್ಲಿರಲಿಲ್ಲ .ನಿಮಗೇನು ಗೊತ್ತಾಗತ್ತೆ ನನ್ನ ಕಷ್ಟ .ಬೆಳಿಗ್ಗೆ ಆಫೀಸ್ ಗೆ ಹೋದರೆ ಮಧ್ಯ ರಾತ್ರಿ ಮನೆಗೆ ಬರ್ತೀರಾ .ಭಾನುವಾರ ಒಂದು ದಿನ ಮನೆಯಲ್ಲಿ .ಇಲ್ಲಿ ಅಂಗಳದ ತುಂಬಾ ಕಸ ಹರಡಿರತ್ತೆ,.ನೋಡಿದವರು ಏನೆಂದು ಕೊಂಡಾರು ?ಈ ಮನೆ ಹೆಂಗಸಿಗೆ ಸ್ವಲ್ಪ ಕ್ಲೀನ್ ಇಡೋಕೆ ಆಗೋಲ್ವ ಅಂತಾರೆ .ನಾನು ಈ ಹೊಟ್ಟೆ ಹೊತ್ತು ಕೊಂಡು ಎಷ್ಟು ಅಂತ ಮಾಡಲಿ ?ಎಂದು ಅಲವತ್ತುಕೊಂಡಳು ರಶ್ಮಿ .ಹೆಂಡತಿಯ ಪಾಡು ನೋಡಿ , ಆಯ್ತು ಬಿಡು , ನಾಳೇನೇ ಯಾರಿಗಾದರೂ ಹೇಳ್ತೀನಿ ಅಂದ ಹರ್ಷ , ಮರಗಳ ಮೇಲೆ ಕಣ್ಣಾಯಿಸಿದ .ಯಾಕೋ ನಿಂಗೆ ನಾವೂ ಭಾರ ಆದ್ವ ಅಂತ ಮರಗಳು ಕೇಳುತ್ತಿದ್ದ ಹಾಗನಿಸಿತು ಹರ್ಷನಿಗೆ . ಅಂದು ರಾತ್ರಿ ,ರಶ್ಮಿ ಹಾಗೂ ಹರ್ಷ ಊಟ ಮುಗಿಸಿ ಮಲಗಿದರು .ಸುಸ್ತಾಗಿದ್ದರಿಂದ ರಶ್ಮಿ ಬೇಗ ನಿದ್ದೆ ಹೋದಳು .ಹರ್ಷನಿಗೆ ಯಾಕೋ ನಿದ್ದೆ ಹತ್ತಿರ ಸುಳಿಯದು .ಇನ್ನೂ ಆ ಮರಗಳನ್ನು ಕಡಿಯುವದರ ಗೊಂದಲದಲ್ಲೇ ಇದ್ದನವ .ಹರ್ಷ , ಚಿಕ್ಕವನಿದ್ದಾಗಿನಿಂದಲೂ ಆ ಮರಗಳ ಒಡನಾಟದಲ್ಲಿ ಇದ್ದ .ಅದರ ತಂಪಾದ ನೆರಳು , ಕಿರುಗಾಳಿಯ ಸವಿದಿದ್ದ.ಹೀಗೇ ಯೋಚನಾ ಲಹರಿ ಸಾಗಿತ್ತು ..ನಿದ್ದೆ ಯಾವಾಗ ಬಂತೋ ತಿಳಿಯದು .ಅಂತೂ ಹರ್ಷ ನಿದ್ರಾದೇವಿಯ ವಶದಲ್ಲಿದ್ದ . ಅದೊಂದು ಸುಂದರ ಹಚ್ಚ ಹಸಿರು ತುಂಬಿದ ಕಾಡು .ಎಲ್ಲೆಲ್ಲೂ ಹಸಿರು .ಚಿಗುರೊಡೆದ ಗಿಡ ಗಂಟಿಗಳು .ಮುಗಿಲೆತ್ತರದ ಹೆಮ್ಮರಗಳು .ಆ ಮರಗಳ ಮೇಲೆ ಚಿಲಿಪಿಲಿ ಹಕ್ಕಿಗಳ ಗೂಡು .ಪಕ್ಷಿಗಳ ಇಂಚರದ ಕೂಗು .ನವಿಲುಗಳ ನರ್ತನ .ಜಿಂಕೆಗಳ ಓಟದ ಆಟ .ಮರಗಿಡಗಳಲ್ಲಿ ಬಣ್ಣ ಬಣ್ಣದ ಹೂಗೊಂಚಲು .ಹಣ್ಣು ಹಂಪಲು .ಕೆಳಗೆ ಭೂತಾಯಿ ಹಸಿರು ಹುಲ್ಲುಗಳಿಂದ ಅಲಂಕೃತಳಾಗಿದ್ದಾಳೆ . ಅಮ್ಮನ ಮೆತ್ತನೆಯ ಮಡಿಲಿನಂತಿದೆ ಹುಲ್ಲಿನ ಹಾಸಿಗೆ .ಬದಿಯಲ್ಲಿ ಒಂದು ನೀರ ತೊರೆ ಹರಿಯುತ್ತಿದೆ .ಸ್ಫಟಿಕದಂತೆ ಹೊಳೆಯುತ್ತಲಿದೆ .ಸೂರ್ಯನ ಎಳೆ ಚಿನ್ನದ ಕಿರಣದಿಂದ ಇಡೀ ಕಾಡು ಬೆಳಗುತ್ತಿದೆ .ವಾವ್ ಸ್ವರ್ಗವೇ ಧರೆಗಿಳಿದ ಹಾಗೇ ಅನಿಸುತ್ತಿದೆ .ಅಷ್ಟರಲ್ಲಿ ಯಾವುದೋ ಗಾಡಿ ಸದ್ದು ಕೇಳಿಸಿತು.ಗಾಡಿಯಿಂದ ಆರೇಳು ಜನರು ಇಳಿದರು .ಕತ್ತಿ , ಕೊಡಲಿ , ಗರಗಸ ಇತ್ತು ಅವರ ಕೈಯ್ಯಲ್ಲಿ .ನೋಡ ನೋಡುತ್ತಿದ್ದಂತೆ ಮರಗಳ ಬಳಿ ಬಂದರವರು .ಚಿಗುರೊಡೆಯುತ್ತಿರುವ ಹಸು ಕಂದನಂತಿದ್ದ ಎಳೆಯ ಗಿಡವನ್ನು ಕೂಡ ಕಡಿದು ಹಾಕಿದರು ದುಷ್ಟರು .ಹೆಮ್ಮರಗಳು ಆರ್ತನಾದ ಮಾಡತೊಡಗಿದವು .ಆದರೂ ಆ ಕಿಡಿ ಗೇಡಿಗಳು ಜಗ್ಗಲಿಲ್ಲ.ಹೆಮ್ಮರಗಳ ಕೈ ಅಂತಿದ್ದ ಟೊಂಗೆಗಳನ್ನು ಕಡಿದು ರಾಶಿ ಹಾಕ ತೊಡಗಿದರು .ಆ ಮರಗಳ ಮೇಲಿದ್ದ ಪಕ್ಷಿಗಳ ಗೂಡು ನೆಲಕ್ಕೆ ಬಿದ್ದು ನುಚ್ಚುನೂರಾಯಿತು .ಪಕ್ಷಿ ಮರಿಗಳ ಪ್ರಾಣ ಹೋಯಿತು .ಮೊಟ್ಟೆಗಳು ಒಡೆದುಹೋದವು .ಪಕ್ಷಿಗಳ ಆಕ್ರಂದನ ಮುಗಿಲು ಮುಟ್ಟಿತು .ಆದರೂ ಆ ದುಷ್ಟರಿಗೆ ಕರುಣೆ ಬರಲಿಲ್ಲ .ಇವನ್ನೆಲ್ಲ ನೋಡುತ್ತಾ ತಬ್ಬಲಿಯು ನೀನಾದೆ ಮಗನೇ ಹೇಬ್ಬುಲಿಯ ಬಾಯೊಳಗೆ ಹೋಗುವೆನು ಇಬ್ಬರಾ ಋಣ ತೀರಿತೇಂದು ಮತ್ತೆ ತಬ್ಬಿಕೊಂಡಿತು ಕರುವನು . ಆರ ಬಳಿಯಲಿ ಮಲಗಲಮ್ಮ ಆರ ಮೊಲೆಯನು ಕುಡಿಯಲಮ್ಮ ಆರ ಸೇರಿ ಬದುಕಲಮ್ಮ ಆರು ನನಗೆ ಹಿತವರು ಎಂದು ಪುಣ್ಯಕೋಟಿಯ ಹಾಡು ನೆನಪಾಗಿ ಕಣ್ಣೀರು ಧಾರೆಯಾಗಿ ಹರಿಯಿತು .ನೋಡ ನೋಡುತ್ತಿದ್ದಂತೇಯೇ ಮರಗಿಡಗಳ ಪ್ರಾಣ ಹೊರಟು ಹೋಗಿತ್ತು .ಎಲ್ಲಿ ನೋಡಿದರಲ್ಲಿ ಬೋಳು ಬೋಳು ..ಬರೀ ಕತ್ತರಿಸಿದ ಕಾಂಡಗಳು ಮಾತ್ರ .ಹಚ್ಚ ಹಸಿರಿನ ಸ್ವರ್ಗ ಕ್ಷಣದಲ್ಲಿ ಕಟುಕರ ಕೈಯಿಂದ ನಾಶವಾಗಿತ್ತು .ಆದರೂ ಒಂದು ಪುಟ್ಟ ಗಿಡ ಹಾಗೇ ಉಳಿದುಕೊಂಡಿತ್ತು .ಅದೂ ತೊರೆಯ ಮತ್ತೊಂದು ದಡದಲ್ಲಿ .ಅದಕ್ಕೇ ಆ ಚೋರರಿಂದ ಉಳಿದುಕೊಂಡಿದ್ದು .ಅದು ಬಿಕ್ಕುತ್ತ ಮಾತನಾಡಿತು .ನನ್ನ ಅಪ್ಪ , ಅಮ್ಮ , ಅಣ್ಣ , ತಮ್ಮ , ತಂಗೀ , ಅಕ್ಕ , ಬಂಧು ಬಳಗ ಎಲ್ಲ ಮಾನವನ ದುರಾಸೆಗೆ ಬಲಿಯಾದ್ರು.ನನ್ನ ಪುಟ್ಟ ಪಾಪು ತಮ್ಮ ತಂಗೀರು ಅಷ್ಟೇ ಎರಡೆಲೇ ಬಿಟ್ಟು ಚಿಗುರುತ್ತ ತಮ್ಮ ತುಂಟಾಟದಿಂದ ನಮ್ಮನ್ನು ಬೆರಗುಗೊಳಿಸುತ್ತಿದ್ದರು .ಅವರನ್ನೂ ಆ ಹುಲು ಮಾನವರು ಬಿಡಲಿಲ್ಲ ಹೊಸಕಿ ಹಾಕಿದರು .ಈಗ ಉಳಿದಿರೋದು ನಾನು .ಶಪಥ ಮಾಡುತ್ತೇನೆ .ಮಾನವರ ಚಿಗುರನ್ನು ನಾಶ ಮಾಡುತ್ತೇನೆ ಅಂತ ಕೇಕೆ ಹಾಕುತ್ತಾ ಗಹಗಹಿಸಿ ನಕ್ಕಿತು ಆ ಪುಟ್ಟ ಗಿಡ .ರಶ್ಮಿ ತನ್ನ ಹೊಟ್ಟೆಯ ಮೇಲೆ ಕೈ ಇಟ್ಟು , ಇಲ್ಲ ನನ್ನ ಪಾಪುನ ಏನೂ ಮಾಡಬೇಡ.ನಾನು ತಪ್ಪು ಮಾಡೊಲ್ಲ .ನಿಮ್ಮ ಕಡಿಯೋಲ್ಲ, ತಪ್ಪಾಯ್ತು ಇನ್ನು ಯಾವತ್ತೂ ಇಂತಹ ತಪ್ಪು ಮಾಡೊಲ್ಲ , ಬಿಟ್ಟು ಬಿಡಿ ನನ್ನ ಮಗೂನ ಅಂತ ಕಿರುಚಿಕೊಂಡಳು .ರಶ್ಮಿ ಕಿರುಚಿದ ಧ್ವನಿ ಕೇಳಿ ಹರ್ಷ ಎದ್ದು ರೂಮಿನ ಲೈಟ್ ಹಾಕಿ , ಏನಾಯ್ತು ರಶ್ಮಿ , ಏಳು , ಯಾಕಿಷ್ಟು ಭಯ ಆಗಿದೆ ನಿನಗೆ? ಎಂದು ರಶ್ಮಿಯ ಭುಜ ಅಲುಗಿಸಿ ಎಬ್ಬಿಸಿದ .ರಶ್ಮಿ ಭಯಭೀತಳಾಗಿ ಎದ್ದು ಕೂತಳು .ಅವಳು ಕೈಯಿಂದ ಹೊಟ್ಟೆಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು .ಹರ್ಷ ನೀರಿನ ಗ್ಲಾಸನ್ನು ಕೊಟ್ಟು , ನೀರು ಕುಡಿ ರಶ್ಮಿ , ಸ್ವಲ್ಪ ಸುಧಾರಿಸಿಕೊ ಅಂದಾಗ ನೀರು ಕುಡಿದು ರಶ್ಮಿ, ಹರ್ಷನ ಭುಜದ ಮೇಲೆ ತಲೆ ಇಟ್ಟು ಒರಗಿ ಕೂತಳು .ಏನಾಯ್ತೇ , ಯಾಕಿಷ್ಟು ಹೆದರಿದ್ದೀಯ.ಏನಾದರೂ ಕೆಟ್ಟ ಕನಸು ಬಿತ್ತೇನೆ? ಅಂತ ಕಾಳಜಿ ಮಾಡಿದಾಗ ಹ್ಮ್ ಹೌದೂರೀ .ಯಾರೋ ನಮ್ಮ ಪಾಪುನ ಸಾಯಿಸ್ತೀನಿ ಅಂತ ಅಂದಂಗ್ ಆಯ್ತೂರೀ .ರಶ್ಮಿ ಅಳುತ್ತಾ ನುಡಿದಳು .ಬಿಡ್ತು ಬಿಡ್ತು ಅನ್ನು ರಶ್ಮಿ , ಈ ರಾತ್ರಿಲೀ ಎಂತ ಮಾತು ಆಡ್ತಾ ಇದ್ದೀಯ .ಎನ್ನುತ್ತ ಹರ್ಷ, ಹೆಂಡತಿಯನ್ನು ತೋಳಲ್ಲಿ ಬಳಸಿ ಸಮಾಧಾನ ಮಾಡಲು ಯತ್ನಿಸಿದ .ರೀ ಹೊರಗೆ ಆ ಮರಗಳ ಬಳಿ ಹೋಗೋಣ ನಡೀರಿ ಅಂದಳು ರಶ್ಮಿ .ಈ ರಾತ್ರಿಯಲ್ಲಾ? .ಹೊರಗೆ ಹೋಗೋದ, ನೋ ಚಾನ್ಸ್ .ಮಲಗು .ಏನಿದ್ದರೂ ಬೆಳಿಗ್ಗೆ ಎದ್ದು ಮಾತನಾಡೋಣ .ತಗೋ ಇದು ಮೊನ್ನೆ ನಿನ್ನಮ್ಮ ಗಣೇಶನ ದೇವಸ್ಥಾನದಿಂದ ಕುಂಕುಮ ತಂದಿದ್ರಲ್ಲ .ಹಚ್ಕೋ, ತಗೋ ಅಂತ ರಶ್ಮಿಗೆ ಕುಂಕುಮ ಕೊಟ್ಟ ಹರ್ಷ .ರೀ ಪ್ಲೀಸ್ ನನಗೆ ಏನೂ ಬೇಡ .ಮೊದಲು ಆ ಮರಗಳ ಹತ್ರ ಕರ್ಕೊಂಡ್ ಹೋಗಿ .ನಿಮಗೆ ದಮ್ಮಯ್ಯ .ನಾನು ಸಾರಿ ಕೇಳಬೇಕು ಅವುಗಳ ಹತ್ರ ..ಅಂತ ರಶ್ಮಿ ಅಳಲು ಶುರು ಮಾಡಿದಳು .ಅಯ್ಯೋ ದೇವರೇ ಇವಳಿಗೆ ಏನಾಯ್ತಪ್ಪ ಇದ್ದಕ್ಕಿದ್ದಂಗೆ .ಒಳ್ಳೆ ಪಜೀತಿ ಆಯ್ತಲ್ಲ ತಂದೆ, ಅಂತ ಭಯ ಹರ್ಷನಿಗೆ .ಆದರೂ ಹೆಂಡತಿಯೆದುರು ತೋರಿಸಿಕೊಳ್ಳದೇ , ಹ್ಮ್ ಬಾ ಮಾರಾಯ್ತೀ .ನೀನು ಹೇಳಿದಮೇಲೆ ಮುಗೀತು .ಎಲ್ಲಿ ನನ್ನ ಮಾತು ಕೇಳ್ತೀಯ .ಅಂತ ಗದರುತ್ತ ರಶ್ಮಿಗೆ, ಒಂದು ಶಾಲು ಹೊದೆಸಿಕೊಂಡು ಹೊರ ಅಂಗಳದಲ್ಲಿದ್ದ ಆ ಮರಗಳ ಬಳಿ ಕರೆದುಕೊಂಡು ಹೋದ ಹರ್ಷ .ರಶ್ಮಿ ಆ ಮರಗಳ ಬಳಿ ಹೋಗಿದ್ದೇ ಅವುಗಳನ್ನು ತಬ್ಬಿ ಅಳತೊಡಗಿದಳು .ನಾನು ನಿಮ್ಮನ್ನು ಕಡಿಯಲಾರೆ.ನನ್ನ ತಪ್ಪನ್ನ ಮನ್ನಿಸಿಬಿಡಿ .ನಿಮಗೂ ಉಸಿರಿದೆ , ಬದುಕಿದೆ .ನನ್ನ ಕಂದ, ನನಗೆ ಎಷ್ಟು ಮುಖ್ಯವೋ ನಿಮಗೂ ಕೂಡ ಮಕ್ಕಳು, ಮರಿ ,ಅಷ್ಟೇ ಮುಖ್ಯ ಅಂತ ನನಗೆ ಈಗ ಅರಿವಾಗಿದೆ .ಅಂತ ಏನೇನೋ ಬಡಬಡಿಸುತ್ತಿದ್ದಳು ರಶ್ಮಿ .ಈಗ ಹರ್ಷನಿಗೆ ಎಲ್ಲವೂ ಅರ್ಥ ಆಯಿತು .ಹೆಂಡತಿಗೆ ಕನಸು ಬಿದ್ದು ಜ್ಞಾನೋದಯವಾಗಿದೆ ಎಂದು .ಮೇಲೆ ಮರಗಳನ್ನು ನೋಡಿದ .ಅವು ಜೀವವುಳಿದ ಕೃತಜ್ಞತಾಭಾವ ಬೀರಿದಂತೆ ಭಾಸವಾಯಿತು .ಅಂತೂ ನೀವು ನನ್ನ ಜೊತೆಯಲ್ಲೇ ನಮಗೆ ನೆರಳಾಗಿ ಉಳಿವಿರಲ್ಲ ಎನ್ನುವ ನೆಮ್ಮದಿಯ ನಿಟ್ಟುಸಿರು ಹೊರ ಚೆಲ್ಲಿದ ಹರ್ಷ.

. ✍️ಶೋಭಾ ನಾರಾಯಣ ಹೆಗಡೆ. ಶಿರಸಿ.

Share This Article
error: Content is protected !!
";