Ad image

ಮಕ್ಕಳೊಡನೆ ಸೌಮ್ಯತೆ, ವಿನಮ್ರತೆಯಿಂದ ವರ್ತಿಸಿ: ನ್ಯಾ.ಕೆ.ಜಿ.ಶಾಂತಿ

Vijayanagara Vani
ಮಕ್ಕಳೊಡನೆ ಸೌಮ್ಯತೆ, ವಿನಮ್ರತೆಯಿಂದ ವರ್ತಿಸಿ: ನ್ಯಾ.ಕೆ.ಜಿ.ಶಾಂತಿ
ವಸತಿ ನಿಲಯಗಳ ನಿಲಯಪಾಲಕರು, ಮೇಲ್ವಿಚಾರಕರು ಹಾಗೂ ವಾರ್ಡನ್ಗಳು ಸಹ ಪೋಷಕರಿದ್ದಂತೆ. ಹಾಗಾಗಿ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸೌಮ್ಯತೆ, ವಿನಮ್ರತೆಯಿಂದ ವರ್ತಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ನ್ಯಾ.ಕೆ.ಜಿ ಶಾಂತಿ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ‘ಮಕ್ಕಳ ರಕ್ಷಣಾ ನೀತಿ 2016 (ಪರಿಷ್ಕರಣೆ-2023), ಬಾಲ್ಯವಿವಾಹ ನಿಶೇಧ ಕಾಯ್ದೆ, ಪೊಕ್ಸೊ ಕಾಯ್ದೆ’ ಕುರಿತು ಜಿಪಂ ನಜೀರ್ಸಾಬ್ ಸಭಾಂಗಣದಲ್ಲಿ ವಸತಿ ನಿಲಯಗಳ ನಿಲಯಪಾಲಕರಿಗೆ, ನಿಲಯ ಮೇಲ್ವಿಚಾರಕರು, ವಸತಿ ಶಾಲೆಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಕರು ಹಾಗೂ ವಾರ್ಡನ್ರವರಿಗೆ ಗುರುವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫಲಿತಾಂಶದ ತರಾತುರಿಯಲ್ಲಿ ಮಕ್ಕಳ ಮೇಲೆ ಒತ್ತಡ ಹೇರದೇ, ಮಕ್ಕಳಲ್ಲಿನ ಲೋಪದೋಷಗಳನ್ನು ಅರಿತುಕೊಂಡು ಈ ಕುರಿತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ಕಾಯ್ದೆಗಳು ಇದ್ದರೆ ಸಾಲದು ಅದರ ಅನುಷ್ಠಾನ ಕುರಿತು ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಇಲಾಖೆಗಳಿಂದ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುವುದೇ ಎನ್ನುವ ನಾಣ್ಣುಡಿಯಂತೆ ಪೊಷಕರು ಮಕ್ಕಳನ್ನು ಮನೆಯಲ್ಲಿಯೇ ಬುದ್ದಿ ಹೇಳಬೇಕು. ಪೊಷಕರು ಸುಭದ್ರ ರಾಷ್ಟ್ರ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.
ಬಾಲ್ಯವಿವಾಹ ಪದ್ದತಿಯು ಬಡತನ, ಕೌಟುಂಬಿಕ ಕಲಹ, ಕಾನೂನಿನ ಅರಿವು ಇಲ್ಲದೆ ಪ್ರಾಚೀನ ಕಾಲದಿಂದಲೂ ನಡೆಯುತ್ತಲಿದ್ದು, ಮಾಹಿತಿ ಪ್ರಕಾರ 1993ರಲ್ಲಿ ಶೇ.49, 2021ರಲ್ಲಿ ಶೇ.22, 2022ರಲ್ಲಿ ಶೇ.15 ರಷ್ಟಂತೆ ಗಣನೀಯವಾಗಿ ಇಳಿಮುಖ ಕಂಡುಬರುತ್ತಿದೆ. ಮುಂದಿನ ದಿನಮಾನಗಳಲ್ಲಿ ಸಂಪೂರ್ಣವಾಗಿ ಬಾಲ್ಯ ವಿವಾಹ ನಿಯಂತ್ರಿಸಲು ಸಾರ್ವಜನಿಕರು, ಸ್ಥಳೀಯ ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳೊಡನೆ ಕೈಜೋಡಿಸಬೇಕು ಎಂದು ಹೇಳಿದರು.
ಮಕ್ಕಳ ರಕ್ಷಣೆ ಪ್ರತಿಯೊಬ್ಬ ಅಧಿಕಾರಿಗಳ ಹಾಗೂಪೊಷಕರ ಕರ್ತವ್ಯವಾಗಿದ್ದು, ಮಕ್ಕಳಲ್ಲಿ ತಾರತಮ್ಯ ಮಾಡದೇ ಸಮನಾಗಿ ಕಾಣುವ ಜವಾಬ್ದಾರಿಯಾಗಿದೆ ಹಾಗೂ 18 ವರ್ಷದೊಳಗಿನ ಮಕ್ಕಳು ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಾಗುತ್ತಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. 12-17 ವಯಸ್ಸಿನ 4,50,207 ಮಕ್ಕಳು ಶೇ.34 ರಷ್ಟು ಕಿರುಕುಳಕ್ಕೆ ಒಳಗಾಗಿದ್ದು, ಅದರಲ್ಲಿ ಹೆಚ್ಚು ಪರಿಚಿತರಿಂದಲೇ ಶೇ.50ರಷ್ಟು ಮಕ್ಕಳು ಮತ್ತು ಮಹಿಳೆಯರು ಕಿರುಕುಳಕ್ಕೆ ಒಳಗಾಗಿರುವ ಪ್ರಕರಣಗಳಿವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಸತಿನಿಲಯಗಲ್ಲಿ ಮೂಲಭೂತ ಸೌಕರ್ಯದೊಂದಿಗೆ ಮಕ್ಕಳ ರಕ್ಷಣೆಗೆ ಒತ್ತುನೀಡಿ, ಉತ್ತಮ ಶಿಕ್ಷಣ ಒದಗಿಸುವುದು ನಿಲಯಪಾಲಕರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.
ಸಾರ್ವಜನಿಕರಲ್ಲಿ, ಪೆಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಮಕ್ಕಳ ರಕ್ಷಣೆ ಕಾಯ್ದೆ, ಬಾಲ್ಯ ವಿವಾಹ, ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ಕಿರುಕುಳಪೊಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯ ಹಾಸ್ಟೆಲ್ಗಳಲ್ಲಿ ‘ಬಾಲ ಚೈತನ್ಯ ಕಾರ್ಯಕ್ರಮ” ಆಯೋಜಿಸಿ ವಿಕಲಚೇತನರ, ಬುದ್ದಿಮಾಂಧ್ಯರ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಏಳಿಗೆಗೆ ಶ್ರಮವಹಿಸಲಾಗುವುದು ಎಂದು ತಿಳಿಸಿದರು.
ಕೊಪ್ಪಳದ ಯುನಿಸೆಫ್ನ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ.ಬಿ., ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ವಿಠೋಬ ಹೊನಕಾಂಡೆ, ಮಕ್ಕಳ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಲಾಲಪ್ಪ ಎ.ಕೆ ಸೇರಿದಂತೆ ವಸತಿ ನಿಲಯಗಳ ನಿಲಯಪಾಲಕರು, ನಿಲಯ ಮೇಲ್ವಿಚಾರಕರು, ವಸತಿ ಶಾಲೆಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಕರು ಹಾಗೂ ವಾರ್ಡನ್ಗಳು ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿ ಭಾಗವಹಿಸಿದ್ದರು.
Share This Article
error: Content is protected !!
";