ಬಳ್ಳಾರಿ,ಡಿ.30
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಒಂದೆಡೆ ಆದಾಯ ಹರಿದುಬರುತ್ತಿದೆ. ಇನ್ನೊಂದೆಡೆ, ಸಾರಿಗೆ ವ್ಯವಸ್ಥೆಯ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒತ್ತಡವೂ ಹೆಚ್ಚುತ್ತಿದ್ದು, ಇದನ್ನು ನಿವಾರಿಸಲು ಸಾರಿಗೆ ಇಲಾಖೆಯ ಬಳ್ಳಾರಿ ವಿಭಾಗವು ಬಸ್ ಮತ್ತು ಸರತಿ (ಟ್ರಿಪ್) ಸಂಖ್ಯೆಯನ್ನೂ ಹೆಚ್ಚಿಸುತ್ತಿದೆ.
ಕಳೆದ ವರ್ಷ ಜೂನ್ 11 ರಂದು ಶಕ್ತಿ ಯೋಜನೆ ಆರಂಭವಾಗುವುದಕ್ಕೂ ಮೊದಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದಲ್ಲಿದ್ದ ಬಸ್ ಗಳ ಸಂಖ್ಯೆ ಶಕ್ತಿ ಯೋಜನೆ ಜಾರಿಗೆ ಬಂದ ಒಂದೇ ವರ್ಷದಲ್ಲಿ ಬಸ್ ಗಳು ಏರಿಕೆಯಾಗಿವೆ. ಮಹಿಳೆಯರು ಮತ್ತು ಸಾರ್ವಜನಿಕರ ಪ್ರಯಾಣ ದಟ್ಟಣೆ ಕಡಿಮೆಗೊಳಿಸಲು ಸಾರಿಗೆ ಇಲಾಖೆಯು ತನ್ನ ಬಸ್ ಗಳ ಸರತಿ ಸೇವೆಗಳಲ್ಲಿಯೂ ಹೆಚ್ಚಿಸಿವೆ.
ಶಕ್ತಿ ಯೋಜನೆ ಬಂದ ಬಳಿಕ ಸಾರಿಗೆ ಸೇವೆ ಬಳಕೆ ಅಧಿಕವಾಗಿದೆ. ಜನರ ಸಂಚಾರ ಹೆಚ್ಚಾಗುತ್ತಿದೆ. ಜನರು ತಾವಿರುವ ಹಳ್ಳಿಗಳಿಗೆ ಬಸ್ ಸೇವೆ ಬರಲಿ ಎಂದು ಅಪೇಕ್ಷಿಸುತ್ತಿರುವ ಕಾರಣ ಹೊಸ ಹೊಸ ಜಾಗಗಳಿಗೆ ಬಸ್ ಸೇವೆ ನೀಡಲಾಗುತ್ತಿದೆ. ಹೀಗಾಗಿ ಬಸ್ ಗಳ ಸಂಖ್ಯೆ ಮತ್ತು ಸರತಿಯಲ್ಲಿ ಹೆಚ್ಚಳವಾಗುತ್ತಿದೆ.
ಆದಾಯದಲ್ಲೂ ಹೆಚ್ಚಳ:
ಶಕ್ತಿ ಯೋಜನೆ ಆರಂಭವಾದ 2023ರ ಜೂನ್ 11ರಿಂದ 2024ರ ನವೆಂಬರ್ ವರೆಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದಲ್ಲಿ ಒಟ್ಟು 3,73,58,517 ಮಹಿಳೆಯರು ಸಂಚರಿಸಿದ್ದಾರೆ. ಇದರಲ್ಲಿ ವಯಸ್ಕರ ಸಂಖ್ಯೆ 3,58,89,773 ಆಗಿದ್ದರೆ, ಮಕ್ಕಳ ಸಂಖ್ಯೆ 14,68,744. ಇದರಿಂದ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗಕ್ಕೆ ಇಲ್ಲಿಯವರೆಗೆ ಒಟ್ಟು 1,35,10,15,030 ರೂ. ಆದಾಯ ಬಂದಿದೆ.
ತಾಲ್ಲೂಕುವಾರು ಸಾರಿಗೆ ಆದಾಯದ ವಿವರ (2023ರ ಜೂನ್ 11 ರಿಂದ 2024ರ ನವೆಂಬರ್ 30 ರವೆರೆಗೆ):
ಬಳ್ಳಾರಿ: 2,08,94,579-ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಒಟ್ಟು ವೆಚ್ಚ-70,56,50,800 ಆಗಿದೆ.
ಸಿರುಗುಪ್ಪ: 61,12,136-ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಒಟ್ಟು ವೆಚ್ಚ-24,95,52,930.
ಕುರುಗೋಡು ಮತ್ತು ಕಂಪ್ಲಿ: 34,88,457-ಮಹಿಳಾ ಪ್ರಯಾಣಿಕರು, ಒಟ್ಟು ವೆಚ್ಚ-14,71,72,401.
ಸಂಡೂರು: 68,63,345-ಮಹಿಳಾ ಪ್ರಯಾಣಿಕರು, ಒಟ್ಟು ವೆಚ್ಚ-24,86,38,899.
ಜಿಲ್ಲೆಯಲ್ಲಿ ಒಟ್ಟು 37358517 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಒಟ್ಟು 1,35,10,15,030 ರೂ. ವೆಚ್ಚವಾಗಿದೆ.
ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಬಸ್ ಬಳಕೆಯು ಹೆಚ್ಚಾಗಿ ಕಂಡುಬರುತ್ತದೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಳ್ಳಾರಿ ವಿಭಾಗವು ಬಸ್ ಗಳನ್ನು ನಿಯೋಜನೆ ಮಾಡುತ್ತಿದೆ. ಎಲ್ಲ ಸಮಯದಲ್ಲೂ ಪ್ರಯಾಣಿಕರು ಬಸ್ ಗಳನ್ನು ಅಪೇಕ್ಷಿಸುತ್ತಿರುವುದರಿಂದ ಹೆಚ್ಚುವರಿ ಬಸ್ ಗಳನ್ನು, ಸರತಿ(ಟ್ರಿಪ್)ಗಳನ್ನು ಓಡಿಸಲಾಗುತ್ತಿದೆ.
ಸ್ಕೂಲ್ ರೌಂಡ್ ಕಡ್ಡಾಯ:
ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳುವ ಬೆಳಿಗ್ಗಿನ ಸಮಯದಲ್ಲಿ ಗ್ರಾಮೀಣ ಸಾರಿಗೆ ವ್ಯವಸ್ಥೆ ಮೇಲೆ ವಿಪರೀತ ಒತ್ತಡ ಉಂಟಾಗುವುದನ್ನು ಗಮನಿಸಿ ಒತ್ತಡ ತಗ್ಗಿಸುವ ಸಲುವಾಗಿ ದೂರದ ಜಿಲ್ಲೆಗಳಿಂದ ಬಳ್ಳಾರಿಗೆ ಬೆಳಿಗ್ಗೆ ಬರುವ ಬಸ್ ಗಳಿಗೆ ಒಂದು ಸರತಿ ‘ಸ್ಕೂಲ್ ರೌಂಡ್’ ಹೋಗಿ ಬರಲು ಸೂಚನೆ ನೀಡಲಾಗಿದೆ.
ಅಗತ್ಯವಿರುವ ಕಡೆ ಸರ್ವೆ ಮಾಡಿ ಬಸ್ ಗಳ ವ್ಯವಸ್ಥೆ ತೊಂದರೆಗಳ ನಡುವೆಯೂ ಉತ್ತಮ ಸೇವೆ ನೀಡಲು ಪ್ರಯತ್ನಿಸುತ್ತಿದೆ. ಶಾಲಾ- ಕಾಲೇಜು ಮಕ್ಕಳಿಗಾಗಿ ಸಾರಿಗೆ ಸೇವೆಯೂ ಹೆಚ್ಚಿಸಲಾಗಿದೆ. ಕೆಕೆಆರ್‌ಡಿಬಿ ಮತ್ತು ಡಿಎಂಎಫ್ ಅಡಿಯಲ್ಲಿ ಮತ್ತಷ್ಟು ಹೆಚ್ಚು ಬಸ್ ಗಳು ಬಂದಿವೆ. ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗವು ಅಗತ್ಯ ಇರುವ ಕಡೆ ಸರ್ವೆ ಮಾಡಿ ಬಸ್ ಸೇವೆ ಒದಗಿಸುತ್ತಿದೆ.
ದುಡಿಯುವ ಮಹಿಳೆಯರಿಗೆ ಶಕ್ತಿ:
ರಾಜ್ಯ ಸರ್ಕಾರದ ಪ್ರಮುಖ ಧ್ಯೇಯವು ದುಡಿಯುವ ಬಡವರ್ಗದ ಮಹಿಳೆಯರಿಗೆ ಆತ್ಮಸ್ಥೆöÊರ್ಯ ತುಂಬುವುದು ಆಗಿದೆ. ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯು ದುಡಿಯುವ ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬುತ್ತಿದೆ.
ಗ್ರಾಮೀಣ ಭಾಗದಲ್ಲಿ ಹೆಣ್ಣು ಕುಟುಂಬದ ಕಣ್ಣಾಗಿದ್ದು, ತನ್ನ ಕುಟುಂಬದ ಪೋಷಣೆಗಾಗಿ ಸಣ್ಣ ವ್ಯಾಪಾರ-ವಹಿವಾಟುಗಳಿಗೆ ನಗರಕ್ಕೆ ಮುಖಮಾಡಿ ಬರುವಾಗ ಅವಳ ಪ್ರಯಾಣದ ಖರ್ಚು ತನ್ನ ಆದಾಯದ ಅರ್ಧದಷ್ಟಾಗುತ್ತದೆ. ತಮ್ಮ ವ್ಯಾಪಾರ ವಹಿವಾಟು ನಡೆಸಲು ಅದರ ಭಾರವನ್ನು ಹೊರೆಯಾಗದಂತೆ ನಿರ್ವಹಿಸಲು ಈ ಯೋಜನೆಯು ಸಹಕಾರಿಯಾಗುತ್ತಿದೆ.
ಶಕ್ತಿ ಯೋಜನೆ ಜಾರಿಯಾದ ನಂತರ ಮುಜರಾಯಿ ದೇಗುಲಗಳಿಗೆ ಭಕ್ತರ ಭೇಟಿ ಹೆಚ್ಚಿದೆ. ಇದರಿಂದ ಬಹುತೇಕ ದೇವಾಲಯಗಳ ಆದಾಯವೂ ದುಪ್ಪಟ್ಟಾಗಿದೆ.
ಕೋಟ್ 1:
ಜೋಳ, ಕಡ್ಲೆ ಮತ್ತು ತರಕಾರಿ ಮಾರಲು ಪ್ರತಿನಿತ್ಯ ಬಳ್ಳಾರಿ ನಗರಕ್ಕೆ ಓಡಾಡುತ್ತೇನೆ. ಮುಂಚೆ ಹಣ ನೀಡಿ ಟಿಕೇಟ್ ಪಡೆಯುತ್ತಿದ್ದೆ. ಸಿದ್ದರಾಮಯ್ಯನವರು ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ ಫ್ರೀ ಟಿಕೇಟ್ ಪಡೆಯುತ್ತಿದ್ದು, ಉಳಿಯುವ ಟಿಕೇಟ್ ಹಣದಿಂದ ಬಹಳ ಅನುಕೂಲವಾಗುತ್ತಿದೆ. ಇನ್ನಷ್ಟು ವ್ಯಾಪಾರ ಕೈಗೊಳ್ಳಲು ಉತ್ತೇಜನ ದೊರಕಿದಂತಾಗಿದೆ. ಯೋಜನೆ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
– ಈರಮ್ಮ, ಗಿರಿಜಮ್ಮ, ಸಣ್ಣ ವ್ಯಾಪಾರಿಗಳು, ಕೆ.ವೀರಾಪುರ, ಬಳ್ಳಾರಿ ತಾಲ್ಲೂಕು.
ಕೋಟ್ 2:
ಪ್ರತಿನಿತ್ಯ ವಿದ್ಯಾಭ್ಯಾಸಕ್ಕೆ ಬೆಳಿಗ್ಗೆ ಹಳ್ಳಿಯಿಂದ ಪಟ್ಟಣಕ್ಕೆ ತೆರಳುತ್ತೇನೆ. ಸಂಚರಿಸಲು ಬಸ್ ನಲ್ಲಿ ಯಾವುದೇ ವ್ಯತ್ಯಯವಿಲ್ಲ. ಸ್ಕೂಲ್ ಅವಧಿಯಂತೆ ಬಸ್ ಓಡಾಡುವುದರಿಂದ ಸಂಚಾರಕ್ಕೆ ಅಡ್ಡಿಯಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ ಸೊನ್ನೆ ಮೊತ್ತದ ಟಿಕೇಟ್ ಬರುತ್ತಿದ್ದು, ಪಾಸ್‌ಗಾಗಿ ಬಳಸುತ್ತಿದ್ದ ಹಣದಿಂದ ಪುಸ್ತಕ, ಪೆನ್ ಖರೀದಿಸುತ್ತೇನೆ.
– ರೇಣುಕಾ, ಪ್ರೌಢಶಾಲೆ ವಿದ್ಯಾರ್ಥಿನಿ, ಗೆಣಿಕೆಹಾಳ್ ಗ್ರಾಮ, ಕುರುಗೋಡು ತಾಲ್ಲೂಕು.
ಕೋಟ್ 3:
ನಮ್ಮ ಗ್ರಾಮದಿಂದ 35 ಕಿ.ಮೀ ದೂರದ ಪಟ್ಟಣಕ್ಕೆ ತೆರಳಿ ಮೂರು ತಿಂಗಳ ಕಂಪ್ಯೂಟರ್ ತರಬೇತಿ ಪಡೆದುಕೊಳ್ಳಲು ಸರ್ಕಾರದ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ತುಂಬಾ ಉಪಯೋಗವಾಯಿತು. ಪ್ರಸ್ತುತ ಬ್ಯೂಟಿ ಪಾರ್ಲರ್ ತರಬೇತಿ ಪಡೆಯುತ್ತಿದ್ದೇನೆ. ಜೀವನ ರೂಪಿಸಿಕೊಳ್ಳಲು ಶಕ್ತಿ ಯೋಜನೆ ಅನುಕೂಲಕರವಾಗಿದ್ದು, ಪ್ರತಿ ತಿಂಗಳು 1,000 ರಿಂದ 1,500 ರೂ. ಉಳಿತಾಯವಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
– ಅಶ್ವಿನಿ.ಹೆಚ್, ತೊಣಸಿಗೇರಿ ಗ್ರಾಮ, ಸಂಡೂರು ತಾಲ್ಲೂಕು.
ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿಯೋಜನೆ, ಅನ್ನಭಾಗ್ಯ, ಗೃಹಲಕ್ಷಿö್ಮ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳನ್ನು ಎಲ್ಲ ಅರ್ಹರಿಗೆ ತಲುಪಿಸುವಲ್ಲಿ ಸರ್ಕಾರವೇ ನೇಮಿಸಿರುವ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕೆ.ಇ.ಚಿದಾನಂದಪ್ಪ ಹಾಗೂ ಉಪಾಧ್ಯಕ್ಷರಾದ ಆಶಾ ಲತಾ ಸೋಮಪ್ಪ ಅವರು, ನಿರಂತರ ಶ್ರಮ ವಹಿಸುತ್ತಿದ್ದು, ಜಿಲ್ಲೆಯ ಜೊತೆಗೆ ಪ್ರತಿ ತಾಲ್ಲೂಕು ಮಟ್ಟದಲ್ಲಿಯೂ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.
ಶಕ್ತಿ ಯೋಜನೆ ಬಳಿಕ ಸಾರ್ವಜನಿಕ ಸಾರಿಗೆ ಬಸ್ ಗಳ ಬಳಕೆಯೂ ಹೆಚ್ಚಾಗಿದೆ. ಅದಕ್ಕೆ ಪೂರಕವಾಗಿ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಾರೆ.