ಬಳ್ಳಾರಿ,ಜೂ.27
ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯ ಒಂದು ಮನೆಯಲ್ಲಿ ಮಾದಕ ದ್ರವ್ಯ ಗಾಂಜಾವನ್ನು ಅಕ್ರಮವಾಗಿ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ನಗರದ ರಾಣಿತೋಟದ ಬೀರಪ್ಪ ಗುಡಿ ಹತ್ತಿರದ ನಿವಾಸಿ ವಾಹೀದ್ ಮತ್ತು ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿ ಮಾರೆಮ್ಮ ಗುಡಿ ಎದುರುಗಡೆಯ ನಿವಾಸಿ ಚಾಂದ್ಭಾಷಾ ಬಂಧಿತ ಆರೋಪಿಗಳಾಗಿದ್ದು, ಇವರಿಂದ ರೂ.19,10,000 ಬೆಲೆ ಬಾಳುವ 19 ಕೆಜಿ 100 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಸೈಬರ್ ಪೊಲೀಸ್ ಠಾಣೆಯ ಡಿಎಸ್ಪಿ ಡಾ.ಸಂತೋಷ ಚೌವ್ಹಾಣ ಅವರ ಖಚಿತ ಮಾಹಿತಿಯೊಂದಿಗೆ ಪೊಲೀಸ್ ಇನ್ಸ್ಪೆಕ್ಟರ್ ರಮಾಕಾಂತ್ ವೈ.ಹೆಚ್, ಪಿಎಸ್ಐ ವಲಿಭಾಷ ಹಾಗೂ ಸಿಬ್ಬಂದಿ ತಂಡ ರಚಿಸಿ ಕಾರ್ಯಾಚರಣೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನಲ್ಲಿ ಗಾಂಜಾ ಪ್ರಕರಣಗಳಿಗೆ ಸಂಬಂಧಿಸಿದಂತೆ 18 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, 13 ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಒಟ್ಟು 75 ಕೆಜಿ ಗಾಂಜಾ ವಶಪಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ ಈಗಾಗಲೇ ಗಾಂಜಾ ಮತ್ತು ಎನ್ಡಿಪಿಎಸ್ ಆಕ್ಟ್ ಕುರಿತು ಅರಿವು ಮೂಡಿಸಲಾಗುತ್ತಿದೆ. ವಿವಿಧೆಡೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಗಾಂಜಾ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ರಂಜೀರ್ ಕುಮಾರ್ ಬಂಡಾರು ಅವರು ಶ್ಲಾಘಿಸಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಹಾಗೂ ಇತರರು ಹಾಜರಿದ್ದರು.