Ad image

ಇಂದು ರಾಷ್ಟ್ರೀಯ ಶಿಕ್ಷಕರ ದಿನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 135 ನೆಯ ಜಯಂತಿ

Vijayanagara Vani
ಇಂದು ರಾಷ್ಟ್ರೀಯ ಶಿಕ್ಷಕರ ದಿನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 135 ನೆಯ ಜಯಂತಿ

ಸರ್ವೆಪಲ್ಲಿ ರಾಧಾಕೃಷ್ಣನ್’ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ‘ತಿರುತ್ತಣಿ’ ಎಂಬಲ್ಲಿ ಸೆಪ್ಟೆಂಬರ್ 5, 1888 ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ‘ರಾಧಾಕೃಷ್ಣನ್’ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.
ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ರೆವಿನ್ಯೂ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು.1906 ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದರು. ರಾಧಾಕೃಷ್ಣನ್ 1918 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾಗಿ ವಿದ್ಯಾರ್ಥಿಗಳ ಮನಸೂರೆಗೊಂಡರು. ಇಲ್ಲಿಂದ ವರ್ಗವಾದಾಗ ವಿದ್ಯಾರ್ಥಿಗಳೆಲ್ಲ ಅವರನ್ನು ಸಾರೋಟಿನಲ್ಲಿ ಕೂಡಿಸಿ ಸಾವೇ ಸಾರೋಟನ್ನು ರೈಲ್ವೆ ಸ್ಟೇಷನ್ ವರೆಗೆ ತಮ್ಮ ಕೈಗಳಿಂದ ಎಳೆದುಕೊಂಡು ಹೋಗಿ ಬೀಳ್ಕೊಟ್ಟು ತಮ್ಮ ಶಿಕ್ಷಕ ಪ್ರೇಮ ಮೆರೆದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, ‘ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್’ ಮೊದಲ ಪುಸ್ತಕ ಬರೆದರು. ಭಾರತದ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದರು.1931 ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು.1951-52 ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ‘ರಾಧಾಕೃಷ್ಣನ್’, ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. ‘ರಾಧಾಕೃಷ್ಣನ್’ ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ 1954 ರಲ್ಲಿ ಪ್ರತಿಷ್ಠಿತ ‘ಭಾರತ ರತ್ನ ಪ್ರಶಸ್ತಿ’ ನೀಡಿ ಗೌರವಿಸಿತು. ಈ ಅನಾರೋಗ್ಯ ಶಿಕ್ಷಕರತ್ನರ ಜಯಂತಿಯನ್ನು ಅವರ ಅಭಿಲಾಷೆಯಂತೆ ಶಿಕ್ಷಕರ ದಿನವೆಂದು ಆಚರಿಸುತ್ತೇವೆ.

“ನಹಿ ಜ್ಞಾನೇನ ಸದೃಶಂ” ಜ್ಞಾನಕ್ಕೆ ಮಿಗಲಾದದ್ದು ಯಾವುದು ಇಲ್ಲ ಅಜ್ಞಾನವೆಂಬ ಕತ್ತಲನ್ನು ಜ್ಞಾನದ ಬೆಳಕಿನಿಂದ ದೂರಮಾಡುವ, ಬೋಧನೆಯ ಮೂಲಕ ಸಾಧನೆ ಹಾದಿಯನ್ನು ತೋರಿಸುವ ಸಮಸ್ತ ಗುರು ವೃಂದವು ಸಂತಸದಿಂದ ಸಡಗರದಿಂದ ಶುಭಾಶಯಗಳನ್ನು ಪಡೆಯುವ, ಜಗ ವಂದಿತರೆನಿಸಿಕೊಳ್ಳುವ, ರಾಷ್ಟ್ರೀಯ ಶಿಕ್ಷಣ ದಿನಾಚರಣೆ ದೇಶದಾದ್ಯಂತ ಗುರುವಂದನೆಯ ಮೂಲಕ ಕಲಿಸಿದ ಗುರುಗಳಿಗೆ ನಿಮಿಸುವ ದಿನವನ್ನಾಗಿ ಆಚರಿಸುತ್ತೇವೆ. ಈ ದಿನದಂದು ಶಿಕ್ಷಕರಿಗೆ ಮತ್ತಷ್ಟು, ಮಗದಷ್ಟು ಜವಾಬ್ದಾರಿಗಳ ಹೊರೆಹೆಚ್ಚುತ್ತದೆ. ಈ ಆಧುನಿಕ ಯುಗದ ಸಾರಥಿಗಳಾಗಿ, ನಾಡಿನ ಸತ್ಪ್ರಜೆಗಳನ್ನು ಮುನ್ನಡೆಸುವ ಅವರಿಗೆ ತಿದ್ದಿ ತಿಡಿ ಮಾರ್ಗದರ್ಶನ ಮಾಡಿ, ಸೃಜನಶೀಲ ಅಭಿವ್ಯಕ್ತಿ, ಕೌಶಲ್ಯ ಭರಿತ ಜ್ಞಾನ, ವರ್ತನಾ ಮನೋಭಾವನೆ, ಪ್ರಪಂಚದ ಶುಭಕಾಮನೆಗಳನ್ನು ಮನದಲ್ಲಿ ತುಂಬುವ ಮೂಲಕ ಮಾನವ ಸಂಪನ್ಮೂಲದ ಉತ್ಕೃಷ್ಟತೆ ಹೆಚ್ಚಿಸುವುದಾಗಿದೆ.

ಸ್ವಾಮಿ ವಿವೇಕಾನಂದರು ಹೇಳುವಂತೆ ಪ್ರತಿಯೊಬ್ಬರಲ್ಲೂ ಈಗಾಗಲೇ ಇರುವ ಅಂತರ್ ಸಾಮರ್ಥ್ಯಗಳನ್ನು ಹೊರತಂದು ವಿದ್ಯಾರ್ಥಿಯಲ್ಲಿನ ಉತ್ತಮಾಂಶಗಳನ್ನು ಪ್ರಕಟಿಸುವ ಮಹಾನ್ ಜವಾಬ್ದಾರಿ ಶಿಕ್ಷಕರಾಗಿ ಮಾಡಬೇಕಾಗಿದೆ. ಅದಕ್ಕಾಗಿ ವ್ಯಕ್ತಿಯ ಬದುಕಿನಲ್ಲಿ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ನೋಡಿ ಅದೋ ಸಾಗುತಿದೆ ಧೀರರ ದಂಡು. ಇಂದಿನ ಕೆಲ ಮಕ್ಕಳಲ್ಲಿ ಅತಿಯಾದ ಉಡಾಫೆ, ಹೆಚ್ಚಾಗಿರುವುದರಿಂದ “ಮುಂದೆ ಗುರಿಯೂ ಇಲ್ಲ ಹಿಂದೆ ಗುರುವೂ ಇಲ್ಲ, ಸಾಗುತಿದೆ ನೋಡಿ ಹೇಡಿಗಳ ಹಿಂಡು” ಎಂಬಂತಾಗಿದೆ.

ನಮ್ಮ ಸಂಸ್ಕೃತಿಯಲ್ಲಿ “ವರ್ಣಮಾತ್ರಂ ಕಲಿಸಿದಾತಂ ಗುರು” ಒಂದು ಅಕ್ಷರ ಕಲಿಸಿದವರೂ ಗುರು ಎಂದು ಕರೆಸಿಕೊಳ್ಳುತ್ತಾರೆ. ಏಕಲವ್ಯನ ಕಥೆಯಲ್ಲಿ ಬರುವ ದ್ರೋಣಾಚಾರ್ಯರು ಅವನಿಗೆ ದೈಹಿಕವಾಗಿ ಒಂದು ದಿನವೂ ನಿಂತು ವಿದ್ಯಾದಾನ ಮಾಡದಿದ್ದರೂ, ಅವರ ಮೇಲಿನ ಅಪಾರ ಭಕ್ತಿ ಒಂದು ಶಕ್ತಿಯಾಗಿ ಅವನಿಗೆ ಬಿಲ್ವಿದ್ಯೆ ಪ್ರಾಪ್ತವಾಗುವಂತೆ ಮಾಡಿತು. ಅವನನ್ನು ಒಬ್ಬ ಜಗತ್ತಿನ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡಿದ್ದು ಆ ಗುರು ಭಕ್ತಿ. ಅದಕ್ಕೆ ಕಾಣಿಕೆಯಾಗಿ
ಅವನು ಗುರುದಕ್ಷಿಣೆಯಾಗಿ ತನ್ನ ಸರ್ವಸ್ವವನ್ನು ಅರ್ಪಿಸಲು ಸಿದ್ಧನಾದ ಕೊನೆಗೆ ತನ್ನ ಹೆಬ್ಬೆರಳನ್ನು ನೀಡಿದ. ಈ ಪ್ರಸಂಗವನ್ನು ಇಂದಿನ ಕಾಲಕ್ಕೆ ಅನ್ವಯಿಸಿದರೆ “ಶ್ರದ್ಧಾ ವಾನ್ ಲಭ್ಯತೆ ಜ್ಞಾನಂ” ಎಂಬಂತೆ ಯಾರು ಶ್ರದ್ದೆಯಿಂದಿರುವರೋ ಅವರು ಜ್ಞಾನವನ್ನು ಗಳಿಸುತ್ತಾರೆ. ಅವರಿಗೆ ಗುರುವಿನ ಸಣ್ಣ ಮಾರ್ಗದರ್ಶನ ಸಾಕು. ಈ ಆಧುನಿಕ ಪ್ರಪಂಚದಲ್ಲಿ ನಾವು ಕಲಿಸುತ್ತೇವೆ ಎನ್ನುವುದಕ್ಕಿಂತ ಕಲಿಯುವವರು ಸಿದ್ದರಾಗುವುದು ಮುಖ್ಯವಾಗಿದೆ. ಶಿಕ್ಷಕರ ಕೆಲಸಗಳನ್ನು ಕಾಯ್ದೆಗಳಿಂದ, ಆದೇಶಗಳಿಂದ ಸೂಚಿಸಲಾಗದು, ಅವು ಸ್ವಯಂಪೂರ್ಣ ಅಭಿವ್ಯಕ್ತಿ! ನಾನು ನನ್ನ ಮಗುವಿಗೆ ಇದನ್ನು ಕಲಿಸಬೇಕು, ಅದನ್ನು ಕಲಿಸಬೇಕು, ನನ್ನ ಮನೆಯ ಮಕ್ಕಳು ಕಲಿತಿದ್ದೆಲ್ಲವೂ ಶಾಲೆಯಲ್ಲಿರುವ ಮಕ್ಕಳು ಕಲಿಯಬೇಕೆಂಬ, ಉತ್ಕಟ ಇಚ್ಛೆ ಶಿಕ್ಷಕರದಾಗಬೇಕು. ಶಿಕ್ಷಕರೂ ಸಹ ನಿರಂತರ ವಿದ್ಯಾರ್ಥಿಯೇ ಆಗಿರಬೇಕು, ಜ್ಞಾನದ ನಿಧಿ ತುಂಬಿದಾಗ ಮಾತ್ರ ಹಂಚಲು ಬರುತ್ತದೆ ಅಲ್ಲವೇ? ಜಗತ್ತಿನ ಯಾವ ವೃತ್ತಿಯ ವ್ಯಕ್ತಿ ತಪ್ಪು ಮಾಡಿದರು ಕ್ಷಮಿಸಬಹುದು ಆದರೆ ನೂರಾರು ವಿದ್ಯಾರ್ಥಿಗಳ ಜೀವನಕ್ಕೆ ಸ್ಪೂರ್ತಿಯಾಗಬಲ್ಲ ಶಿಕ್ಷಕ ತಪ್ಪು ಮಾಡಿದರೆ ಅದು ಅಕ್ಷಮ್ಯ!

ಶಿಕ್ಷಕರ ಜೀವನವನ್ನು ಒಂದು ವೃತ್ತಿ ಎಂದು ಪರಿಗಣಿಸದೆ ಸೇವೆ ಎಂದು ಭಾವಿಸಲಾಗುತ್ತದೆ. ಈ ಸೇವೆ ತನ್ನ ವಿದ್ಯಾರ್ಥಿ ಜೀವನದ ಯಶಸ್ಸು ಗಳಿಸುವಲ್ಲಿಗಿನ ಪರಧಿಯನ್ನು ಒಳಗೊಂಡಿದೆ. ವಿದ್ಯಾರ್ಥಿಯು ಸಹ ತನ್ನ ಜೀವನದಲ್ಲಿ ತನಗೆ ಮಾರ್ಗದರ್ಶನ ಮಾಡಬಲ್ಲ ಒಬ್ಬ ಶಿಕ್ಷಕನನ್ನು ಆಯ್ಕೆ ಮಾಡಿಕೊಂಡಿದ್ದೆ ಆದಲ್ಲಿ, ಅವನು ಗೊಂದಲಗಳಿಲ್ಲದೆ ಗುರಿಯನ್ನು ಮುಟ್ಟಬಲ್ಲ. ತಾನಂದುಕೊಂಡದ್ದನ್ನು ಸಾಧಿಸಬಲ್ಲ. ಇಂದಿನ ವಿದ್ಯಾರ್ಥಿಗಳು ಬಹುತೇಕ ಪ್ರೈಮರಿ ಶಿಕ್ಷಕರನ್ನು ಹೈಸ್ಕೂಲಿನಲ್ಲಿ ಮರೆಯುತ್ತಾರೆ. ಹೈಸ್ಕೂಲ್ ಶಿಕ್ಷಕರನ್ನು ಕಾಲೇಜಿನಲ್ಲಿ ಮರೆಯುತ್ತಾರೆ. ಅದಕ್ಕಾಗಿ ಅವರು ಜೀವನದ ಯಶಸ್ಸನ್ನು ಕಾಡುವಲ್ಲಿ ವಿಫಲರಾಗುತ್ತಾರೆ. ಈ ಗುರು ಶಿಷ್ಯ ಸಂಬಂಧ ತಮ್ಮೊಟ್ಟಿಗೆ ತೆಗೆದುಕೊಂಡು ಹೋಗಿದ್ದೆ ಆದಲ್ಲಿ ಅವನು ತನ್ನ ಮನಸಲ್ಲಿ ಯಾವುದೇ ಪ್ರಶ್ನೆಗಳನ್ನು ಉಳಿಸಿಕೊಳ್ಳದೆ. ತನ್ನ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಂಡು ಯಶಸ್ಸಿನ ಶಿಖರವೇರುತ್ತಾನೆ.

ನಾವೆಲ್ಲ ಉನ್ನತ ಸ್ಥಾನಕ್ಕೆ ಹೋದರೆ, ಅಕ್ಕಪಕ್ಕದವರು ಹಲವಾರು ತರ ಮಾತನಾಡಿಕೊಳ್ಳಬಹುದು, ದೋಷ ಹುಡುಕಬಹುದು. ತನ್ನ ವಿದ್ಯಾರ್ಥಿಗಳು ಜೀವನದಲ್ಲಿ ತನಗಿಂತಲೂ ಮಿಗಿಲಾದ ಸ್ಥಾನವನ್ನು, ಹುದ್ದೆಯನ್ನು ಹೊಂದಲಿ, ಎಂದು ಬಯಸುವ ಏಕೈಕ ಜೀವಿಎಂದರೆ ಅದು “ಶಿಕ್ಷಕ” ಮಾತ್ರ.ಹಾಗಾದರೆ ಇಷ್ಟೊಂದು ಮಹತ್ವವಿರುವ ಶಿಕ್ಷಕನಿಗೂ ಕೆಲ ಗುಣಲಕ್ಷಣಗಳು ಅನ್ವಯಿಸುತ್ತದೆ ತಾಳ್ಮೆ- ಸಂಯಮ, ಶ್ರದ್ಧೆ, ಪೂರ್ವ ತಯಾರಿ, ಸಮಯ ಪಾಲನೆ, ಸಮಯೋಚಿತ ವರ್ತನೆ, ಉತ್ಸಾಹ ಭರಿತ ಭೋದನೆ, ಗೊಂದಲ ರಹಿತ ಪಾಠ ಬೋಧನೆ, ವೈಯಕ್ತಿಕ ಸಹಾಯ, ಮತ್ತು ಮಕ್ಕಳಕಾಳಜಿ, ವಿಷಯದ ಅಚಲತೆ ಮತ್ತು ಹಿಡಿತಗಳು, ನಿರ್ಭಯತೆ ಮತ್ತು ನಿಸ್ಸಂಶಯಗಳು ಯಶಸ್ವಿ ಶಿಕ್ಷಕರನ್ನು ಹಿಂಬಾಲಿಸುತ್ತವೆ.

ಯಾರೋ ನೋಡುತ್ತಾರೆ ಏನೋ ಕೇಳುತ್ತಾರೆ ಎಂದು ಕಾರ್ಯನಿರ್ವಹಿಸುವುದು ಶಿಕ್ಷಕ ವೃತ್ತಿಯಲ್ಲ. ನಾವು ಯಾವ ಹುದ್ದೆಯಲ್ಲಿ ಇದ್ದೇವೋ ಆ ಹುದ್ದೆಗೆ ನ್ಯಾಯ ಒದಗಿಸಬೇಕು. ಈ ಹುದ್ದೆಯಲ್ಲಿ ಇದ್ದುಕೊಂಡು ಇನ್ನೊಂದು ಹುದ್ದೆಯ ಬಗ್ಗೆ ಪರಿತಪಿಸಬಾರದು. ತಾವು ಶಿಕ್ಷಕರೆಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕು. ಯಾಕೆಂದರೆ ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಒಬ್ಬ ಶಿಕ್ಷಕನ ದರ್ಶನ ಆಗೇ ಆಗುತ್ತದೆ ಹಾಗಾದರೆ ಶಿಕ್ಷಕರಿಂದು ಹೇಳಿಕೊಳ್ಳಲು ಯಾಕೆ ಹಿಂಜರಿಕೆ? ಒಬ್ಬ ರಾಷ್ಟ್ರಪತಿಯಿಂದ ಒಬ್ಬ ಸಾಮಾನ್ಯ ವ್ಯಕ್ತಿಯವರೆಗೆ ಎಲ್ಲರೂ ಸ್ಮರಿಸುವ ವ್ಯಕ್ತಿ ಎಂದರೆ ಅದು ಶಿಕ್ಷಕ ಮಾತ್ರ. ಅದೆಷ್ಟೋ ದೊಡ್ಡ ದೊಡ್ಡ ವ್ಯಕ್ತಿಗಳ ಜೀವನದ ತಿರುವುಗಳನ್ನು ಶಿಕ್ಷಕರು ರೂಪಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಮ್ಮ ಭಾಷಣಗಳಲ್ಲಿ ಹೇಳುತ್ತಿರುತ್ತಾರೆ ಡ್ರಾಪ್ ಔಟ್ ಆದ ನನ್ನನ್ನು ರಾಜಪ್ಪ ಮೇಷ್ಟ್ರು ನನ್ನನ್ನು 8 ನೆಯ ವಯಸ್ಸಿಗೆ ಸ್ಕೂಲಿಗೆ ಸೇರಿಸದೆ ಹೋಗಿದ್ದರೆ ನಾನು ಶಾಲೆ ಕಲಿಯುತ್ತಿರಲಿಲ್ಲ, ವಕೀಲನಾಗುತ್ತಿರಲಿಲ್ಲ, ಇಂದು 2 ಬಾರಿ ಮುಖ್ಯಮಂತ್ರಿ ಯಾಗುತ್ತಿರಲಿಲ್ಲ, ಕುರಿ ಕಾಯುತ್ತಾ ಇರುತ್ತಿದ್ದೆ ಎಂದು. ಇಂತಹ ಅದೆಷ್ಟೋ ಸಾಧಕರ ಉದಾಹರಣೆಗಳಲ್ಲಿ ಶಿಕ್ಷಕರ ಪಾತ್ರ ಅತಿ ದೊಡ್ಡದಾಗಿದೆ. ದೇಶದ ಮಹಾನ್ ಶಿಕ್ಷಣ ತಜ್ಞ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರು ತಮ್ಮ ಪ್ರತಿಭಾಷಣದಲ್ಲೂ ಶಿಕ್ಷಕರ ಮಹತ್ವವನ್ನು ತಿಳಿಸುತ್ತಿದ್ದರು.
ಹಾಗೆ ಇಂದಿನ ವಿದ್ಯುನ್ಮಾನ ಯುಗದಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಶಿಕ್ಷಕರಿಗೆ ಬೇಕಿರುವುದು ಹೊಸತನವನ್ನು ಮೈಗೂಡಿಸಿಕೊಳ್ಳುವ ಇಚ್ಛೆ, ಹಾಗೂ ವೃತ್ತಿ ಸಮರ್ಪಣಾ ಮನೋಭಾವನೆ. ಮುಂದೆ ವಿದ್ಯಾರ್ಥಿ ತಪ್ಪು ಮಾಡಿದಾಗ ತಿದ್ದಿ ಹೇಳುವ ಶಿಕ್ಷಣಕ್ಕಿಂತ ತಪ್ಪುಗಳನ್ನೇ ಮಾಡದ ರೀತಿಯಲ್ಲಿ ಬದುಕುವ ನೈತಿಕ ಶಿಕ್ಷಣವನ್ನು ಕಥೆಗಳ ಮೂಲಕ, ಮಹಾಕಾವ್ಯಗಳ ಮೂಲಕ, ತಮ್ಮ ಜೀವನದ ಅನುಭವಗಳ ಮೂಲಕ ಮಾಡದೇ ಕೇವಲ ಕೊಟ್ಟ ಪಾಠ ಮಾಡಿದರೆ ಮಕ್ಕಳಿಗೆ ತಪ್ಪುಗಳ ಅರಿವು ಅಸಾಧ್ಯವಾಗುತ್ತದೆ. ವಿದ್ಯಾರ್ಥಿಯ ಕ್ಲಿಷ್ಟ ಸಮಯಗಳಲ್ಲೆಲ್ಲ, ಶಿಕ್ಷಕರ ಮಾತು ಪ್ರತಿನಿಧಿಸುವಂತಿರಬೇಕುಮನುಕುಲದಲ್ಲಿ ಬದಲಾವಣೆಗಳಾಗಲಿ, ಅದ್ಭುತಗಳಾಗಲಿ ಏರ್ಪಡಬೇಕೆಂದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ!

ಈ ಶಿಕ್ಷಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ನನ್ನ ಅಲ್ಪಸೇವೆಯನ್ನು ಗುರುತಿಸಿ 2024-25 ನೆಯ ಸಾಲಿನ “ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ” ಯನ್ನು ಪ್ರಧಾನ ಮಾಡುತ್ತಿರುವ ಜಿಲ್ಲಾಡಳಿತಕ್ಕೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೂ ನನ್ನ ನಮನಗಳನ್ನು ಸಲ್ಲಿಸುತ್ತಾ ಮುಂದೆ ಇನ್ನೂ ಹೆಚ್ಚಿನ ಸೇವೆ ಮಾಡುವ ಅವಕಾಶ ಮತ್ತು ಜವಾಬ್ದಾರಿ ಎಂದು ಭಾವಿಸುತ್ತೇನೆ.

ಎರೆಪ್ಪ ಗೌಡ ಶಿಕ್ಷಕರು
ಈ ಬಾರಿಯ ಬಳ್ಳಾರಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು
ಸ. ಹಿ.ಪ್ರಾ ಶಾಲೆ, ಅರಳಿಗನೂರು.

Share This Article
error: Content is protected !!
";