ಸಿರುಗುಪ್ಪ.ನ.15:- ತಾಲೂಕಿನಾದ್ಯಂತ ಗುರುವಾರ ರಾತ್ರಿ
ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಆರ್.ಎನ್.ಆರ್. ಮತ್ತು
ಸೋನಾಮಸೂರಿ ಭತ್ತವು ನೆಲಕ್ಕುರುಳಿ ಬಿದ್ದಿದ್ದು,
ರೈತರನ್ನು ಆತಂಕಕ್ಕೆ ಈಡು ಮಾಡಿದೆ. ಕಳೆದ ೨ದಿನಗಳಿಂದ
ಆಗಾಗಿ ಜೋರಾಗಿ ಮಳೆ ಸುರಿಯುತ್ತಿದ್ದು, ಇನ್ನೂ ಮೂರು ದಿನ
ಮಳೆ ಬರುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು,
ರೈತರನ್ನು ಮತ್ತಷ್ಟು ಕಂಗಾಲಾಗಿಸಿದೆ. ತಾಲೂಕಿನ ವಿವಿಧ
ಗ್ರಾಮಗಳಲ್ಲಿ ರೈತರು ಬೆಳೆದ ಸಾವಿರಾರು ಎಕರೆಯಲ್ಲಿ ಭತ್ತ
ನೆಲಕ್ಕುರುಳಿ ಬಿದ್ದಿದೆ.
ಶೇ.೭೫ರಷ್ಟು ಜಮೀನಿನಲ್ಲಿ ಆರ್.ಎನ್.ಆರ್. ಭತ್ತವನ್ನೇ
ತಾಲೂಕಿನಾದ್ಯಂತ ಬೆಳೆಯಲಾಗಿದ್ದು, ಇಲ್ಲಿಯವರೆಗೆ
ಶೇ.೩೦ರಷ್ಟು ಮಾತ್ರ ಬೆಳೆ ಕೊಯ್ಲಾಗಿದ್ದು, ಇನ್ನೂ
ಶೇ.೭೦ಭಾಗದಷ್ಟು ಕೊಯ್ಲು ಕಾರ್ಯ ನಡೆಯಬೇಕಾಗಿದೆ.
ಭತ್ತ ಕೊಯ್ಲಿಗಾಗಿ ತಾಲೂಕಿನಾದ್ಯಂತ ನೂರಾರು ಭತ್ತ
ಕೊಯ್ಲು ಯಂತ್ರಗಳು ಬಂದು ನಿಂತಿವೆ, ಆದರೆ ಮಳೆಯ
ಕಾರಣದಿಂದ ಕೊಯ್ಲು ಯಂತ್ರಗಳು ಗದ್ದೆಗಿಳಿಯಲು
ಸಾದ್ಯವಾಗಿಲ್ಲ.
ಆರ್.ಎನ್.ಆರ್.ಭತ್ತವು ಈಗಾಗಲೇ ಕೊಯ್ಲಿಗೆ ಬಂದಿದ್ದು,
ಮಳೆ ಬರದಿದ್ದರೆ ಕೊಯ್ಲು ಕಾರ್ಯ ಜೋರಾಗಿರುತ್ತಿತ್ತು.
ಮಳೆಯಿಂದಾಗಿ ಕೊಯ್ಲು ಸಾಧ್ಯವಾಗದೆ ಇರುವುದು ಒಂದು
ಕಡೆಯಾದರೆ ಮತ್ತೊಂದ ಕಡೆ ಮಳೆಗೆ ಭತ್ತದ
ಬೆಳೆಯು ನೆಲಕ್ಕುರುಳಿ ಬಿದ್ದಿರುವುದು ಇನ್ನೂ ಮೂರು ದಿನ
ಮಳೆಬರುವ ಸೂಚನೆ ಇರುವುದರಿಂದ ಇಳುವರಿ ಕಡಿಮೆ
ಬರುತ್ತದೆ, ಬೆಳೆಯ ಬಣ್ಣವು ಕಪ್ಪಾಗುತ್ತದೆ, ಇದರಿಂದ
ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುವುದಿಲ್ಲ. ಸದ್ಯ
ಮಾರುಕಟ್ಟೆಯಲ್ಲಿ ರೂ.೧೯೦೦ಕ್ಕೆ ಆರ್.ಎನ್.ಆರ್. ಭತ್ತವು
ಮಾರಾಟವಾಗುತ್ತಿರುವುದು ರೈತರಿಗೆ ತೀವ್ರವಾದ ನಷ್ಟವಾಗುವ
ಸಾಧ್ಯತೆ ಹೆಚ್ಚಾಗಿದೆ.
ಈಗಾಗಲೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ
ಅಧಿಕಾರಿಗಳು ನೆಲಕ್ಕೆ ಉರುಳಿಬಿದ್ದ ಭತ್ತದ ಗದ್ದೆಗಳಿಗೆ ಬೇಟಿ
ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನೆಲಕ್ಕೆ ಬಿದ್ದ ಭತ್ತವನ್ನು ಕೊಯ್ಲು ಮಾಡಲು ಒಂದು
ಎಕರೆಗೆ ಮೂರು ಗಂಟೆ ಬೇಕಾಗುತ್ತದೆ.
ಕೊಯ್ಲು ಮಾಡಲು ರೂ.೨೫೦೦ ರಿಂದ ೨೮೦೦ ಬೆಲೆ ನಿಗದಿ
ಮಾಡಿರುವುದು, ಇಳುವರಿ ಕಡಿಮೆಯಾಗುವುದು,
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯದೆ ಇರುವುದು
ನಮಗೆ ತೀವ್ರವಾದ ನಷ್ಟ ಉಂಟಾಗುತ್ತಿದೆ ಎಂದು
ತೆಕ್ಕಲಕೋಟೆ ರೈತ ಕಾಡಸಿದ್ದಪ್ಪ, ಬಗ್ಗೂರು ರೈತ
ಹುಲುಗಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ನಮ್ಮ ಇಲಾಖೆ
ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೆಲಕ್ಕೆ ಬಿದ್ದ
ಗದ್ದೆಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ, ಇನ್ನೆರೆಡು
ದಿನಗಳಲ್ಲಿ ಸರ್ವೆಕಾರ್ಯ ಮುಗಿಯಲಿದೆ ಎಂದು ಸಹಾಯಕ ಕೃಷಿ
ನಿರ್ದೇಶಕ ಎಸ್.ಬಿ.ಪಾಟೀಲ್ ತಿಳಿಸಿದ್ದಾರೆ.