ಶಿವಮೊಗ್ಗ.ಮಾ.19
ಸರ್ಕಾರಿ ಅಧಿಕಾರಿಗಳು ಸಮಯೋಚಿತವಾಗಿ, ಸಂದರ್ಭೋಚಿತವಾಗಿ ಹಾಗೂ ನಿರ್ಲಕ್ಷö್ಯ ವಹಿಸದೇ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಮಾನ್ಯ ನ್ಯಾಯಮೂರ್ತಿಗಳಾದ ಹಾಗೂ ಉಪ ಲೋಕಾಯುಕ್ತರಾದ ಶ್ರೀಯುತ ಕೆ.ಎನ್.ಫಣೀಂದ್ರ ಹೇಳಿದರು.
ನಗರದ ಕುವೆಂಪು ರಂಗಮ0ದಿರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ “ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ’ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
20 ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಲೇವಾರಿ ಸಭೆ ಮಾಡಿದ್ದೇನೆ. ಉತ್ತಮ ಫಲಿತಾಂಶ ಸಿಕ್ಕಿದೆ. 1984 ರಲ್ಲಿ ಆರಂಭವಾದ ಈ ಸಂಸ್ಥೆ, ಇದರಿಂದ ಸಾರ್ವಜನಿಕರಿಗೆ ಇರುವ ಅನುಕೂಲಗಳೇನು, ಧ್ಯೇಯೋದ್ದೇಶಗಳೇನು, ಯಾವ ರೀತಿ ದೂರು ಸಲ್ಲಿಸಬಹುದು ಹಾಗೂ ಪರಿಹಾರ ಪಡೆಯಬಹುದೆಂದು ತಿಳಿಸುತ್ತಾ, ಸಾರ್ವಜನಿಕರ ತೊಂದರೆಗಳನ್ನು ನಿವಾರಿಸುತ್ತಾ ಬಂದಿದೆ.
ಅನೇಕರಿಗೆ ಈ ಸಂಸ್ಥೆಯ ಬಗ್ಗೆ ತಿಳಿದಿಲ್ಲ. ಅದನ್ನು ತಿಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸರ್ವರಿಗೂ ಸಮಬಾಳು, ಸಮಪಾಲು ಸಂವಿಧಾನದ ಆಶಯವಾಗಿದ್ದು ಎಲ್ಲ ಜನರ ರಕ್ಷಣಾತ್ಮಕ ಮತ್ತು ಉತ್ತಮ ಜೀವನಕ್ಕಾಗಿ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ ರಚನೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ಸಂವಿಧಾನ ಎಲ್ಲ ನಾಗರೀಕರಿಗೆ ಹಕ್ಕು, ಬಾಧ್ಯತೆಗಳನ್ನು ನೀಡಿದೆ. ಮಾನವನ ಸಂರಕ್ಷಣೆಗೆ ಎಲ್ಲ ರೀತಿಯ ಕಾನೂನು ತರಲಾಗಿದೆ. ಗೌರವಯುತ ಜೀವನಕ್ಕಾಗಿ ಅಭಿವೃದ್ದಿ ಸಾಧಿಸಲಾಗುತ್ತಿದೆ.
ಸರ್ಕಾರಿ ಅಧಿಕಾರಿಗಳು ಕಾಲಮಿತಿಯೊಳಗೆ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಸರಿಯಾದ ಸಮಯದಲ್ಲಿ ಕೆಲಸ ಮಾಡದಿದ್ದರೆ ಸಮಾಜ, ಜನ ಅಕ್ರಮ ದಾರಿ ಹಿಡಿಯಬಹುದು. ಅಥವಾ ತೀವ್ರ ತೊಂದರೆಗೆ ಒಳಗಾಗಬಹುದು. ಆದ್ದರಿಂದ ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿತನ ತೋರದೆ ನಿರ್ಲಕ್ಷö್ಯ, ಅನಗತ್ಯ ವಿಳಂಬ ಮಾಡದೇ ಕೆಲಸ ಮಾಡಿಕೊಡಬೇಕು. ಮಾಡಬೇಕಾದ ಕೆಲಸ ಮಾಡದಿರುವುದು, ಲಂಚಕ್ಕೆ ಬೇಡಿಕೆ ಇಡುವುದು, ಜಾತಿ ಪಕ್ಷಪಾತ ಮಾಡುವುದು ಅಪರಾಧವಾಗುತ್ತದೆ.
ಸರ್ವರಿಗೂ ಸಮಬಾಳು ನೀಡುವ ಸದುದ್ದೇಶದಿಂದ ಸರ್ಕಾರ ಜಾರಿಗೆ ಬಂದಿದೆ. ನಮ್ಮ ದೇಶ ಮತ್ತು ಕಾನೂನು ರಕ್ಷಣೆ ನಾವೇ ಮಾಡಿಕೊಳ್ಳಬೇಕು. ದೇಶದ ಮೂಲೆ ಮೂಲೆಯಲ್ಲಿರುವ ಜನರಿಗೂ ರಕ್ಷಣಾತ್ಮಕ ಕಾನೂನುಗಳು, ಸೌಲಭ್ಯಗಳು ತಲುಪಬೇಕು. ಶಾಸಕಾಂಗ ರೂಪಿಸಿರುವ ಕಾಯ್ದೆ, ಕಾನೂನು ಮತ್ತು ಸೌಲಭ್ಯಗಳನ್ನು ಜನರಿಗೆ ಕಾರ್ಯಾಂಗ ತಲುಪಿಸುತ್ತಿದೆ. ಇವನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ.
ಸಮಸ್ಯೆಗಳ ಪರಿಹಾರಕ್ಕೆ ಪ್ರಾಧಾನ್ಯತೆ ನೀಡಿ, ದುರುದ್ದೇಶದಿಂದ ಕರ್ತವ್ಯಲೋಪವಾಗಿದ್ದರೆ ತಕ್ಕ ಪಾಠವಾಗಬೇಕು ಎಂಬ ಉದ್ದೇಶದಿಂದ ಲೋಕಾಯುಕ್ತ ರಚನೆಯಾಯಿತು. ಸರ್ಕಾರದ ಲೋಪದೋಷವಿದ್ದರೂ ಅದನ್ನು ಹೊರಗೆಳೆದು ಶಿಕ್ಷಿಸುವ ಉದ್ದೇಶದಿಂದ ಈ ಸ್ವಾಯತ್ತ ಸಂಸ್ಥೆ ರಚನೆಯಾಗಿದೆ. ಸಮಸ್ಯೆ ಪರಿಹಾರಕ್ಕೆ ಮೊದಲ ಪ್ರಾಧ್ಯಾನ್ಯತೆ ನೀಡಿ ನಂತರ ಸಮಸ್ಯೆಗೆ ಕಾರಣ ಕುರಿತು ಪರಿಶೀಲನೆ ಮಾಡಿ, ಇಲಾಖಾ ವಿಚಾರಣೆ ನಡೆಸಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಂತರ ಸೂಕ್ತ ಕ್ರಮ ಜರುಗಿಸುತ್ತದೆ. ಲೋಕಾಯುಕ್ತದಲ್ಲಿ 40 ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಾವುದೇ ಸಾರ್ವಜನಿಕರು ಕರ್ತವ್ಯ ಲೋಪವೆಸಗಿದ ಸರ್ಕಾರಿ ಅಧಿಕಾರಿ/ನೌಕರರ ವಿರುದ್ದ ದೂರು ನೀಡಬಹುದು. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಕಂಡುಬ0ದಲ್ಲಿ ಲೋಕಾಯುಕ್ತ ಸ್ವಯಂ ಪ್ರೇರಿತ ದೂರನ್ನು ನೋಂದಾಯಿಸಿಕೊಳ್ಳಬಹುದು. ಸರ್ಕಾರ ತನ್ನ ಗಮನಕ್ಕೆ ಬಂದದ್ದನ್ನು ಸಹ ಲೋಕಾಯುಕ್ತ ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಬಹುದು.
ಸುಳ್ಳು ದೂರು ನೀಡಿದಲ್ಲಿ ದೂರುದಾರರಿಗೂ ಶಿಕ್ಷೆ ಇದೆ. ನಮ್ಮ ವ್ಯಾಪ್ತಿಗೆ ಬರುವ ಪ್ರಕರಣಗಳ ಕೂಲಂಕಷ ತನಿಖೆಗೊಳಪಡಿಸಿ, ವರದಿ ತರಿಸಿಕೊಂಡು ಕ್ರಮ ವಹಿಸಲಾಗುವುದು. ನಮ್ಮ ವ್ಯಾಪ್ತಿಗೊಳಪಡದ ದೂರುಗಳನ್ನು ಎಲ್ಲಿಗೆ ಹೋಗಬೇಕೆಂದು ನಿರ್ದೇಶನ, ಮಾರ್ಗದರ್ಶನ, ಸಲಹೆ ನೀಡಲಾಗುವುದು. ರೂ. 3 ಲಕ್ಷದೊಳಗಿನ ಆದಾಯ ಹೊಂದಿರುವವರಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ ನೆರವು ನೀಡಲಾಗುವುದು.
ನಮ್ಮನ್ನು ನಾವು ಎಚ್ಚರಗೊಳಿಸಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಯಾವೆಲ್ಲ ರೀತಿಯ ತೊಂದರೆಯಾಗುತ್ತಿದೆ, ಅದರ ಪರಿಹಾರಕ್ಕೆ ಪ್ರಯತ್ನಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಣೆ ಮಾಡದಿರುವುದು ಮತ್ತು ಮಾಡಬೇಕಾದ ಕೆಲಸ ಮಾಡದೇ ಇರುವ ಕುರಿತು ಹೆಚ್ಚು ದೂರುಗಳು ಬರುತ್ತಿವೆ.
ಮಾ.20 ರಂದು ವೈಯಕ್ತಿಕ 65 ಪ್ರಕರಣಗಳನ್ನು ಗುರುತಿಸಿದ್ದು ಅದನ್ನು ವಿಲೇವಾರಿ ಮಾಡಲಾಗುವುದು. ಮಾ.21 ರಂದು ಕಾನೂನು ಅರಿವು ಸಭೆ, ಸಂವಾದ, ವಿವಿಧ ಕಚೇರಿ ಭೇಟಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಾಗುವುದು . ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದ ಅವರು ರಾಷ್ಟçಕವಿ ಕುವೆಂಪು ಹಾಗೂ ಡಿವಿಜಿ ಕವಿವಾಣಿಯನ್ನು ಅಳವಡಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಮಾತನಾಡಿ, ಉಪ ಲೋಕಾಯುಕ್ತರ ಬದ್ದತೆಯು ನಮಗೆ ಪ್ರೇರಣೆಯಾಗಿದೆ. ಇಂದು ಬೆಳಿಗ್ಗೆಯೇ ನಗರದ ಗಾಂಧಿ ಪಾರ್ಕ್, ನವುಲೆ ಕೆರೆ, ಕಸ ತುಂಬಿದ ನಾಲೆ ಸೇರಿದಂತೆ ಸಮಸ್ಯೆ ಇರುವ ಸ್ಥಳಗಳನ್ನು ಉಪ ಲೋಕಾಯುಕ್ತರು ವೀಕ್ಷಿಸಿ ಸಮಸ್ಯೆ ಪರಿಹಾರದ ಕುರಿತು ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಕೇವಲ ಅಧಿಕಾರಿಗಳಿಂದ ಪರಿಹಾರ ಕಷ್ಟವಾಗುವಂತಹ ಇಂತಹ ಸ್ಥಳಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ. ನಾವು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಇವತ್ತಿನಿಂದಲೇ ಉಪ ಲೋಕಾಯುಕ್ತರು ತಿಳಿಸಿದಂತೆ ಮುನ್ನಡೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡತ್ತೇವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಎನ್. ಹೇಮಂತ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-14 ರ ಎನ್.ಆರ್. ಲೋಕಪ್ಪ, ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-05 ರ ಜಿ.ವಿ. ವಿಜಯನಂದ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಎಂ.ಎಸ್ ಸಂತೋಷ್, ಸಿವಿಲ್ ನ್ಯಾಯಾಧೀಶರು ಮತ್ತು ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಯಾದ ಕಿರಣ್ ಪಿ.ಎಂ. ಪಾಟೀಲ್, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ, ಜಿಲ್ಲಾ ಅರಣ್ಯಾಧಿಕಾರಿ ಶಿವಶಂಕರ್ ಪಾಲ್ಗೊಂಡಿದ್ದರು. ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ಸ್ವಾಗತಿಸಿದರು.