ನಮ್ಮ ಬಳಿ ಇಲ್ಲದೆ ಇರುವ ವಸ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ನಾವು ಬದುಕಿನಲ್ಲಿ ನಾಗಾಲೋಟದ ಪಯಣ ಸಾಗಿಸಿದ್ದೇವೆ. ಆದರೆ ಯಾವುದನ್ನು ನಾವು ಬೇಕು ಎಂದು ಬಯಸಿ ಪಡೆಯಲು ಆಶಿಸುತ್ತಿರುವೆವೋ ಅದನ್ನು ಈಗಾಗಲೇ ಸಾಕಷ್ಟು ಜನ ತಮ್ಮ ಪ್ರಯತ್ನದ ಮೂಲಕ ಪಡೆದುಕೊಂಡಿದ್ದಾರೆ ಎಂಬುದು ನಾವು ಮರೆತಿರುವ ಒಂದು ಸತ್ಯ ಸಂಗತಿ.
ನಿರ್ಜನ ದ್ವೀಪವೊಂದರಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಹಾದು ಹೋಗುತ್ತಿರುವ ಹಡಗೊಂದನ್ನು ಕಂಡು ತಾನು ಬಚಾವಾದೆ ಎಂದುಕೊಳ್ಳುತ್ತಾನೆ ಆದರೆ ಅದೇ ಸಮುದ್ರದಲ್ಲಿ ಹಡಗಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕ ಎತ್ತ ಹೋಗಬೇಕು ಎಂದು ಅರಿಯದೆ ದಿಕ್ಕು ತಪ್ಪಿದ್ದು ದ್ವೀಪವನ್ನು ಕಂಡೊಡನೆ ಅಬ್ಬ! ಅಂತೂ ನೆಲ ಸಿಕ್ಕಿತು ಎಂದು ಸಂತಸ ಪಡುತ್ತಾನೆ ಇದೇ ಬದುಕಿನ ವಿಪರ್ಯಾಸ ಅಲ್ಲವೇ ಸ್ನೇಹಿತರೆ?
ಘಟನೆ ಒಂದೇ, ದೃಶ್ಯವೂ ಅದೇ ಆದರೆ ಎರಡು ವಿಭಿನ್ನ ಗ್ರಹಿಕೆಗಳು ನಮ್ಮನ್ನು ಆಳುತ್ತವೆ ಎಂಬ ಮಾತು ಆಳವಾಗಿ ಮನದಲ್ಲಿ ಚಿಂತನೆಯನ್ನು ಹುಟ್ಟು ಹಾಕುತ್ತದೆ. ನಾವು ಬಯಸುವ ವಸ್ತುವನ್ನು ನಮಗಿಂತ ಮುಂಚೆಯೇ ಆಶಿಸಿ ಅದನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಬಹುದು ಎಂಬುದು ನಾವು ಯೋಚಿಸಲೇಬೇಕಾದ ಸಂಗತಿ.
ನಮಗೆ ಅತ್ಯಂತ ಸಾಮಾನ್ಯ ಮತ್ತು ಸಹಜ ಎಂದೆನಿಸಿರುವುದು ಬೇರೆಯವರಿಗೆ ಅತಿ ವಿಶಿಷ್ಟ ಮತ್ತು ಸಾಧಿಸಲೇ ಬೇಕು ಎಂಬ ಭಾವವನ್ನು ಮೂಡಿಸಲಿಕ್ಕೂ ಸಾಕು.
ನಮಗೆ ಅತ್ಯಂತ ಕಠಿಣ, ಸವಾಲೆನಿಸಿರುವ ವಿಷಯ ಬೇರೆಯವರ ಪಾಲಿಗೆ ಒಂದು ಅತ್ಯುತ್ತಮ ಅವಕಾಶ ಎಂದು ತೋರಬಹುದು.
ನಮಗೆ ಅತ್ಯಂತ ಸಾಧಾರಣವಾದ ನಾವು ಮಹತ್ವ ನೀಡದ ಒಂದು ವಿಷಯ ಬೇರೆಯವರ ಪಾಲಿಗೆ ಬದುಕಿನ ಅತಿ ದೊಡ್ಡ ಕನಸಾಗಿರಬಹುದು.
ಅಂತಿಮವಾಗಿ ನಾವು ತಿಳಿದುಕೊಳ್ಳಬೇಕಾದದ್ದು ಏನೆಂದರೆ…ಒಂದು ಮಹೋನ್ನತವಾದ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ನಾವು ನಮ್ಮ ಕೈಯಳತೆಯಲ್ಲಿ ಇರುವುದನ್ನು ಕಳೆದುಕೊಳ್ಳುತ್ತಿದ್ದೇವೆ.
ಪ್ರತಿದಿನ ಸೈಕಲ್ ನಲ್ಲಿ ಪ್ರಯಾಣಿಸುವ ಯುವಕ ಬಣ್ಣ ಬಣ್ಣದ ಮೊಪೆಡ್ಗಳನ್ನು, ಬೈಕ್ ಗಳನ್ನು ನೋಡಿ ನಾನು ಒಂದು ಬೈಕ್ ಖರೀದಿಸಬೇಕು ಎಂದು ಕಷ್ಟಪಟ್ಟು ದುಡಿದು ಕೊನೆಗೆ ಒಂದು ಬೈಕ್ ಖರೀದಿಸಿದ.
ಕೇವಲ ಒಂದೆರಡು ವಾರಗಳಷ್ಟೇ ಗಾಳಿಯಲ್ಲಿ ಸುಯ್ ಎಂದು ಬೈಕ್ ನಲ್ಲಿ ಹೋಗುತ್ತಿರುವಾಗ ಜೋರಾಗಿ ಮಳೆ ಸುರಿದು ಅದೇನು ಮಾಡಿದರೂ ಮಳೆಯಲ್ಲಿ ತೋಯಿಸಿಕೊಳ್ಳುವುದು ತಪ್ಪುವುದಿಲ್ಲ ಚೆನ್ನಾಗಿ ದುಡಿದು ಒಂದು ಕಾರನ್ನು ಖರೀದಿಸಬೇಕು ಎಂದು ಆಸೆ ಪಟ್ಟ.
ಅಂತೆಯೇ ತನ್ನ ದುಡಿಮೆಯನ್ನು ಹೆಚ್ಚಿಸಿಕೊಂಡು ಪೈಸೆಗೆ ಪೈಸೆ ಕೂಡಿಸಿ ಒಂದು ಕಾರನ್ನು ಖರೀದಿಸಿದ.
ಇದೀಗ ಕಾರಿನಲ್ಲಿ ಓಡಾಡುವಾಗ ಆತನಿಗೆ ಅಯ್ಯೋ! ಇನ್ನಷ್ಟು ಕಷ್ಟ ಪಟ್ಟರೆ ನನ್ನ ಕಾರಿಗೆ ಎ ಸಿ ಹಾಕಿಸಬಹುದಿತ್ತು ಎಂಬ ಭಾವ. ಹಾಗೂ ಹೀಗೂ ಒಂದು ವರ್ಷ ಕಳೆದ ಮೇಲೆ ಕಾರಿಗೆ ಎ ಸಿ ಹಾಕಿಸಿದ ಆತನಿಗೆ ಈಗಾಗಲೇ ಕಾರಿನಲ್ಲಿ ಓಡಾಡಿ ರೂಢಿಯಾಗಿತ್ತು.
ಕೇವಲ ಕಾರನ್ನು ಖರೀದಿಸಬೇಕು ಎಂದು ಆಶಿಸಿದಾಗ ಕಾರಿನ ವಿವಿಧ ಮಾಡೆಲ್ ಗಳ ಕುರಿತು ಆತನಿಗೆ ಅಷ್ಟೇನೂ ಅರಿವಿರಲಿಲ್ಲ, ಆದರೆ ಒಂದೊಮ್ಮೆ ತನ್ನ ಕಾರಿನಲ್ಲಿ ಓಡಾಡುವಾಗ ವಿಭಿನ್ನ ಮಾಡೆಲ್ ಗಳನ್ನು ನೋಡಿ ಆತನಿಗೆ ತನ್ನ ಕಾರು ಅತ್ಯಂತ ಚಿಕ್ಕದು ಮತ್ತು ಕಡಿಮೆ ಗುಣಮಟ್ಟದ್ದು ಎಂದು ತೋರತೊಡಗಿತ್ತು. ಆತನ ಆಶಯಗಳು ಹೆಚ್ಚಾಗಿತ್ತೋ ಇಲ್ಲವೇ ಆತನ ದೈವಬಲ ಹೆಚ್ಚಿತ್ತೋ ಗೊತ್ತಿಲ್ಲ…. ಆತನ ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ ಆತ ಇನ್ನೂ ಹೆಚ್ಚು ಸಂಪಾದಿಸಲು ಆರಂಭಿಸಿದ ಭವ್ಯವಾದ ಮಹಲೊಂದನ್ನು ಕಟ್ಟಿಕೊಂಡ, ಅತ್ಯಾಧುನಿಕ ಐಶಾರಾಮಿ ಕಾರನ್ನು ಖರೀದಿಸಿದ. ಸಮಾಜದ ಗಣ್ಯರಲ್ಲಿ ಒಬ್ಬನಾಗಿ ದೊಡ್ಡವರ ಸಂಗದಲ್ಲಿ ಓಡಾಡಲಾರಂಭಿಸಿದ. ಬಿಡುವಿಲ್ಲದ ದಿನಚರಿಯಿಂದಾಗಿ ಮನೆ ಮತ್ತು ಮಕ್ಕಳ ಕಡೆ ಆತನ ಗಮನ ಕಡಿಮೆಯಾಯಿತು. ವ್ಯಾಪಾರದಲ್ಲಿನ ನಿರಂತರ ಸ್ಪರ್ಧೆಯಿಂದಾಗಿ ಆತ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಲಾರಂಭಿಸಿದ. ಭವ್ಯವಾದ ಮಹಲಿನಲ್ಲಿ ಅತಿ ದೊಡ್ಡ ಕಲಾತ್ಮಕ ಮಂಚದ ಮೇಲಿನ ಹಾಸಿಗೆಯಲ್ಲಿ ಮಲಗಿಯೂ ಕೂಡ, ಡ್ರೈವರ್ ಇಟ್ಟುಕೊಂಡಿದ್ದ ಐಷಾರಾಮಿ ಕಾರಿನಲ್ಲಿ ಓಡಾಡಿದರೂ ಕೂಡ ದಣಿವಾದರೂ ಕೂಡ ನಿದ್ದೆ ಬಾರದೆ ಒದ್ದಾಡುವ ಸ್ಥಿತಿಗೆ ತಲುಪಿದ. ಉಳ್ಳವರ ಸ್ನೇಹ, ಮಿತಿಮೀರಿದ ದುಡಿತ, ಪಾರ್ಟಿ, ಕುಡಿತಗಳು ಹೆಚ್ಚಾಗಿ ಮುಂಜಾನೆ ಬೇಗನೆ ಮನೆ ಬಿಡುವ ಆತ ರಾತ್ರಿಯ ಯಾವುದೋ ಒಂದು ಹೊತ್ತಿನಲ್ಲಿ ತೂರಾಡುತ್ತಾ ಮನೆ ಸೇರುತ್ತಿದ್ದ. ಕಣ್ಣೀರು ಕರೆಗಟ್ಟಿದ ಕೆನ್ನೆಯನ್ನು ಒರೆಸಿಕೊಂಡು ಮರು ಮಾತನಾಡದೆ ಪತ್ನಿ ಮನೆಯ ಬಾಗಿಲನ್ನು ತೆರೆದು ಈತನನ್ನು ಒಳಗೆ ಬರಮಾಡಿಕೊಂಡರೆ ಮಕ್ಕಳು ಅದ್ಯಾವಾಗಲೋ ನಿದ್ದೆಗೆ ಜಾರಿರುತ್ತಿದ್ದರು.
ಇದೀಗ ಆತನ ಚಿತ್ತ ಪದೇ ಪದೇ ತನ್ನ ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿತ್ತು. ಪುಟ್ಟದಾದರೂ ತನ್ನದೇ ಆದ ಸೂರಿನಲ್ಲಿ ಹೆಂಡತಿ ಮಕ್ಕಳೊಡನೆ ಮುಂಜಾನೆಯ ತಿಂಡಿ, ಚಹಾ ಮುಗಿಸಿ ಸೈಕಲ್ ಏರಿ ಕೆಲಸಕ್ಕೆ ಹೊರಟರೆ ನಗುನಗುತ್ತ ಬೀಳ್ಕೊಡುವ ಪತ್ನಿಯ ಮುಖ, ಸಂಜೆ ಶಾಲೆಯಿಂದ ಬಂದು ತನಗಾಗಿ ಕಾಯುತ್ತ ನಿಲ್ಲುತ್ತಿದ್ದ ಮಕ್ಕಳ ಪ್ರೀತಿ, ಕೊಂಚವೇ ಆರೋಗ್ಯದಲ್ಲಿ ವ್ಯತ್ಯಾಸವಾದರೂ ಸಹಾಯ ಮಾಡುವ ನೆರೆಹೊರೆಯವದು ಮತ್ತು ಅವರು ತೋರುವ ನಿರ್ವ್ಯಾಜ್ಯ ಪ್ರೀತಿ, ಆಗಾಗ ಬಂದು ಹೋಗುತ್ತಿದ್ದ ಒಡಹುಟ್ಟಿದವರು ಎಲ್ಲರ ನೆನಪಾಗಿ ಬದುಕಿನಲ್ಲಿ ತಾನು ಹಣ ಮಾಡುವ ನಿಟ್ಟಿನಲ್ಲಿ ಬಹಳಷ್ಟನ್ನು ಕಳೆದುಕೊಂಡ ಭಾವ ಮಿಂಚಿ ಮರೆಯಾಗುತ್ತಿತ್ತು. ದೀರ್ಘವಾದ ನಿಟ್ಟುಸಿರೊಂದೇ ಆತನಿಗೆ ಜೊತೆಯಾಗುತ್ತಿತ್ತು.
ನೋಡಿದಿರಾ ಸ್ನೇಹಿತರೆ ! ಇದು ಬದುಕಿನ ಒಂದು ಭಾವ. ಬೇಕು ಬೇಕು ಎಂಬ ಯಾವುದೊ ಒಂದು ಆಶಯದ ಬೆನ್ನತ್ತಿ ನಾವು ನಮ್ಮ ಬಳಿ ಇರುವ ಹತ್ತು ಹಲವು ವಿಷಯಗಳನ್ನು ಕಳೆದುಕೊಳ್ಳಬಾರದು ಅಲ್ಲವೇ?
ಅಲ್ಲೆಲ್ಲೋ ಇರುವ ಚಿನ್ನದ ಹುಡುಕಾಟದಲ್ಲಿ ಚಿನ್ನದಂತಹ ಬದುಕನ್ನು ಕಳೆದುಕೊಳ್ಳಬಾರದು ಅಲ್ಲವೇ? ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ‘ಬಾರದ ಆಸ್ತಿಗೆ ಬೋರಾಡಿ ಅತ್ತರು’ ಎಂಬಂತೆ ನಮ್ಮ ಬದುಕನ್ನು ನಗೆ ಪಾಟಲಿಗೀಡು ಮಾಡಿಕೊಳ್ಳದೆ ನಮಗಿರುವ ಒಂದೇ ಒಂದು ಬದುಕನ್ನು ಅತ್ಯಂತ ಆಸ್ಥೆಯಿಂದ ನಾವು ಜೀವಿಸಬೇಕು.
ಆದ್ದರಿಂದ ಯಾವುದೇ ವಿಷಯದ ಕುರಿತು ದೂಷಿಸುವ, ಅವಗಣಿಸುವ ಮುನ್ನ ಒಂದಷ್ಟು ವಿರಾಮವನ್ನು ಪಡೆದುಕೊಂಡು ಮತ್ತೆ ನಮ್ಮ ಬದುಕು ಸಾಗಿ ಬಂದ ಹಾದಿಯನ್ನು ಮರುಪರಿಶೀಲಿಸೋಣ…. ಯಾಕೆಂದರೆ ಇದೀಗ ನಾವು ಬದುಕುತ್ತಿರುವ ಬದುಕು ಬೇರೊಬ್ಬರ ಪಾಲಿನ ಅತಿ ದೊಡ್ಡ ಕನಸಾಗಿರಬಹುದು, ಪ್ರಾರ್ಥನೆ ಆಗಿರಬಹುದು ಅಲ್ವೇ?
ಅಲ್ಲೆಲ್ಲೋ ನೆಮ್ಮದಿ ಇದೆ ಎಂಬ ಹಪಹಪಿಯಿಂದ ನಮ್ಮ ಕೈಯಲ್ಲಿ ಇರುವ ಸಂತಸದ ಬದುಕನ್ನು ಕಳೆದುಕೊಳ್ಳುವುದು ಮೂರ್ಖತನವಾದೀತು. ಕಾಲನ ಚಲನೆ ಮುಮ್ಮುಖವಾದುದು ನಮ್ಮ ಬದುಕಿನ ಪುಟಗಳನ್ನು ಹಿಂತಿರುಗಿ ನೋಡಿದಾಗ ಅಲ್ಲಿ ಸಂತಸ ನೆಮ್ಮದಿಗಳು ಮಾನದಂಡಗಳಾಗಿರಬೇಕೇ ಹೊರತು ಆಸ್ತಿ ಅಂತಸ್ತು ಐಶ್ವರ್ಯಗಳಲ್ಲ….ಏನಂತೀರಾ?
‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ’ ಎಂಬ ಕವಿಯ ಹಾಡು ನಮ್ಮನ್ನು ಸದಾ ಈ ಕುರಿತು ಎಚ್ಚರಿಸುತ್ತದೆ.ಅಲ್ಲವೇ?
ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ, ಗದಗ್