ಗೃಹ ಭಂಗ
ಭಂಡ ಧೈರ್ಯ, ದಿಟ್ಟತನ ಮತ್ತು ದಾಷ್ಟಿಕತೆಗಳಿಗೆ ಹೆಸರಾಗಿದ್ದ ನಾಗಲಾಪುರದ ಕಂಠೀ ಜೋಯಿಸರಿಗೆ ಇಬ್ಬರು ಮಕ್ಕಳು ನಂಜಮ್ಮ ಮತ್ತು ಕಲ್ಲೇಶಿ. ಪತ್ನಿಯನ್ನು ಕಳೆದುಕೊಂಡ ಕಂಠೀ ಜೋಯಿಸನ ಮಕ್ಕಳನ್ನು ಆತನ ವಿಧವೆ ಸೋದರಿ ಅಕ್ಕಮ್ಮನೆ ಜೋಪಾನ ಮಾಡಿ ಬೆಳೆಸಿದಳು. ಸದಾ ಸಂಚಾರದಲ್ಲಿ ಇರುತ್ತಿದ್ದ ಕಂಠಿ ಜೋಯಿಸನಿಗೆ ಮನೆ ಮತ್ತು ಮಕ್ಕಳ ಪರಿವೆ ಇದ್ದದ್ದು ಕಡಿಮೆಯೇ.
ರಾಮಸಂದ್ರದ ಶಾನುಭೋಗರ ಎರಡನೇ ಪತ್ನಿ ಗಂಗಮ್ಮನಿಗೆ ಚನ್ನಿಗರಾಯ ಮತ್ತು ಅಪ್ಪಣ್ಣ ಎಂಬ ಮಕ್ಕಳು. ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡನನ್ನು ಕಳೆದುಕೊಂಡ ಗಂಗಮ್ಮ ತನ್ನ ಕೆಟ್ಟ ಮಾತುಗಳಿಗೆ, ಹೊಲಸು ಬೈಗುಳುಗಳಿಗೆ ಹೆಸರಾಗಿದ್ದಳು. ಇನ್ನು ಆಕೆಯ ಮಕ್ಕಳು ತಾಯಿಗೆ ತಕ್ಕವರು.. ತಾಯಿಯನ್ನೇ ಮುಂಡೆ, ರಂಡೆ ಎಂದೆಲ್ಲ ಬಯ್ಯುವ ಮಕ್ಕಳಿಗೆ ವಿದ್ಯೆ ನಾಸ್ತಿಯಾಗಿತ್ತು. ತೆಂಗಿನ ತೋಟ ಗದ್ದೆ ಎಲ್ಲವೂ ಇದ್ದರೂ ಕೂಡ ಗೇಯುವವರಿಲ್ಲವಾಗಿತ್ತು.ಮುದ್ದೆಯನ್ನು ತಿಂದು ನಿದ್ದೆ ಹೊಡೆಯುವುದೊಂದೇ ಅವರ ಕಾಯಕವಾಗಿತ್ತು.
ತಾಯಿಯೊಂದಿಗಿನ ಜಗಳದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಇಟ್ಟ ಮಕ್ಕಳಿಂದಾಗಿ ತನ್ನ ಆಸ್ತಿಯನ್ನು ತಮ್ಮ ಪರವಾಗಿ ಶಾನುಭೋಗಿಕೆ ಮಾಡುತ್ತಿದ್ದ ಶಿವೇಗೌಡ ಎಂಬ ವ್ಯಕ್ತಿಯ ಬಳಿ ಎರಡು ಸಾವಿರ ರೂ ಹಣಕ್ಕೆ ತನ್ನ ಹೊಲವನ್ನು ಭೋಗ್ಯಕ್ಕೆ ಹಾಕಿ ಗಂಗಮ್ಮ ದಂಡ ಕಟ್ಟಬೇಕಾಯಿತು. ಈ ಸಮಯದಲ್ಲಿ ಊರಿನ ಜಂಗಮರಾದ ಮಾದೇವಯ್ಯನವರು ಅರಿಯದ ಮಕ್ಕಳು ಎಂದು ಗಂಗಮ್ಮನ ಪರ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ ತಾಯಿ ಮಕ್ಕಳ ಮೂರ್ಖತನದಿಂದ ಅದು ಸಾಧ್ಯವಾಗದೆ ಹೋಯಿತು.
ಹಿರಿಯ ಮಗ ಚೆನ್ನಿಗರಾಯನ ಬೇಜವಾಬ್ದಾರಿತನ ದಿಂದಾಗಿ ಮೂರು ನಾಲ್ಕು ವರ್ಷ ಶಾನುಭೋಗಿಕೆಯ ಕಲಿಕೆಯಲ್ಲಿ ವ್ಯಯಿಸಿದರೂ ಶಾನುಭೋಗಿಕೆಗೆ ಅವಶ್ಯಕವಾದ ಕನಿಷ್ಠ ಒಂದೆರಡು ಮೂಲಭೂತ ವಿಷಯಗಳನ್ನು ಕೂಡ ಕಲಿಯಲು ಸಾಧ್ಯವಾಗದೇ ಹೋಯಿತು.
ಶಾನುಭೋಗರ ಮನೆ ಸಾಕಷ್ಟು ಜಮೀನು,ಚಿನ್ನ, ಬೆಳ್ಳಿ ಇಬ್ಬರೇ ಗಂಡು ಮಕ್ಕಳು ಎಂಬ ಕಾರಣಕ್ಕೆ ಕಂಠೀ ಜೋಯಿಸ ತನ್ನ ಮಗಳನ್ನು ಚನ್ನಿಗರಾಯನಿಗೆ ಕೊಟ್ಟು ಮದುವೆ ಮಾಡಿದರು. ಅಳಿಯನಿಗೆ ತನ್ನ ದರ್ಪ, ದೌಲತ್ತಿನ ಸಹಾಯದಿಂದ ಶಾನುಭೋಗಿಕೆಯನ್ನು ಮರಳಿ ಕೊಡಿಸಿದರು. ಕೊಟ್ಟ ಕುದುರೆಯನ್ನು ಏರಲು ಬಾರದ ಚನ್ನಿಗರಾಯನ ಬೇಜವಾಬ್ದಾರಿತನದಿಂದಾಗಿ ಶ್ಯಾನುಭೋಗಿಕೆ ಕೈ ತಪ್ಪುವಂತಹ ಪರಿಸ್ಥಿತಿ ಒದಗಿತು. ಪಕ್ಕದ ಊರಿನ ಶಾನುಭೋಗ ದ್ಯಾವರಸಯ್ಯನವರು ಇವರ ಹೋಬಳಿಯ ಲೆಕ್ಕಗಳನ್ನು ಬರೆಯಲು ಬಂದರು. ವಯೋ ಸಹಜ ತೊಂದರೆಗಳಿಂದ ಬಳಲುತ್ತಿದ್ದ ಅವರು ನಂಜಮ್ಮನಿಗೆ ಶಾನುಭೋಗಿಕೆಯ ಲೆಕ್ಕಗಳನ್ನು ಬರೆಯಲು ಪ್ರೋತ್ಸಾಹಿಸಿದರು. ಈಗಾಗಲೇ ತಾಯಿ ಮತ್ತು ಮಕ್ಕಳ ಹೊಲಸು ಬೈಗುಳುಗಳಿಗೆ, ಗಯ್ಯಾಳಿತನ ರೂಢಿಯಾಗಿದ್ದ ನಂಜಮ್ಮ ಬದುಕು ಹಳಿ ತಪ್ಪದೇ ಇರಲು ಲೆಕ್ಕ ಬರೆಯಲು ಒಪ್ಪಿಕೊಂಡಳು. ಅತ್ತೆಯ ಸಾಕಷ್ಟು ವಿರೋಧದ ನಡುವೆಯೂ ದ್ಯಾವರಸಯ್ಯನವರಿಂದ ಶಾನುಭೋಗಿಕೆ ಪುಸ್ತಕದ ರೂಲು ಹಾಕುವುದರಿಂದ ಹಿಡಿದು ಎಲ್ಲವನ್ನು ಕಲಿತು ತಾನೇ ಎಲ್ಲ ಲೆಕ್ಕಗಳನ್ನು ತಪ್ಪಿಲ್ಲದಂತೆ ನಂಜಮ್ಮ ಬರೆಯಲಾರಂಭಿಸಿದಳು. ಆಕೆ ಬರೆದ ಲೆಕ್ಕವನ್ನು ಕಚೇರಿಗೆ ಒಯ್ದು ಒಪ್ಪಿಸಿ ಬಂದ ಹಣವನ್ನು ಹೋಟೆಲ್ಗಳಲ್ಲಿ ತಿಂದುಣ್ಣಲು, ಉಡಾಯಿಸಲು ಆರಂಭಿಸಿದ ಚೆನ್ನಿಗರಾಯ ತಿಂಗಳುಗಟ್ಟಲೆ ಮನೆಗೆ ಬರುತ್ತಲೇ ಇರಲಿಲ್ಲ.
ಇತ್ತ ಕಂಠಿ ಜೋಯಿಸರಿಗೆ ಪೊಲೀಸು ನೌಕರಿಯಲ್ಲಿದ್ದ ಮಗ ಕಲ್ಲೇಶಿ ಹಾದಿ ತಪ್ಪುತ್ತಿದ್ದಾನೆ ಎಂಬುದರ ಅರಿವಾಗಿ ಕೂಡಲೇ ಪೇಟೆಯಲ್ಲಿ ಪೋಸ್ಟ್ ಮಾಸ್ತರಿಕೆ ಮಾಡುತ್ತಿದ್ದವರ ಮನೆಯ ಹೆಣ್ಣೊಂದನ್ನು ತಂದು ಆತನಿಗೆ ಮದುವೆ ಮಾಡಿದರು. ಪೇಟೆಯ ಎಲ್ಲಾ ಗತ್ತು ಗೈರತ್ತುಗಳನ್ನು ಮೈಗೂಡಿಸಿಕೊಂಡ ಆಕೆ ಸರಿಯಾಗಿ ಬಾಳ್ವೆ ಮಾಡಲೇ ಇಲ್ಲ… ಮದುವೆಯ ಆಕಸ್ಮಿಕವೊಂದರಲ್ಲಿ ಕೈಯ ಸತ್ವವನ್ನು ಕಳೆದುಕೊಂಡ ಕಲ್ಲೇಶಿ ಮಾವನ ಮನೆಯಲ್ಲಿ ಹಲವಾರು ತಿಂಗಳುಗಳ ಕಾಲ ಆರೈಕೆ ಪಡೆದನು. ದೈಹಿಕವಾಗಿ ಸಶಕ್ತನಲ್ಲ ಎಂಬ ಕಾರಣಕ್ಕೆ ನೌಕರಿಯಿಂದ ಹೊರಹಾಕಲ್ಪಟ್ಟು ಪತ್ನಿಯೊಂದಿಗೆ ಹಳ್ಳಿಗೆ ಮರಳಿದ. ಸಾಕಷ್ಟು ಅನುಕೂಲತೆಗಳನ್ನು ಹೊಂದಿದ ಮನೆಯಾಗಿದ್ದರೂ ಕಲ್ಲೇಶಿ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಹಳ್ಳಿಯ ಜೀವನಕ್ಕೆ ಕಲ್ಲೇಶಿಯ ಹೆಂಡತಿ ಒಗ್ಗಿಕೊಳ್ಳದೆ ಸದಾ ಚಂಡಿತನ ಮಾಡಿ ಗಂಡನಿಂದ ಪೆಟ್ಟು ತಿನ್ನುತ್ತಿದ್ದಳು. ಒಕ್ಕಲುತನವನ್ನು ಚೆನ್ನಾಗಿ ರೂಢಿಸಿಕೊಂಡನಾದರೂ ಕಲ್ಲೇಶಿ ಪತ್ನಿಯ ಅಸಹಕಾರದಿಂದ ಕೆಲ ಕೆಟ್ಟ ಚಟಗಳನ್ನು ಕೂಡ ತನ್ನದಾಗಿಸಿಕೊಂಡಿದ್ದ.
ಕಂಠಿ ಜೋಯಿಸರು ಜಗಳದಲ್ಲಿ ತನ್ನೂರಿನ ಓರ್ವ ವ್ಯಕ್ತಿಯನ್ನು ಬಡಿದು ಆತ ಸತ್ತನೆಂದೇ ಭಾವಿಸಿ ಊರನ್ನು ತೊರೆದು ದೇಶಾಂತರ ಹೊರಟು ಹೋದರು. ಅಜ್ಜಿ ಅಕ್ಕಮ್ಮ, ಕಲ್ಲೇಶಿ ಮತ್ತು ಆತನ ಪತ್ನಿ ಒಂದೇ ಮನೆಯಲ್ಲಿ ಇದ್ದರೂ ಹೊಂದಾಣಿಕೆಯ ಬದುಕು ಅವರದಾಗಲೇ ಇಲ್ಲ.
ಇದರ ಮಧ್ಯದಲ್ಲಿ ಚಿಕ್ಕಂದಿನಲ್ಲಿ ಕಬ್ಬಿನ ಗದ್ದೆಯನ್ನು ಸುಟ್ಟು ಸಾಲ ಪಡೆದು ಎಲ್ಲರ ಲುಕ್ಸಾನು ತುಂಬಿಕೊಟ್ಟಿದ್ದ ತಾಯಿ ಮಕ್ಕಳಿಗೆ ಸಾಕಷ್ಟು ವರ್ಷಗಳಾದರೂ ಅಸಲು, ಬಡ್ಡಿ ಚಕ್ರಬಡ್ಡಿ ಯಾವುದನ್ನು ಕೊಟ್ಟೇ ಇಲ್ಲ ಎಂಬ ಕಾರಣಕ್ಕಾಗಿ ಶಿವೇಗೌಡ ಹಣವನ್ನು ಕೇಳಿದ. ಆದರೆ ಪಕ್ಕದ ಮನೆಯ ರೇವಣ್ಣ ಶೆಟ್ಟಿಯ ಕುಮ್ಮಕ್ಕಿನಿಂದ ಹಣವನ್ನು ಕೊಡುವುದಿಲ್ಲ ಎಂದು ಜೋರಾಗಿ ಕೂಗಾಡಿ ಮಣ್ಣು ತೂರಿದ ಗಂಗಮ್ಮ ಆತನನ್ನು ಕೆಣಕಿ ಕೋರ್ಟಿಗೆ ಹೋಗುವಂತೆ ಮಾಡಿದಳು.
ಮೊದಲ ಮಗುವನ್ನು ಹಡೆದುಕೊಂಡು ತವರಿನಿಂದ ಗಂಡನ ಮನೆಗೆ ಬಂದ ನಂಜಮ್ಮನಿಗೆ ಅತ್ತೆ, ಗಂಡ ಮತ್ತು ಮೈದುನನ ಮೂರ್ಖತನದ ಪರಿಣಾಮವಾಗಿ ತಾವು ಎಲ್ಲವನ್ನೂ ಕಳೆದುಕೊಳ್ಳುತ್ತೇವೆ ಎಂಬ ಅರಿವಾಯಿತು. ಮಾದೇವಯ್ಯನವರ ಮೂಲಕ ತನ್ನ ತಂದೆಗೆ ಕರೆ ಕಳುಹಿಸಿ ಆಕೆ ಮಾಡಿದ ಪ್ರಯತ್ನ ನಿಷ್ಬಲವಾಯಿತು., ಇತ್ತ ಓರಗಿತ್ತಿ ಸಾತುವಿನ ತಂದೆಗೆ ಕೂಡ ವಿಷಯ ಮುಟ್ಟಿಸಿ ಸಂಧಾನದ ಪ್ರಯತ್ನ ಮಾಡಿದಳು. ಆದರೆ ಅದೆಲ್ಲವೂ ನಿಷ್ಪಲವಾಗುವಂತೆ ಆಗಿ ಎಲ್ಲ ಹೊಲ ಮನೆಗಳನ್ನು ಕಳೆದುಕೊಳ್ಳುವಂತಾಯಿತು. ಶಿವೇಗೌಡನ ಒಟ್ಟು ಎಂಟು ಸಾವಿರ ಅಸಲು ಬಡ್ಡಿ ಮತ್ತು ಚಕ್ರಬಡ್ಡಿಯ ಎಲ್ಲ ಸಾಲಗಳನ್ನು ತೀರಿಸಲು ಕೂರ್ಟು ಆದೇಶ ಮಾಡಿತು. ಶಿವೇಗೌಡನಿಗೇ ಹೊಲ ಮನೆ ಎಲ್ಲವನ್ನು ಮಾರಿದ ಕಾಗದ ಪತ್ರಗಳಿಗೆ ಪರಸ್ಪರ ಒಪ್ಪಂದದ ಮೇಲೆ ರುಜು ಹಾಕಿ ಆತನ ಸಾಲ ತೀರಿಸಿ ಉಳಿದ ಹಣದಲ್ಲಿ ವಕೀಲರ ಫೀಸಿನ ಹಣವನ್ನು ನೀಡಿದ ನಂತರ ಅವರ ಕೈಗೆ ಬಂದದ್ದು ಕೇವಲ ಒಂದು ಸಾವಿರ ರೂಪಾಯಿ. ಜೋಯಿಸರ ಕುಮ್ಮಕ್ಕಿನಿಂದ ಉಳಿದ ಆ ಹಣದಲ್ಲಿ ಋಷಿ ಪಂಚಮಿ ಮಾಡಿಕೊಂಡ ಗಂಗಮ್ಮ ಆ ಹಣವನ್ನು ಕೂಡ ಕಳೆದು ಹಾಕಿದಳು. ಇದನ್ನು ಪ್ರಶ್ನಿಸಿದ ತನ್ನ ಸೊಸೆ ನಂಜಮ್ಮನನ್ನು ಮನೆ ಬಿಟ್ಟು ಹೊರಗೆ ಹೋಗಲು ಆದೇಶಿಸಿದಳು.
ಮನೆಯನ್ನು ಕಳೆದುಕೊಂಡ ಗಂಗಮ್ಮನಿಗೆ ಮತ್ತು ಆಕೆಯ ಮಗ ಅಪ್ಪಣ್ಣಯ್ಯನಿಗೆ ಊರ ಜನರ ಮಧ್ಯಸ್ಥಿಕೆಯಿಂದ ಊರ ಹೊರಗಿನ ಹನುಮಂತನ ದೇವಾಲಯದಲ್ಲಿ ಇರಬೇಕೆಂದು ಮಾತಾಯಿತು. ಗಂಗಮ್ಮ ಮತ್ತು ಅಪ್ಪಣ್ಣಯ್ಯ ಸುತ್ತಲ ಹಳ್ಳಿಗಳಲ್ಲಿ ತಮ್ಮ ಹೊಲ, ಮನೆಗಳನ್ನು ಮೋಸ ಮಾಡಿ ಕಬಳಿಸಿದ ಶಿವೇಗೌಡನನ್ನು ಬೈದು ರಾಗಿ ಅವರೆ, ಮೆಣಸು ಮುಂತಾದ ದಿನಸಿಗಳನ್ನು ದಾನವಾಗಿ ಪಡೆದು ಬರುತ್ತಿದ್ದರು.
.ಬೇಜವಾಬ್ದಾರಿ ಗಂಡನೊಂದಿಗೆ ಗುದ್ದಾಡಿ ಪ್ರಯೋಜನವಿಲ್ಲ ತಾನು ಮತ್ತು ತನ್ನ ಎರಡು ಮಕ್ಕಳ ಬದುಕಿಗೆ ದಾರಿ ಮಾಡಿಕೊಳ್ಳಬೇಕು ಎಂಬ ಆಶಯದಿಂದ ಆರು ತಿಂಗಳು ಬಸಿರನ್ನು ಹೊತ್ತ ನಂಜಮ್ಮ ಜಂಗಮರಾದ ಮಾದೇವಯ್ಯನವರಿಗೆ ಸೂಕ್ಷ್ಮವಾಗಿ ಹೇಳಿ ಪಕ್ಕದ ಕುರುಬರಹಳ್ಳಿಯ ಪಟೇಲರನ್ನು ಭೇಟಿಯಾಗಲು ಹೋದಳು.ಸುತ್ತ ನಲವತ್ತು ಹಳ್ಳಿಯ ಪಟೇಲಿಕೆಯನ್ನು ಮಾಡುತ್ತಿದ್ದ ಕುರುಬರಹಳ್ಳಿಯ ಪಟೇಲ ಗುಂಡೇಗೌಡರ ಸಹಾಯದಿಂದ ತನಗೆ ಬರುವ
ಶ್ಯಾನುಭೋಗಿಕೆಯ ಹಣವನ್ನು ಕೇವಲ ತನಗೆ ಮಾತ್ರ ದೊರೆಯುವಂತೆ ಗಂಡನಿಗೆ ಒತ್ತಾಯದಿಂದ ಸಹಿ ಹಾಕುವಂತೆ ಪಟೇಲರಿಂದ ಆದೇಶಿಸುವಂತೆ ಮಾಡಿ ಮುಂಗಡ ಹಣ ಪಡೆದಳು. ಪಟೇಲರದ್ದೆ ರಾಮಸಂದ್ರದಲ್ಲಿರುವ ಮನೆಯನ್ನು ತನಗೆ ವಾಸಕ್ಕೆ ಕೊಡಲು ಕೇಳಿಕೊಂಡಳು. ತಮ್ಮ ಮನೆಯಲ್ಲಿ ಆಕೆ ಇರಲು ಒಪ್ಪಿದ ಗುಂಡೇಗೌಡರು ಆಕೆಗೆ ಸ್ವಲ್ಪ ದಿನಸಿಯನ್ನು ಕೂಡ ಕೊಟ್ಟರು. ಮಾದೇವಯ್ಯನವರ ಮತ್ತು ಗುಂಡೇಗೌಡರ ಸಹಾಯದಿಂದ ಮತ್ತೆ ಬದುಕನ್ನು ಕಟ್ಟಿಕೊಂಡ ನಂಜಮ್ಮ ತನ್ನ ಅಜ್ಜಿ ಅಕ್ಕಮ್ಮನ ಸಹಾಯದಿಂದ ಮೂರನೇ ಬಾಣಂತನವನ್ನು ಪೂರೈಸಿದಳು. ಕೇವಲ ಶಾನುಭೋಗಿಕೆ ಲೆಕ್ಕ ಬರೆಯುವುದರಿಂದ ಮನೆಯ ಖರ್ಚು ವೆಚ್ಚಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಊಟದ ಎಲೆಗಳನ್ನು ತಯಾರಿಸಲು ಆರಂಭಿಸಿದಳು. ಮನೆಯ ಹಿತ್ತಲಿನಲ್ಲಿ ಸೊಪ್ಪುಗಳನ್ನು ಕೂಡ ಬೆಳೆದು ಬಳಸುತ್ತಿದ್ದಳು. ಆಕೆಯ ಹಿರಿಯ ಮಗಳು ಮತ್ತು ಮಗ ಶಾಲೆಗೆ ಹೋಗುತ್ತಿದ್ದರು. ಜಾಣ ವಿದ್ಯಾರ್ಥಿಗಳೆಂದು ಹೆಸರಾಗಿದ್ದು ಉತ್ತಮ ಅಂಕಗಳನ್ನು ಗಳಿಸಿದ್ದರು ಕೂಡ. ಕಿರಿಯ ಮಗ ಊರಿನ ಮಾದೇವಯ್ಯನವರ ಮಠದಲ್ಲಿ ಕಲಿಯುತ್ತಿದ್ದ. ಗಂಗಮ್ಮ ಮತ್ತು ಮಗ ಅಪ್ಪಣ್ಣಯ್ಯ ಸುತ್ತಲ ಹತ್ತು ಹಳ್ಳಿಗಳಲ್ಲಿ ರಾಗಿ, ಅವರೆ ಬೇಳೆಯನ್ನು ಭಿಕ್ಷೆ ತಂದು ಬದುಕನ್ನು ನಡೆಸುತ್ತಿದ್ದರು.
ತಂದೆಯನ್ನು ಕಳೆದುಕೊಂಡ ನಂತರ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಅಪ್ಪಣ್ಣಯ್ಯನ ಪತ್ನಿ ಸಾತು ತನ್ನ ವಿಧವೆ ತಾಯಿಯೊಂದಿಗೆ ರಾಮಸಂದ್ರಕ್ಕೆ ಬಂದಾಗ ಓರಗಿತ್ತಿ ನಂಜಮ್ಮ ಆಕೆಯ ಬದುಕನ್ನು ನಡೆಸಲು ಸಾಕಷ್ಟು ಅನುಕೂಲ ಮಾಡಿಕೊಟ್ಟಳು. ಸ್ವಂತ ಸೂರನ್ನು ಮಾಡಿಕೊಂಡು ಸಾತು ಮತ್ತು ಅಪ್ಪಣ್ಣಯ್ಯ ದಂಪತಿಗಳ ಬದುಕು ಕೆಲವೇ ದಿನಗಳಲ್ಲಿ ಬಿರುಗಾಳಿಗೆ ಒಡ್ಡಿದ ಸೊಡರಿನಂತಾಯಿತು. ಅಪ್ಪಣ್ಣಯ್ಯ ಭಿಕ್ಷೆ ಬೇಡಿ ತರುತ್ತಿದ್ದ ರಾಗಿ ಬೇಳೆಗಳು ಇವರಿಗೆ ಒಗ್ಗದೆ ಬತ್ತದಿಂದ ತಯಾರಿಸಿದ ಅಕ್ಕಿ ಮತ್ತು ಬೇಳೆ ಸಾರು, ಕಾಫಿ ಸೇವಿಸುವುದನ್ನು ರೂಢಿ ಮಾಡಿಕೊಂಡ ನಾಜೂಕಿನ ಬದುಕಿನ ಶೈಲಿಗೆ ಒಗ್ಗಿಕೊಂಡ ಸಾತು ಮತ್ತು ಆಕೆಯ ತಾಯಿ ಅಪ್ಪಣ್ಣಯ್ಯನಿಗೆ ಬದುಕನ್ನು ನಡೆಸಲು ಯಾವುದೇ ರೀತಿಯ ಸಹಾಯ ಮಾಡದ ಪರಿಣಾಮವಾಗಿ ಆತ ಬೇಸತ್ತನು. ಗಂಡ ಹೆಂಡಿರ ನಡುವಿನ ಜಗಳದಲ್ಲಿ ಅಪ್ಪಣ್ಣಯ್ಯ ಮನೆಗೆ ಬೆಂಕಿ ಇಟ್ಟು ಆಕೆಯ ಕೊರಳ ತಾಳಿಯನ್ನು ಹರಿದುಕೊಂಡು ಅವರಿಂದ ದೂರ ಸರಿದು ತನ್ನ ತಾಯಿಯನ್ನು ಸೇರಿಕೊಂಡ. ನಿರ್ವಾಹವಿಲ್ಲದೆ ಸಾತು ಮತ್ತು ಆಕೆಯ ತಾಯಿ ತಮ್ಮ ಮಕ್ಕಳನ್ನು ಕಟ್ಟಿಕೊಂಡು ಬೇರೆ ಊರಿಗೆ ವಲಸೆ ಹೋದರು.
ಈ ಮಧ್ಯ ಕಥೆಯಲ್ಲಿ ಎರಡು ಬಾರಿ ಪ್ಲೇಗ್ ರೋಗ ಬಂದುದಲ್ಲದೇ ಮೂರು ವರ್ಷ ಮಳೆಯಾಗದೆ ಯಾವುದೇ ಬೆಳೆ ಬಾರದೆ, ಆಹಾರ ಧಾನ್ಯಗಳು ದೊರೆಯದೆ ಎಲ್ಲರೂ ಬಳಲುವಂತಾಯಿತು. ದನ ಕರುಗಳು ಕಟುಗರ ಮನೆ ಸೇರಿದವು. ನಂಜಮ್ಮನ ಮೂರನೆಯ ಮಗುವಿನ ಬಾಣಂತನದಲ್ಲಿ ಅಜ್ಜಿ ಅಕ್ಕಮ್ಮ ತಂದುಕೊಟ್ಟ ಆಕಳು ಮತ್ತು ಕರುವನ್ನು ಗುಂಡೇಗೌಡರ ಹಟ್ಟಿಗೆ ಹೊಡೆದಳು. ಎಲ್ಲರ ಮನೆಯ ಪಾತ್ರೆ ಪಗಡಿಗಳು, ಚಿನ್ನ, ಬೆಳ್ಳಿ, ಹೊಲ,ಮನೆಗಳು ಕಾಶಿಮ ಬುಡ್ಡಿ ಎಂಬ ಪರವೂರಿನ ವ್ಯಕ್ತಿಯ ಬಡ್ಡಿ ಸಾಲಕ್ಕೆ ಈಡಾಗಿ ಆತನ ಮನೆ ಸೇರಿದವು. ಇದಕ್ಕೆ ಶಿವೇಗೌಡನ ಕುಮ್ಮಕ್ಕು ಕೂಡ ಇತ್ತು. ಎರಡನೇ ಬಾರಿ ಪ್ಲೇಗ್ ಬಂದಾಗ ಹೆಚ್ಚೇನು ಹಾನಿಯಾಗದಿದ್ದರೂ ಎಲ್ಲರೂ ಅಕ್ಷರಶಃ ಬಳಲಿದರು. ಈ ಮಧ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಊರ ಜನರ ಬಿರುಸು ಮಾತಿಗೆ ಬೇಸರಗೊಂಡು ಕಾಶಿಗೆ ಹೋಗಿದ್ದ ಮಾದೇವಯ್ಯನವರು ಮರಳಿ ಬಂದ ದಿನವೇ ಕಾಕತಾಳೀಯವಾಗಿ ಮಳೆ ಬಂತು. ಸರ್ವಕ್ಕ ಈ ವಿಷಯವನ್ನು ಎತ್ತಿ ಆಡಿದಾಗ ಎಲ್ಲರಿಗೂ ತಮ್ಮ ತಪ್ಪಿನ ಅರಿವಾಗಿ ಊರ ಜನರೆಲ್ಲರೂ ಮಾದೇವಯ್ಯನವರ ಕ್ಷಮೆ ಕೇಳಿದರು. ಎಲ್ಲಾ ಕಡೆ ಮಳೆ ಹೋಗಿ ಬರ ಆವರಿಸಿತ್ತು… ನಾನು ಬಂದಾಗ ಮಳೆ ಬಂದಿರುವುದರಲ್ಲಿ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ ಎಂದು ಮಾದೇವಯ್ಯನವರು ನಿರ್ಲಿಪ್ತತೆಯಿಂದ ನುಡಿದರು.
ಮತ್ತೆ ಬದುಕು ನೇರ್ಪುಗೊಂಡಿತು ಎಂಬ ಹೊತ್ತಿಗೆ ಮಗಳು ಋತುಮತಿಯಾಗಿ ನಂಜಮ್ಮನಿಗೆ ಮಗಳ ಮದುವೆಯ ಚಿಂತೆಯಾಯಿತು. ಗಂಡ ಚೆನ್ನಿಗರಾಯ ನಿಗೆ ಏನು ಹೇಳಿದರೂ ಉಪಯೋಗವಿಲ್ಲ ಎಂಬುದು ಆಕೆಗೆ ಗೊತ್ತಿತ್ತು. ಹೆಂಡತಿ ಮಾಡಿದ ಅಡುಗೆಯನ್ನು ಪುಷ್ಕಳವಾಗಿ ತಿಂದು ತಂಬಾಕನ್ನು ಮೆಲ್ಲುತ್ತಾ ವಿಶ್ರಾಂತಿ ಪಡೆಯುವುದನ್ನು ಬಿಟ್ಟು ಆತನಿಗೆ ಬೇರೇನೂ ಗೊತ್ತಿರಲಿಲ್ಲ. ಮಾತೆತ್ತಿದರೆ ಕೆಟ್ಟ ಬೈಗುಳಗಳು, ಹೊಡೆಯುವ ಬಡಿಯುವ ಗಂಡ ಆಕೆಯ ಪಾಲಿಗೆ ಕೂಳಿಗೆ ದಂಡ ಎಂಬಂತೆ ಉಂಡಾಡಿ ಗುಂಡನ ಹಾಗೆ ಇದ್ದರೂ ಅನಿವಾರ್ಯವಾಗಿ ಆತನೊಂದಿಗೆ ಬದುಕು ನಡೆಸಬೇಕಾಗಿತ್ತು.
ಕಾಶಿಯಿಂದ ಊರಿಗೆ ಮರಳಿ ಬಂದ ಕಂಠೀ ಜೋಯಿಸರು ಮಗನ ಬದುಕನ್ನು ಸರಿ ಮಾಡಲೆಂದು ತನ್ನ ತಾಯಿ ಅಕ್ಕಮ್ಮನೊಂದಿಗೆ ಮಗಳು ನಂಜಮ್ಮನ ಮನೆಗೆ ಬಂದರು. ಆದರೆ ತನ್ನದೇ ಊರಾದ ರಾಮಸಂದ್ರದ ನರಸಿ ಎಂಬ ಹೆಣ್ಣುಮಗಳ ಜೊತೆ ಹೊರ ಚಾಳಿಯಲ್ಲಿ ತೊಡಗಿದ್ದ ತನ್ನಣ್ಣ ಕಲ್ಲೇಶಿಯ ದುರ್ಗುಣಗಳ ಅರಿವು ನಂಜಮ್ಮನಿಗೆ ಇತ್ತು. ಆದ್ದರಿಂದಲೇ ನಂಜಮ್ಮ ಮೊಮ್ಮಗಳನ್ನು ತನ್ನ ಮಗನಿಗೆ ತಂದುಕೊಳ್ಳುವ ತಂದೆಯ ಬಯಕೆಯನ್ನು ಮಗಳಿಗೆ ಇಷ್ಟವಿಲ್ಲ ಎಂದು ಉತ್ತರಿಸಿದಳು. ಮಾದೇವಯ್ಯನವರು ಮತ್ತು ಊರ ಶಾಲೆಗೆ ಬಂದಿದ್ದ ಶಿಕ್ಷಕರ ಸಲಹೆ ಪಡೆದಿದ್ದ ನಂಜಮ್ಮನ ದಿಟ್ಟ ನಿಲುವು ಅಕ್ಕಮ್ಮ ಮತ್ತು ಜೋಯಿಸರಿಗೆ ಬೇಸರವನ್ನುಂಟು ಮಾಡಿ ಅವರಿಬ್ಬರೂ ದುರ್ದಾನ ತೆಗೆದುಕೊಂಡವರಂತೆ ನಂಜಮ್ಮನೊಂದಿಗೆ ಮುನಿಸಿಕೊಂಡು ಅಲ್ಲಿಂದ ಹೊರಟು ಹೋದರು. ಚಿಕ್ಕಂದಿನಿಂದಲೂ ತನ್ನನ್ನು ಎತ್ತಿ ಆಡಿ ಬೆಳೆಸಿದ ಅಕ್ಕಮ್ಮನ ಮುನಿಸಿನ ಜೊತೆಗೆ, ತಂದೆಯ ಮಾತಿಗೆ ಇದಿರಾಡಿ ಅವರ ವಿರೋಧ ಕಟ್ಟಿಕೊಂಡ ನೋವು ಕೂಡ ನಂಜಮ್ಮನಿಗೆ ಕಾಡಿತು. ಜೊತೆಗೆ ಮಗಳ ಮದುವೆಯ ಚಿಂತೆ ನಂಜಮ್ಮನನ್ನು ಕೊರೆಯತೊಡಗಿತು.
ಊರಿನ ಶಾಲೆಯ ಶಿಕ್ಷಕರು ಮತ್ತು ಮಾದೇವಯ್ಯನವರ ಸಲಹೆಯಂತೆ ಮಗಳ ಮದುವೆಗೆ ನಂಜಮ್ಮ ಅಣಿ ಮಾಡಿಕೊಂಡಳು. ಮತ್ತೆ ಗುಂಡೇಗೌಡರ ಬಳಿ ಹೋಗಿ ಸಹಾಯ ಕೇಳಿದ ಆಕೆ ತನ್ನ ಶಾನುಭೋಗಿಕೆಯ ಮುಂಗಡ ಹಣ ಮತ್ತು ಕುರುಬರಹಳ್ಳಿಯ ಜನರ ಧನ ಸಹಾಯದಿಂದ ಮಗಳ ಮದುವೆಯನ್ನು ಪುಟ್ಟ ಮಗುವಿನ ತಂದೆಯಾದ ವಿದುರ ಶಿಕ್ಷಕನೊಬ್ಬನಿಗೆ ಮಾಡಿಕೊಟ್ಟಳು.
ಮುಂದಿನ ಒಂದೇ ತಿಂಗಳಲ್ಲಿ ಊರಿಗೆ ಎರಗಿದ ಪ್ಲೇಗ್ ಮಾರಿಗೆ ತನ್ನ ಇಬ್ಬರು ಹಿರಿಯ ಮಕ್ಕಳನ್ನು ಕಳೆದುಕೊಂಡ ನಂಜಮ್ಮ ಜೀವಂತ ಶವವಾದಳು. ಇದಾವುದರ ಪರಿವೇ ಇಲ್ಲದೆ ಚೆನ್ನಿಗರಾಯ ತಾನಾಯಿತು ತನ್ನ ಹೊಟ್ಟೆಪಾಡಾಯಿತು ಎಂಬಂತೆ ಇದ್ದುದನ್ನು ಕಂಡು ಆಕೆಗೆ ಬದುಕಿನ ಮೇಲೆ ಜಿಗುಪ್ಸೆ ಮೂಡಿತು.ಹಿರಿಯ ಮಗ ವಿಶ್ವನನ್ನು ಮಾದೇವಯ್ಯನವರು ಮತ್ತು ನರಸಮ್ಮನ ಸುಪರ್ದಿಯಲ್ಲಿ ಬಿಟ್ಟುಬಿಟ್ಟಳು.
ಪತ್ನಿಯನ್ನು ತನ್ನ ಮನೆಗೆ ಕರೆದೊಯ್ಯಬೇಕೆಂದು ಬಂದ ಅಳಿಯನಿಗೆ ಮಗಳ ಸೀರೆ ಮತ್ತು ಆಕೆಯ ವಸ್ತುಗಳನ್ನು ನೀಡಿ ಮುಂದಿನ ಕಾರ್ಯ ಮಾಡಿಕೊಳ್ಳಿ ಎಂದು ಹೇಳಿ ಬೀಳ್ಕೊಟ್ಟ ನಂಜಮ್ಮ ಮಗ ವಿಶ್ವನಿಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಳು.
ಮುಂದಿನ ಕೆಲ ತಿಂಗಳಲ್ಲಿ ವಿಶ್ವನಿಗೆ ಆರೋಗ್ಯ ಸರಿ ಹೋದರೆ ಶೃಂಗೇರಿಗೆ ಬರುವೆ ಎಂದು ಹರಸಿಕೊಂಡ ಕಾರಣ ತನ್ನ ಜೊತೆಗೆ ಮೈದುನ ಅಪ್ಪಣ್ಣಯ್ಯ ಮತ್ತು ಮಗನನ್ನು ಕರೆದುಕೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ನಡೆದುಕೊಂಡು ಹೋಗಿ ಶೃಂಗೇರಿ ಶಾರದಮ್ಮನ ದರ್ಶನ ಮಾಡಿದಳು. ಮಗಳ ಓಲೆಗಳನ್ನು ಕಳುವಿನಲ್ಲಿ ಮಾರಿ ರೈಲಿನಲ್ಲಿ ಶೃಂಗೇರಿಗೆ ಬಂದು ಅಲ್ಲಿಯೇ ತಮಗಾಗಿ ಕಾದಿದ್ದ ಪತಿಯ ವರ್ತನೆಯಿಂದ ಬೇಸತ್ತ ನಂಜಮ್ಮ ನಿರ್ಲಿಪ್ತವಾಗಿದ್ದುಬಿಟ್ಟಳು.
ಹೀಗೆಯೇ ಕಾಲ ಕಳೆಯಿತು ಒಂದು ದಿನ ವಿಶ್ವ ಹಾವೊಂದನ್ನು ಬಡಿದ ಸುದ್ದಿ ತಿಳಿದ ನಂಜಮ್ಮ ಹೌಹಾರಿದಳು. ಹಾವಿನ ದ್ವೇಷ ಹನ್ನೆರಡು ವರ್ಷದವರೆಗೆ ಎಂದು ಅರಿತಿದ್ದ ಆಕೆ ಮಗ ವಿಶ್ವನನ್ನು ತನ್ನ ತವರಿನಲ್ಲಿ ಅಕ್ಕಮ್ಮ ಮತ್ತು ಸಹೋದರ ಕಲ್ಲೇಶಿಯ ಸುಪರ್ದಿಯಲ್ಲಿ ಬಿಟ್ಟು ಬಂದಳು.
ನಂತರ ಊರಿಗೆ ಮರಳಿದ ಆಕೆ ಸರ್ಕಾರದವರು ತೆಗೆದ ವಯಸ್ಕರ ಶಾಲೆಗೆ ಶಿಕ್ಷಕಿಯಾಗಿ ತನ್ನ ಮನೆಯಲ್ಲಿಯೇ ಊರಿನ ಹೆಣ್ಣುಮಕ್ಕಳಿಗೆ ಪಾಠ ಹೇಳಲು ಆರಂಭಿಸಿದಳು. ಎರಡು ವರ್ಷದ ಕಂದಾಯದ ದುಡ್ಡು ವಯಸ್ಕರ ಶಾಲೆಯ ಹಣ ಎಲ್ಲವೂ ಒಟ್ಟುಗೂಡಿದರೆ ತಾನೊಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬಹುದು ಎಂಬ ಆಶಯದಿಂದ ಜಾಗವೊಂದನ್ನು ಖರೀದಿಸಿ ಮನೆಯನ್ನು ನಿರ್ಮಿಸಿದಳು. ಅದಕ್ಕೆ ಹಂಚನ್ನು ಖರೀದಿಸಲು ಪಕ್ಕದ ಹಳ್ಳಿಗೆ ಹೋದಾಗ ಪ್ಲೇಗ್ ಮಾರಿಯನ್ನು ದೇಹದಲ್ಲಿ ಹೊಕ್ಕಿಸಿಕೊಂಡು ಬಂದ ನಂಜಮ್ಮ ಮುಂದಿನ ಕೆಲ ದಿನಗಳಲ್ಲಿ ಮರಣ ಹೊಂದಿದಳು. ಮೊಮ್ಮಗಳ ಕಾಯಿಲೆಯ ವಿಷಯವನ್ನು ಕೇಳಿದ ಅಜ್ಜಿ ಅಕ್ಕಮ್ಮ ಊರಿಗೆ ಬರುವುದರೊಳಗಾಗಿ ಮೊಮ್ಮಗಳು ಸತ್ತದ್ದು ಆಕೆಗೆ ಬುದ್ಧಿ ಭ್ರಮಣೆ ಉಂಟಾಗಿ ಮುಂದಿನ ನಾಲ್ಕು ದಿನಗಳಲ್ಲಿ ಆಕೆಯೂ ತೀರಿ ಹೋದಳು. ಸೊಸೆಯ ಅಂತಿಮ ದಿನಗಳಲ್ಲಿ ಆಕೆಗೆ ಆಸರೆಯಾಗಿ ಗಂಗಮ್ಮ
ಬಂದಿದ್ದು ಸೊಸೆಯ ಚಾಕರಿ ಮಾಡಿದಳು. ಅದೊಂದೇ ಆಕೆ ತನ್ನ ಬದುಕಿನಲ್ಲಿ ಮಾಡಿದ ಒಳ್ಳೆಯ ಕೆಲಸ.
ನಂಜಮ್ಮನ ಸಾವಿನ ನಂತರ ಊರಿಗೆ ಬಂದ ಆಕೆಯ ಮಗ ವಿಶ್ವನನ್ನು ನೋಡಿ ಮಾದೇವಯ್ಯನವರ ಕರುಳು ಚುರುಕ್ ಎಂದಿತು. ಗುಂಡು ಗುಂಡಗೆ ಮುದ್ದಾಗಿದ್ದ ಬಾಲಕ ವಿಶ್ವ ಇದೀಗ ಬೆದರು ಕಂಗಳ, ಪೀಚು ದೇಹದವನಾಗಿದ್ದ. ತನ್ನ ಸಂಬಂಧಿಯೊಬ್ಬರ ಮೂಲಕ ನಾಗಲಾಪುರದಲ್ಲಿ ಸೋದರ ಮಾವನ ಆಶ್ರಯದಲ್ಲಿದ್ದ ವಿಶ್ವನ ಪರಿಸ್ಥಿತಿ ಹದಗೆಟ್ಟಿರುವುದನ್ನು ಅರಿತ ನರಸಿ ಮಾದೇವಯ್ಯನವರಿಗೆ ವಿಷಯವನ್ನು ತಿಳಿಸಿದರು.
ಹೇಗಿದ್ದರೂ ತಾನು ಜಂಗಮ ಎಲ್ಲಿಯಾದರೂ ಬದುಕಲು ಸಾಧ್ಯ ವಿಶ್ವನನ್ನು ತನ್ನೊಂದಿಗೆ ಕರೆದೊಯ್ಯಬೇಕು, ನಂಜಮ್ಮನ ಆಸೆಯಂತೆ ಒಳ್ಳೆಯ ವಿದ್ಯಾಭ್ಯಾಸ ನೀಡಬೇಕು ಎಂದು ನಿರ್ಧರಿಸಿದ ಮಾದೇವಯ್ಯನವರು ನಾಗಲಾಪುರಕ್ಕೆ ಹೋದರು. ಶಾಲೆ ಬಿಟ್ಟ ನಂತರ ಮಗು ವಿಶ್ವನನ್ನು ಮಾತನಾಡಿಸಿದ ಅವರು ತಮಗೆ ಗೊತ್ತಾದ ವಿಷಯ ನಿಜವೆಂದು ಬೇರೆ ಮಕ್ಕಳ ಬಾಯಿಂದ ಮತ್ತು ಸ್ವತಃ ವಿಶ್ವನಿಂದ ದೃಢಪಡಿಸಿಕೊಂಡರು. ವಿಶ್ವನಿಗೆ ಮನೆಗೆ ಹೋಗಲು ತಿಳಿಸಿ ಸ್ವಲ್ಪ ಹೊತ್ತಿನ ನಂತರ ಕಲ್ಲೇಶಿಯ ಮನೆಗೆ ಹೋದರು. ಅದೇ ಸಮಯಕ್ಕೆ ಊರಿಂದ ಬಂದ ಕಂಠಿ ಜೋಯಿಸರು ಹಾಗೂ ಕಲ್ಲೇಶಿಯೊಂದಿಗೆ ವಿಷಯವನ್ನು ಪ್ರಸ್ತಾಪ ಮಾಡಿ ವಿಶ್ವನನ್ನು ದೂರದ ಊರಿನಲ್ಲಿ ಮನೆ ಮಾಡಿ ತಾವೇ ಕರೆದುಕೊಂಡು ಹೋಗಿ ಓದಿಸುವುದಾಗಿ ಕೇಳಿಕೊಂಡರು.
ಮಗನ ನಿರ್ಲಕ್ಷ ಮತ್ತು ಸೊಸೆಯ ನಿರ್ದಯಿ ವರ್ತನೆಯನ್ನು ಅರಿತಿದ್ದ ಕಂಠಿ ಜೋಯಿಸರು ಏನೊಂದೂ ಮಾತನಾಡದೆ ಒಪ್ಪಿಗೆ ಸೂಚಿಸಿದರು. ಮರುದಿನ ಶಾಲೆಯ ಎಲ್ಲಾ ಕಾಗದ ಪತ್ರಗಳನ್ನು ಪಡೆದುಕೊಂಡು ಬೇರೊಂದು ಊರಿಗೆ ಮಾದೇವಯ್ಯನವರು ವಿಶ್ವನೊಡನೆ ಪಯಣ ಬೆಳೆಸಿದರು ಎಂಬಲ್ಲಿಗೆ ಗೃಹಭಂಗದ ಕಥೆ ಮುಕ್ತಾಯವಾಗುತ್ತದೆ.
ಒಂದು ಶತಮಾನದ ಹಿಂದೆ ಇದ್ದ ಸಾಮಾಜಿಕ ಪರಿಸ್ಥಿತಿಗಳು, ಜನರನ್ನು ಕಾಡಿದ ಪ್ಲೇಗ್ ಖಾಯಿಲೆ, ಬರ, ಅಂದಿನ ಜನ ಜೀವನವನ್ನು ಕಣ್ಣಿಗೆ ಕಟ್ಟುವಂತೆ ಬರೆದಿರುವ ಭೈರಪ್ಪನವರು ಎಲ್ಲವೂ ಇದ್ದು ಕೂಡ ತನ್ನ ಕೆಟ್ಟ ಮಾತು ಬೈಗುಳಗಳ ಕಾರಣ ಮಕ್ಕಳನ್ನು ಕೂಡ ಸರಿಯಾಗಿ ಬೆಳೆಸಲಾಗದೆ ಸೋತು ಹೋದ ಶಾನುಭೋಗರ ಪತ್ನಿ ಗಂಗಮ್ಮ ಒಂದೆಡೆಯಾದರೆ,
ಬೇಜವಾಬ್ದಾರಿ ಗಂಡ, ಗಯ್ಯಾಳಿ ಅತ್ತೆಯ ಕಾರಣದಿಂದಾಗಿ ಎಲ್ಲಾ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡರೂ ತನ್ನ ಸ್ವಂತ ಬಲದಿಂದ ಬದುಕನ್ನು ಕಟ್ಟಿಕೊಳ್ಳುವ, ತಾನು ಕಲಿತ ವಿದ್ಯೆಯ ಸದುಪಯೋಗ ಮಾಡಿಕೊಂಡು ಶಾನುಭೋಗಿಕೆಯ ಲೆಕ್ಕಗಳನ್ನು ಬರೆದು ಅಧಿಕಾರಿಗಳಿಂದ, ಪಟೇಲರಿಂದ ಭೇಷ್ ಎನಿಸಿಕೊಂಡು ಜೀವನವನ್ನು ನಡೆಸಿದ ನಂಜಮ್ಮ
ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ಕೊನೆಗೆ ಪ್ಲೇಗ್ ಮಾರಿಗೆ ಮಕ್ಕಳನ್ನು ಕಳೆದುಕೊಂಡರೂ ಉಳಿದೊಬ್ಬ ಮಗನಿಗಾಗಿ ತನ್ನ ಬದುಕನ್ನು ಮುಡಿಪಿಟ್ಟುದ್ದು ಆಕೆಯ ಜೀವನ ಪ್ರೀತಿಗೆ ಸಾಕ್ಷಿ.
ಅಂತಿಮವಾಗಿ ಜೀವನದ ಸತ್ಯದರ್ಶನವಾದಾಗ ಮನಸ್ಸು ವಿಷಣ್ಣವಾಗುತ್ತದೆ.
ಸಮಾಜಮುಖಿಯಾಗಿರುವ ಭೈರಪ್ಪನವರ ಕಾದಂಬರಿಯಲ್ಲಿ ಅಜ್ಞಾನ, ಬಡತನ, ನೋವು ನಿರಾಶೆಗಳು ಮೇಲುಗೈ ಸಾಧಿಸಿದೆ. ವಿಶಿಷ್ಟ ರಚನೆ ಮತ್ತು ಕಥಾ ಶೈಲಿ ಮನಸಿಗೆ ಅಪ್ತತೆಯನ್ನು ನೀಡುತ್ತದೆ..
ಭೋರ್ಗರೆವ ಮಳೆಯಂತಹ ಅನುಭವಗಳನ್ನು ಹೊಂದಿರುವ ಭೈರಪ್ಪನವರ ಕಾದಂಬರಿಯ ಸಾರವನ್ನು ಬೊಗಸೆಯಲ್ಲಿ ಹಿಡಿವ ಪ್ರಯತ್ನ
ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ