Ad image

ದೂರುವ ಮುನ್ನ…. ಯೋಚಿಸಿ

Vijayanagara Vani
ದೂರುವ ಮುನ್ನ…. ಯೋಚಿಸಿ

ಮದುವೆಯಾಗಿ ಪರವೂರಿನಲ್ಲಿ ವಾಸವಾಗಿರುವ ದಂಪತಿಗಳಲ್ಲಿ ಪತಿ ಸದಾ ತನ್ನ ಹೆಂಡತಿಯನ್ನು ಒಂದು ವಿಷಯಕ್ಕೆ ದೂರುತ್ತಿರುತ್ತಾನೆ . ನನ್ನ ಹೆಂಡತಿ ನನ್ನ ತಂದೆ ತಾಯಿಯ ಮನೆಗೆ ಬರಲು ಇಷ್ಟಪಡುವುದಿಲ್ಲ ಆಕೆಗೆ ಗಂಡನ ಮನೆಯವರ ತಲೆ ಕಂಡರೆ ಆಗುವುದಿಲ್ಲ ಎಂದು. ಆದರೆ ಆ ದೂರಿನ ಹಿಂದೆ ಕೆಲವು ಸಕಾರಣಗಳಿರುತ್ತೇವೆ ಎಂಬುದನ್ನು ಆತ ಮರೆತಿರುತ್ತಾನೆ.ಪ್ರತಿಯೊಂದು ವಿಷಯಕ್ಕೂ ತನ್ನದೇ ಆದ ಹಲವು ಆಯಾಮಗಳಿರುತ್ತವೆ.ಹೋಗಬಾರದು ಅಥವಾ ಹೋಗಲು ಇಚ್ಚಿಸುವುದಿಲ್ಲ ಎಂಬುದಕ್ಕೆ ಕೂಡ ಆಕೆಯದ್ದೇ ಆದ ಕೆಲ ಸ್ಪಷ್ಟನೆಗಳು ಇದ್ದೇ ಇರುತ್ತವೆ.
ಪತಿಯಾದವನು ಎಂದೂ ಕೂಡ ಈ ವಿಷಯದ ಬಗ್ಗೆ ಅಷ್ಟಾಗಿ ಯೋಚಿಸುವುದೇ ಇಲ್ಲ ಎನ್ನುವುದು ವಿಪರ್ಯಾಸದ ಸಂಗತಿ.

ಹಾಗೆ ತನ್ನ ಪತ್ನಿ ಗಂಡನ ಮನೆಗೆ ಅತ್ತೆ ಮಾವನ ಬಳಿ ಇರಲು ಏಕೆ ಇಷ್ಟಪಡುವುದಿಲ್ಲ ಎಂಬುದಕ್ಕೆ ಕೆಲ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು. ಇದೇನು ಅರಿತುಕೊಳ್ಳಲಾರದ ಮತ್ತು ಅರಿತುಕೊಳ್ಳಬಾರದ ಸಂಗತಿಯೇನಲ್ಲ.
ನನ್ನ ಮಾತುಗಳು ನಿಮಗೆ ಚುಚ್ಚಿದಂತೆ ಭಾಸವಾಗಬಹುದು ಆದರೆ ಮುಕ್ತವಾದ ಮನಸ್ಸಿನಿಂದ ಪರ ವಿರೋಧಗಳನ್ನು ಎಣಿಸದೆ ಕೇಳಿ ಮೊದಲು ಅರ್ಥೈಸಿಕೊಳ್ಳಿ….ನಂತರ ಒಂದು ತೀರ್ಮಾನಕ್ಕೆ ಬನ್ನಿ.

ನೀವು ಆಕೆಯನ್ನು ಮದುವೆಯಾಗಲು ಹಸಿರು ನಿಶಾನೆ ತೋರಿದಾಗ ಆಕೆಯೂ ಸಂತೋಷದಿಂದಲೇ ನಿಮ್ಮನ್ನು ಮದುವೆಯಾಗಲು ಒಪ್ಪಿಕೊಂಡಿರುತ್ತಾಳೆ . ಹೊಸ ಜೀವನವನ್ನು ನಿಮ್ಮೊಂದಿಗೆ ಕಳೆಯುವ, ನಿಮ್ಮ ಜೀವನದ ಭಾಗವಾಗುವ ಆಶಯ ಆಕೆಯಲ್ಲೂ ಇರುತ್ತದೆ. ಹೊಸ ಕನಸುಗಳು ಪ್ರೀತಿ ಮತ್ತು ಒಳ್ಳೆಯ ಭವಿಷ್ಯದ ಸಾಕಷ್ಟು ಭರವಸೆಗಳೊಂದಿಗೆ ಆಕೆ ನಿಮ್ಮ ಮನೆಗೆ ಕಾಲಿರಿಸುತ್ತಾಳೆ… ಆದರೆ ಆಕೆ ಹಾಗೆ ಕಾಲಿಟ್ಟ ಗಳಿಗೆಯಲ್ಲಿ ಆಕೆಯಲ್ಲಿ ಉಂಟಾಗುವ ಪರಕೀಯ ಪ್ರಜ್ಞೆಯನ್ನು ಯಾರೂ ಹೋಗಲಾಡಿಸುವುದಿಲ್ಲ… ಬದಲಾಗಿ ಆಕೆ ಹೊರಗಿನಿಂದ ಬಂದವಳು ಎಂಬಂತೆ ಆಕೆಯನ್ನು ನಡೆಸಿಕೊಳ್ಳಲಾಗುತ್ತದೆ

ನಿಮ್ಮ ತಾಯಿ, ತಂದೆ, ಅಣ್ಣ, ತಮ್ಮ, ತಂಗಿ, ಅತ್ತಿಗೆ ಹೀಗೆ ಮನೆಯ ಎಲ್ಲಾ ಸದಸ್ಯರು ಆಕೆಯನ್ನು ಅತಿಥಿಯಂತೆ ಭಾವಿಸಿ ಹಾಗೆ ನಡೆದುಕೊಂಡಾಗ ಆಕೆಯ ಮನಸ್ಸು ಮುದುಡುತ್ತದೆ. ಆಕೆ ನಿಮ್ಮ ವಂಶವನ್ನು ಮುಂದುವರೆಸುವ ನಿಮ್ಮ ಪತ್ನಿಯಾಗಿ ಕುಟುಂಬದ ಸೊಸೆಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ವ್ಯಕ್ತಿ ಎಂದು ಯಾರೂ ಭಾವಿಸಿದೆ ಹೋದಾಗ ಆಕೆಗೆ ನೋವಾಗುತ್ತದೆ.ಆಕೆಯನ್ನು ಪ್ರೀತಿಯಿಂದ ಸ್ವಾಗತಿಸುವುದರ ಬದಲು ಟೀಕಿಸುವ, ಆಕೆಯ ಕುರಿತು ನಿರ್ಣಯಗಳನ್ನು ಕೈಗೊಳ್ಳುವ, ಆಕೆಯನ್ನು ನಗಣ್ಯ ಎಂದು ಭಾವಿಸುವ ಮನೆಯವರ ವರ್ತನೆ ಆಕೆಗೆ ಭರಿಸಲಾಗದು….. ತನ್ನದೇ ಎಂದು ಆಕೆ ಭಾವಿಸಬೇಕಾದ ಮನೆಯಲ್ಲಿ ಆಕೆ ಒಬ್ಬಂಟಿ ಎಂಬ ಭಾವವನ್ನು ತಾಳಬೇಕಾಗುತ್ತದೆ.

ಮತ್ತೆ ನೀವು ನೀವು ಇದೆಲ್ಲವನ್ನು ಮೌನವಾಗಿ ಗಮನಿಸುತ್ತೀರಿ. ಈ ಸಮಯದಲ್ಲಿ ನೀವು ಆಕೆಗೆ ಜೊತೆಯಾಗಬೇಕಾಗಿರುತ್ತದೆ… ಆದರೆ ನೀವು ಮಾಡುವುದೇನು?.. ನಿಮಗೆ ಇದೊಂದು ದೊಡ್ಡ ವಿಷಯ ಎಂದು ತೋರುವುದೇ ಇಲ್ಲ. ಕುಟುಂಬಗಳು ಇರುವುದೇ ಹೀಗೆ ಎಂಬ ನಿಮ್ಮ ಭಾವನೆ ಆಕೆಯ ಮನಸ್ಸಿನಲ್ಲಿ ಖೇದವನ್ನುಂಟು ಮಾಡುತ್ತದೆ , ನಿಧಾನವಾಗಿ ಟೀಕೆಗಳು ಹೆಚ್ಚಾಗುತ್ತವೆ ಕೂಡ.
ಮೊದಮೊದಲು ಕೇವಲ ಆಕೆಯನ್ನು ಟೀಕಿಸುವ ಮನೆಯವರು ನಂತರ ನಿಮ್ಮನ್ನು ಕೂಡ ಟೀಕಿಸಲಾರಂಭಿಸುತ್ತಾರೆ. ನಿಮ್ಮ ಆಯ್ಕೆಯ ಕುರಿತು ಪ್ರಶ್ನಿಸುತ್ತಾರೆ ನೀವು ತಪ್ಪು ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂಬ ಮನೆಯವರ ಅಭಿಪ್ರಾಯ
ನಿಮ್ಮ ಕುರಿತು ನೀವೇ ಸಂಶಯವನ್ನು ಹೊಂದುವಂತೆ ಮಾಡುತ್ತಾರೆ. ಅವರು ನಿಮ್ಮನ್ನು ನಿಮ್ಮ ನಿರ್ಣಯಗಳನ್ನು ಅವಮಾನಿಸಿ ನೀವು ಒಬ್ಬ ಸೋತ ವ್ಯಕ್ತಿ ಎಂಬಂತೆ ನಡೆಸಿಕೊಳ್ಳುತ್ತಾರೆ ಮತ್ತು ನೀವು ಅದನ್ನು ಸಹಿಸಿಕೊಳ್ಳುತ್ತೀರಿ.

ಸಹೋದರರೇ ನಿಜವಾದ ಸತ್ಯ ಏನೆಂದರೆ ಯಾರೊಬ್ಬರೂ ನಿಮ್ಮ ಪುರುಷಾಹಂಕಾರದ ಕಾಳಜಿ ಮಾಡಲಿಲ್ಲ! ಆದರೆ ಆಕೆಗೆ ನೋವಾಯಿತು. ಅವರು ನಿಮ್ಮೊಂದಿಗೆ ವರ್ತಿಸುತ್ತಿರುವ ರೀತಿ ಆಕೆಗೆ ಬೇಸರ ತರಿಸಿತು. ನಿಮ್ಮದೇ ಸ್ವಂತ ಮನೆಯಲ್ಲಿ ನಿಮ್ಮವರೇ ನಿಮ್ಮನ್ನು ಮುರಿಯುವ, ನಿಮ್ಮಲ್ಲಿ ಕೀಳರಿಮೆ ಮೂಡುವಂತೆ ವರ್ತಿಸುವುದು ಆಕೆಗೆ ನುಂಗಲಾರದ ತುತ್ತಾಯಿತು. ನಿಮ್ಮನ್ನು ಪ್ರೀತಿಸುವ ನಿಮ್ಮ ಕಾಳಜಿ ಮಾಡುವ ಆಕೆ ನಿಮ್ಮನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ನಿಮ್ಮವರಿಂದ ನಿಮಗಾಗುವ ಅವಮಾನವನ್ನು ನಿಮಗೆ ಎತ್ತಿ ತೋರಿಸಿದಳು.

ಆದರೆ ಆಕೆಯ ಮಾತುಗಳನ್ನು ಸಂಪೂರ್ಣವಾಗಿ ಕೇಳದೆ ನೀವು ಸಿಟ್ಟು ಮಾಡಿಕೊಂಡಿರಿ…. ನನ್ನ ಕುಟುಂಬದ ವಿಷಯವಾಗಿ ಆಕೆ ಹೀಗೆ ಮಾತನಾಡಬಹುದೇ? ಎಂದು ಯೋಚಿಸಿದಿರಿ. ಕೆಲವೇ ತಿಂಗಳುಗಳ ಪರಿಚಯದ ಪತ್ನಿಗಿಂತ ಹಲವಾರು ವರ್ಷಗಳಿಂದ ತನ್ನೊಂದಿಗೆ ಇರುವ ತನ್ನ ಹೆತ್ತು ಹೊತ್ತವರು ಸಹೋದರ ಸಹೋದರಿಯರು ನನಗೆ ಮುಖ್ಯ ಎಂದು ನೀವಂದುಕೊಂಡದ್ದರಲ್ಲಿ ತಪ್ಪಿಲ್ಲ. ನಿಮ್ಮ ಪಾಲಕರು ನಿಮ್ಮನ್ನು ಪಾಲಿಸಿ ಪೋಷಿಸಿ ಈ ಹಂತಕ್ಕೆ ತಲುಪಿಸಿದ್ದಾರೆ ಇದರ ಅರಿವು ಆಕೆಗೆ ಇಲ್ಲ ಎಂದು ಯೋಚಿಸಿದಿರೇ ಹೊರತು ಮನದ ಆಳದಲ್ಲಿ ಮಾತ್ರ ನಿಮ್ಮವರು ನಿಮ್ಮೊಂದಿಗೆ ನಡೆದುಕೊಳ್ಳುವ ರೀತಿಯ ಕುರಿತು ನಿಮಗೆ ಅಸಮಾಧಾನ ಇದ್ದೇ ಇತ್ತು… ಮತ್ತು ಏನೂ ಆಗಿಲ್ಲ ಎಂಬಂತೆ ನೀವು ಇರಲು ಪ್ರಯತ್ನಿಸಿದಿರಿ.

ಕೇವಲ ನಿಮ್ಮ ಪತ್ನಿ ನಿಮ್ಮನ್ನು ಓರ್ವ ವ್ಯಕ್ತಿಯಾಗಿ ಗುರುತಿಸಲು ಯತ್ನಿಸಿದಳು. ನಿಮಗೆ ಗೌರವವಿಲ್ಲದೆಡೆ, ಆಕೆಯ ಅಸ್ತಿತ್ವವನ್ನು ಕಡೆಗಣಿಸುವ ಕಡೆ ಆಕೆ ಹೋಗದೆ ಇರಲು ನಿರ್ಧರಿಸಲು ಕಾರಣ ಕೇವಲ ನೀವು ಮತ್ತು ನಿಮ್ಮ ಕುರಿತ ಆಕೆಯ ಕಾಳಜಿ ಆಗಿತ್ತು.
ನಿಮ್ಮ ಕುಟುಂಬದವರು ಆಕೆಯನ್ನು ಮಾತ್ರ ಹೀಯಾಳಿಸಿದರೆ ಆಕೆ ತಡೆದುಕೊಳ್ಳುತ್ತಾಳೆ.ಅವರ ಮಾತುಗಳನ್ನು ಅರಗಿಸಿಕೊಳ್ಳುತ್ತಾಳೆ . ಅವರ ನಿರ್ಣಯದ ತಣ್ಣಗಿನ ಕೂರಲಗಿನಂತಹ ಮಾತುಗಳನ್ನು ಆಕೆ ಸಹಿಸಿಕೊಳ್ಳುತ್ತಾಳೆ. ಆದರೆ ತನ್ನದೇ ಮನೆಯಲ್ಲಿ ತನ್ನ ಪತಿ ತನ್ನ ಗೌರವವನ್ನು ಕಳೆದುಕೊಳ್ಳುವುದು ಆಕೆಯಿಂದ ಸಹಿಸಲಾಗುವುದಿಲ್ಲ
ಇದುವೇ ಹೆಣ್ಣು ಮಗಳ ಶಕ್ತಿ.
ತನ್ನ ತಂದೆ ಪ್ರಜಾಪತಿಯು ಬಹುದೊಡ್ಡ ಯಾಗ ವೊಂದನ್ನು ಮಾಡುತ್ತಿರುವುದನ್ನು ಅರಿತು ತಾನು ಕೂಡ ಯಜ್ಞದಲ್ಲಿ ಪಾಲ್ಗೊಳ್ಳಲು ತಂದೆಯ ಮನೆಗೆ ಹೋಗಲು ಆಶಿಸುವ ಸತಿ ದೇವಿಯನ್ನು ಶಿವನು ಸಾಕಷ್ಟು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಪತಿಯ ಮಾತನ್ನು ಕೇಳದೆ ತಂದೆಯ ಮನೆಗೆ ತೆರಳಿದ ಸತಿ ದೇವಿಯು ಅಲ್ಲಿ ತಾಯಿ ಮತ್ತು ಸಹೋದರಿಯರಿಂದ ಪ್ರೀತಿಯ ಸ್ವಾಗತವನ್ನು ಪಡೆದರೂ ನನ್ನ ತಂದೆಯಿಂದ ತನ್ನ ಪತಿಗಾದ ಅವಮಾನದಿಂದ ನೊಂದು ಆತ ಮಾಡುತ್ತಿರುವ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ.

ಅದು ಆಕೆಯ ತಂದೆ ಆಗಿರಲಿ ಸೋದರರಾಗಿರಲಿ ಮತ್ತೆ ಯಾರೇ ಆಗಿರಲಿ ಹೆಣ್ಣು ತನಗಾಗುವ ನೋವು ಅವಮಾನಗಳನ್ನು ಸಹಿಸಿಕೊಳ್ಳಬಲ್ಲಳು ಆದರೆ ತನ್ನ ಪತಿಗೆ ಆಗುವ ಅವಮಾನವನ್ನು ಖಂಡಿತವಾಗಿಯೂ ಸಹಿಸಿಕೊಳ್ಳುವುದಿಲ್ಲ…. ಕಾರಣ ಆಕೆ ನಿಮ್ಮನ್ನು ತನ್ನ ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾಳೆ.

ಆದ್ದರಿಂದ ಸಹೋದರರೇ… ನಿಮ್ಮ ಪತ್ನಿ ತನ್ನ ಅತ್ತೆಯ ಮನೆಗೆ ಹೋಗಲು ಇಚ್ಚಿಸದೆ ಹೋದಾಗ ಆಕೆಗೆ ಒತ್ತಾಯಿಸಬೇಡಿ… ಆಕೆಯ ಮೌನದ ಪರಿಭಾಷೆಯನ್ನು ಅರಿಯಿರಿ. ಆಕೆ ಸುಮ್ಮನಿದ್ದರೆ ಏನನ್ನೂ ಕೇಳದೆ ಹೋದರೆ, ಯಾರನ್ನೂ ದೂರದೆ ಇದ್ದಾಗ ಆಕೆಗೆ ನೋವಾಗಿದೆ ಎಂಬ ಸತ್ಯವನ್ನು ಅರಿತುಕೊಳ್ಳಿ. ಆಕೆ ತನ್ನ ಪತಿಗಾಗಿ ಈ ಹೋರಾಟವನ್ನು ಮಾಡುತ್ತಾಳೆ.
ಆದರೆ ಆಕೆ ಒಂದು ಬಾರಿ ಹೋರಾಟವನ್ನು ನಿಲ್ಲಿಸಿದಾಗ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಇಷ್ಟೇ…. ಆಕೆ ಸೋಲನ್ನು ಒಪ್ಪಿಕೊಂಡಿಲ್ಲ ಆದರೆ ನೀವು ನಿಮಗಾಗಿ ಎದ್ದು ನಿಲ್ಲುವುದಿಲ್ಲ ಎಂಬುದು ಆಕೆಗೆ ಅರಿವಾಗಿದೆ. ತನ್ನ ಪತಿ ತನ್ನ ಮುಂದೆ ಸಣ್ಣವನಾಗುವುದು ಆಕೆಗೆ ಇಷ್ಟವಿಲ್ಲವಾದ್ದರಿಂದ ಆಕೆ ಆತನ ಹೆತ್ತವರ ಮನೆಗೆ ಹೋಗಲು ಇಷ್ಟಪಡುವುದಿಲ್ಲ

ಈಗಲಾದರೂ ಅರ್ಥವಾಯಿತೆ?!

 

ವೀಣಾ ಹೇಮಂತ ಗೌಡ ಪಾಟೀಲ್ ಮುಂಡರಗಿ, ಗದಗ್

Share This Article
error: Content is protected !!
";