Ad imageAd image

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನುಡಿದಂತೆ ನಡೆದ ಏಕೈಕ ಸರ್ಕಾರ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಪ್ರಗತಿಯತ್ತ ಸಾಗಿದೆ. ಗ್ಯಾರಂಟಿ ಉತ್ಸವ ಉದ್ಘಾಟಿಸಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ.

Vijayanagara Vani
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನುಡಿದಂತೆ ನಡೆದ ಏಕೈಕ ಸರ್ಕಾರ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಪ್ರಗತಿಯತ್ತ ಸಾಗಿದೆ. ಗ್ಯಾರಂಟಿ ಉತ್ಸವ ಉದ್ಘಾಟಿಸಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ.

ವಿಜಯನಗರ(ಹೊಸಪೇಟೆ), ನವೆಂಬರ್.01 : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಆಗುತ್ತದೆಂಬ ಆರೋಪ ಸುಳ್ಳಾಗಿದೆ. ಇದೇ ತಿಂಗಳು 9 ರಂದು ಕೂಡ್ಲಿಗಿಯಲ್ಲಿ 1240 ಕೋಟಿರೂ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯನವರು ಭೂಮಿಪೂಜೆ ನೆರವೇರಿಸಲಿದ್ದಾರೆ.  ಸರ್ಕಾರ ಅಭಿವೃದ್ದಿ ಜೊತೆಗೆ ಪ್ರಗತಿಯತ್ತ ಸಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು, ರಾಜ್ಯದ ಬಡಜನರ, ರೈತರ ಮತ್ತು ಮಹಿಳೆಯರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ಸಶಕ್ತರನ್ನಾಗಿಸಿವೆ. ಆರಂಭದಲ್ಲಿ ವಿಪಕ್ಷಗಳು ಸೇರಿ ಮಾಧ್ಯಮಗಳು ಬಿಟ್ಟಿ ಯೋಜನೆಗಳಿಂದ ರಾಜ್ಯದಲ್ಲಿ ಆರ್ಥಿಕ ದಿವಾಳಿ ಸೃಷ್ಟಿಯಾಗಲಿದೆ ಎಂದು ಆರೋಪಿಸಿದ್ದರು. ಆದರೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸ್ವತಃ ಮುಖ್ಯಮಂತ್ರಿಗಳೇ ಚಾಲನೆ ನೀಡುತ್ತಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಸಾರಿಗೆ, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪೂರೈಕೆ, ಅನ್ನಭಾಗ್ಯ ಯೋಜನೆಯಡಿ ಬಡಕುಟುಂಬಗಳಿಗೆ ಅಹಾರ ಭದ್ರತೆ ಮತ್ತು ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ರೂಗಳ ಹಣ ವಿತರಣೆ ಹಾಗೂ ಯುವಜನತೆ ಪ್ರೋತ್ಸಾಹ ಧನ ನೀಡುತ್ತಿರುವುದರಿಂದ ಸಂವಿಧಾನಾತ್ಮಕವಾದ ಆಶಯಗಳನ್ನು ಪಾಲನೆ ಮಾಡಲಾಗಿದೆ. ಇದರಿಂದ ರಾಜ್ಯದ ಜನರ ತಲಾ ಆದಾಯ ವೃದ್ಧಿಸಿದೆ. ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಸ್ವಾವಲಂಬಿ, ಸ್ವಾಭಿಮಾನದ ಬದುಕು ನಿರ್ವಹಿಸುವಂತೆ ಸಹಕರಿಸಿದೆ. ಜನರು ಸರ್ಕಾರದ ಯೋಜನೆಗಳನ್ನು ಬೆಂಬಲಿಸುತ್ತಿದ್ದಾರೆ. ಇದೇ ಮಾದರಿಯನ್ನು ವಿವಿಧ ರಾಜ್ಯಗಳಲ್ಲಿ ಮಾದರಿಯನ್ನಾಗಿಸಲು ಚಿಂತನೆ ನಡೆಸುವಂತಾಗಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ಹೆಚ್.ಎಂ.ರೇವಣ್ಣ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಹತ್ತು ಜಿಲ್ಲೆಗಳಲ್ಲಿ ಗ್ಯಾರಂಟಿ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಆಯೋಜಿಸುವ ಮೂಲಕ ಯೋಜನೆಯ ಅನುಷ್ಟಾನದ ಪ್ರಗತಿಯನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನ ತರುವಲ್ಲಿ ರಾಜ್ಯದಲ್ಲಿ ವಿಭಾಗಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಅನುಷ್ಟಾನ ಸಮಿತಿಗಳನ್ನು ರೂಪಿಸಿ ಕಟ್ಟಕಡೆಯ ವ್ಯಕ್ತಿಗೆ ಯೋಜನೆಯನ್ನು ತಲುಪಿಸುವಲ್ಲಿ ಪ್ರಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಅಧಿಕಾರಿಗಳು ಸಹ ಯೋಜನೆಗಳ ಅನುಷ್ಟಾನಕ್ಕೆ ಶ್ರಮಿಸಿದ್ದಾರೆ. ಬಡವರು, ರೈತರು ಹಾಗೂ ಮಹಿಳೆಯರ ಸಂಕಷ್ಟಗಳಿಗೆ ಸ್ಪಂದಿಸುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿರುವುದು ಸರ್ಕಾರದ ಹೆಗ್ಗಳಿಕೆಯಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷರಾದ ಎಸ್.ಆರ್.ಮೆಹರೂಜ್ ಖಾನ್ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯದ ಗ್ಯಾರಂಟಿ ಯೋಜನೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವಂತೆ ಸಾಧನೆ ಮಾಡಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಅನೇಕ ಆರ್ಥಿಕ ತಜ್ಞರು ಗ್ಯಾರಂಟಿ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿ ಸಕರಾತ್ಮಕ ವರದಿಗಳನ್ನು ನೀಡಿದ್ದಾರೆ. ದೇಶದ ಗಮನ ಸೆಳೆದ ಭ್ರಷ್ಟಚಾರ ಮುಕ್ತ ಸಾಮಾಜಿಕ ಕಾರ್ಯಕ್ರಮ ಪಂಚ ಗ್ಯಾರಂಟಿ ಯೋಜನೆ ಎಂದರೆ ತಪ್ಪಗಲಾರದು. ಕರ್ನಾಟಕ ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಜನರಿಗೆ ಉಚಿತ ಯೋಜನೆಗಳನ್ನು ನೀಡುವ ಮೂಲಕ ಸ್ವಾವಲಂಬಿ ಜೀವನ ನಿರ್ಮಾಣಕ್ಕೆ ಸಹಕರಿಸಿದಂತಾಗಿದೆ. ರಾಜ್ಯದ ಪ್ರಗತಿಗೆ ಗ್ಯಾರಂಟಿ ಯೋಜನೆಗಳು ಪೂರಕವಾಗಿದೆ. ಮಹಿಳೆಯರಿಗೆ ಶಕ್ತಿ ನೀಡುವ ನಿಟ್ಟಿನಲ್ಲಿ ರಾಜ್ಯದ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳು ಸಾಕ್ಷಿಯಾಗಿವೆ. ದೇಶಕ್ಕೆ ಅತಿ ಹೆಚ್ಚು ಜಿಎಸ್‌ಟಿ ಭರಿಸುವಲ್ಲಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದ ತಲಾ ಆದಾಯದಲ್ಲಿ ನಂ.1 ಸ್ಥಾನದಲ್ಲಿದೆ ಎಂದರು.
ಜಾಗೃತ ಕರ್ನಾಟಕ ಸಂಸ್ಥೆಯ ಡಾ.ವಾಸು.ಎಚ್.ವಿ. ಗ್ಯಾರಂಟಿ ಯೋಜನೆಗಳು ಮತ್ತು ರಾಜ್ಯದ ಅಭಿವೃದ್ಧಿ ಕುರಿತು ಕಾರ್ಯಾಗಾರದಲ್ಲಿ ಪಿಪಿಟಿ ಪ್ರದರ್ಶನದ ಮೂಲಕ ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಗ್ಯಾರಂಟಿ ಯೋಜನೆಯ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಸೂರಜ್ ಹೆಗಡೆ, ಪುಷ್ಪಾ ಅಮರನಾಥ, ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿದರು. ಈ ವೇಳೆ ವೇದಿಕೆಯಲ್ಲಿ ಮಾಜಿ ಸಚಿವ ಆಂಜನೇಯ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೋಹಮ್ಮದ್ ಅಕ್ರಮ್ ಅಲಿ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಎಸ್.ಶ್ವೇತಾ, ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪನಿರ್ದೇಶಕ ರಿಯಾಜ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಹುದ್ದಾರ, ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಕೆ.ಸತೀಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಟ್ಟೆಪ್ಪ.ಪಿ.ಎಸ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ಯಾರಂಟಿ ಅನುಷ್ಟಾನ ಸಮಿತಿಯ ತಾಲೂಕು ಪದಾಧಿಕಾರಿಗಳು, ಮಹಿಳಾ ಸ್ವಸಹಾಯ ಗುಂಪುಗಳು, ವಿವಿಧ ರೈತಪರ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.

- Advertisement -
Ad image
Share This Article
error: Content is protected !!
";