ಘೋರ ತಪವ ಗೈದು ತತ್ಫಲವನ್ನು ಲೋಕೋಧ್ಧಾರಕ್ಕಾಗಿ ಹಂಚಿ, ಸುಖ ಶಾಂತಿಗಳ ಕೊಟ್ಟ ಲಿಂಗೈಕ್ಯ ಶ್ರೀ ಮ. ನಿ.ಪ್ರ. ಚನ್ನಬಸವ ಶಿವಯೋಗಿಗಳು ಲಿಂಗೈಕ್ಯವಾಗಿ 42 ವರ್ಷ ಕಳೆದರೂ ಘಟದಿಂದ ಮಠ ಬೆಳಸಿದ ಅವರ ಸ್ಮರಣೆ ಸದಾ ಹಸಿರು. ಈ ಶತಮಾನ ಕಂಡ ಅಪರೂಪದ “ದಿವ್ಯ ಪ್ರಭೆ” ಅದು!
ಮಾನ್ವಿ ತಾಲೂಕಿನ ಪಾಮನ ಕೆಲೂರಲ್ಲಿ ಶರಣ ಶ್ರೀ ಬಸವಯ್ಯ ಮತ್ತು ಶರಣೆ ಶ್ರೀಮತಿ ವೀರಮ್ಮರ ಗರ್ಭದಲ್ಲಿ ದಿನಾಂಕ 9.5.1902 ಶುಕ್ರವಾರದಂದು ಜನಿಸಿದ ಮಗುವಿಗೆ ಇಟ್ಟ ಹೆಸರು ‘ವಟಗಲ್ಲಯ್ಯ’ ಅಥವಾ ‘ವಟಗಲ್ಲ ಬಸವಯ್ಯ’. ಅದೇ ಊರಿನ ವಿರಕ್ತಮಠದ ಸ್ವಾಮಿಗಳಾದ ಶ್ರೀ ಮಹಾಲಿಂಗ ಪೂಜ್ಯರ ಸೇವೆಯಲ್ಲಿ ಬೆಳೆದು ಆಚಾರ ಶೀಲರಾಗಿ, ಆಕಸ್ಮಿಕವಾಗಿ ಬಂದ ಕನಕಗಿರಿ ಪರಮಪೂಜ್ಯ ಶ್ರೀಮ.ನಿ. ಪ್ರ. ಚೆನ್ನಮಲ್ಲ ಸ್ವಾಮಿಗಳೊಂದಿಗೆ ಸಂಚರಿಸಿ ಶಿವಾನುಭವಿಗಳಾಗಿ, ಪುನಃ ಸ್ವಸ್ಥಾನ ಸೇರಿದರು. ಯೋಗಾಯೋಗವೆಂಬಂತೆ, ಒಳಬಳ್ಳಾರಿ ಶ್ರೀ ಸುವರ್ಣಗಿರಿ ವಿರಕ್ತಮಠಕ್ಕೆ ಭಕ್ತರ ಆಹ್ವಾನದ ಮೇರೆಗೆ ಬಂದು ನೆಲೆಸಿ ಮೂರು ಅಂಕಣದ ಮುರುಕು ಮಠದಲ್ಲಿ ಲಿಂಗಪೂಜಾ ತಪಸ್ಸುಗೈದು, ಶಾಖಾ ಮಠವಾದ ನದೀಚಾಗಿಯಲ್ಲಿ ಪಟ್ಟಾಧಿಕಾರ ಹೊಂದಿ, ಲೋಕವೇ ತಲೆಬಾಗುವಂತಹ ಶಿವಯೋಗ ಶಕ್ತಿಯನ್ನು ಗಳಿಸಿ, ಶ್ರೀ ಚನ್ನಬಸವ ಶಿವಯೋಗಿಗಳಾದುದು ಅಸದೃಶ. ಅವರು ಅಘಟಿತ ಘಟಿತರು ಅನುಪಮ ಶೀಲರಲ್ಲವೇ, ಎಂದು ಬೇರೆ ಹೇಳಬೇಕೆ?
ಮಠಕ್ಕೆ ಯಾರೇ ಬರಲಿ ಅವರಿವರೆನ್ನದೆ ಯೋಗ ಕ್ಷೇಮಗಳ ಕೇಳಿ ಅವರ ದುಃಖ ದುಮ್ಮಾನಗಳನ್ನು ತಮ್ಮ ಕೇವಲ ಒಂದು ಮಾತಿನಿಂದ ಪರಿಹರಿಸುತ್ತಿದ್ದರು. ಅದುವೇ “ಶಿವನಿದ್ದಾನಾ, ಛಲೋ ಆಗ್ತೈತೆ, ಪ್ರಸಾದಕ ನಡ್ರಿ” ಎಂಬುದೇ ಅವರ ದಿವ್ಯ ಮಂತ್ರ. ಅಂಗಗುಣಗಳ ಕಳೆದು ಲಿಂಗ ಗುಣಗಳ ದೇಹವದು ಅಂಗವಲ್ಲ ಕಣೋ ಲಿಂಗ!! ಆದ್ದರಿಂದ ಅವರು ಮಾತನಾಡಿದ್ದು ಮಂತ್ರವಾಯಿತು, ಮುಟ್ಟಿದ್ದು ಬಂಗಾರವಾಯಿತು, ನೋಡಿದ್ದು ದಿವ್ಯದೃಷ್ಟಿಯಾಯಿತು. ಆದ್ದರಿಂದ ಸಾವಿರಾರು ಭಕ್ತರು ನಡಕೊಂಡರು ಪಡಕೊಂಡರು. ಅವುಗಳನ್ನು ಪಡೆದವರು ಪವಾಡವೆಂದರು. ಅವುಗಳಿಗೆ ಲೆಕ್ಕವಿಲ್ಲ.
ಅವರು ಸಮಾಜದ ಮೇಲೆ ಇಟ್ಟಕಳಕಳಿ, ಮಕ್ಕಳ ಶಿಕ್ಷಣದ ಮೇಲೆ ಇಟ್ಟ ಕಾಳಜಿ ಅಷ್ಟಿಷ್ಟಲ್ಲ. ಗಡಿನಾಡ ಆಂಧ್ರದ ನದಿಚಾಗಿಯಲ್ಲಿ ಕನ್ನಡ ಪ್ರೌಢ ಶಾಲೆಯನ್ನು ಸ್ಥಾಪಿಸಿ ಮತ್ತು ಉಚಿತ ಪ್ರಸಾದ, ವಸತಿಯನ್ನೂ ಕೊಟ್ಟು ಬಡ ಮಕ್ಕಳಿಗೆ ಆಸರೆಯಾದದ್ದು, ಅವರು ಕನ್ನಡದ ಮೇಲಿಟ್ಟ ಮಮತೆಯಲ್ಲವೇ?.
ನಾಡಿನ ಅನೇಕ ಕಡೆ ಶಿವಾನುಭವ ಪ್ರವಚನಗಳನ್ನು ನಡೆಸಿ ಜ್ಞಾನ ಪ್ರಸಾರ ಮಾಡಿದರು. ಸಾಹಿತಿಗಳಿಗೆ ಸಂಗೀತಕಾರರಿಗೆ ಕಲಾಕಾರರಿಗೆ ಅತ್ಯುತ್ತಮ ಪ್ರೋತ್ಸಾಹ ನೀಡಿದರು. ಅನೇಕ ಶಿಕ್ಷಣ ವಿದ್ಯಾಲಯಗಳೂ ಪೂಜ್ಯರಿಂದ ಪ್ರಾರಂಭಗೊಂಡವು.
ಹೀಗೆ ಶಿವಯೋಗಿ ಶ್ರೀ ಚನ್ನಬಸವ ತಾತ ನವರು, ಎಂಬತ್ತುವರ್ಷ ಸಾರ್ಥಕ ಶಿವಜೀವನವ ಕಳೆದು, ದಿನಾಂಕ10. 10.1982 ಸಾಯಂಕಾಲ 4:00 ಗಂಟೆಗೆ ಲಿಂಗದೊಳಗಾಗಿ ಲಿಂಗವೇ ತಾವಾದರು. ಅಂದು ಲಕ್ಷಗಟ್ಟಲೆ ಭಕ್ತಸ್ತೋಮ ತಾಯಿ ತಂದೆಯನ್ನು ಕಳಕೊಂಡ ಮಕ್ಕಳಂತೆ ಬೋರೆಂದು ಅತ್ತರು. ಆ ದೃಶ್ಯ ನೋಡಿದವರಿಗೆ ಇನ್ನೂ ಅದು ಕಣ್ಮುಂದೆ ಕಟ್ಟಿದಂತಾಗಿದೆ.
ತಾತನವರು ಐಕ್ಯರಾಗಿ ಹೋದರೆಂಬ ಕೊರತೆ ನೀಗಿಸಲು ಬಂದವರು ತತ್ಪೂಜ್ಯರ ಕರಕಮಲ ಸಂಜಾತರಾದ ಶ್ರೀ ಮ. ನಿ .ಪ್ರ. ಸಿದ್ಧಲಿಂಗಮಹಾ ಸ್ವಾಮಿಗಳವರು. ತಮ್ಮಎಂಬತ್ತುವರ್ಷಗಳ ಸ್ವಾಮೀ ಜೀವನದಲ್ಲಿ ಗುರುವಿನ ಅಡಿಗಳ ಹಿಡಿದೇ ನಡೆದು, ಗುರು ಮುಟ್ಟಿ ಗುರುವಾದರು. ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ , ಸಾಹಿತಿಕ, ಸಂಗೀತ , ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಡುವಲ್ಲಿ, ಒಳಬಳ್ಳಾರಿ, ನದಿಚಾಗಿ ಸ್ವರ್ಣಗಿರಿ ಮಠಗಳನ್ನು ಭವ್ಯ ಶಿಲಾಮಠಗಳನ್ನಾಗಿ ಪರಿವರ್ತಿಸುವಲ್ಲಿ, ಜನರನ್ನು ತಿದ್ದಿತೀಡಿ ಮೂರ್ತಿಗಳನ್ನಾಗಿ ಮಾಡುವಲ್ಲಿ ಸಿದ್ಧ ಹಸ್ತರು ಶ್ರೀ ಸಿದ್ಧಲಿಂಗ ಮಹಾಪೂಜ್ಯರು. ಎಲ್ಲವುಗಳಿಗಿಂತ ಮಿಗಿಲಾಗಿ ಲಿಂಗ ಪೂಜಾ ತಪಸ್ವಿಗಳಾಗಿ ಶೋಭಿತರಾದ ಅವರಿಗೆ ಈಗ ಎಂಬತ್ತರ ವಯಸ್ಸಾದರೂ ಬೇಸರವಿಲ್ಲ, ಹುಮ್ಮನಸ್ಸಿದೆ. ಅವರು ಸಂಕಲ್ಪ ಮಾಡಿದರೆಂದರೆ ಅಗಾಧವಾದ ಕಾರ್ಯಗಳು ಲೀಲಾಜಾಲವಾಗಿ ಮುಗಿದು ಯಶಸ್ವಿ ಕಾಣುತ್ತಿವೆ ಎಂಬುದನ್ನು ಎಲ್ಲರೂ ಬಲ್ಲರು. ಇತ್ತೀಚಿಗೆ ಕೈಗೊಂಡ ಬೃಹತ್ ಕಾರ್ಯ, “ಮಠದ ಮಹದ್ವಾರ ನಿರ್ಮಾಣ”. ಇದಕ್ಕೆ ಸುಮಾರು ಮೂರು ಕೋಟಿ ಖರ್ಚಾಗುವ ಅಂದಾಜಿದೆ.
“ಚಿತ್ತ ಶುದ್ದಿ ಇದ್ದಲ್ಲಿ ಲಕ್ಷ್ಮಿ ತಾನಾಗಿ ಇರ್ಪಳು”ಎಂಬ ವಚನದಂತೆ ಸತ್ ಕಾರ್ಯಗಳಿಗೆ ಬೇಕಾಗುವ ಹಣಕಾಸು ಒಳಬಳ್ಳಾರಿ ಶ್ರೀ ಮಠಕ್ಕೆ ತಾನೇ ತಾನಾಗಿ ಒದಗಿ ಬರುತ್ತದೆ ಎಂಬುದು ಸತ್ಯ ಸಂಗತಿ.
ಸದಾ ಗುರುಗಳ ಸಾಮಿಪ್ಯದಲ್ಲಿದ್ದು ಸೇವೆಯಲ್ಲಿ ತೊಡಗಿರುವ ನೂತನ ಮಹಾ ಸ್ವಾಮಿಗಳಾದ ಶ್ರೀ ಮ.ನಿ.ಪ್ರ ಬಸವಲಿಂಗ ಸ್ವಾಮಿಗಳು ಗುರುಗಳ ಮಾರ್ಗದಲ್ಲೇ ಗಮಿಸುತ್ತಿದ್ದು, ಎಡೆಬಿಡದೆ ಪೂಜೆಯ ಕಾರ್ಯದಲ್ಲಿ, ಮಠದ ಕಾರ್ಯಕ್ರಮಗಳಲ್ಲಿ, ಹೆಗಲು ಕೊಟ್ಟು ಸಮಾಜಮುಖಿಯಾಗಿ ಮುನ್ನಡೆಯುತ್ತಿದ್ದು ಭಕ್ತರ ಭರವಸೆಗಳ ಈಡೇರಿಸುವ ನಿಟ್ಟಿನಲ್ಲಿದ್ದಾರೆ, ಭಕ್ತ ಪ್ರೇಮಿಗಳಿದ್ದಾರೆ. ಶ್ರೀ ಸುವರ್ಣಗಿರಿ ಮಠಕ್ಕೆ ಭರವಸೆಯ ಬೆಳಕಾಗಿದ್ದಾರೆ. ಜಾಗೃತ ಸ್ಥಾನವಾದ ಒಳಬಳ್ಳಾರಿ ಶ್ರೀಮಠಕ್ಕೆ ತಕ್ಕ ಸ್ವಾಮಿಗಳವರನ್ನು ಶಿವಯೋಗ ಮಂದಿರದ ಹಾನಗಲ್ಲು ಗುರು ಕುಮಾರ ಮಹಾ ಶಿವಯೋಗಿಗಳವರೇ ಕಳಿಸಿದಂತಿದೆ.!! ಧನ್ಯ ಧನ್ಯ.!!!
ದಿನಾಂಕ 14.10.2025ರ ಮಂಗಳವಾರ ಬೆಳಗಿನಿಂದ ಸಾಯಂಕಾಲದವರೆಗೆ ವಳಬಳ್ಳಾರಿ ಶ್ರೀ ಶ್ರೀ ಸಿದ್ದಲಿಂಗ ಮಹಾ ಪೂಜ್ಯರ, ಹಾಗೂ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಅಪ್ಪಣೆಯ ಮೇರೆಗೆ_ ಒಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದಲ್ಲಿ , ಗದ್ದುಗೆಗೆ ರುದ್ರಾಭಿಷೇಕ, ಪೂಜೆ ಪ್ರಸಾದ ಮಹಾದಾಸೋಹ ಅಲ್ಲದೆ, ಹೊಸಪೇಟೆ ಬಳ್ಳಾರಿ ಹಾಲ್ಕೆರೆ ಜಗದ್ಗುರುಗಳಾದ ಶ್ರೀಕೊಟ್ಟೂರುಬಸವಲಿಂಗ ಮಹಾ ಸ್ವಾಮಿಗಳು, ಅಡವಿಅಮರೇಶ್ವರದ ಶ್ರೀ ಶಾಂತ ಮಲ್ಲ ಮಹಾಸ್ವಾಮಿಗಳಾದಿಯಾಗಿ ನಾಡಿನ ನಾನು ಕಡೆಯಿಂದ ಮಹಾಸ್ವಾಮಿಗಳವರ ಆಗಮಿಸಿ ಹಾರೈಸುವ ದೃಶ್ಯ, ತಾತನವರ ಪುಣ್ಯಸ್ಮರಣೋತ್ಸವದ ಸುಂದರ ಸಭೆ ಮುಂತಾದ ಭವ್ಯ ಕಾರ್ಯಕ್ರಮಗಳು ಅಭೂತ ಪೂರ್ವವಾಗಿ, ತೇರೊಂದಿಲ್ಲದ ಜಾತ್ರೆಯಂತೆ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಅಸಂಖ್ಯ ಭಕ್ತರು ಬಂದು ಪಾಲ್ಗೊಂಡು ಪುನೀತರಾಗುತ್ತಾರೆ.
ನಾ.ಮ. ಮರುಳಾರಾಧ್ಯ, ಗಡಿನಾಡ ಸಾಹಿತಿ.